ಶನಿವಾರ, ಜುಲೈ 24, 2021
27 °C

ಪಕ್ಷದಲ್ಲಿ ‘ಸ್ತ್ರೀ ಶಕ್ತಿ’ಗೆ ಬಲ: ಕಾಂಗ್ರೆಸ್‌ ಕಾರ್ಯತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಹಿಳಾ ಸಮುದಾಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದತ್ತ ಸೆಳೆಯಲು ಮುಂದಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಈ ಉದ್ದೇಶದಿಂದ ರಚಿಸಿರುವ ಸ್ತ್ರೀ ಶಕ್ತಿ ಸಂಘಟನಾ ಸಮಿತಿಯ ಜತೆ ಸೋಮವಾರ ಸುದೀರ್ಘ ಸಭೆ ನಡೆಸಿದರು.

ಮಾಜಿ ಸಚಿವೆ ಉಮಾಶ್ರೀ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ 28 ಮಹಿಳಾ ಸದಸ್ಯರ ಈ ಸಮಿತಿ, ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು, ಪಕ್ಷದ ಮಹಿಳಾ ಕಾರ್ಯಕರ್ತರ ಒಗ್ಗೂಡಿಸುವಿಕೆ, ವಿಶೇಷ ಸ್ತ್ರೀ ಶಕ್ತಿ ಸಂಘಟನೆಗಳ ರಚನೆ ಮತ್ತು ಇರುವ ಸಂಘಟನೆಗಳ ಬಲವರ್ಧನೆಗೆ ಶ್ರಮಿಸಲು ಉದ್ದೇಶಿಸಿದೆ. ಅಲ್ಲದೆ, ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭ ರಚನೆಯಾಗಿದ್ದ ಸ್ತ್ರೀಶಕ್ತಿ ಸಂಘಟನೆಗಳಿಗೆ ಇನ್ನಷ್ಟು
ಬಲ ತುಂಬಲು ಮತ್ತು ಮುಂದಿನ ಚುನಾವಣೆಗೆ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿಸಿಕೊಳ್ಳಲು ಕಾರ್ಯಪ್ರವೃತ್ತವಾಗಲಿದೆ.

ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ವಿವಿಧ ಕ್ಷೇತ್ರಗಳಲ್ಲಿರುವ ಯುವ ಸಾಧಕಿಯರನ್ನು ಗುರುತಿಸಿ, ಸೆಳೆಯುವ ಜೊತೆಗೆ ಪಕ್ಷಕ್ಕೆ ತಾರಾ ಮೆರುಗು ನೀಡಬೇಕು. ವಿಧಾನಸಭೆ ಚುನಾವಣೆಯ

ವೇಳೆಗೆ ಪಕ್ಷದಲ್ಲಿ ಮಹಿಳಾ ಪ್ರಾಬಲ್ಯ ವೃದ್ಧಿಯಾಗಬೇಕು. ಇರುವ ಪಕ್ಷದ ಕಾರ್ಯಕರ್ತೆಯರನ್ನು ಹುರಿದುಂಬಿಸುವ ಜತೆಗೆ ಹೊಸಬರನ್ನು ಸೆಳೆಯುವ ಕಾರ್ಯ ಮಾಡಬೇಕು. ಇದೊಂದು ಸವಾಲು ಎಂಬಂತೆ ಸ್ವೀಕರಿಸಿ ಕಾರ್ಯನಿರ್ವಹಿಸಬೇಕು. ಸಮಿತಿಯಲ್ಲಿ ಯಾರು ಯಾವ ರೀತಿ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಗಮನಿಸಿ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಹೆಚ್ಚಿನ ಅಧಿಕಾರ ನೀಡಲಾಗುವುದು’ ಎಂದರು.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ, ಸಲೀಂ ಅಹಮದ್, ಧ್ರುವನಾರಾಯಣ್, ಮಹಿಳಾ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವರಾದ ಮೋಟಮ್ಮ, ರಾಣಿ ಸತೀಶ್, ಸುಮಾ ವಸಂತ್, ಉಮಾಶ್ರೀ, ಜಯಮಾಲಾ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ರೂಪ ಶಶಿಧರ್, ಕುಸುಮಾ ಶಿವಳ್ಳಿ, ಮುಖಂಡರಾದ ಮಲ್ಲಾಜಮ್ಮ, ವಾಸಂತಿ ಶಿವಣ್ಣ, ಕುಸುಮಾ ಎಚ್, ಅಕ್ಕೈ ಪದ್ಮಶಾಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು