ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವನ್ಯಜೀವಿ ಕಳೇಬರ ಹೂಳುವ ಪದ್ಧತಿ ಬೇಡ’

ಅರಣ್ಯ ಇಲಾಖೆ ಆದೇಶಕ್ಕೆ ವನ್ಯಜೀವಿ ವಿಜ್ಞಾನಿಗಳ ಸಹಮತ
Last Updated 9 ಏಪ್ರಿಲ್ 2022, 18:41 IST
ಅಕ್ಷರ ಗಾತ್ರ

ಬೆಂಗಳೂರು: ‘ವನ್ಯಜೀವಿಗಳು ಸತ್ತಾಗ ಅವುಗಳನ್ನು ಹೂಳುವ ಅಥವಾ ಸುಡುವ ಗೋಜಿಗೆ ಹೋಗದೆ ಬೇರೆ ಪ್ರಾಣಿ–ಪಕ್ಷಿಗಳು ತಿನ್ನಲು ಅಥವಾ ಕೊಳೆಯಲು ಬಿಡಬೇಕು. ವನ್ಯಜೀವಿಗಳ ನೈಸರ್ಗಿಕ ಬದುಕಿನಲ್ಲಿ ಮಾನವರ ಹಸ್ತಕ್ಷೇಪ ಇರಬಾರದು’ ಎಂದು ಪರಿಸರ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

‘ಕಾಡಿನ ಮಧ್ಯದಲ್ಲಿ ಸತ್ತ ಪ್ರಾಣಿಗಳನ್ನು ಸುಡುವ ಅಥವಾ ಹೂಳುವ ಪದ್ಧತಿಯನ್ನು ನಿಲ್ಲಿಸಬೇಕು. ಆದರೆ, ಈ ಮಾರ್ಗಸೂಚಿಯು ರಾಷ್ಟ್ರೀಯ ಪ್ರಾಣಿ ಹುಲಿಗೆ ಅನ್ವಯಿಸುವುದಿಲ್ಲ’ ಎಂದು ಅರಣ್ಯ ಇಲಾಖೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ.

‘ಕಾಡಿನ ಮಧ್ಯದಲ್ಲಿ ಪ್ರಾಣಿಗಳು ಸತ್ತರೆ, ಅವುಗಳನ್ನು ಮುಟ್ಟದೆ ಹಾಗೇ ಬಿಡುವುದು ಸೂಕ್ತ. ಆಗ
ಪ್ರಾಣಿ–ಪಕ್ಷಿಗಳು ಅದನ್ನು ಆಹಾರವಾಗಿ ಮಾಡಿಕೊಳ್ಳುತ್ತವೆ. ಯಾವ ಪ್ರಾಣಿಯೂ ತಿನ್ನದೆ ಕೊಳೆತು ಹೋದರೆ, ಅದು ಕೂಡ ನೈಸರ್ಗಿಕ ಪ್ರಕ್ರಿಯೆಯೇ ಆಗಿದೆ’ ಎಂದು ಪರಿಸರ ವಿಜ್ಞಾನಿ ಪ್ರವೀಣ್ ಭಾರ್ಗವ್ ಅಭಿಪ್ರಾಯಪಟ್ಟರು.

‘ಆನೆ ಮತ್ತು ಹುಲಿಯ ವಿಚಾರದಲ್ಲಿ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ. ಆನೆಯ ದಂತ, ಹುಲಿಯ ಚರ್ಮ, ಉಗುರು ಮತ್ತು ಕೋರೆ ಹಲ್ಲುಗಳನ್ನು ಜನ ಕಿತ್ತುಕೊಂಡು ಹೋಗುವ ಸಾಧ್ಯತೆ ಇರುತ್ತದೆ. ಜನ ಸಂಚಾರ ಇಲ್ಲದಕಾಡಿನ ಮಧ್ಯದಲ್ಲಿ ಮೃತಪಟ್ಟರೆ
ಆನೆ ಮತ್ತು ಹುಲಿಯ ಕಳೇಬರವನ್ನೂ ಮುಟ್ಟುವ ಅಗತ್ಯ ಇರುವುದಿಲ್ಲ’ ಎಂದರು.

‘ರಾಷ್ಟ್ರೀಯ ಉದ್ಯಾನ ಮತ್ತು ವನ್ಯದಾಮಗಳಲ್ಲಿ ಇತ್ತೀಚೆಗೆ ಮನುಷ್ಯರ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಅದು ಕಡಿಮೆ ಆಗಲೇಬೇಕಿದೆ. ಆ ನಿಟ್ಟಿನಲ್ಲಿಯೇ ಸಂಜಯ್ ಗುಬ್ಬಿ ಅವರು ಈ ಸಲಹೆ ನೀಡಿದ್ದರು. ಅದನ್ನ ಆಧರಿಸಿ ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮ ಸರಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಮಾರಕ ಖಾಯಿಲೆಯಿಂದ ಮೃತಪಟ್ಟ ಪ್ರಾಣಿಯಿಂದ ಬೇರೆ ಪ್ರಾಣಿಗಳಿಗೂ ಸಾಂಕ್ರಾಮಿಕ ಹರಡುವ ಸಾಧ್ಯತೆ ಇದ್ದರೂ ಅದರ ಗೋಜಿಗೆ ಹೋಗುವುದು ಸೂಕ್ತವಲ್ಲ. ಆಂಥ್ರಾಕ್ಸ್ ಕಾಯಿಲೆ ಹರಡಿ 1970ರ ಆಸುಪಾಸಿನಲ್ಲಿ ಸಾಕಷ್ಟು ಕಾಡುಕೋಣಗಳು ಮೃತಪಟ್ಟವು. ಅವುಗಳ ಸಂತತಿ ಈಗ ಮತ್ತೆಹೆಚ್ಚಾಗಿದೆ. ಆದ್ದರಿಂದ ವನ್ಯಜೀವಿಗಳ ನೈಸರ್ಗಿಕ ಬದುಕಿನಲ್ಲಿ ಮಾನವನ ಹಸ್ತಕ್ಷೇಪದ ಅಗತ್ಯವಿಲ್ಲ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT