ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ರದ್ದು ನಿರ್ಧಾರ ಸ್ವಾಗತಾರ್ಹ: ಗೊ.ರು.ಚನ್ನಬಸಪ್ಪ

Last Updated 4 ಜೂನ್ 2022, 8:39 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರ ನೇಮಿಸಿದ್ದ ಪ್ರಾಥಮಿಕ ಶಿಕ್ಷಣ ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಎಸಗಿರುವ ಪ್ರಮಾದಗಳ ಬಗೆಗೆ ವ್ಯಕ್ತವಾಗಿರುವ ಸಾರ್ವಜನಿಕ ಪ್ರತಿಕ್ರಿಯೆಗೆ ಸ್ಪಂದಿಸಿ, ಪರಿಷ್ಕರಣ ಸಮಿತಿಯನ್ನು ರದ್ದುಗೊಳಿಸಿ, ಆಗಿರುವ ದೋಷಗಳನ್ನು ಸರಿಪಡಿಸುವ ಬಗೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿರುವ ಭರವಸೆಯನ್ನು ಸ್ವಾಗತಿಸುತ್ತೇನೆ. ಹಾಗೆಯೇ ಆ ಭರವಸೆಯ ಅನುಷ್ಠಾನಕ್ಕೆ ತಕ್ಷಣವೇ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ತಿಳಿಸಿದ್ದಾರೆ.

ಪ್ರಸ್ತುತ ಪಠ್ಯಪುಸ್ತಕಗಳಲ್ಲಿ ಬಸವಣ್ಣ, ಕುವೆಂಪು ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಅಷ್ಟೇ ಅಲ್ಲದೆ, ಇರಬಹುದಾದ ಇತರ ಎಲ್ಲ ದೋಷಗಳನ್ನೂ ಸರಿಪಡಿಸಲು ನಿಷ್ಪಕ್ಷಪಾತ ಕ್ಷೇತ್ರತಜ್ಞರ ಒಂದು ಸಮಿತಿಯನ್ನು ನೇಮಿಸಬೇಕು. ಆ ಸಮಿತಿ ನಿರ್ದಿಷ್ಟ ಅವಧಿಯಲ್ಲಿ ಆ ಪುನರ್ ಪರಿಷ್ಕರಣ ಕಾರ್ಯವನ್ನು ಮಾಡಿ ಮುಗಿಸುವಂತೆ ಆದೇಶ ನೀಡಬೇಕು ಎಂದು ಸಲಹೆ ನೀಡಿದ್ದಾರೆ.

ಓದಿ...ಆರ್‌ಎಸ್‌ಎಸ್ ಸಂಸ್ಥಾಪಕಹೆಡಗೇವಾರ್ಪಠ್ಯ ಕೈಬಿಡುವುದಿಲ್ಲ: ಸಿಎಂಬೊಮ್ಮಾಯಿ

ಮನೋವಿಜ್ಞಾನಿಗಳ ಪ್ರಕಾರ, 4 ರಿಂದ 14ರವರೆಗಿನ ವಯಸ್ಸಿನ ಮಕ್ಕಳ ಮನಸ್ಸು ಗ್ರಹಿಸಿದ ವಿಷಯಗಳು ದೃಢವಾಗಿ ನೆಲೆ ನಿಲ್ಲುತ್ತವೆ ಎಂದು ಹೇಳಲಾಗಿದೆ. ಆದ್ದರಿಂದ ಈ ಅವಧಿಯ ಮಕ್ಕಳ ಕಲಿಕೆಗೆ ಪಠ್ಯಗಳನ್ನು ಸಿದ್ಧಪಡಿಸುವವರಿಗೆ ತುಂಬ ಎಚ್ಚರ ಇರಬೇಕಾಗುತ್ತದೆ. ಈ ಅವಧಿಯಲ್ಲಿ ಮಕ್ಕಳ ಮನೋಭೂಮಿಕೆಯಲ್ಲಿ ವಿವೇಕಯುಕ್ತ ವಿಚಾರಗಳನ್ನು ತುಂಬಬೇಕೇ ಹೊರತು, ವಿವಾದದ ಸಂಗತಿಗಳನ್ನು ತುರುಕಬಾರದು. ಮಕ್ಕಳ ಜ್ಞಾನ ವಿಕಾಸಕ್ಕೆ ಪೂರಕವಾಗುವ ವಸ್ತುನಿಷ್ಠ ಮತ್ತು ವೈಚಾರಿಕ ಒರೆಗಲ್ಲಿಗೆ ನಿಲ್ಲುವಂತಹ ಸಾಹಿತ್ಯವನ್ನು ಒದಗಿಸಬೇಕು. ಮುಗ್ಧ ಮನಸ್ಸಿನ ಮಕ್ಕಳು ವೃಥಾ ಗೊಂದಲಕ್ಕೆ ಈಡಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಮಕ್ಕಳ ಕಲಿಕೆಯ ಹಂತದಲ್ಲಿ ವಿವಾದಾತ್ಮಕ ವಿಷಯಗಳನ್ನು ಕೈಬಿಟ್ಟರೆ ನಷ್ಟವೇನಿಲ್ಲ. ಮುಖ್ಯವಾದುದು ಅವರಲ್ಲಿ ಮಾನವೀಯ ಮೌಲ್ಯಗಳ ಅರಿವುಂಟುಮಾಡುವುದು, ಸಭ್ಯ ನಾಗರಿಕರನ್ನಾಗಿ ಅವರನ್ನು ಸಜ್ಜುಗೊಳಿಸುವುದು. ಯಾವ ಕಾರಣದಿಂದಲೂ ಮಕ್ಕಳ ಶಿಕ್ಷಣ ವಿಷಯದಲ್ಲಿ ಯಾರೂ ಚೆಲ್ಲಾಟವಾಡಬಾರದು. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಮ್ಮ ರಾಜ್ಯ ಸರ್ಕಾರ ಅಗತ್ಯ ಎಚ್ಚರವಹಿಸುವುದೆಂದು ನಿರೀಕ್ಷಿಸುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT