ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಉತ್ತರಾಧಿಕಾರಿ ಯಾರು?

ನಿರಾಣಿ, ಬೊಮ್ಮಾಯಿ, ಸಿ.ಟಿ. ರವಿ, ಅಶ್ವತ್ಥನಾರಾಯಣ, ಈಶ್ವರಪ್ಪ, ಜೋಶಿ?
Last Updated 17 ಜುಲೈ 2021, 20:00 IST
ಅಕ್ಷರ ಗಾತ್ರ

ಬೆಂಗಳೂರು: ನಾಯಕತ್ವ ಬದಲಾವಣೆಯತ್ತ ಬಿಜೆಪಿ ವರಿಷ್ಠರು ಚಿತ್ತ ಹರಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದ ಬೆನ್ನಲ್ಲೇ, ಬಿ.ಎಸ್‌. ಯಡಿಯೂರಪ್ಪನವರ ಉತ್ತರಾಧಿಕಾರಿ ಯಾರು ಎಂಬ ಚರ್ಚೆ ಪಕ್ಷದೊಳಗೆ ಶುರುವಾಗಿದೆ.

ವೀರಶೈವ–ಲಿಂಗಾಯತ ಸಮುದಾಯವರು ಯಡಿಯೂರಪ್ಪನವರ ಬೆನ್ನಿಗೆ ನಿಂತಿರುವುದರಿಂದ ಅದೇ ಸಮುದಾಯದವರಿಗೆ ಪಟ್ಟ ಕೊಡಬೇಕೆಂಬ ವಾದ ಬಲವಾಗಿದೆ. ವೀರೇಂದ್ರ ಪಾಟೀಲರನ್ನು ಕೆಳಗಿಳಿಸಿದ ಬಳಿಕ ಕಾಂಗ್ರೆಸ್‌ಗೆ ಅಂಟಿಕೊಂಡಿರುವ ‘ಲಿಂಗಾಯತ ವಿರೋಧಿ’ ಎಂಬ ಹಣೆಪಟ್ಟಿಯನ್ನು ಬಿಜೆಪಿ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಭಯವೂ ಆವರಿಸಿದೆ.

ಮತ ಹಾಗೂ ರಾಜಕೀಯ ಲೆಕ್ಕಾಚಾರದಲ್ಲಿ ಹಿಂದುಳಿದ, ಪರಿಶಿಷ್ಟ ಜಾತಿ, ಒಕ್ಕಲಿಗ ಅಥವಾ ಬ್ರಾಹ್ಮಣ ಸಮುದಾಯದ ನಾಯಕರು ಹೆಸರು ಮುಂಚೂಣಿಗೆ ಬರಬಹುದು ಎಂದೂ ಹೇಳಲಾಗುತ್ತಿದೆ.

ಲಿಂಗಾಯತರ ಲೆಕ್ಕಾಚಾರ:

ಲಿಂಗಾಯತರಲ್ಲಿ ಮುರುಗೇಶ ನಿರಾಣಿ, ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಬಸನಗೌಡ ಪಾಟೀಲ ಯತ್ನಾಳ ಹೆಸರು ಪ್ರಮುಖವಾಗಿವೆ. ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡುವ ವಿಚಾರವೂ ಇದರ ಹಿಂದಿದೆ.

ಲಿಂಗಾಯತರಲ್ಲಿ ಪಂಚಮಸಾಲಿ ಒಳಪಂಗಡಕ್ಕೆ ಆದ್ಯತೆ ನೀಡಿಲ್ಲ ಎಂಬ ಕೂಗು ನಿವಾರಣೆ, ಮುಂದಿನ ಚುನಾವಣೆ ನಿರ್ವಹಣೆಯ ಹೊಣೆ ಹೊರುವವರನ್ನೇ ಆಯ್ಕೆ ಮಾಡಿದಲ್ಲಿ ನಿರಾಣಿಗೆ ಈ ಅವಕಾಶ ದಕ್ಕಬಹುದು.

ಯಡಿಯೂರಪ್ಪನವರಿಗೆ ಉತ್ತರಾಧಿಕಾರಿ ಆಯ್ಕೆಯ ಪೂರ್ಣ ಅವಕಾಶ ಕೊಟ್ಟರೆ ಬಸವರಾಜ ಬೊಮ್ಮಾಯಿಗೆ ಪಟ್ಟ ಸಿಗಲಿದೆ. ಬಿಜೆಪಿ ಸೇರಿ ದಶಕ ಕಳೆದಿರುವ ಅವರು, ಸರ್ಕಾರದಲ್ಲಿ ಸಂಘ ‘ಪರಿವಾರ’ದ ಸಿದ್ಧಾಂತವನ್ನೇ ನೆಚ್ಚಿಕೊಂಡು, ಇಲಾಖೆ ನಿರ್ವಹಣೆಯಲ್ಲಿ ಅದೇ ಮಾದರಿಯ ‘ಬದ್ಧತೆ’ ತೋರಿಸಿದವರು. ಬಿಜೆಪಿಯಲ್ಲಿ ಪ್ರಭಾವಿಯಾಗಿರುವ ಬಿ.ಎಲ್. ಸಂತೋಷ್ ಒಲವನ್ನೂ ಈ ನಿಲುವಿನಿಂದಾಗಿಯೇ ಗಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ನಿಷ್ಠುರ ಮಾತುಗಾರಿಕೆ, ಸಂಘದ ಸಿದ್ಧಾಂತಗಳ ಕಟ್ಟಾಳು ಹಾಗೂ ಪಂಚಮಸಾಲಿ ನಾಯಕ ಯತ್ನಾಳರಿಗೆ ಕೂಡ ಒಲಿಯಬಹುದು. ನಿರಾಣಿ, ಬೊಮ್ಮಾಯಿ ಪಕ್ಷದ ವರಿಷ್ಠರ ಆಣತಿಯಂತೆ ನಡೆಯುತ್ತಾರೆ ಎಂಬುದು ಅವರ ಸಕಾರಾತ್ಮಕ ಅಂಶವಾದರೆ, ಯತ್ನಾಳ ಯಾರ ಮಾತನ್ನೂ ಕೇಳಲಾರರು ಎಂಬುದು ನಕಾರಾತ್ಮಕ ಸಂಗತಿ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ.

ಉತ್ತರ ಕರ್ನಾಟಕಕ್ಕೆ ಪ್ರಾತಿನಿಧ್ಯ ನೀಡುವ ವಿಚಾರಕ್ಕಾಗಿ ಸವದಿ ಹೆಸರೂ ಚರ್ಚೆಯಲ್ಲಿದೆ.

ಒಕ್ಕಲಿಗರ ಪಾಳಿ:

ಒಕ್ಕಲಿಗರ ಪೈಕಿ ಸಿ.ಎನ್. ಅಶ್ವತ್ಥನಾರಾಯಣ, ಸಿ.ಟಿ. ರವಿ, ಆರ್. ಅಶೋಕ ಹೆಸರು ಪ್ರಮುಖವಾಗಿವೆ.

ಸಿ.ಟಿ. ರವಿ ಅವರಿಗೆ ಸಂತೋಷ್‌ ಬೆಂಬಲ ಇದ್ದರೆ, ಅಶ್ವತ್ಥನಾರಾಯಣ ಅವರು ಇತ್ತೀಚಿನ ದಿನಗಳಲ್ಲಿ ಬಿಜೆಪಿ ಬಯಸುತ್ತಿರುವ ಕಾರ್ಪೋರೇಟ್‌ ಶೈಲಿಯ ನಾಯಕತ್ವ ಹೊಂದಿದ್ದಾರೆ ಎಂಬುದು ಅವರ ಪರ ಕೆಲಸ ಮಾಡಬಹುದು. ಒಕ್ಕಲಿಗರಲ್ಲಿ ಒಬ್ಬರನ್ನು ಆರಿಸುವ ಅವಕಾಶ ಯಡಿಯೂರಪ್ಪ ಅವರಿಗೆ ಸಿಕ್ಕರೆ ಅಶೋಕ ಅವರ ಕೈ ಮೇಲಾಗಬಹುದು ಎಂಬ ಚರ್ಚೆ ನಡೆದಿದೆ.

ಹಿಂದುಳಿದ ಅಥವಾ ಪರಿಶಿಷ್ಟ ಸಮುದಾಯಕ್ಕೆ ಈಗ ಮುಖ್ಯಮಂತ್ರಿ ಪಟ್ಟ ಸಿಗುವ ಸಾಧ್ಯತೆ ತೀರಾ ಕ್ಷೀಣ. ಹಾಗೊಂದು ವೇಳೆ ಅವಕಾಶ ಕೊಟ್ಟಲ್ಲಿ ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ ಹೆಸರು ಪ್ರಸ್ತಾವದ ಹಂತದಲ್ಲಿವೆ.

ಬ್ರಾಹ್ಮಣ ಸಮುದಾಯಕ್ಕೆ ನೀಡುವ ಸಾಧ್ಯತೆ ಇಲ್ಲವೇ ಇಲ್ಲ. ಹಾಗೊಂದು ವೇಳೆ ಕೊಟ್ಟಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮೊದಲ ಆಯ್ಕೆ. ಎರಡನೇ ಆಯ್ಕೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಇದ್ದಾರೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT