ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಮೂರ್ತಿಯನ್ನು ಬಾಬರಿ ಮಸೀದಿಯಂತೆಯೇ ಧ್ವಂಸ ಮಾಡುತ್ತೇವೆ: ಮುತಾಲಿಕ್

Last Updated 11 ನವೆಂಬರ್ 2022, 6:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಕಾಂಗ್ರೆಸ್ ಶಾಸಕ ತನ್ವೀರ್ ಶೇಠ್ ಹೇಳಿಕೆಯಂತೆ ಮೈಸೂರಿನಲ್ಲಿ 100 ಅಡಿ ಎತ್ತರದ ಟಿಪ್ಪು ಪ್ರತಿಮೆ ಸ್ಥಾಪಿಸಿದ್ದೇ ಆದರೆ, ಬಾಬರಿ ಮಸೀದಿಯಂತೆ ಅದನ್ನು ಸಹ ಧ್ವಂಸ ಮಾಡಲಾಗುವುದು' ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ಈದ್ಗಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿಯಲ್ಲಿ ಪಾಲ್ಗೊಂಡು, ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

'ಟಿಪ್ಪು ಕರ್ನಾಟಕಕ್ಕೇ ಕಳಂಕ. ಮೈಸೂರು ಮಹಾರಾಜರಿಗೆ ಅವಮಾನವಾಗುವಂತೆ ಅಲ್ಲಿಯೇ ಆಡಳಿತ ನಡೆಸಿದ್ದ. ಒಂದು ವೇಳೆ ಅವನ ಮೂರ್ತಿ ಪ್ರತಿಷ್ಠಾಪಿಸಿದ್ದೇ ಆದರೆ, ಅದನ್ನು ಒಡೆದು ಹಾಕುತ್ತೇವೆ. ಅವನ ಮೂರ್ತಿ ಪ್ರತಿಷ್ಠಾಪಿಸುವಂಥ ಕೆಟ್ಟ ಕೆಲಸಕ್ಕೆ ಯಾರೂ ಕೈ ಹಾಕಬಾರದು. ಬೇಕಾದರೆ, ಸಂತ ಶಿಶುನಾಳ‌ ಷರೀಫ್, ಅಬ್ದುಲ್ ಕಲಾಂ‌ ಅಂತವರ ಮೂರ್ತಿ ಪ್ರತಿಷ್ಠಾಪಿಸಿ' ಎಂದು ಸಲಹೆ ನೀಡಿದರು.

'ಸಾವಿರಾರು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿದ, ಹಿಂದುಗಳನ್ನು ಇಸ್ಲಾಂಗೆ ಮತಾಂತರ ಮಾಡಿದ ಟಿಪ್ಪುವಿನ ಜಯಂತಿ ಇಲ್ಲಿನ ಈದ್ಗಾ ಮೈದಾನದಲ್ಲಿ ಆಚರಿಸಿದ್ದು ಅಕ್ಷಮ್ಯ ಅಪರಾಧ. ಟಿಪ್ಪು ಜಯಂತಿ ಆಚರಿಸಿ ಮೈದಾನವನ್ನು ಅಪವಿತ್ರಗೊಳಿಸಲಾಗಿತ್ತು. ಇದೀಗ ನಾವು ಗೋಮೂತ್ರದಿಂದ ಶುದ್ಧ ಮಾಡಿ, ಕನಕ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿದ್ದೇವೆ' ಎಂದರು.

'ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಿಸಬೇಕು ಎನ್ನುವುದು ವಿಫಲವಾಗಿದೆ. ಆದರೆ, ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಆಚರಿಸಲು ಅನುಮತಿ ನೀಡಬೇಕೆಂದು ಮನವಿ ನೀಡಿದ ಸಂಘಟನೆಯಲ್ಲಿಯೇ ಒಡಕು ಉಂಟಾಗಿತ್ತು. ಅವರಲ್ಲಿದ್ದ ಬಹುತೇಕರು ಬಂದಿಲ್ಲ, ಮುಸ್ಲಿಮರು ಸಹ ಬಂದಿಲ್ಲ. ಒಟ್ಟಾರೆ ಟಿಪ್ಪು ಜಯಂತಿ ಆಚರಣೆ ವೈಫಲ್ಯ ಕಂಡಿದೆ' ಎಂದರು.

'ಪಾಲಿಕೆ ವಿರೋಧ ಪಕ್ಷದ ನಾಯಕರು ಪಾಲಿಕೆ ಕಟ್ಟಡದಲ್ಲಿ ಟಿಪ್ಪು ಜಯಂತಿ ಆಚರಿಸಿದ್ದು ಸರಿಯಲ್ಲ. ಸರ್ಕಾರಿ ಕಚೇರಿಯಲ್ಲಿ ಜಯಂತಿ ಆಚರಿಸಿರುವ ಕುರಿತು ಮೇಯರ್ ಅವರ ಮೇಲೆ ಕ್ರಮ ಕೈಗೊಂಡು, ಪ್ರಕರಣ ದಾಖಲಿಸಬೇಕು. ಇಲ್ಲದಿದ್ದರೆ ನಾವೇ ಪೊಲೀಸ್ ದೂರು ನೀಡುತ್ತೇವೆ' ಎಂದರು.

'530 ವರ್ಷಗಳ ಹಿಂದೆ ಕನಕದಾಸರು ಹೇಳಿದ ವಿಚಾರ ಇಂದಿಗೂ ಪ್ರಸ್ತುತವಾಗಿದೆ. ಜಾತಿ, ಜಾತಿಗಳ ನಡುವೆ ಭಿನ್ನಾಭಿಪ್ರಾಯ ಮಾಡದೆ ಏಕತೆಯಲ್ಲಿ ಬಾಳಬೇಕು ಎಂದು ಕನಕರು ಹೇಳಿದ್ದರು. ಆದರೆ, ಇಂದಿಗೂ ಜಾತಿ, ಜಾತಿಗಳ ನಡುವೆ ಒಡಕು ಇದೆ, ದ್ವೇಷವಿದೆ. ಅದನ್ನು ಹೋಗಲಾಡಿಸುವಲ್ಲಿ ನಾವೆಲ್ಲ ಒಂದಾಗಬೇಕಿದೆ' ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT