ಶುಕ್ರವಾರ, ಡಿಸೆಂಬರ್ 2, 2022
19 °C
ಸಾಂಕ್ರಾಮಿಕವಲ್ಲದ ರೋಗಗಳ ಕ್ಲಿನಿಕ್‌ಗಳಲ್ಲಿ ರೋಗ ಪತ್ತೆ

5 ತಿಂಗಳಲ್ಲಿ 2,993 ಮಂದಿಗೆ ಹೃದ್ರೋಗ

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಕಂಡಿದ್ದರಿಂದ ಸಾಂಕ್ರಾಮಿಕವಲ್ಲದ ರೋಗಗಳ ತಪಾ‌‌ಸಣೆಗೆ ಆದ್ಯತೆ ನೀಡಲಾಗಿದೆ. ಇದರಿಂದಾಗಿ ಈ ವರ್ಷ ಕಳೆದ 5 ತಿಂಗಳಲ್ಲಿಯೇ 2,993 ಮಂದಿಯಲ್ಲಿ ಹೃದ್ರೋಗ ಪತ್ತೆಯಾಗಿದೆ. 

2020ರ ಮಾರ್ಚ್ ತಿಂಗಳಲ್ಲಿ ಕೋವಿಡ್ ಕಾಣಿಸಿಕೊಂಡಿದ್ದರಿಂದ ಅನ್ಯ ಕಾಯಿಲೆಗಳ ತಪಾಸಣೆ, ಚಿಕಿತ್ಸೆಗೆ ಹಿನ್ನಡೆಯಾಗಿತ್ತು. 2022ರ ಏಪ್ರಿಲ್ ಬಳಿಕ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖ ಮಾಡಿದ್ದರಿಂದ ಹೃದಯ ಸೇರಿ ವಿವಿಧ ಕಾಯಿಲೆ ಹೊಂದಿರುವವರನ್ನು ಗುರುತಿಸಿ, ಚಿಕಿತ್ಸೆ ಒದಗಿಸಲಾಗುತ್ತಿದೆ. ಈ ಕಾರ್ಯಕ್ಕೆ ಆರೋಗ್ಯ ಇಲಾಖೆಯು ರಾಜ್ಯದಲ್ಲಿ ಸಾಂಕ್ರಾಮಿಕವಲ್ಲದ ರೋಗಗಳ ಕ್ಲಿನಿಕ್‌ಗಳನ್ನು (ಎನ್‌ಸಿಡಿ) ಬಳಸಿಕೊಳ್ಳುತ್ತಿದೆ. ಕೋವಿಡ್‌ನಿಂದ ಚೇತರಿಸಿಕೊಂಡ ಕೆಲ ವರಲ್ಲಿಯೂ ಹೃದ್ರೋಗ ಪತ್ತೆಯಾಗಿದೆ. 

ರಾಜ್ಯದಲ್ಲಿ 30 ಜಿಲ್ಲಾ ಹಂತದ ಎನ್‌ಸಿಡಿ ಕ್ಲಿನಿಕ್‌ಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ 347 ಸಿ.ಎಚ್‌.ಸಿ–ಎನ್‌.ಸಿ.ಡಿ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಕ್ಲಿನಿಕ್‌ಗಳಿಗೆ 2019–20ನೇ ಸಾಲಿನಲ್ಲಿ 36.07 ಲಕ್ಷ ಮಂದಿ ಭೇಟಿ ನೀಡಿ, ತಪಾಸಣೆ ಮಾಡಿಸಿಕೊಂಡಿದ್ದರು. ಕೋವಿಡ್‌ನಿಂದಾಗಿ 2020–21ನೇ ಸಾಲಿನಲ್ಲಿ ಈ ಸಂಖ್ಯೆ 20.94 ಲಕ್ಷಕ್ಕೆ ಇಳಿಕೆಯಾಗಿತ್ತು. ತಪಾಸಣೆಗೆ ಬರುವವರ ಸಂಖ್ಯೆ ಈಗ ಮತ್ತೆ ಹೆಚ್ಚಳವಾಗಿದೆ. 

ಆಸ್ಪತ್ರೆಗಳಲ್ಲೂ ಪತ್ತೆ: ಎನ್‌ಸಿಡಿ ಕ್ಲಿನಿಕ್‌ನಲ್ಲಿ ಕಳೆದ 5 ತಿಂಗಳಲ್ಲಿ ಪತ್ತೆಯಾದ ಹೃದ್ರೋಗ ಪ್ರಕರಣಗಳಲ್ಲಿ 2,190 ಮಂದಿಗೆ ಚಿಕಿತ್ಸೆ ಒದಗಿಸಲಾಗಿದೆ. ಕಳೆದ ವರ್ಷ ಈ ಕ್ಲಿನಿಕ್‌ಗಳಲ್ಲಿ 5,620 ಪ್ರಕರಣಗಳು ಪತ್ತೆಯಾಗಿದ್ದವು. 4,581 ಮಂದಿಗೆ ಚಿಕಿತ್ಸೆ ಒದಗಿಸಲಾಗಿತ್ತು. ಎನ್‌ಸಿಡಿ ಕೇಂದ್ರಗಳ ಜತೆಗೆ ಖಾಸಗಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಹಲವರು ಹೃದಯ ಸಂಬಂಧಿ ಸಮಸ್ಯೆಗಳಿಗೆ ತಪಾಸಣೆ ಮಾಡಿಸಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಆಸ್ಪತ್ರೆಗಳು ನಿಯಮಿತ ವಾಗಿ ಮಾಹಿತಿಗಳನ್ನು ಒದಗಿಸಿಲ್ಲ. ಇದರಿಂದಾಗಿ ಇಲಾಖೆಯ ಬಳಿ ಆ ಬಗ್ಗೆ ಕ್ರೋಡೀಕೃತ ಮಾಹಿತಿಯಿಲ್ಲ. 

‘ಹೃದ್ರೋಗ ತಪಾಸಣೆಗೆ ಒಳ ಪಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಜನರಲ್ಲಿಯೂ ಜಾಗೃತಿ ಮೂಡುತ್ತಿದೆ. ಹೃದಯ ಕಾಯಿಲೆಗಳ ಬಗ್ಗೆ ಜನ ಎಚ್ಚರದಿಂದ ಇರಬೇಕು. ಆಗಾಗ ಆರೋಗ್ಯವನ್ನು ಪರೀಕ್ಷೆ ಮಾಡಿಸಿ ಕೊಳ್ಳಬೇಕು. ಎನ್‌ಸಿಡಿ ಕ್ಲಿನಿಕ್‌ಗಳ ಜತೆಗ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಲಭ್ಯವನ್ನು ಒದಗಿಸಲಾಗಿದೆ. ಪ್ರಾಥಮಿಕ ಹಂತದ ಚಿಕಿತ್ಸೆಯನ್ನು ಜಿಲ್ಲಾ ಮಟ್ಟದಲ್ಲಿಯೇ ನೀಡಲಾಗುತ್ತದೆ’ ಎಂದು ಸಾಂಕ್ರಾಮಿಕವಲ್ಲದ ರೋಗಗಳ ವಿಭಾಗದ ಉಪನಿರ್ದೇಶಕ ಡಾ.ಜಿ. ಶ್ರೀನಿವಾಸ್ ತಿಳಿಸಿದರು.

ಹೃದಯಾಘಾತಕ್ಕೆ ಕಾರಣಗಳು

l ಅನಾರೋಗ್ಯಕರ ಆಹಾರ ಪದ್ಧತಿ

l ಜೀವನಶೈಲಿಯಲ್ಲಿನ ಬದಲಾವಣೆ

l ಮದ್ಯಪಾನ, ಧೂಮಪಾನದಂತಹ ವ್ಯಸನಗಳು

l ಮಾನಸಿಕ ಒತ್ತಡ

l ಪರಿಸರದಲ್ಲಿನ ಮಾಲಿನ್ಯ

ಲಕ್ಷಣಗಳು

l ಹಠಾತ್ ಎದೆನೋವು,

l ಉಸಿರಾಟದಲ್ಲಿ ತೊಂದರೆ

l ಅತಿಯಾದ ಬೆವರು

l ಅಜೀರ್ಣ, ವಾಂತಿ

l ಹಸಿವಾಗದಿರುವುದು

l ದವಡೆಯಲ್ಲಿ ನೋವು 

l ನಿದ್ರಾಹೀನತೆ ಸಮಸ್ಯೆ 

l ತಾತ್ಕಾಲಿಕ ಪ್ರಜ್ಞಾಹೀನತೆ

ಇತ್ತೀಚಿನ ವರ್ಷಗಳಲ್ಲಿ 40 ವರ್ಷದೊಳಗಿನವರು ಹೆಚ್ಚಾಗಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಒಳಪಡುತ್ತಿದ್ದಾರೆ. ಜೀವನಶೈಲಿಯ ಬಗ್ಗೆ ಕಾಳಜಿ ವಹಿಸಬೇಕು

- ಡಾ.ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ

ಯುವಜನರಲ್ಲಿ ಹೃದಯ ಸಮಸ್ಯೆ ಹೆಚ್ಚುತ್ತಿದೆ. ಹೃದಯಾಘಾತ ತಡೆಗೆ ನಿಯಮಿತವಾಗಿ ರಕ್ತದಲ್ಲಿನ ಕೊಲೆಸ್ಟ್ರಾಲ್‌ ಮಟ್ಟ, ಇಸಿಜಿ, ಇಕೋ, ಟಿಎಂಟಿ ಪರೀಕ್ಷೆ ಮಾಡಿಸಿಕೊಳ್ಳಬೇಕು

- ಡಾ.ದೇವಿಪ್ರಸಾದ ಶೆಟ್ಟಿ, ಹೃದ್ರೋಗ ತಜ್ಞ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು