ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌.ಟಿ. ಮೀಸಲು ಹೆಚ್ಚಳ ಬೇಡಿಕೆ ಶೀಘ್ರ ಇತ್ಯರ್ಥಕ್ಕೆ ಕ್ರಮ: ಬೊಮ್ಮಾಯಿ

ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಿಸುವುದು ಅಗತ್ಯ: ಬೊಮ್ಮಾಯಿ
Last Updated 30 ಮಾರ್ಚ್ 2022, 17:13 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಮೀಸಲಾತಿ ಪ್ರಮಾಣವನ್ನು ಶೇಕಡ 7.5ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆ ಕುರಿತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಬಿ. ಅಡಿ ನೇತೃತ್ವದ ಸಮಿತಿಯಿಂದ ಮಧ್ಯಂತರ ವರದಿ ಪಡೆದು ತ್ವರಿತವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ಬುಧವಾರ ವಿಧಾನಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಧರಣಿ ಆರಂಭಿಸಿದ ಕಾಂಗ್ರೆಸ್‌ನ ಟಿ.ರಘುಮೂರ್ತಿ, ಭೀಮಾ ನಾಯ್ಕ್‌, ಬಸನಗೌಡ ದದ್ದಲ್‌ ಸೇರಿದಂತೆ ಹಲವು ಶಾಸಕರು, ‘ಎಸ್‌.ಟಿ. ಮೀಸಲಾತಿ ಹೆಚ್ಚಳದ ಕುರಿತು ತಕ್ಷಣ ನಿರ್ಧಾರ ಪ್ರಕಟಿಸಬೇಕು’ ಎಂದು ಆಗ್ರಹಿಸಿದರು.

ಪರಿಶಿಷ್ಟ ಪಂಗಡಗಳನ್ನು ಮೊದಲು ಹಿಂದುಳಿದ ಬುಡಕಟ್ಟುಗಳು (ಬಿ.ಟಿ) ಎಂಬ ಪ್ರವರ್ಗದಲ್ಲಿ ಇಡಲಾಗಿತ್ತು. ಆಗ ಬಿ.ಟಿ ಪ್ರವರ್ಗಕ್ಕೆ ಶೇ 5ರಷ್ಟು ಮೀಸಲಾತಿ ಇತ್ತು. ಈಗ ಪರಿಶಿಷ್ಟ ಪಂಗಡಗಳಿಗೆ ಶೇಕಡ 3ರಷ್ಟು ಮೀಸಲಾತಿ ಇದೆ. ಒಟ್ಟು ಮೀಸಲಾತಿ ಪ್ರಮಾಣ ಶೇ 50 ಮೀರಬಾರದು ಎಂದು ಸುಪ್ರೀಂ ಕೋರ್ಟ್‌ ಇಂದಿರಾ ಸಹಾನಿ ಪ್ರಕರಣದಲ್ಲಿನ ನೀಡಿರುವ ತೀರ್ಪು ಇದೆ. ಹೀಗಾಗಿ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.

‘ಮೀಸಲಾತಿ ಪಟ್ಟಿಗೆ ಸೇರ್ಪಡೆ, ಪ್ರವರ್ಗಗಳ ಬದಲಾವಣೆ, ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಸಂಬಂಧಿಸಿದಂತೆ ವಿವಿಧ ಸಮುದಾಯ ಗಳಿಂದ ಬೇಡಿಕೆಗಳಿವೆ. ಒಟ್ಟು ಮೀಸಲಾತಿಯ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಿಸುವ ಅಗತ್ಯವಿದೆ ಎಂಬ ನಿಲುವನ್ನು ರಾಜ್ಯ ಸರ್ಕಾರ ಹೊಂದಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರಿಗೆ ಅವರ ಒಟ್ಟು ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿ ಕಲ್ಪಿಸುವುದಕ್ಕೆ ನಾವು ಬದ್ಧತೆ ಹೊಂದಿದ್ದೇವೆ’ ಎಂದರು.

ಸಂವಿಧಾನದಲ್ಲಿನ ಅವಕಾಶಗಳನ್ನೇ ಬಳಸಿಕೊಂಡು ಮೀಸಲಾತಿ ಹೆಚ್ಚಿಸಲಾಗುವುದು. ಇದಕ್ಕಾಗಿ ಹತ್ತು ದಿನಗಳೊಳಗೆ ಸಮಿತಿಯಿಂದ ವರದಿ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಅಡ್ವೊಕೇಟ್‌ ಜನರಲ್‌ ಅವರಿಂದಲೂ ಸಲಹೆ ಕೇಳಲಾಗಿದೆ. ಪರಿಶಿಷ್ಟ ಪಂಗಡಗಳ ಜನರಿಗೆ ಒಳ್ಳೆಯ ಸುದ್ದಿ ಕೊಡಲಾಗುವುದು ಎಂದು ತಿಳಿಸಿದರು.

‘ಹೆಚ್ಚಳಕ್ಕೆ ಅವಕಾಶವಿದೆ’: ‘ವಿಶೇಷ ಸಂದರ್ಭಗಳಲ್ಲಿ ಮೀಸಲಾತಿಯ ಪ್ರಮಾಣವನ್ನು ಶೇ 50ಕ್ಕಿಂತ ಹೆಚ್ಚಿಸಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಕೆಲವು ರಾಜ್ಯಗಳು ಈಗಾಗಲೇ ಮೀಸಲಾತಿ ಹೆಚ್ಚಿಸಿವೆ. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲಾತಿ ನೀಡಿರುವುದರಿಂದ ಎಲ್ಲ ರಾಜ್ಯಗಳಲ್ಲೂ ಮೀಸಲಾತಿ ಪ್ರಮಾಣ ಶೇ 50 ಮೀರಿದೆ. ಈಗ ರಾಜ್ಯದಲ್ಲೂ ಮೀಸಲಾತಿ ಹೆಚ್ಚಳಕ್ಕೆ ಅವಕಾಶವಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರತಿಪಾದಿಸಿದರು.

ಧರಣಿ ಕೈಬಿಡಲು ಮನವಿ

ಎಸ್‌.ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ 49 ದಿನಗಳಿಂದ ಧರಣಿ ನಡೆಸುತ್ತಿರುವ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಅವರನ್ನು ಮನವೊಲಿಸಿ, ಧರಣಿ ಅಂತ್ಯಗೊಳಿಸುವಂತೆ ಶಾಸಕರು ಆಗ್ರಹಿಸಿದರು. ಸ್ವಾಮೀಜಿಯವರ ಮನವೊಲಿಸುವಂತೆ ಸಿದ್ದರಾಮಯ್ಯ ಕೂಡ ಒತ್ತಾಯಿಸಿದರು.

‘ಧರಣಿ ಕೈಬಿಡುವಂತೆ ಸ್ವಾಮೀಜಿಯವರಲ್ಲಿ ಮನವಿ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ‘ಧರಣಿ ಕೈಬಿಡುವಂತೆ ಸ್ವಾಮೀಜಿಯವರಲ್ಲಿ ಸದನದಿಂದಲೇ ಮನವಿ ಮಾಡುತ್ತೇವೆ’ ಎಂದು ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT