ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳಕೆಯೇ ಆಗದ ₹21,331 ಕೋಟಿ- ವೆಚ್ಚದಲ್ಲಿ ಹಿಂದುಳಿದ ಐದು ಇಲಾಖೆಗಳು

Last Updated 27 ಅಕ್ಟೋಬರ್ 2021, 16:18 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಸೇರಿದಂತೆ ರಾಜ್ಯ ಸರ್ಕಾರದ ಐದು ಇಲಾಖೆಗಳು ಪ್ರಸಕ್ತ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಏಳು ಯೋಜನೆಗಳಿಗೆ ಮೀಸಲಿಟ್ಟಿರುವ ಅನುದಾನದ ಬಳಕೆಯಲ್ಲಿ ಹಿಂದುಳಿದಿದ್ದು,ಸೆಪ್ಟೆಂಬರ್‌ ಅಂತ್ಯದ ವೇಳೆಗೆ ನಿಗದಿಪಡಿಸಿದ್ದ ಗುರಿಗೆ ಹೋಲಿಸಿದರೆ ಒಟ್ಟು ₹ 21,331.65 ಕೋಟಿ ಬಳಕೆಯಾಗದೆ ಉಳಿದಿದೆ.

ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕರ್ನಾಟಕ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಡಿಸಿದ ಅಂಕಿಅಂಶಗಳು ಇದನ್ನು ಬಹಿರಂಗಪಡಿಸಿವೆ. ಕೃಷಿ, ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಗಳೂ ಈ ಪಟ್ಟಿಯಲ್ಲಿವೆ.

ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು 15ನೇ ಹಣಕಾಸು ಆಯೋಗದ ಅನುದಾನದಲ್ಲಿ ₹ 552 ಕೋಟಿ ಒದಗಿಸಲಾಗಿತ್ತು. ಸೆಪ್ಟೆಂಬರ್‌ ಅಂತ್ಯದವರೆಗೂ ಆರೋಗ್ಯ ಇಲಾಖೆ ಈ ಅನುದಾನವನ್ನು ಬಳಕೆ ಮಾಡಿಲ್ಲ ಎಂಬ ಸಂಗತಿ ಸಭೆಯಲ್ಲಿ ಚರ್ಚೆಗೆ ಬಂತು.

ಪ್ರಧಾನಮಂತ್ರಿ ಕಿಸಾನ್‌ ಯೋಜನೆಗೆ ಪ್ರಸಕ್ತ ವರ್ಷ ₹ 2,120 ಕೋಟಿ ಅನುದಾನ ಒದಗಿಸಲಾಗಿದೆ. ಆರ್ಥಿಕ ವರ್ಷದ ಅರ್ಧ ಭಾಗ ಕಳೆದರೂ ಒಂದು ಪೈಸೆ ಕೂಡ ವೆಚ್ಚ ಮಾಡಿಲ್ಲ. ಇಂಧನ ಇಲಾಖೆಯಲ್ಲಿ ಪಿಂಚಣಿ ಪಾಲಿನ ಮೊತ್ತ ಭರಿಸಲು ₹ 1,000 ಕಾಯ್ದಿರಿಸಲಾಗಿದೆ. ಅದನ್ನೂ ಬಳಕೆ ಮಾಡಿಲ್ಲ. ಬೆಂಗಳೂರು ಉಪನಗರ ರೈಲು ಯೋಜನೆಗೆ ಒದಗಿಸಿದ್ದ ₹ 950 ಕೋಟಿ ನಗರಾಭಿವೃದ್ಧಿ ಇಲಾಖೆ ಬಳಿ ಹಾಗೆಯೇ ಉಳಿದಿದೆ.

ವಸತಿ ಇಲಾಖೆಯಲ್ಲಿ ಪ್ರಧಾನಮಂತ್ರಿ ಆವಾಸ್‌ (ಗ್ರಾಮೀಣ), ಆಶ್ರಯ, ಬಸವ ಮತ್ತು ಬಿ.ಆರ್‌. ಅಂಬೇಡ್ಕರ್‌ ನಿವಾಸ್‌ ಯೋಜನೆಗಳಿಗೆ ₹ 1,600 ಕೋಟಿ ಅನುದಾನ ನೀಡಲಾಗಿದೆ. ಅದರಲ್ಲಿ ಶೇಕಡ 5ರಿಂದ ಶೇ 20ರವರೆಗೆ ಮಾತ್ರ ವೆಚ್ಚವಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ₹ 3,259.49 ಕೋಟಿ, ನಗರಾಭಿವೃದ್ಧಿ ಇಲಾಖೆ ₹ 2,658.52 ಕೋಟಿ ಮತ್ತು ಗೃಹ ಇಲಾಖೆ ₹ 2,398.85 ಕೋಟಿ ಹಾಗೆಯೇ ಉಳಿಸಿಕೊಂಡಿವೆ.

ಬಜೆಟ್‌ನಲ್ಲಿ ಒದಗಿಸಿದ್ದ ಮೊತ್ತದಲ್ಲಿ ₹ 77,883.78 ಕೋಟಿ ಬಳಕೆಯಾಗಿದೆ. ಕಳೆದ ಆರ್ಥಿಕ ವರ್ಷದ ಇದೇ ಅವಧಿಗೆ ಹೋಲಿಸಿದರೆ ವೆಚ್ಚದಲ್ಲಿ ಶೇ 28.23ರಷ್ಟು ಹೆಚ್ಚಳವಾಗಿದೆ. ₹ 500 ಕೋಟಿಗಿಂತ ಹೆಚ್ಚು ಅನುದಾನವಿರುವ ಒಂಬತ್ತು ಪ್ರಮುಖ ಯೋಜನೆಗಳಲ್ಲಿ ಶೇ 95ರಷ್ಟು ಅನುದಾನ ಈಗಾಗಲೇ ಬಳಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT