ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಚಿತ ಸೌದೆ ಯೋಜನೆ ಘೋಷಿಸಿ’–ಮಹಿಳಾ ಕಾಂಗ್ರೆಸ್‌ ಸಮಿತಿ ಆಗ್ರಹ

Last Updated 20 ಮೇ 2022, 17:10 IST
ಅಕ್ಷರ ಗಾತ್ರ

ಬೆಂಗಳೂರು: ಅಡುಗೆ ಮನೆಗಳನ್ನು ಹೊಗೆಯಿಂದ ಮುಕ್ತಗೊಳಿಸುವ ಭರವಸೆ ನೀಡಿದ್ದ ಕೇಂದ್ರದ ಬಿಜೆಪಿ ಸರ್ಕಾರ ನಿರಂತರವಾಗಿ ಎಲ್‌ಪಿಜಿ ದರ ಹೆಚ್ಚಿಸಿ ಮಹಿಳೆಯರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈಗ ದರ ಏರಿಕೆಯಿಂದ ಸಮಸ್ಯೆಗೆ ಮುಕ್ತಿ ನೀಡಲು ‘ಉಚಿತ ಸೌದೆ ಯೋಜನೆ’ ಘೋಷಿಸಲಿ ಎಂದು ರಾಜ್ಯ ಮಹಿಳಾ ಕಾಂಗ್ರೆಸ್‌ ಸಮಿತಿ ಆಗ್ರಹಿಸಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮಹಿಳಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಎಂಟು ವರ್ಷಗಳ ಅವಧಿಯಲ್ಲಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ₹ 845ರಷ್ಟು ಹೆಚ್ಚಳವಾಗಿದೆ. ದಿನ ಬಳಕೆಯ ವಸ್ತುಗಳ ದರವೂ ಏರಿಕೆಯಾಗಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರು ಜೀವನ ನಡೆಸುವುದೇ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದ್ದರೂ ಬಿಜೆಪಿ ನಾಯಕರು ಕಣ್ಣೆತ್ತಿ ನೋಡುತ್ತಿಲ್ಲ’ ಎಂದರು.

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ ದರ ₹ 10ರಷ್ಟು ಹೆಚ್ಚಳವಾದರೂ ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ, ಶಶಿಕಲಾ ಜೊಲ್ಲೆ, ತಾರಾ, ಮಾಳವಿಕಾ ಅವರಿಗೆಲ್ಲ ಈಗ ಮಾತನಾಡಲು ಧೈರ್ಯವಿಲ್ಲವೆ ಎಂದು ಪ್ರಶ್ನಿಸಿದರು.

ಸಮಿತಿ ಉಪಾಧ್ಯಕ್ಷೆ ಜಿ. ಪದ್ಮಾವತಿ ಮಾತನಾಡಿ, ‘ಉಜ್ವಲ ಯೋಜನೆಯಡಿ ಬಡವರಿಗೆ ಎಲ್‌ಪಿಜಿ ಸಂಪರ್ಕ ನೀಡಲು ಇತರ ಗ್ರಾಹಕರಿಂದ ತಲಾ ₹ 200 ಸಂಗ್ರಹಿಸಲಾಗಿತ್ತು. ಈಗ ಉಜ್ವಲ ಯೋಜನೆಯೇ ಸ್ಥಗಿತಗೊಂಡಿದೆ. ಆ ಹಣ ಎಲ್ಲಿಗೆ ಹೋಗಿದೆ’ ಎಂದು ಪ್ರಶ್ನಿಸಿದರು.

ಎಲ್‌ಪಿಜಿ ದರದ ಜತೆಯಲ್ಲೇ ವಿದ್ಯುತ್‌ ಬಿಲ್‌, ನೀರಿನ ದರ ಎಲ್ಲವೂ ಹೆಚ್ಚಳವಾಗುತ್ತಿದೆ. ಬಿಜೆಪಿ ನಾಯಕಿಯರು ಮತ್ತು ಕಾರ್ಯಕರ್ತೆಯರು ಮೌನಕ್ಕೆ ಶರಣಾಗಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT