ಮಂಗಳವಾರ, ಮೇ 24, 2022
30 °C
ಸಂಘಟನೆಯಲ್ಲೂ ಭಾಗಿ, ಹಲವು ವರ್ಷಗಳಿಂದ ಗುತ್ತಿಗೆದಾರರಾಗಿದ್ದರು

ಪಕ್ಷದಿಂದ ಸ್ಪಂದನೆ ಸಿಗದಿದ್ದರಿಂದ ಸಂತೋಷ್ ಪಾಟೀಲ ನೊಂದಿದ್ದರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೆ.ಎಸ್. ಈಶ್ವರಪ್ಪ ವಿರುದ್ಧ ಶೇ 40ರಷ್ಟು ಕಮಿಷನ್ ಆರೋಪ ಮಾಡಿದ್ದ ನಂತರ ಇಲ್ಲಿನ ಗುತ್ತಿಗೆದಾರ ಸಂತೋಷ್ ಪಾಟೀಲ ಹೆಚ್ಚು ಚರ್ಚೆಗೆ ಒಳಗಾಗಿದ್ದರು.

ಬಿಜೆಪಿ ಕಾರ್ಯಕರ್ತರಾಗಿದ್ದ (ಸದಸ್ಯತ್ವ ಸಂಖ್ಯೆ: 2003910134– ಸಂತೋಷ್ ಹೇಳಿಕೊಂಡಿದ್ದಂತೆ) ಅವರು ‘ಹಿಂದೂ ವಾಹಿನಿ’ ಎನ್ನುವ ಸಂಘಟನೆಯ ಕಾರ್ಯದರ್ಶಿಯೂ ಆಗಿದ್ದರು. ಪಕ್ಷ ಸಂಘಟನೆಯಲ್ಲೂ ಗುರುತಿಸಿಕೊಂಡಿದ್ದರು. ನಾಲ್ಕೈದು ವರ್ಷಗಳಿಂದ ಗುತ್ತಿಗೆದಾರರಾಗಿದ್ದರು. ಗುತ್ತಿಗೆದಾರರ ಸಂಘದಲ್ಲೂ ಸಕ್ರಿಯವಾಗಿದ್ದರು.

ಅವರಿಗೆ ತಾಯಿ, ಪತ್ನಿ, ಒಂದೂವರೆ ವರ್ಷದ ಮಗು, ಅಣ್ಣ ಇದ್ದಾರೆ. ಸಹೋದರ ಬಸನಗೌಡ ಪಾಟೀಲ ಪೊಲೀಸ್ ಇಲಾಖೆಯಲ್ಲಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಮೂಲತಃ ತಾಲ್ಲೂಕಿನ ಬಡಸ ಗ್ರಾಮದವರಾದ ಸಂತೋಷ್, ವಿಜಯನಗರದಲ್ಲಿ ವಾಸವಿದ್ದರು. ಹಿಂಡಲಗಾ ಭಾಗದಲ್ಲಿಯೇ ನಾನು ರಸ್ತೆ ನಿರ್ಮಾಣ ಮೊದಲಾದ ಕಾಮಗಾರಿಗಳನ್ನು ನಡೆಸಿದ್ದೇನೆ’ ಎಂದು ಹೇಳಿಕೊಂಡಿದ್ದರು. ಬಡಸದವರಾದರೂ ನಗರದಲ್ಲಿ ಇರುತ್ತಿದ್ದರು.

ನೋವು ತೋಡಿಕೊಂಡಿದ್ದರು

ಸಚಿವರ ವಿರುದ್ಧ ಆರೋಪ ಮಾಡಿದ ನಂತರ ಮತ್ತು ‍ಪ್ರಧಾನಿ, ಕೇಂದ್ರ ಸಚಿವರು ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಮೊದಲಾದವರಿಗೆ ಮನವಿ ಸಲ್ಲಿಸಿ ಗಮನಕ್ಕೆ ತಂದಿದ್ದರೂ, ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾದರೂ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ಆಪ್ತರೊಂದಿಗೆ ನೋವು ತೋಡಿಕೊಂಡಿದ್ದರು. ಮಾರ್ಚ್‌ 13ರಂದು ಪ್ರಧಾನಿ ಮೊದಲಾದವರಿಗೆ ದೂರು ನೀಡಿದ್ದರು. ಕೆಲವು ದಿನಗಳ ನಂತರ ಮಾಧ್ಯಮದಲ್ಲಿ ಅದು ಸುದ್ದಿಯಾಗಿತ್ತು.

‘ಸಂತೋಷ್ ಯಾರು ಎನ್ನುವುದೇ ಗೊತ್ತಿಲ್ಲ, ಆತ ಬಿಜೆಪಿ ಕಾರ್ಯಕರ್ತನೇ ಅಲ್ಲ’ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿಕೆ ನೀಡಿದ್ದಕ್ಕೆ ಪ್ರತ್ಯುತ್ತರವಾಗಿ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿದ್ದರು ಸಂತೋಷ್.

‘ನಿಮ್ಮ ಮೇಲೆ ವಿಶ್ವಾಸವಿಟ್ಟು ಕಾಮಗಾರಿ ಕೈಗೊಂಡಿದ್ದೆ. ಈಗ ನುಣುಚಿಕೊಳ್ಳುವುದಕ್ಕೋಸ್ಕರ ನಾನೇನೂ ಹೇಳೇ ಇಲ್ಲ, ಅವರಾರು ಎನ್ನುವುದೇ ಗೊತ್ತಿಲ್ಲ ಎಂದು ಸಚಿವರು ಹೇಳಿರುವುದು ಸರಿಯಲ್ಲ. ಅವರೊಂದಿಗೆ ಇರುವ ಫೋಟೊಗಳು ಮೊದಲಾದ ದಾಖಲೆಗಳಿವೆ. ಅವುಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದೇನೆ. 108 ಕಾಮಗಾರಿ  ಸುಮ್ಮನೆ ಮಾಡಲಾಗುತ್ತದೆಯೇ? ಅಭಿವೃದ್ಧಿ ಮಾಡಿದ್ದೇವೆ. ಅದರಿಂದ ಪಕ್ಷಕ್ಕೂ ಒಳ್ಳೆಯ ಹೆಸರು ಬಂದಿದೆ. ಆದ್ದರಿಂದ ಹಣ ಕೇಳುತ್ತಿದ್ದೇವೆ. ನುಣುಚಿಕೊಳ್ಳಲು ಹೋಗಬೇಡಿ. ನಿಮ್ಮ ಹಿರಿತನಕ್ಕೆ ಒಳ್ಳೆಯದಲ್ಲ’  ಎಂದು ತಿರುಗೇಟು ನೀಡಿದ್ದರು.

ಕೆಲವು ದಿನಗಳ ಹಿಂದೆಯೇ ಬೆದರಿಕೆ ಹಾಕಿದ್ದರು

‘ಹಣ ಬಿಡುಗಡೆ ಮಾಡದಿದ್ದರೆ ಮುಂದಿನ ಎಲ್ಲ ಅನಾಹುತಕ್ಕೆ ಈಶ್ವರಪ್ಪ ಅವರೇ ಕಾರಣರಾಗುತ್ತಾರೆ’ ಎಂದು ಇತ್ತೀಚೆಗೆ ವಿಡಿಯೊ ಹೇಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಇದಕ್ಕೂ ಪಕ್ಷದ ಮಟ್ಟದಲ್ಲಿ ಸೂಕ್ತ ಸ್ಪಂದನೆ ದೊರೆಯಲಿಲ್ಲ ಎನ್ನಲಾಗುತ್ತಿದೆ.

ಇಲ್ಲಿನ ವಿಜಯನಗರದಲ್ಲಿ ಅವರಿದ್ದ ಮನಗೆ ಬೀಗ ಹಾಕಲಾಗಿದೆ. ಸಂತೋಷ್ ಮತ್ತು ಕುಟುಂಬದವರು ಹಲವು ದಿನಗಳಿಂದ ಇಲ್ಲಿಲ್ಲ ಎಂದು ನೆರೆಯವರು ತಿಳಿಸಿದರು.

‘ಸಂತೋಷ್ ಅವರನ್ನು ಪಕ್ಷದಲ್ಲಿದ್ದಾಗ ಆಗಾಗ ಭೇಟಿಯಾಗುತ್ತಿದ್ದೆ. ಅವರು ಪಕ್ಷದ ಕಾರ್ಯಕರ್ತರಾಗಿದ್ದರು. ಆ ಸಂಪರ್ಕದ ಮೇಲೆಯೇ ಈಶ್ವರಪ್ಪ ಅವರೊಂದಿಗೆ ಒಡನಾಟ ಇಟ್ಟುಕೊಂಡಿದ್ದರು. ಹಿಂಡಲಗಾ ಜಾತ್ರೆ ಸಂದರ್ಭದಲ್ಲಿ ಟೆಂಡರ್ ಆಗದಿದ್ದರೂ ವಿಶ್ವಾಸದ ಮೇಲೆ ಕೆಲಸ ಮಾಡಿದ್ದರು. ಈಗ, ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ’ ಎಂದು ಆಮ್‌ ಆದ್ಮಿ ಪಕ್ಷದ ಮುಖಂಡ ರಾಜು ಟೋಪಣ್ಣವರ ಹೇಳಿದರು.

ಸಂತೋಷ್ ಕಾರ್ಯಾದೇಶ ಪಡೆಯದೆ ಕೆಲಸ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು