ಮಂಗಳವಾರ, ಸೆಪ್ಟೆಂಬರ್ 21, 2021
23 °C

ಅಕ್ರಮ ಗಣಿಗಾರಿಕೆ ಬೆಂಬಲಿಸಿಲ್ಲ: ಎಚ್‌.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರೂ ಸೇರಿದಂತೆ ತಮ್ಮ ಕುಟುಂಬದ ಯಾರೊಬ್ಬರೂ, ಯಾವತ್ತೂ ಅಕ್ರಮ ಗಣಿಗಾರಿಕೆಯನ್ನು ಬೆಂಬಲಿಸಿಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಕುರಿತು ‘ಪ್ರಜಾವಾಣಿ’ಯ ಭಾನುವಾರದ ಸಂಚಿಕೆಯಲ್ಲಿ ಪ್ರಕಟವಾದ ‘ಒಳನೋಟ’ದಲ್ಲಿನ ವರದಿಯಲ್ಲಿ ತಮ್ಮ ಕುಟುಂಬದ ಬಗ್ಗೆ ಪ್ರಸ್ತಾಪವಾಗಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ‘ಮಂಡ್ಯದಲ್ಲಿ ನಮ್ಮ ಪಕ್ಷ ತೊರೆದು ಬಿಜೆಪಿ ಸೇರಿದ ಸಚಿವ ಕೆ.ಸಿ. ನಾರಾಯಣ ಗೌಡ ಅವರು ನಮ್ಮ ಪಕ್ಷದ ಮುಖಂಡರ ವಿರುದ್ಧ ಸೇಡಿನ ಕ್ರಮಗಳನ್ನು ಕೈಗೊಂಡು, ಕಿರುಕುಳ ನೀಡಲಾರಂಭಿಸಿದ್ದರು. ಆಗ, ಪಕ್ಷದ ವರಿಷ್ಠರಾಗಿ ದೇವೇಗೌಡರು ಕಾರ್ಯಕರ್ತರ ಪರ ಮಾತನಾಡಿದ್ದರು. ಅದನ್ನೇ ಕ್ರಷರ್ ಪರವಾದ ಹೋರಾಟ ಎಂದು ಬಿಂಬಿಸಲಾಗಿತ್ತು’ ಎಂದು ಹೇಳಿದ್ದಾರೆ.

ಮಂಡ್ಯದ ಕೃಷ್ಣರಾಜ ಸಾಗರ ಅಣೆಕಟ್ಟೆ ಸಮೀಪದ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ವಿಚಾರದಲ್ಲೂ ತಾವು ಅಕ್ರಮ ಚಟುವಟಿಕೆಯನ್ನು ಬೆಂಬಲಿಸಿಲ್ಲ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಅಕ್ರಮ ಗಣಿಗಾರಿಕೆ ಪರವಾದ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಅಕ್ರಮ ತಡೆಯಬೇಕಿರುವುದು ಅಧಿಕಾರದಲ್ಲಿರುವವರು. ವಿರೋಧ ಪಕ್ಷದಲ್ಲಿರುವ ತಮ್ಮ ಮೇಲೆ ಆರೋಪ ಹೊರಿಸುವುದು ಸರಿಯಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಜೆಡಿಎಸ್‌ ಪಕ್ಷವಾಗಲಿ, ದೇವೇಗೌಡರಾಗಲಿ ಅಥವಾ ನಾನಾಗಲಿ ಅಕ್ರಮ ಗಣಿಗಾರಿಕೆ ಪರ ನಿಲ್ಲವುದಿಲ್ಲ. ಅಕ್ರಮದಲ್ಲಿ ತೊಡಗಿರುವವರನ್ನು ಸರ್ಕಾರ ಈ ಕ್ಷಣವೇ ಬಂಧಿಸಲಿ. ಅದಕ್ಕೆ ನನ್ನ ಬೆಂಬಲವೂ ಇದೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು