ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆದೇಶ ಹಿಂಪಡೆಯದಿದ್ದರೆ ಕಾನೂನು ಹೋರಾಟ’

Last Updated 15 ಜುಲೈ 2022, 16:05 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿಯೇ ಸಾರ್ವಜನಿಕರು ಫೋಟೊ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧಿಸಲಾಗಿದೆ. ಈ ಆದೇಶ ಹಿಂಪಡೆಯದಿದ್ದರೆ ಕಾನೂನು ಹೋರಾಟ ಆರಂಭಿಸಲಾಗುವುದು’ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್‌) ಪಕ್ಷ ತಿಳಿಸಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆದೇಶದ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ದೀಪಕ್‌ ಸಿ.ಎನ್‌., ‘ನಮ್ಮ ಪಕ್ಷದ ಸದಸ್ಯರು ರಾಜ್ಯದ ಮೂಲೆ ಮೂಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆದು ವಿಡಿಯೊ ಚಿತ್ರೀಕರಿಸುತ್ತಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ನೇರಪ್ರಸಾರವನ್ನೂ ಮಾಡುತ್ತಿದ್ದರು. ಇದರಿಂದ ಬೆದರಿದ ಸರ್ಕಾರ ಈ ಆದೇಶ ಹೊರಡಿಸಿದೆ’ ಎಂದು ಹೇಳಿದ್ದಾರೆ.

ಕೆಆರ್‌ಎಸ್‌ ಪಕ್ಷದ ಕೆಲಸವನ್ನು ನೋಡಿ ಉತ್ತೇಜಿತರಾದ ಸಾರ್ವಜನಿಕರೂ ಭ್ರಷ್ಟಾಚಾರದ ವಿರುದ್ಧ ಅದೇ ರೀತಿಯ ಹೋರಾಟ ಆರಂಭಿಸಿದ್ದರು. ಭ್ರಷ್ಟ ಅಧಿಕಾರಿಗಳನ್ನು ಪ್ರಶ್ನಿಸುವ ಕೆಲಸ ಮಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಸರ್ಕಾರವೇ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಕೆಲಸ ಮಾಡಬೇಕಿತ್ತು. ಆದರೆ, ಈ ಆದೇಶದ ಮೂಲಕ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುವ ಕೆಲಸ ಮಾಡಿದೆ ಎಂದು ಟೀಕಿಸಿದ್ದಾರೆ.

‘ಪಕ್ಷವು ನಾಲ್ಕು ವರ್ಷಗಳ ಅವಧಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬಾರಿ ಸರ್ಕಾರಿ ಕಚೇರಿಗಳಲ್ಲಿ ವಿಡಿಯೊ ಚಿತ್ರೀಕರಣ ಮತ್ತು ನೇರಪ್ರಸಾರ ಮಾಡಿದೆ. ಎಲ್ಲಿಯೂ ಅಧಿಕಾರಿಗಳಿಗೆ ತೊಂದರೆ ನೀಡಿಲ್ಲ. ಸರ್ಕಾರದ ಆದೇಶಕ್ಕೆ ಭ್ರಷ್ಟಚಾರದಲ್ಲಿ ತೊಡಗಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳ ಬೆಂಬಲ ಮಾತ್ರ ಇದೆ. ರಾಜ್ಯದ ಬಹುಸಂಖ್ಯಾತ ಜನರು ಈ ಆದೇಶದ ವಿರುದ್ಧ ಇದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT