ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಸ್ಟ್ರಾನ್‌: ಗಲಭೆಗೆ ಮಹತ್ವದ ಕಾರಣಗಳಿಲ್ಲ

ಕೆಲವೇ ದಿನಗಳಲ್ಲಿ ಕಾರ್ಯಾರಂಭ– ಕಾರ್ಮಿಕ ಇಲಾಖೆ
Last Updated 14 ಡಿಸೆಂಬರ್ 2020, 16:06 IST
ಅಕ್ಷರ ಗಾತ್ರ

ಬೆಂಗಳೂರು:‘ಐಫೋನ್‌ ತಯಾರಿಕೆ ಮಾಡುವ ವಿಸ್ಟ್ರಾನ್‌ ಇಂಡಿಯಾ ಲಿಮಿಟೆಡ್‌ನಲ್ಲಿ ಕಾರ್ಮಿಕರು ನಡೆಸಿದ ದಾಂದಲೆಗೆ ಕ್ಷುಲ್ಲಕ ಕಾರಣಗಳೇ ಹೊರತು ಮಹತ್ವದ ಕಾರಣಗಳಿಲ್ಲ. ಗಂಭೀರ ಸ್ವರೂಪದ ಹಿಂಸಾಚಾರದ ಹಿಂದೆ ಬಾಹ್ಯಶಕ್ತಿಗಳ ಕೈವಾಡ ‌ಇದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

ಶನಿವಾರ ಕಾರ್ಮಿಕರು ನಡೆಸಿದ ದಾಂದಲೆಯ ಹಿನ್ನೆಲೆಯಲ್ಲಿ ಸೋಮವಾರ ಕಾರ್ಮಿಕ ಇಲಾಖೆ ಆಯುಕ್ತರು ಕಂಪನಿಯ ಪ್ರತಿನಿಧಿಗಳನ್ನು ಕರೆಸಿ ಮಾಹಿತಿ ಪಡೆದರು. ಇನ್ನು ಕೆಲವೇ ದಿನಗಳಲ್ಲಿ ಕಾರ್ಯಚರಣೆ ಆರಂಭಿಸುವುದಾಗಿ ಕಂಪನಿ ಭರವಸೆ ನೀಡಿದೆ.

ಸಭೆಯ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂ ಪಾಷಾ, ‘ಗಲಭೆಗೆ ದೊಡ್ಡ ಕಾರಣಗಳು ಏನೂ ಕಂಡು ಬಂದಿಲ್ಲ. ಬಹುತೇಕ ಸಣ್ಣ ಪುಟ್ಟ ಕಾರಣಗಳೇ ನಮ್ಮ ಗಮನಕ್ಕೆ ಬಂದಿತು’ ಎಂದು ಹೇಳಿದರು.

ಕಂಪನಿಯಲ್ಲಿ ಪ್ರತಿ ತಿಂಗಳು 7 ನೇ ತಾರೀಖಿನಂದು ಸಂಬಳ ಆಗುತ್ತಿತ್ತು. ಒಂದೆರಡು ತಿಂಗಳಿಂದ 11 ನೇ ತಾರೀಖಿಗೆ ಕೊಟ್ಟಿದ್ದಾರೆ. ಮೂರರಿಂದ ನಾಲ್ಕು ದಿನಗಳಷ್ಟು ತಡವಾಗುತ್ತಿತ್ತು. ಓವರ್‌ ಟೈಂ ಕೆಲಸದ ವೇತನ ಕೊಡಬೇಕಾಗಿತ್ತು ಎಂದು ಮಾಹಿತಿ ನೀಡಿದ್ದಾರೆ. ಅದರ ಕಡತವನ್ನು ಕೇಳಿದ್ದೇವೆ. ಅದನ್ನು ಪರಿಶೀಲಿಸಿದ ಬಳಿಕವಷ್ಟೇ ಕೊಟ್ಟಿದ್ದಾರೋ ಇಲ್ಲವೊ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯ ಎಂದು ಹೇಳಿದರು.

ಅಲ್ಲದೆ, ಕಳೆದ ಎರಡು ತಿಂಗಳಿಂದ ಒಂದೆರಡು ದಿನಗಳ ಸಂಬಳ ಕಡಿತ ಆಗಿತ್ತು. ಇದಕ್ಕೆ ಸಾಫ್ಟ್‌ವೇರ್‌ ಸಮಸ್ಯೆಯೇ ಕಾರಣ ಆಗಿತ್ತು. ಅದನ್ನು ಸರಿಪಡಿಸಲು ನಾಲ್ಕೈದು ದಿನಗಳ ತಡವಾಗಿತ್ತು. ಆ ಬಳಿಕ ಸರಿಯಾಗಿತ್ತು ಎಂದು ಅಕ್ರಂ ತಿಳಿಸಿದರು.

ಕಡಿತ ಆಗಿರುವ ವೇತನದ ಬಾಕಿಯನ್ನೂ ಕೊಟ್ಟಿದ್ದಾರೆ. ಈ ತಿಂಗಳದ್ದು ಕೊಟ್ಟಿರಲಿಲ್ಲ. ಅದನ್ನು ಹೊರತು ಪಡಿಸಿದರೆ ಒಟ್ಟಾರೆ ಸಂಬಳ ಪಾವತಿ ಬಾಕಿ ಉಳಿಸಿಕೊಂಡಿಲ್ಲ. ವೇತನ ಪಾವತಿಯ ಮಾಹಿತಿಯನ್ನೂ ಕೇಳಿದ್ದೇವೆ. ಇತರ ಯಾವುದೇ ಮಹತ್ವದ ಕಾರಣಗಳು ಇಲ್ಲದಿದ್ದರೂ ಇದ್ದಕ್ಕಿದ್ದಂತೆ ಗಲಭೆ ಭುಗಿಲೆದ್ದಿದೆ. ಕಂಪನಿಯ ದೋಷ ಕಂಡು ಬಂದಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೆಲವೇ ದಿನಗಳಲ್ಲಿ ಕಾರ್ಯಾರಂಭ:

ಹಾನಿ ಆಗಿರುವುದನ್ನು ಸರಿಪಡಿಸಲಾಗುತ್ತಿದೆ. ನವೀಕರಣ ಕಾರ್ಯ ಮುಗಿದ ತಕ್ಷಣವೇ ಕಂಪನಿ ಐಫೋನ್‌ ತಯಾರಿಕೆಯನ್ನು ಪುನರಾರಂಭಿಸಲಿದೆ. ಈ ಬಗ್ಗೆ ಕಂಪನಿ ಪ್ರತಿನಿಧಿಗಳು ಭರವಸೆ ನೀಡಿದ್ದಾರೆ ಎಂದೂ ಅಕ್ರಂ ಪಾಷಾ ತಿಳಿಸಿದರು.

ಕಂಪನಿ ಸ್ಥಳಾಂತರ ಮಾಡುವ ಯಾವುದೇ ಇರಾದೆ ಇಲ್ಲ. ಅಲ್ಲಿಯೇ ತನ್ನ ಕಾರ್ಯಾಚರಣೆ ಮುಂದುವರಿಸಲಿದೆ. ಕಂಪನಿ ಸ್ಥಳಾಂತರ ಕೇವಲ ಊಹಾಪೋಹ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT