ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ ವಿಭಜನೆ| ಬದುಕಿಗಿಂತ ಆಡಳಿತಾತ್ಮಕ ಅನುಕೂಲವೇ ಹೆಚ್ಚಾಯ್ತೆ?

ಹೊಸ ವಿಜಯನಗರ ಜಿಲ್ಲೆಯಲ್ಲಿ ಅಭಿವೃದ್ಧಿ ನಿರೀಕ್ಷೆಗಳು ನೂರೆಂಟು
Last Updated 9 ಫೆಬ್ರುವರಿ 2021, 20:00 IST
ಅಕ್ಷರ ಗಾತ್ರ

ಹೊಸಪೇಟೆ: ಅಖಂಡ ಬಳ್ಳಾರಿ ವಿಭಜಿಸಿ ವಿಜಯನಗರ ಜಿಲ್ಲೆ ಮಾಡಬೇಕೆಂಬ ಒಂದೂವರೆ ದಶಕದ ಬೇಡಿಕೆ ಕೊನೆಗೂ ಸರ್ಕಾರ ಈಡೇರಿಸಿದೆ. ಆಡಳಿತಾತ್ಮಕ ಅನುಕೂಲಕ್ಕಾಗಿ ಜಿಲ್ಲೆಯ ವಿಭಜನೆ ಮಾಡಲಾಗಿದೆ ಎಂದು ಸರ್ಕಾರ ಹೇಳಿದೆಯಾದರೂ ಜನರ ನಿರೀಕ್ಷೆಗಳು ಬೇರೆಯೇಇವೆ.

ಅಖಂಡ ಜಿಲ್ಲೆಯಲ್ಲಿ ಎಲ್ಲ ಅಭಿವೃದ್ಧಿ ಚಟುವಟಿಕೆಗಳು ಹೆಚ್ಚಾಗಿ ಬಳ್ಳಾರಿ, ಹೊಸಪೇಟೆ ಕೇಂದ್ರವಾಗಿಟ್ಟುಕೊಂಡೇ ಸರ್ಕಾರ ಮಾಡುತ್ತ ಬಂದಿರುವುದರಿಂದ ಇತರೆ ತಾಲ್ಲೂಕುಗಳು ಆರಂಭದಿಂದಲೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಅದರಲ್ಲೂ ನೂತನ ವಿಜಯನಗರ ಜಿಲ್ಲೆ ವ್ಯಾಪ್ತಿಗೆ ಸೇರಿರುವ ಪಶ್ಚಿಮ ತಾಲ್ಲೂಕುಗಳು ಹೆಚ್ಚಿನ ಕಡೆಗಣನೆಗೆ ಒಳಗಾಗುತ್ತ ಬಂದಿವೆ.

ವಿಜಯನಗರ ಜಿಲ್ಲೆ ರಚನೆಯ ಬೇಡಿಕೆಯ ಹೋರಾಟ ಆರಂಭವಾಗಿದ್ದು ಒಂದೂವರೆ ದಶಕದ ಹಿಂದೆ. ಆನಂದ್‌ ಸಿಂಗ್‌ ಸಹ ಈ ಅವಧಿಯಲ್ಲಿ ಎಂದೂ ಆ ಕುರಿತಾಗಿ ಮಾತನಾಡಿರಲಿಲ್ಲ. 2019ರಲ್ಲಿ ಪಕ್ಷಾಂತರ ಮಾಡಿದ ನಂತರ ಈ ವಿಷಯವನ್ನು ಮುನ್ನೆಲೆಗೆ ತಂದು, ಗುರಿ ಸಾಧಿಸಿದ್ದಾರೆ. ಅದೇ ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುತ್ತಿರುವುದು ವಾಸ್ತವ. ಹಾಗೂ ಅವರ ಮೇಲಿನ ಆರೋಪವೂ ಹೌದು.

‘ಈಗಲೂ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ತುಂಗಭದ್ರಾ ಜಲಾಶಯವಿದ್ದರೂ ನೀರಾವರಿ ಯೋಜನೆಗಳು ಜಾರಿಗೆ ಬಂದಿಲ್ಲ. ವೈದ್ಯಕೀಯ ಚಿಕಿತ್ಸೆ, ಉತ್ತಮ ಶಿಕ್ಷಣಕ್ಕಾಗಿ ಬೆಂಗಳೂರು, ಹುಬ್ಬಳ್ಳಿಗೆ ಜನ ಹೋಗುತ್ತಾರೆ. ಯಾದಗಿರಿ ನಂತರ ಹೆಚ್ಚು ಜನ ವಲಸೆ ಹೋಗುವುದು ಈ ಜಿಲ್ಲೆಯಿಂದ’ ಎನ್ನುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ವೆಂಕಟಗಿರಿ ದಳವಾಯಿ.

‘ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಜನ ಅನೇಕ ದಶಕಗಳಿಂದ ನೀರಾವರಿ ಯೋಜನೆಗೆ ಹೋರಾಟ ನಡೆಸುತ್ತಿದ್ದಾರೆ. ಆದರೆ, ಸರ್ಕಾರ ಸ್ಪಂದಿಸಿಲ್ಲ. ವಿಜಯನಗರ ಜಿಲ್ಲೆ ವ್ಯಾಪ್ತಿಯ ಆರು ತಾಲ್ಲೂಕುಗಳಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳಿಲ್ಲ. ಕೈಗಾರಿಕೆಗಳು, ಪ್ರವಾಸೋದ್ಯಮ ಚಟುವಟಿಕೆಗಳೆಲ್ಲ ಹೊಸಪೇಟೆ, ಹಂಪಿಗಷ್ಟೇ ಸೀಮಿತವಾಗಿವೆ. ಉಳಿದೆಡೆ ಪ್ರವಾಸೋದ್ಯಮ ಬೆಳೆಸುವ ಕೆಲಸವಾಗಿಲ್ಲ. ಈ ನಿಟ್ಟಿನಲ್ಲಿ ಕೆಲಸಗಳಾಗದಿದ್ದಲ್ಲಿ ಮತ್ತೊಂದು ವಿಭಜನೆಯ ಕೂಗು ಕೇಳಿಬಂದರೂ ಅಚ್ಚರಿ ಪಡಬೇಕಿಲ್ಲ’ ಎಂದರು.

‘ಎಂ.ಪಿ.ಪ್ರಕಾಶ್‌ ಅವರ ಕಾಲದಲ್ಲಿ ಹೂವಿನಹಡಗಲಿಯಲ್ಲಿ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು ಆಗಿರುವುದು ಬಿಟ್ಟರೆ ಪಶ್ಚಿಮ
ತಾಲ್ಲೂಕುಗಳಲ್ಲಿ ಬೇರೆ ಕೆಲಸಗಳಾಗಿಲ್ಲ. ವಿಜಯನಗರ ಜಿಲ್ಲೆ ರಚನೆಯಿಂದ ಜಿಲ್ಲಾ ಕೇಂದ್ರದ ಅಂತರ ಕುಗ್ಗುವುದು ನಿಜ. ಆದರೆ, ಅದೇ ಸಾಧನೆಯಲ್ಲ. ಜನರ ಬದುಕು ಬದಲಾಗುವುದು ಅತಿಮುಖ್ಯ’ ಎಂದು ಹಡಗಲಿಯ ನಿವಾಸಿ ಬಸವರಾಜ ಹೇಳಿದರು.

ವಿಜಯನಗರಕ್ಕೆ ಆರು, ಬಳ್ಳಾರಿಗೆ ಐದು ತಾಲ್ಲೂಕು

ಅಖಂಡ ಬಳ್ಳಾರಿ ಜಿಲ್ಲೆ ವಿಭಜಿಸಿ ಸೋಮವಾರ (ಫೆ.8) ಅಂತಿಮ ಅಧಿಸೂಚನೆ ಹೊರಡಿಸಿರುವ ರಾಜ್ಯ ಸರ್ಕಾರ ವಿಜಯನಗರಕ್ಕೆ ಆರು ತಾಲ್ಲೂಕು, ಬಳ್ಳಾರಿ ಜಿಲ್ಲಾ ವ್ಯಾಪ್ತಿಗೆ ಐದು ತಾಲ್ಲೂಕುಗಳನ್ನು ಸೇರಿಸಿದೆ. ಇದೇ ವೇಳೆ ಎರಡೂ ಜಿಲ್ಲೆಗಳ ಗಡಿ ಸರಹದ್ದು ಸಹ ಗುರುತಿಸಿದೆ.

ಹೊಸಪೇಟೆ (ಜಿಲ್ಲಾ ಕೇಂದ್ರ), ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಹಾಗೂ ಹರಪನಹಳ್ಳಿ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಸೇರಿಸಿದರೆ, ಸಂಡೂರು, ಸಿರುಗುಪ್ಪ, ಕುರುಗೋಡು, ಕಂಪ್ಲಿ ತಾಲ್ಲೂಕುಗಳನ್ನು ಬಳ್ಳಾರಿ ಜಿಲ್ಲಾ ವ್ಯಾಪ್ತಿಗೆ ಸೇರಿಸಲಾಗಿದೆ.

***

ವಿಜಯನಗರ ಜಿಲ್ಲೆ ರಚನೆ ಸಚಿವ ಆನಂದ್‌ ಸಿಂಗ್‌ ಅವರಿಗೆ ತೃಪ್ತಿಪಡಿಸಲು ಸೀಮಿತವಾಗಬಾರದು. ಜನರ ಬದುಕು ಬದಲಾಗಲು ಕಾರಣವಾಗಬೇಕು.
- ಕೊಟ್ರೇಶ, ಬಸವರಾಜ, ಕೂಡ್ಲಿಗಿ ನಿವಾಸಿಗಳು

***
ಜಿಲ್ಲೆ ವಿಭಜನೆಯಿಂದ ಬಳ್ಳಾರಿಯ ಹಲವು ಭಾಗಗಳ ಮೇಲೆ ಆಂಧ್ರ ಪ್ರದೇಶದವರ ಪ್ರಭಾವ ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿಯೇ ವಿಭಜನೆಗೆ ಮೊದಲಿನಿಂದಲೂ ವಿರೋಧಿಸುತ್ತಿರುವೆ.
–ಜಿ. ಸೋಮಶೇಖರ್‌ ರೆಡ್ಡಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT