ಶುಕ್ರವಾರ, ಸೆಪ್ಟೆಂಬರ್ 17, 2021
22 °C
ವೈಟ್‌ ಟಾಪಿಂಗ್‌ 3ನೇ ಹಂತದ ಯೋಜನೆ ತಡೆದಿದ್ದ ಯಡಿಯೂರಪ್ಪ

ಕೊನೆ ಗಳಿಗೆಯಲ್ಲಿ ₹1,172 ಕೋಟಿ ಯೋಜನೆಗೆ ಒಪ್ಪಿಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕಾಂಗ್ರೆಸ್ ಅವಧಿಯಲ್ಲಿ ಆರಂಭಿಸಿದ್ದ ವೈಟ್‌ ಟಾಪಿಂಗ್ ಕಾಮಗಾರಿಯಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಯೋಜನೆಗೆ ತಡೆಹಿಡಿದಿದ್ದ ಬಿಜೆಪಿ ಸರ್ಕಾರ ಇದೀಗ ಮೂರನೇ ಹಂತದ ಕಾಮಗಾರಿಗೆ ತರಾತುರಿಯಲ್ಲಿ ಅನುಮೋದನೆ ನೀಡಲು ಸಿದ್ಧತೆ ನಡೆಸಿದೆ.

ರಾಜೀನಾಮೆ ನೀಡುವಂತೆ ಹೈಕಮಾಂಡ್‌ನಿಂದ ಸಂದೇಶ ಬರುವ ಮುನ್ನವೇ ₹1,172 ಕೋಟಿ ಮೊತ್ತದ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ಹೇಳಿವೆ.

‘ಮುಖ್ಯಮಂತ್ರಿ ನವ ಬೆಂಗಳೂರು’ ಯೋಜನೆಯಡಿ ಒಟ್ಟು 159 ರಸ್ತೆಗಳನ್ನು ವೈಟ್‌ ಟಾಪಿಂಗ್ ಮಾಡಲು ಕಾಂಗ್ರೆಸ್ ಸರ್ಕಾರ ಉದ್ದೇಶಿಸಿತ್ತು. ಅವುಗಳಲ್ಲಿ ಮೊದಲ ಹಂತಕ್ಕೆ ₹201.79 ಕೋಟಿ ಹಾಗೂ ಎರಡನೇ ಹಂತದ ಕಾಮಗಾರಿಗಳಿಗಾಗಿ ₹ 442.99 ಕೋಟಿ ಅನುದಾನ ನೀಡಿತ್ತು. ಎರಡೂ ಹಂತದ ಕಾಮಗಾರಿಗಳು ಈಗ ಬಹುತೇಕ ಪೂರ್ಣಗೊಂಡಿವೆ. ಮೂರನೇ ಹಂತದ ಕಾಮಗಾರಿಗೂ ಹಿಂದಿನ ಸರ್ಕಾರವೇ ಅನುಮೋದನೆ ನೀಡಿ ಅನುದಾನ ನಿಗದಿ ಮಾಡಿತ್ತು.

ಮೊದಲ ಎರಡು ಹಂತದ ಕಾಮಗಾರಿಯಲ್ಲಿ ಅಕ್ರಮ ನಡೆದಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್‌ ಅವರು ಮುಖ್ಯಮಂತ್ರಿಗೆ ದೂರು ಸಲ್ಲಿಸಿದ್ದರು. ಅದರ ಆಧಾರದಲ್ಲಿ ಮುಖ್ಯಮಂತ್ರಿ ತನಿಖೆಗೆ ಆದೇಶಿಸಿದ್ದರು. ಕ್ಯಾಪ್ಟನ್‌ ಆರ್‌.ಆರ್‌.ದೊಡ್ಡಿಹಾಳ್‌ ನೇತೃತ್ವದಲ್ಲಿ ತಜ್ಞರ ಸಮಿತಿ ನೇಮಿಸಿ ವರದಿಯನ್ನೂ ಸರ್ಕಾರ ಪಡೆದುಕೊಂಡಿದೆ.

‘ಹಿಂದಿನ ಸರ್ಕಾರಗಳು ಪ್ರತಿ ಕಿ.ಮೀ. ಕಾಮಗಾರಿಗೆ ₹14 ಕೋಟಿಯಷ್ಟು ವೆಚ್ಚ ಮಾಡಿದ್ದವು. ’ಒಂದು ಕಿ.ಮೀ ವೈಟ್‌ ಟಾಪಿಂಗ್ ಕಾಮಗಾರಿಯನ್ನು ₹ 4 ಕೋಟಿ ವೆಚ್ಚದಲ್ಲಿ ಮುಗಿಸಿ ತೋರಿಸುತ್ತೇವೆ’ ಎಂದು ಯಡಿಯೂರಪ್ಪ ಅವರು 2019ರ ಸೆಪ್ಟೆಂಬರ್‌ನಲ್ಲಿ ನಡೆಸಿದ್ದ ನಗರ ಪ್ರದಕ್ಷಿಣೆ ವೇಳೆ ಸವಾಲು ಹಾಕಿದ್ದರು. ಆದರೆ, ಅದು ಕಾರ್ಯಗತ ಆಗಲಿಲ್ಲ.

‘ಮೂರನೇ ಹಂತದ ಕಾಮಗಾರಿಗೆ ನಿಗದಿ ಮಾಡಿದ ಅನುದಾನವನ್ನು ಬೇರೆ ಕೆಲಸಗಳಿಗೆ ಬಳಕೆ ಮಾಡಿಕೊಂಡಿದೆ. ಈಗ ಅನುದಾನದ ಲಭ್ಯತೆಯೇ ಇಲ್ಲದಿದ್ದರೂ ಆರು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಲು ತಯಾರಿ ನಡೆಸಲಾಗಿದೆ. ಈ ಉದ್ದೇಶದಿಂದಲೇ ಮುಖ್ಯಮಂತ್ರಿ ಅವರು ಶುಕ್ರವಾರ ನಗರ ಪ್ರದಕ್ಷಿಣೆ ನಡೆಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಸಾರ್ವಜನಿಕರಿಂದ ಬೇಡಿಕೆ ಇದೆ ಎಂಬ ಕಾರಣ ನೀಡಿ ಈ ಹಿಂದೆ ತಾವೇ ವಿರೋಧಿಸಿದ್ದ ಯೋಜನೆಗೆ ಕೊನೆಯ ನಾಲ್ಕು ದಿನಗಳಲ್ಲಿ ಅನುಮೋದನೆ ನೀಡಲು ಸಿದ್ಧತೆ ಪೂರ್ಣಗೊಂಡಿದೆ. ಈ ಔದಾರ್ಯವನ್ನು ಮುಖ್ಯಮಂತ್ರಿ ಯಾವ ಕಾರಣಕ್ಕೆ ತೋರಿಸುತ್ತಿದ್ದಾರೆ ಎಂಬುದೂ ರಹಸ್ಯವೇನಲ್ಲ’ ಎಂದು ಹೆಸರು ಹೇಳಲು ಬಯಸದ ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

‘ರಾಜಕೀಯ ದುರುದ್ದೇಶದಿಂದ ಮಾಡಿದ್ದ ಆರೋಪ’

‘ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರಂಭಿಸಿದ ವೈಟ್‌ ಟಾಪಿಂಗ್ ಕಾಮಗಾರಿ ಒಳ್ಳೆಯ ಉದ್ದೇಶದಿಂದ ಕೂಡಿತ್ತು ಎಂಬುದನ್ನು ಈಗ ಬಿಜೆಪಿ ಒಪ್ಪಿಕೊಂಡಂತೆ ಆಗಿದೆ. ’ ಎಂದು ಶಾಸಕ ರಾಮಲಿಂಗಾರೆಡ್ಡಿ ಹೇಳಿದರು.

‘ವೈಟ್‌ ಟಾಪಿಂಗ್ ವಿಧಾನದಲ್ಲಿ ನಿರ್ಮಿಸಿದ ರಸ್ತೆ ಕನಿಷ್ಠ 25 ವರ್ಷ ಬಾಳಿಕೆ ಬರುತ್ತದೆ. ಮುಖ್ಯ ರಸ್ತೆ, ರಿಂಗ್ ರಸ್ತೆಗಳೆಲ್ಲವೂ ವೈಟ್‌ ಟಾಪಿಂಗ್ ಆದರೆ ಒಳ್ಳೆಯದು. ಅದಕ್ಕಾಗಿ ನಮ್ಮ ಅವಧಿಯಲ್ಲಿ ಆರಂಭಿಸಲಾಗಿತ್ತು’ ಎಂದರು.

‘ರಾಜಕೀಯ ದುರುದ್ದೇಶದಿಂದ ಆರೋಪ ಮಾಡಿದ್ದ ಬಿಜೆಪಿಯವರು, ಸರ್ಕಾರ ಬದಲಾದ ಬಳಿಕ ಕಾಮಗಾರಿ ತಡೆ ಹಿಡಿದಿದ್ದರು. ದೊಡ್ಡಿಹಾಳ್ ಸಮಿತಿ ಅಕ್ರಮ ನಡೆದಿಲ್ಲ ಎಂದು ವರದಿ ನೀಡಿತು. ಸತ್ಯಾಂಶ ಅರ್ಥವಾದ ಬಳಿಕ ಮುಖ್ಯಮಂತ್ರಿ ಅವರೇ 3ನೇ ಹಂತದ ಕಾಮಗಾರಿಗೆ ಅನುಮೋದನೆ ನೀಡಲು ಹೊರಟಿದ್ದಾರೆ. ಸತ್ಯ ಅರ್ಥವಾಗಿರುವುದು ಸಂತಸದ ವಿಷಯ’ ಎಂದರು.

ಕಾಂಗ್ರೆಸ್ ಅವಧಿಯ ಅನುದಾನ

ಒಳ್ಳೆಯ ಉದ್ದೇಶದ ಕಾಮಗಾರಿ ಎಂಬುದು ಗೊತ್ತಿದ್ದರೂ ದುರುದ್ದೇಶದಿಂದ ಬಿಜೆಪಿ ಸರ್ಕಾರ ಅನುದಾನ ತಡೆ ಹಿಡಿದಿತ್ತು ಎಂದು ಬಿಬಿಎಂಪಿ ಮಾಜಿ ಸದಸ್ಯ ಎಂ. ಶಿವರಾಜು ಹೇಳಿದರು.

ವೈಟ್‌ ಟಾಪಿಂಗ್ 3ನೇ ಹಂತದ ಕಾಮಗಾರಿಗೆ ಕಾಂಗ್ರೆಸ್ ಅವಧಿಯಲ್ಲೇ ಅನುದಾನ ನೀಡಲಾಗಿತ್ತು. ಅಕ್ರಮ ನಡೆದಿಲ್ಲ ಎಂಬುದು ಗೊತ್ತಿದ್ದರೂ ಕಾಂಗ್ರೆಸ್ ಮೇಲೆ ಆರೋಪ ಹೊರಿಸಲು ಮುಂದಾಗಿದ್ದರು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು