ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬಿನಾಲೆ ವಸಂತ ಭಾರದ್ವಾಜ್‌ಗೆ ‘ಪಾರ್ತಿಸುಬ್ಬ ಪ್ರಶಸ್ತಿ’

Last Updated 7 ಮಾರ್ಚ್ 2022, 11:41 IST
ಅಕ್ಷರ ಗಾತ್ರ

ಬೆಂಗಳೂರು: ತೆಂಕುತಿಟ್ಟು ಯಕ್ಷಗಾನ ಪ್ರಸಂಗಕರ್ತ, ಸಾಹಿತಿ ಹಾಗೂ ಕಲಾವಿದ ಕಬ್ಬಿನಾಲೆ ವಸಂತ ಭಾರದ್ವಾಜ್‌ ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ನೀಡುವ 2021ನೇ ಸಾಲಿನ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್‌.ಹೆಗಡೆ ಅವರು ಸುದ್ದಿಗೋಷ್ಠಿಯಲ್ಲಿ ಸೋಮವಾರ ಈ ಕುರಿತು ಮಾಹಿತಿ ನೀಡಿದರು.

‘ಉಡುಪಿ ಜಿಲ್ಲೆ ಹೆಬ್ರಿಯ ವಸಂತ್‌ ಅವರು ಕಾವ್ಯ, ವಿಮರ್ಶೆ, ಗೀತರೂಪಕ, ನಿಘಂಟು ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ 100ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ತುಳುಭಾಷೆಯಲ್ಲೂ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ. ಯಕ್ಷಗಾನ ತಾಳಮದ್ದಳೆ ಕಲಾವಿದರಾಗಿ, ಗಮಕಕಲೆಯಲ್ಲಿ ವ್ಯಾಖ್ಯಾನಕಾರರಾಗಿ ಪ್ರಸಿದ್ಧರಾಗಿದ್ದಾರೆ. ಅವರ ಸಾಧನೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಪ್ರಶಸ್ತಿಯು ₹1 ಲಕ್ಷ ನಗದು, ಫಲಕ ಹಾಗೂ ಪ್ರಮಾಣಪತ್ರ ಒಳಗೊಂಡಿರಲಿದೆ’ ಎಂದರು.

‘ಸಂಪೂರ್ಣ ಯಕ್ಷಗಾನ ಕಲಾವಿದರಾದ ಸತ್ಯನಾರಾಯಣ ವರದ ಹಾಸ್ಯಗಾರ (ಕರ್ಕಿ), ಮುತ್ತಪ್ಪ ತನಿಯ ಪೂಜಾರಿ (ಹೊರನಾಡು ಕನ್ನಡಿಗ), ತೆಂಕುತಿಟ್ಟು ಯಕ್ಷಗಾನ ಗುರು ಹಾಗೂ ಸಂಘಟಕ ನರೇಂದ್ರಕುಮಾರ್‌ ಜೈನ್‌ (ಉಜಿರೆ), ಭಾಗವತಿಕೆ ಮತ್ತು ಮುಖವೀಣೆ ಕಲಾವಿದ ಮೂಡಲಗಿರಿಯಪ್ಪ (ಕಡವೀಗೆರೆ, ತುಮಕೂರು) ಹಾಗೂ ಭಾಗವತ ಮತ್ತು ಮೂಡಲಪಾಯ ಕಲಾವಿದ ಎನ್‌.ಟಿ.ಮೂರ್ತಾಚಾರ್ಯ (ನೆಲ್ಲಿಗೆರೆ, ಮಂಡ್ಯ) ಇವರನ್ನು ಗೌರವ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ತಲಾ ₹50 ಸಾವಿರ ನಗದು, ಫಲಕ ಮತ್ತು ಪ್ರಮಾಣ ಪತ್ರ ಹೊಂದಿರಲಿದೆ’ ಎಂದು ತಿಳಿಸಿದರು.

‘ಬಡಗುತಿಟ್ಟು ಕಲಾವಿದರಾದ ಹಳ್ಳಾಡಿ ಜಯರಾಮ ಶೆಟ್ಟಿ (ಕುಂದಾಪುರ), ಗೋಪಾಲ ಗಾಣಿಗ ಆಜ್ರಿ (ಉಡುಪಿ), ಸೀತೂರು ಅನಂತಪದ್ಮನಾಭ ರಾವ್‌ (ಚಿಕ್ಕಮಗಳೂರು), ಕಡತೋಕ ಲಕ್ಷ್ಮೀನಾರಾಯಣ ಶಂಭು ಭಾಗವತ (ಹೊನ್ನಾವರ), ತೆಂಕುತಿಟ್ಟು ಕಲಾವಿದರಾದ ಬೋಳಾರ ಸುಬ್ಬಯ್ಯ ಶೆಟ್ಟಿ (ಮಂಗಳೂರು), ರಾಮ ಸಾಲಿಯಾನ್‌ ಮಂಗಲ್ಪಾಡಿ (ಕಾಸರಗೋಡು), ಕೊಕ್ಕಡ ಈಶ್ವರ ಭಟ್‌ (ಬಂಟ್ವಾಳ), ಸಂಪೂರ್ಣ ಯಕ್ಷಗಾನ ಕಲಾವಿದ ಅಡಿಗೋಣ ಬೀರಣ್ಣ ನಾಯ್ಕ (ಅಂಕೋಲ), ಮೂಡಲಪಾಯ ಯಕ್ಷಗಾನ ಕಲಾವಿದ ಭದ್ರಯ್ಯ (ಬೆಂಗಳೂರು), ಕೇಳಿಕೆ ಕಲಾವಿದ ಬಸವರಾಜಪ್ಪ (ಕೋಲಾರ) ಅವರು ‘ಯಕ್ಷಸಿರಿ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಇದು ತಲಾ ₹25 ಸಾವಿರ ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿರಲಿದೆ’ ಎಂದು ವಿವರಿಸಿದರು.

‘ಕಾಸರಗೋಡಿನ ಕೆ.ರಮಾನಂದ ಬನಾರಿಯವರ ‘ಅರ್ಥಾಯನ’ ಹಾಗೂ ಮೈಸೂರಿನ ಎಚ್‌.ಆರ್‌.ಚೇತನ ಅವರ ‘ಮೂಡಲಪಾಯ ಯಕ್ಷಗಾನ’ ಕೃತಿಗಳು 2020ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿವೆ. ಇವರಿಗೆ ತಲಾ ₹25 ಸಾವಿರ ನಗದು ಹಾಗೂ ಪ್ರಮಾಣಪತ್ರ ಸಿಗಲಿದೆ. ಈ ತಿಂಗಳ ಕೊನೆಯ ವಾರದಲ್ಲಿ ಕಾರ್ಕಳದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT