ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ರಾಮಾಣಿಕತೆ ಕಂಡರೆ ಲೋಕಾಯುಕ್ತ ಸಂಸ್ಥೆಯಿಂದ ಹೊರಕ್ಕೆ: ಬಿ.ಎಸ್‌. ಪಾಟೀಲ್‌

ವಿಶೇಷ ಕಾರ್ಯಾಗಾರದಲ್ಲಿ ಲೋಕಾಯುಕ್ತದ ಪೊಲೀಸ್‌ ಅಧಿಕಾರಿಗಳಿಗೆ ಎಚ್ಚರಿಕೆ
Last Updated 2 ಡಿಸೆಂಬರ್ 2022, 16:02 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಾಯುಕ್ತದಲ್ಲಿ ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಕೆಲಸ ಮಾಡುವ ಅಧಿಕಾರಿಗಳಿಗೆ ಸಂಪೂರ್ಣ ರಕ್ಷಣೆ ಒದಗಿಸುತ್ತೇನೆ. ಸಂಸ್ಥೆಯ ಆಶಯಗಳಿಗೆ ವಿರುದ್ಧವಾಗಿ ಅಪ್ರಾಮಾಣಿಕತೆ ಹೊಂದಿರುವುದು ಕಂಡುಬಂದರೆ ತಕ್ಷಣವೆ ಇಲ್ಲಿಂದ ಹೊರಕ್ಕೆ ಕಳುಹಿಸುತ್ತೇನೆ’ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್‌. ಪಾಟೀಲ ಹೇಳಿದರು.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕುರಿತು ಲೋಕಾಯುಕ್ತದ ಪೊಲೀಸ್‌ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ‘ವರ್ಗಾವಣೆ, ಹೊರಗಿನವರ ಒತ್ತಡ, ಅಮಾನತಿನ ಭಯವಿಲ್ಲದೆ ಕೆಲಸ ಮಾಡಲು ಲೋಕಾಯುಕ್ತದಲ್ಲಿ ಅವಕಾಶವಿದೆ. ಇಲ್ಲಿಗೆ ಬಂದಿರುವ ಅಧಿಕಾರಿಗಳು ಭ್ರಷ್ಟಾಚಾರದ ವಿರುದ್ಧ ಸೈನಿಕರಂತೆ ಕೆಲಸ ಮಾಡಬೇಕು’ ಎಂದರು.

ಪ್ರತಿ ಜಿಲ್ಲೆಯಲ್ಲೂ ಅತ್ಯಂತ ಭ್ರಷ್ಟರಾಗಿರುವ ಅಧಿಕಾರಿಗಳ ಕುರಿತು ಮಾಹಿತಿ ಸಂಗ್ರಹಿಸಿ, ಸರಿಯಾದ ರೀತಿ ತನಿಖೆ ನಡೆಸಬೇಕು. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ದಾಖಲು ಮಾಡುವಾಗ ಮತ್ತು ತನಿಖೆಯ ಹಂತದಲ್ಲಿ ಆರೋಪಿಗಳಿಗೆ ಮಾಹಿತಿ ಸೋರಿಕೆ ಆಗದಂತೆ ಎಚ್ಚರಿಕೆ ವಹಿಸಬೇಕು. ಆ ರೀತಿ ಕೃತ್ಯದಲ್ಲಿ ಯಾರಾದರೂ ಭಾಗಿಯಾದರೆ ಕಠಿಣ ಕ್ರಮ ಜರುಗಿಸಲಾಗವುದು ಎಂದು ಹೇಳಿದರು.

ಹೆಚ್ಚುತ್ತಿದೆ ವಿಶ್ವಾಸ: ಲೋಕಾಯುಕ್ತ ಸಂಸ್ಥೆಯ ಮೇಲೆ ಜನರ ವಿಶ್ವಾಸ ಮತ್ತೆ ಹೆಚ್ಚುತ್ತಿದೆ. ಈ ಹಿಂದೆ ಪ್ರತಿ ತಿಂಗಳಿಗೆ 300ರಿಂದ 400 ದೂರುಗಳು ಸಲ್ಲಿಕೆಯಾಗುತ್ತಿದ್ದವು. ನವೆಂಬರ್‌ ತಿಂಗಳಿನಲ್ಲಿ 844 ದೂರುಗಳು ದಾಖಲಾಗಿವೆ. ಇದು ಈ ಸಂಸ್ಥೆಯ ಮೇಲೆ ಜನರ ನಂಬಿಕೆ ಹೆಚ್ಚುತ್ತಿರುವುದರ ಸೂಚನೆ. ಸಮಯದ ಮಿತಿ ಇಲ್ಲದೆಯೇ ಕೆಲಸ ಮಾಡಿ ಜನರಿಗೆ ನ್ಯಾಯ ಒದಗಿಸುವುದಕ್ಕೆ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸಿದ್ಧರಾಗಿರಬೇಕು. ರಾತ್ರಿ 9 ಗಂಟೆಯವರೆಗೆ ಕೆಲಸ ಮಾಡುವುದಕ್ಕೆ ತಾವೂ ಸಿದ್ಧ ಎಂದು ಲೋಕಾಯುಕ್ತರು ತಿಳಿಸಿದರು.

ಗದಗ ಜಿಲ್ಲೆಯ ರೈತರೊಬ್ಬರು 415 ಕಿ.ಮೀ. ಪ್ರಯಾಣಿಸಿ ಬೆಂಗಳೂರಿಗೆ ಬಂದು 205 ಕೆ.ಜಿ. ಈರುಳ್ಳಿ ಮಾರಿದರೆ ಕೇವಲ ₹ 8.36 ಕೈಗೆ ಸಿಕ್ಕಿರುವ ಸುದ್ದಿಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದು ಎಪಿಎಂಸಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಸಾಕ್ಷಿ. ಇಂತಹ ಪ್ರಕರಣಗಳ ಕುರಿತು ಆಳವಾದ ತನಿಖೆ ನಡೆಸಲಾಗುವುದು ಎಂದು ಹೇಳಿದರು.

‘ತನಿಖೆಯ ಗುಣಮಟ್ಟ ಹೆಚ್ಚಬೇಕು’
‘ಸಿಬಿಐ ತನಿಖೆ ನಡೆಸುವ ಪ್ರಕರಣಗಳ ಪೈಕಿ ಶೇಕಡ 68ರಲ್ಲಿ ಅಪರಾಧ ಸಾಬೀತಾಗಿ ಶಿಕ್ಷೆಯಾಗುತ್ತಿದೆ. ಲೋಕಾಯುಕ್ತದಲ್ಲಿ ಈ ಪ್ರಮಾಣ ಶೇ 25ರಷ್ಟಿದೆ. ನಮ್ಮ ಸಂಸ್ಥೆಯ ಪೊಲೀಸರು ದಾಖಲಿಸಿ, ತನಿಖೆ ನಡೆಸುವ ಶೇ 85ಕ್ಕಿಂತ ಹೆಚ್ಚಿನ ಪ್ರಕರಣಗಳಲ್ಲಿ ಶಿಕ್ಷೆಯಾಗಬೇಕು. ಅದಕ್ಕೆ ಪೂರಕವಾಗಿ ತನಿಖೆಯ ಗುಣಮಟ್ಟ ಹೆಚ್ಚಳವಾಗಬೇಕು’ ಎಂದು ಲೋಕಾಯುಕ್ತರು ಹೇಳಿದರು.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ. ಎನ್. ಫಣೀಂದ್ರ, ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ರಿಜಿಸ್ಟ್ರಾರ್ ಉಷಾರಾಣಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT