ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಕಾಂಗ್ರೆಸ್‌ ಅಧ್ಯಕ್ಷ ಗಾದಿ: ಮುಂದುವರಿದ ಗೊಂದಲ

Last Updated 30 ಜೂನ್ 2021, 8:17 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಆಯ್ಕೆ ಗೊಂದಲ ಮುಂದುವರಿದಿದ್ದು, ಈ ಬಗ್ಗೆ ಸ್ಪಷ್ಟವಾಗಿ ಪ್ರತಿಕ್ರಿಯಿಸಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿರಾಕರಿಸಿದ್ದಾರೆ.

ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹೆಚ್ಚು ಮತ ಗಳಿಸಿದ್ದ ಮೊಹಮ್ಮದ್‌ ನಲಪಾಡ್‌ ಅವರನ್ನು ಅನರ್ಹಗೊಳಿಸಿ, ನಂತರದ ಸ್ಥಾನ ಗಳಿಸಿದ್ದ ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು.

ಈ ವಿಷಯದಲ್ಲಿ ಹಗ್ಗಜಗ್ಗಾಟ ಮುಂದುವರಿದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ತಿರಸ್ಕರಿಸಿರುವ ಬಗ್ಗೆ ರಕ್ಷಾ ರಾಮಯ್ಯ ಅವರು ವರಿಷ್ಠರಿಗೆ ದೂರು ನೀಡಿದ್ದರು. ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಕಾರಣಕ್ಕೆ ನಲಪಾಡ್‌ ಅವರನ್ನು ಫಲಿತಾಂಶ ಬಳಿಕ ಅರ್ಹಗೊಳಿಸಲಾಗಿತ್ತು. ಇದೀಗ ಈ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.

ಅಧ್ಯಕ್ಷ ಸ್ಥಾನದಲ್ಲಿ ಡಿ. 31ರ ವರೆಗೆ ರಕ್ಷಾ ರಾಮಯ್ಯ ಮುಂದುವರಿಯಲಿದ್ದು, ಬಳಿಕ ಆ ಸ್ಥಾನವನ್ನು ಬಿಟ್ಟುಕೊಡಬೇಕು ಎಂಬ ಬಗ್ಗೆ ಹಿರಿಯ ನಾಯಕರು ಸಂಧಾನ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಈ ಸಂಧಾನಕ್ಕೆ ರಕ್ಷಾ ರಾಮಯ್ಯ ಒಪ್ಪಿಲ್ಲ ಎಂದೂ ಗೊತ್ತಾಗಿದೆ.

ಈ ವಿಚಾರದಲ್ಲಿ ಬುಧವಾರ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಈ ಬಗ್ಗೆ ನಾನು ಏನೂ ಹೇಳಲು ಆಗದು’ ಎಂದರು. ಆದರೆ, ಶಿವಕುಮಾರ್‌ ಮೌನ ವಹಿಸಿದ್ದಾರೆ. ಆ ಮೂಲಕ, ಯುವ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಗೊಂದಲ ಇದೆ ಎನ್ನುವುದು ಸ್ಪಷ್ಟವಾಗಿದೆ.

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ವಿಚಾರದಲ್ಲಿ ನಾನು ನೀಡಿರುವ ಸಲಹೆಯನ್ನು ನಿಮಗೆ (ಮಾಧ್ಯಮಕ್ಕೆ) ಹೇಳಲು ಆಗದು. ಅವರಿಗೆ ಹೇಳಿರುವುದನ್ನು ನಿಮಗೆ ಹೇಗೆ ತಿಳಿಸಲಿ. ಅವರು (ಚುನಾವಣಾ ಅಧಿಕಾರಿಗಳು) ಏನೋ ಒಂದು ಸಂಧಾನ ಮಾಡುತ್ತೇವೆ ಅಂದಿದ್ದಾರೆ. ಇಬ್ಬರನ್ನೂ ಕೂರಿಸಿಕೊಂಡು ಹೊಂದಾಣಿಕೆ ಮಾಡಿ ಎಂದಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ಇನ್ನೂ ಆರು ತಿಂಗಳು ಮಾತ್ರ ರಕ್ಷಾ ರಾಮಯ್ಯ ಅವರು ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿರುತ್ತಾರೆ ಎಂಬ ವಿಚಾರ ಗೊತ್ತಿಲ್ಲ’ ಎಂದ ಸಿದ್ದರಾಮಯ್ಯ, ಈ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಲಿಲ್ಲ.

ಪ್ರತಿಕ್ರಿಯೆಗೆ ನಕಾರ: ಈ ವಿಚಾರದಲ್ಲಿ ಕೇಳಿದ ಪ್ರಶ್ನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಈ ಬಗ್ಗೆ ಕೇಳುತ್ತಿದ್ದಂತೆ ಮೌನವಾಗಿ ಹೊರಟು ಹೋದರು.

ಜನಸಂಪರ್ಕ ಯಾತ್ರೆ: ‘ಗುರುವಾರದಿಂದ (ಜುಲೈ 1) ಪಕ್ಷದ ವತಿಯಿಂದ ಜನಸಂಪರ್ಕ ಯಾತ್ರೆ ಇದೆ. ಕೋವಿಡ್‌ನಿಂದ ಸಾವನ್ನಪ್ಪಿದವರ ಮನೆಗಳಿಗೆ ತೆರಳಿ ಪಕ್ಷದ ಜಿಲ್ಲಾ ಘಟಕಗಳ ಅಧ್ಯಕ್ಷರು ಸಾಂತ್ವನ ಹೇಳಲಿದ್ದಾರೆ. ನಾನು ಎಲ್ಲಿಗೆ ಹೋಗಬೇಕೆಂದು ಕಾರ್ಯಕ್ರಮ ಪಟ್ಟಿ ಸಿದ್ಧವಾಗಿಲ್ಲ. ಒಂದಷ್ಟು ಸಮಸ್ಯೆಗಳಿವೆ, ಅವುಗಳನ್ನು ಬಗೆಹರಿಸಬೇಕು. ಆ ಮೇಲೆ ಜನ ಸಂಪರ್ಕ ಯಾತ್ರೆಯಲ್ಲಿ ಭಾಗಿಯಾಗುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT