ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ಮೌನಿ ಬಾಬಾ ಆಗಿದ್ದು ಏಕೆ - ಪ್ರಧಾನಿಗೆ ರಾಮಲಿಂಗಾ ರೆಡ್ಡಿ ಪ್ರಶ್ನೆ

Last Updated 18 ಜೂನ್ 2022, 20:45 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರದಭ್ರಷ್ಟಾಚಾರಗಳ ಬಗ್ಗೆ ನೀವು ಮೌನಿ ಬಾಬಾ ಆಗಿದ್ದು ಯಾಕೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ‌ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಮಾಜಿ ಮೇಯರ್‌ಗಳ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು‌, ಬಿಬಿಎಂಪಿ ಚುನಾವಣೆ ಹಾಗೂ ವಿಧಾನ ಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಎರಡು ದಿನಗಳ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಪ್ರಧಾನಿ‌ಯನ್ನು ಉದ್ದೇಶಿಸಿ ಹಲವು ಪ್ರಶ್ನೆಗಳನ್ನು ಕೇಳಿದರು.

‌‌‌‘ಪಿಎಸ್ಐ, ಸಹಾಯಕ ಪ್ರಾಧ್ಯಾಪಕರು, ಅರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ತಾಂಡವವಾಡುತ್ತಿದೆ. ಆದರೂ ಸಿಬಿಐ, ಇ.ಡಿ, ಆದಾಯ ತೆರಿಗೆ ಇಲಾಖೆಗಳಿಂದ ತನಿಖೆ ಯಾಕಿಲ್ಲ' ಎಂದೂ ಆಕ್ರೋಶ ವ್ಯಕ್ತಪಡಿಸಿದರು.

‘ರೈತರ ಆದಾಯ ಇಮ್ಮಡಿ ಆಗುವ ಬದಲು ರಸಗೊಬ್ಬರ, ಯಂತ್ರೋಪಕರಣಗಳ ಬಳಕೆ ವೆಚ್ಚ ಇಮ್ಮಡಿ ಆಗಿರುವ ಬಗ್ಗೆ ಏನು ಹೇಳುತ್ತೀರಿ? ರಾಜ್ಯದಲ್ಲಿ ಹಿಜಾಬ್, ಆಜಾನ್, ಹಲಾಲ್, ಆರ್ಥಿಕ ಜಿಹಾದ್ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ‌ಸಂಘ ಪರಿವಾರದವರೇ ಕೋಮು ದೌರ್ಜನ್ಯ ನಡೆಸುತ್ತಿದ್ದು, ಈ ವಿಚಾರದಲ್ಲಿ ನಿಮ್ಮ ನಿಲುವೇನು’ ಎಂದು ಪ್ರಶ್ನಿಸಿದರು.

‌‌‘ಆಮ್ಲಜನಕ ಕೊರತೆಯಿಂದ ಯಾರೂ ಸತ್ತೇ ಇಲ್ಲ ಎಂದು ಸುಳ್ಳು ವರದಿ ಕೊಟ್ಟ ಸರ್ಕಾರದ ವಿರುದ್ಧ ಕ್ರಮ ಇಲ್ಲ ಯಾಕೆ? ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್‌ಗೆ ಬಲಿಯಾಗಿದ್ದರೂ 40 ಸಾವಿರ ಎಂದು ಲೆಕ್ಕ ತೋರಿಸಿದ್ದು ಯಾಕೆ? ಕಾಂಗ್ರೆಸ್ ಪ್ರತಿಭಟನೆಯಿಂದ ಕೋವಿಡ್ ಸೋಂಕು ಹರಡುತ್ತದೆ ಎಂದು ಸಚಿವ ಸುಧಾಕರ್ ಹೇಳುತ್ತಿದ್ದಾರೆ. ಕೊಮ್ಮಘಟ್ಟದಲ್ಲಿ 50 ಸಾವಿರ ಜನರನ್ನು ಸೇರಿಸಿ ಸಾರ್ವಜನಿಕ ಸಭೆ ಮಾಡುತ್ತಿದ್ದೀರಿ, 12 ಸಾವಿರಕ್ಕೂ ಹೆಚ್ಚು ಜನರ ಜತೆ ಮೈಸೂರಿನಲ್ಲಿ ಯೋಗ ಮಾಡಲಿದ್ದೀರಿ. ನಿಮ್ಮ ಈ ಕಾರ್ಯಕ್ರಮಗಳಿಂದ ಕೋವಿಡ್‌ ಹರಡುವುದಿಲ್ಲವೇ’ ಎಂದು ಕೇಳಿದರು.

‘ಮೇಕೆದಾಟು ಹಾಗೂ ಮಹದಾಯಿ ಯೋಜನೆಗೆ ಯಾವಾಗ ಅನುಮತಿ ಕೊಡಿಸುವಿರಿ? ಪರಿಷ್ಕೃತ ಪಠ್ಯದ ವಿಚಾರದಲ್ಲಿ ನಿಮ್ಮ ನಿಲುವು ಏನು? ರಾಜ್ಯಕ್ಕೆ ಜಿಎಸ್‌ಟಿ ಪಾಲು ನೀಡದೆ ಸಾಲ ನೀಡಿ, ಕನ್ನಡಿಗರನ್ನು ಸಾಲಗಾರರನ್ನಾಗಿ ಮಾಡುತ್ತಿರುವುದೇಕೆ? ಬೆಂಗಳೂರು ಅಭಿವೃದ್ಧಿ ಎಂದರೆ ಕೇವಲ ಬಿಜೆಪಿ ಶಾಸಕರಿರುವ ಕ್ಷೇತ್ರಗಳ ಅಭಿವೃದ್ಧಿಯೇ? ಈ ರಾಜಕೀಯ ತಾರತಮ್ಯ ಎಷ್ಟು ಸರಿ’ ಎಂದು ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT