ಮಂಗಳವಾರ, ನವೆಂಬರ್ 29, 2022
29 °C

ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಮಲ ಅರಳಿದೆ: ‘ಜೋಡೊ’ ಟೀಕಿಸಿದ ಸಿಎಂ ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಕಾಂಗ್ರೆಸ್‌ನ ರಾಹುಲ್‌ ಗಾಂಧಿ ಹೋದಲ್ಲೆಲ್ಲಾ ಕಮಲ ಅರಳಿದೆ. ಅವರು ನಡೆಸುತ್ತಿರುವ ‘ಭಾರತ್‌ ಜೋಡೊ’ ಯಾತ್ರೆಯಿಂದ ನಮಗೆ ವ್ಯತಿರಿಕ್ತ ಪರಿಣಾಮವೇನೂ ಆಗುವುದಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸೆ.26ರಿಂದ ನಡೆಯಲಿರುವ ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗಾಗಿ ಇಲ್ಲಿನ ವಿಮಾನನಿಲ್ದಾಣಕ್ಕೆ ಭಾನುವಾರ ಆಗಮಿಸಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

‘ಅವರು ಬರುತ್ತಾರೆ, ಹೋಗುತ್ತಾರೆ. ಅದರಿಂದ ಏನೂ ವ್ಯತ್ಯಾಸ ಆಗುವುದಿಲ್ಲ. ರಾಜ್ಯದಲ್ಲೂ ಮುಂದೆ ಕಮಲ‌ವೇ ಅರಳಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ನವರು ‘ಪೇ ಸಿಎಂ ಅಭಿಯಾನ’ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಾದ್ಯಂತ ನಡೆಸಲಿ. ಅದನ್ನು ಸ್ವಾಗತಿಸುತ್ತೇನೆ. ಒಳ್ಳೆಯದಾಗಲಿ ಎಂದೂ ಹಾರೈಸುತ್ತೇನೆ. ಏಕೆಂದರೆ, ಅವರು ಮಾಡುತ್ತಿರುವುದು ಕೆಟ್ಟ ರಾಜಕಾರಣದ ಒಂದು ಭಾಗವಷ್ಟೇ ಆಗಿದೆ’ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದರು.

‘ಕಾಂಗ್ರೆಸ್ ಅಧಃಪತನದಲ್ಲಿದೆ. ನಮ್ಮ ಸರ್ಕಾರದ ವಿರುದ್ಧ ಅವರು ಮಾಡುತ್ತಿರುವ ಭ್ರಷ್ಟಾಚಾರದ ಆರೋಪವು ಸುಳ್ಳು, ಬೋಗಸ್ ಪ್ರಚಾರ ಎನ್ನುವುದು ಜನರಿಗೆ ಗೊತ್ತಿದೆ. ಕೆಟ್ಟ ರಾಜಕಾರಣದ ಮೂಲಕ ಕರ್ನಾಟಕದ ಮರ್ಯಾದೆಯನ್ನು ಹಾಳು ಮಾಡುತ್ತಿದೆ. ಈ ವಿಚಾರದಲ್ಲಿ ರಕ್ಷಣೆಗಾಗಿ ನಾನು ಜಾತಿಯನ್ನು ಬಳಸಿಕೊಂಡಿಲ್ಲ. ಕಾಂಗ್ರೆಸ್‌ ನಡೆಯನ್ನು ನೋಡಿದ ಕೆಲವರು ನೋವಿನಿಂದ ಜಾತಿ ವಿಚಾರ ಪ್ರಸ್ತಾಪಿಸಿದ್ದಾರೆ. ಆದರೆ, ಅದನ್ನು ನಾನು ಸಮರ್ಥಿಸುವುದಿಲ್ಲ’ ಎಂದರು.

‘ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ಕೊಡಿ ಎಂದು ಕಾಂಗ್ರೆಸ್‌ನವರನ್ನು ಕೇಳಿದ್ದೆವು. ಆದರೆ, ಸದನದಲ್ಲೂ ದಾಖಲೆ ಕೊಡಲಿಲ್ಲ. ಸುಮ್ಮನೆ ಆರೋಪ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

‘ರಾಜ್ಯದಲ್ಲಿ 108 ಆಂಬುಲೆನ್ಸ್‌ ಕಾಲ್ ಸೆಂಟರ್‌ನಲ್ಲಿ ಸಮಸ್ಯೆ ಆಗಿರುವುದು ಗಮನಕ್ಕೆ ಬಂದಿದೆ. ಮದರ್ ಬೋರ್ಡ್ ಸಮಸ್ಯೆಯಿಂದಾಗಿ ತಾಂತ್ರಿಕವಾಗಿ ತೊಡಕಾಗಿದೆ. ಈ ಬಗ್ಗೆ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದೇನೆ. ಬೆಂಗಳೂರು ಜೊತೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಮಸ್ಯೆಯಾಗಿದೆ. ಶೀಘ್ರವೇ ಪರಿಹರಿಸಲಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌, ಶಾಸಕ ಎಸ್.ಎ.ರಾಮದಾಸ್, ಮೇಯರ್‌ ಶಿವಕುಮಾರ್, ಮುಖಂಡ ಸಿದ್ದರಾಜು, ಬಿಜೆಪಿ ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಹಾಗೂ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು