ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ವೈ ಬೆನ್ನಿಗೆ ‘ಆಪ್ತ’ ರ ದಂಡು: ಈಶ್ವರಪ್ಪ ದೂರಿಗೆ ಸಚಿವರ ಅಸಮಾಧಾನ

ಮೂಲ ಬಿಜೆಪಿಯ ಬಹುತೇಕರು ಮೌನ
Last Updated 1 ಏಪ್ರಿಲ್ 2021, 20:22 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ‘ಬಂಡಾಯದ ಬಾವುಟ’ ಹಾರಿಸಿ, ರಾಜ್ಯಪಾಲರಿಗೆ ದೂರಿತ್ತ ಬೆನ್ನಲ್ಲೇ ಹಲವು ಸಚಿವರು ಮತ್ತು ಶಾಸಕರು ಬಿ.ಎಸ್‌.ಯಡಿಯೂರಪ್ಪ ಬೆಂಬಲಕ್ಕೆ ಧಾವಿಸಿದ್ದಾರೆ.

ಮೂವರು ಉಪ ಮುಖ್ಯಮಂತ್ರಿಗಳ ಪೈಕಿ ಗೋವಿಂದ ಕಾರಜೋಳ, ಯಡಿಯೂರಪ್ಪ ಪರ ವಾದಿಸಿದರೆ, ಉಪ ಮುಖ್ಯಮಂತ್ರಿ
ಗಳಾದ ಲಕ್ಷ್ಮಣ ಸವದಿ, ಸಿ.ಎನ್.ಅಶ್ವತ್ಥನಾರಾಯಣ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ, ಮೂಲ ಬಿಜೆಪಿಯವರು ಎಂದು ಪ್ರತಿಪಾದಿಸುವ ಸಚಿವರು ಅಥವಾ ಶಾಸಕರು ತುಟಿ ಬಿಚ್ಚಿಲ್ಲ. ಅವರೆಲ್ಲ ಯಾರೊಬ್ಬರ ಪರ–ವಿರೋಧದ ನಿಲುವು ತಾಳದೇ ಮೌನಕ್ಕೆ ಶರಣಾಗಿದ್ದಾರೆ.

‘ಎಲ್ಲರ ಖಾತೆಗಳಲ್ಲಿ ಹಸ್ತಕ್ಷೇಪ ಮಾಡುವ ಯಡಿಯೂರಪ್ಪ ಮತ್ತು ಅವರ ಮಗ ಬಿ.ವೈ. ವಿಜಯೇಂದ್ರ ನಡೆಗೆ ಬಹಿರಂಗವಾಗಿ ಆಕ್ಷೇಪಿಸುವ ಧೈರ್ಯ ಮಾಡಿದ್ದೀರಿ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂದು ಮೂಲ ಬಿಜೆಪಿಯ ಹಲವರು ಈಶ್ವರಪ್ಪ ಅವರಿಗೆ ತಿಳಿಸಿದ್ದಾರೆ’ ಎಂದು ಆ ಪಕ್ಷದ ಮೂಲಗಳು ಹೇಳಿವೆ.

ಬಿಜೆಪಿ ತಲ್ಲಣ: ಈಶ್ವರಪ್ಪ ಪತ್ರ ಬಿಜೆಪಿಯಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದು, ಆಡಳಿತ ಪಕ್ಷವನ್ನು ತಲ್ಲಣಕ್ಕೆ ದೂಡಿದೆ. ಪತ್ರ ಬಹಿರಂಗವಾದ ಬೆನ್ನಲ್ಲೇ, ಯಡಿಯೂರಪ್ಪ ಅವರನ್ನು ಗುರುವಾರ ಬೆಳಿಗ್ಗೆ ಭೇಟಿ ಮಾಡಿದ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರ್. ಅಶೋಕ ಅವರು ಸುದ್ದಿಗೋಷ್ಠಿ ನಡೆಸಿದರು. ಅದರ ಬೆನ್ನಲ್ಲೇ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.‍ಪಿ. ರೇಣುಕಾಚಾರ್ಯ ನೇತೃತ್ವದ ಗುಂಪಿನ ಶಾಸಕರು ಸುದ್ದಿಗಾರರ ಎದುರು ಸರದಿಯಲ್ಲಿ ನಿಂತುಕೊಂಡು ಈಶ್ವರಪ್ಪ ಹೇಳಿಕೆಯನ್ನು ಟೀಕಿಸಿದರು.

ಈ ಬೆಳವಣಿಗೆ ಮಧ್ಯೆಯೇ, ಮುಖ್ಯಮಂತ್ರಿಯವರು 125 ವಿಧಾನಸಭಾ ಕ್ಷೇತ್ರಗಳಲ್ಲಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಾಗಿ ₹1,313 ಕೋಟಿ ಅನುಮೋದನೆ ನೀಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಇಲಾಖೆ ಕಾಮಗಾರಿ ಕೈಗೆತ್ತಿಕೊಳ್ಳದೇ ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ 48 ಶಾಸಕರು ಸಹಿ ಮಾಡಿ ಮುಖ್ಯಮಂತ್ರಿಯವರಿಗೆ ಮಾರ್ಚ್‌ 18ರಂದು ದೂರು ನೀಡಿದ್ದ ಪತ್ರವನ್ನೂ ಮುಖ್ಯಮಂತ್ರಿ ಸಚಿವಾಲಯ ಈ ಎಲ್ಲ ಬೆಳವಣಿಗೆಗಳಾದ ಮೇಲೆ ಬಿಡುಗಡೆ ಮಾಡಿದೆ.

‘ಈಶ್ವರಪ್ಪ ಮಾತುಕತೆಗೆ ಬಂದರೆ, ಅವರ ಜತೆ ಚರ್ಚಿಸಿ ಸಮಸ್ಯೆ ಇತ್ಯರ್ಥಗೊಳಿಸಲು ಸಿದ್ಧ. ಆದರೆ, ಅವರು ಮಾತುಕತೆಗೆ ಬಯಸುವುದಿಲ್ಲ. ಯಾವತ್ತೂ ಇಲಾಖೆ ಬಗ್ಗೆ ಚರ್ಚೆಗೆ ಬಂದೇ ಇಲ್ಲ ಎಂದು ಯಡಿಯೂರಪ್ಪ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ರಾಜ್ಯಪಾಲರಿಗೆ ದೂರು ಸರಿಯಲ್ಲ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ‘ಈಶ್ವರಪ್ಪ ಅವರಿಗೆ ಯಾವುದೇ ಅಸಮಾಧಾನ ಇದ್ದರೆ ರಾಜ್ಯಪಾಲರ ಅಂಗಳಕ್ಕೆ ದೂರು ಒಯ್ಯವುದು ಸರಿಯಲ್ಲ’ ಎಂದು ಹೇಳಿದರು.

‘ನಮ್ಮದು ಶಿಸ್ತಿನ ಪಕ್ಷವಾಗಿದ್ದು, ಶಿಸ್ತಿನ ಉಲ್ಲಂಘನೆಯಾಗಬಾರದು. ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸರ್ಕಾರ ರಚನೆ ಆಗಿದೆ. ಅವರ ಮಾರ್ಗದರ್ಶನದಲ್ಲಿಯೇ ಕೆಲಸ ಮಾಡುತ್ತಿದ್ದೇವೆ. ಯಾವುದೇ ಸಮಸ್ಯೆ, ಸಂದೇಹಗಳಿದ್ದರೆ ಸಚಿವ ಸಂಪುಟ ಅಥವಾ ಸರ್ಕಾರದ ಇತರ ವೇದಿಕೆಗಳಲ್ಲಿ ಚರ್ಚೆ ಮಾಡಬಹುದು’ ಎಂದರು.

‘ಅನುದಾನ ಬಿಡುಗಡೆ ಆಗಿಲ್ಲ ಎಂದು ಶಾಸಕರಿಂದ ದೂರುಗಳು ಬಂದ ಕಾರಣ, ಅನುದಾನವನ್ನು ಬೇಗ ಮುಟ್ಟಿಸಲು ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿಯವರು ಅನುದಾನ ಬಿಡುಗಡೆ ಮಾಡಿದ್ದಾರೆ. ಅವರಿಗೆ ಆ ಪರಮಾಧಿಕಾರವಿದೆ’ ಎಂದು ಪ್ರತಿಪಾದಿಸಿದರು.

‘ಪ್ರವಾಹ ಮತ್ತು ಕೋವಿಡ್‌ ಕಾರಣದಿಂದ ಗ್ರಾಮಾಂತರ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ಹಣಕಾಸು ಪರಿಸ್ಥಿತಿ ತುಂಬಾ ಕಷ್ಟವಿತ್ತು. 4–5 ತಿಂಗಳಲ್ಲಿ ಚೇತರಿಕೆ ಆಗಿದೆ. ಈ ಹಂತದಲ್ಲಿ ಬದ್ಧ ವೆಚ್ಚವನ್ನು ಪರಿಶೀಲಿಸಿ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿಯವರ ಹಣ ಬಿಡುಗಡೆ ಮಾಡಿದ್ದಾರೆ’ ಎಂದು ಬೊಮ್ಮಾಯಿ ಸಮರ್ಥಿಸಿಕೊಂಡರು

ಡಿಸಿಎಂ ಕಾರಜೋಳ ಬೆಂಬಲ: ಪ್ರಜಾತಂತ್ರದಲ್ಲಿ ಯಾವುದೇ ಶಾಸಕರು, ಸಂಸದರು ಮತ್ತು ಜನಪ್ರತಿನಿಧಿಗಳು ಹೆಚ್ಚಿನ ಅನುದಾನ ಕೇಳುವುದು ಸಹಜ. ಸಚಿವರಿಗೆ ಹೆಚ್ಚಿನ ಅನುದಾನ ಕೊಡಲು ಸಾಧ್ಯವಾಗುವುದಿಲ್ಲ. ಮುಖ್ಯಮಂತ್ರಿಗೆ ಕೊಡಲು ಸಾಧ್ಯವಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.

ಮುಖ್ಯಮಂತ್ರಿ ಅನುದಾನ ಬಿಡುಗಡೆ ಮಾಡಿದ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ ಸಚಿವರಿಗೆ ಇಲ್ಲ. ನನ್ನ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚಿನ ಅನುದಾನ ನೀಡುವಂತೆ ಶಾಸಕರುಮುಖ್ಯಮಂತ್ರಿ ಅವರನ್ನು ಕೇಳಿದ್ದಾರೆ. ಈ ರೀತಿ ಮುಖ್ಯಮಂತ್ರಿಯವರು ನೇರವಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡುವುದು ಇದೇ ಮೊದಲಲ್ಲ. ಹಿಂದೆ ಅನೇಕ ಮುಖ್ಯಮಂತ್ರಿಗಳ ಅವಧಿಯಲ್ಲೂ ಬಿಡುಗಡೆ
ಆಗಿದೆ ಎಂದು ಕಾರಜೋಳ ಹೇಳಿದ್ದಾರೆ.

ಮುಖ್ಯಮಂತ್ರಿ ಬೆನ್ನಿಗೆ ನಿಂತವರು:

ಗೋವಿಂದ ಕಾರಜೋಳ

ಬಸವರಾಜ ಬೊಮ್ಮಾಯಿ

ಆರ್‌.ಅಶೋಕ

ಸಿ.ಸಿ.ಪಾಟೀಲ

ಬಿ.ಸಿ.ಪಾಟೀಲ

ಡಾ.ಕೆ.ಸುಧಾಕರ್‌

ಸಿಎಂ ಜತೆ ಕೂತು ಚರ್ಚಿಸಿ: ಆರ್‌. ಅಶೋಕ

‘ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಗೆದ್ದು, ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದೇವೆ. ಈಶ್ವರಪ್ಪ ಮಾತನಾಡಿರುವುದು ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕಾದ ವಿಚಾರ’ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದ್ದಾರೆ.

‘ರಾಜ್ಯಪಾಲರಿಗೆ ದೂರು ನೀಡಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. 60 ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದರು. ಅದಕ್ಕೆ ಸ್ಪಂದಿಸಿದ್ದಾರೆ. ಈ ಬಗ್ಗೆ ಅಭಿಪ್ರಾಯ ಬೇಧವಿದ್ದರೆ ಮುಖ್ಯಮಂತ್ರಿ ಜತೆ ಕುಳಿತು ಚರ್ಚಿಸಲಿ’ ಎಂದು ಸಲಹೆ ನೀಡಿದ್ದಾರೆ.

ಸರ್ಕಾರ ದುರ್ಬಲ ಆಗಬಾರದು: ಡಾ.ಸುಧಾಕರ್‌:

ಅಭಿವೃದ್ಧಿ ವಿಚಾರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಮುಖ್ಯಮಂತ್ರಿಯವರಿಗೆ ಅಧಿಕಾರವಿದೆ. ಅಗತ್ಯವಿದ್ದರೆ, ಯಾವುದೇ ಇಲಾಖೆಯ ಕಡತವನ್ನು ತರಿಸಿಕೊಂಡು ನೋಡಬಹುದು. ಮುಖ್ಯಮಂತ್ರಿಯವರ ಜತೆ ಕುಳಿತು ಐದು ನಿಮಿಷ ಮಾತನಾಡಿದರೆ ಸಮಸ್ಯೆ ಬಗೆಹರಿದು ಹೋಗುತ್ತದೆ. ಇದರಿಂದ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಆಗುವುದನ್ನೂ ತಪ್ಪಿಸಬಹುದಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಯಾವುದೇ ಹೆಜ್ಜೆ ಇಡಬೇಕಾದರೂ ಗಂಭೀರವಾಗಿ ಯೋಚನೆ ಮಾಡಬೇಕು. ಬಹಿರಂಗವಾಗಿ ಮಾತನಾಡಿ ಸರ್ಕಾರ ಮತ್ತು ಪಕ್ಷವನ್ನು ದುರ್ಬಲಗೊಳಿಸಬಾರದು ಎಂದಿದ್ದಾರೆ.

ಶೋಭೆ ತರುವುದಿಲ್ಲ: ಬಿ.ಸಿ.ಪಾಟೀಲ

‘ಸಂಪುಟ ಸಭೆಯಲ್ಲಿ ಯಾವುದೇ ವಿಷಯವನ್ನು ಈಶ್ವರಪ್ಪನವರು ಪ್ರಸ್ತಾಪ ಮಾಡದೆ ಈ ರೀತಿ ನೇರವಾಗಿ ಏಕಾಏಕಿ ರಾಜ್ಯಪಾಲರಿಗೆ ದೂರು ಸಲ್ಲಿಸುವುದು ಅವರಿಗೆ ಶೋಭೆ ತರುವಂತಹದ್ದಲ್ಲ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ.

‘ಯಾವುದೇ ತಪ್ಪನ್ನು ಮಾಡದ ಬಿ.ಎಸ್.ಯಡಿಯೂರಪ್ಪ ಅವರು ತಪ್ಪು ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ದೂರು ನೀಡಿರುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದ್ದಾರೆ.

ಸರ್ಕಾರದ ವರ್ಚಸ್ಸಿಗೆ ಧಕ್ಕೆ

ಉಪಚುನಾವಣೆ ಸಂದರ್ಭದಲ್ಲಿ ಈ ರೀತಿ ಆದರೆ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

‘ನಾವು ಹಲವು ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಗ್ರಾಮೀಣಾಭಿವೃದ್ಧಿಗೆ ಅನುದಾನ ಬಿಡಬೇಕು ಎಂದು ಮನವಿ ಮಾಡಿದ್ದೆವು. ನಮ್ಮ ಒತ್ತಾಯಕ್ಕೆ ಮಣಿದು, ಅಭಿವೃದ್ಧಿ ಕೆಲಸಗಳು ಬೇಗನೆ ಆಗಬೇಕು ಎಂಬ ಕಾರಣಕ್ಕೆ ಅನುದಾನ ಬಿಡುಗಡೆ ಮಾಡಿದ್ದಾರೆ. ಯಡಿಯೂರಪ್ಪ ಅವರು ಈಶ್ವರಪ್ಪ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ’ ಎಂದು ಅವರು ಹೇಳಿದರು.

ಸಿ.ಎಂಗೆ ಶಾಸಕರ ದೂರು: ಪತ್ರದ ಸಾರ

‘ತಾವು ಮುಖ್ಯಮಂತ್ರಿ ಆದ ಬಳಿಕ ಹಿಂದೆಂದೂ ಕಂಡರಿಯದ 118 ವರ್ಷಗಳ ದಾಖಲೆಯ ಮಳೆ ಮತ್ತು ಪ್ರವಾಹ ಉಂಟಾಯಿತು. ಈ ಸಂದರ್ಭದಲ್ಲಿ ಮೂಲ ಸೌಕರ್ಯಗಳಿಗೆ ಹಾನಿ ಆಗಿತ್ತು. ಅವುಗಳನ್ನು ಪುನರ್‌ ಸ್ಥಾಪಿಸಲು ಎಲ್ಲ ಕ್ಷೇತ್ರಗಳಿಗೆ ವಿಶೇಷ ಅನುದಾನ ಬಿಡುಗಡೆ ಮಾಡಿದ್ದೀರಿ. 2019–20 ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ ಮತ್ತು ನಗರಾಭಿವೃದ್ಧಿ ಮೂಲಕ ಪ್ರತಿ ಕ್ಷೇತ್ರಗಳಿಗೆ ತಲಾ ₹25 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಕೊರೊನಾ ಸಂದರ್ಭದಲ್ಲೂ ಶಾಸಕ ಬೇಡಿಕೆಗಳಿಗೆ ಸ್ಪಂದಿಸಿ, ₹1,313 ಕೋಟಿ ಅನುದಾನವನ್ನು ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗಾಗಿ ಅನುಮೋದನೆ ನೀಡಿದ್ದೀರಿ. ಆದರೆ, ಈ ಅನುದಾನದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಕಾಮಗಾರಿಗಳಿಗೆ ಅನುಮೋದನೆ ನೀಡದೇ ಇರುವುದರಿಂದ ರಸ್ತೆ ಕಾಮಗಾರಿ ನಡೆದಿಲ್ಲ. ಈ ಕಾಮಗಾರಿ ಕೈಗೆತ್ತಿಕೊಂಡರೆ ಗ್ರಾಮೀಣ ಜನರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿ ಜಿಲ್ಲಾ ಪಂಚಾಯಿತಿ ಮತ್ತು
ತಾಲ್ಲೂಕು ಪಂಚಾಯಿತಿ ಚುನಾವಣೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು’ ಎಂದು 48 ಶಾಸಕರು ಪತ್ರದಲ್ಲಿ ತಿಳಿಸಿದ್ದಾರೆ.

ಅರುಣ್‌ಸಿಂಗ್ ಬೇಸರ:

ನವದೆಹಲಿ: ಸಚಿವ ಕೆ.ಎಸ್. ಈಶ್ವರಪ್ಪ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ಬಹಿರಂಗ ಪತ್ರ ಬರೆಯಬಾರದಿತ್ತು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ ಅಭಿಪ್ರಾಯಪಟ್ಟರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ವಿಷಯದ ಬಗ್ಗೆ ಮನಸ್ತಾಪವಿದ್ದರೂ ಸಂಬಂಧಿಸಿದವರ ಜೊತೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂಥ ವಿಷಯವನ್ನು ಪಕ್ಷದ ವೇದಿಕೆಯಲ್ಲೇ ಪ್ರಸ್ತಾಪಿಸಬೇಕು. ರಾಜ್ಯಪಾಲರಿಗೆ ಹೀಗೆ ದಿಢೀರ್ ಪತ್ರ ಬರೆಯುವ ಮೂಲಕ ಪಕ್ಷವನ್ನು ಮುಜುಗರಕ್ಕೆ ಈಡು ಮಾಡಬಾರದಿತ್ತು ಎಂದು ಹರಿಹಾಯ್ದರು.

ಪಕ್ಷದ ಮುಖಂಡರು ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಾಗೂ ಕರ್ನಾಟಕದ ಮೂರು ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರದಲ್ಲಿದ್ದಾರೆ. ಈಶ್ವರಪ್ಪ ಅವರ ದೂರಿನ ಕುರಿತು ಚುನಾವಣೆಯ ಫಲಿತಾಂಶದ ನಂತರ ಗಮನ ಹರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಪಕ್ಷದ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಸಂಘ ಪರವಾರದಲ್ಲೂ ಸಾವಿರಾರು ಸದಸ್ಯರಿದ್ದಾರೆ. ಆದರೆ ಎಲ್ಲರಿಗೂ ಶಾಸಕ, ಸಚಿವ ಸ್ಥಾನ ದೊರೆಯುವುದಿಲ್ಲ. ರಾಜ್ಯ ಘಟಕದ ಅಧ್ಯಕ್ಷ, ಉಪ ಮುಖ್ಯಮಂತ್ರಿ ಹಾಗೂ ಸಚಿವ ಸ್ಥಾನ ಸೇರಿದಂತೆ ಇತರ ಜವಾಬ್ದಾರಿಯುತ ಸ್ಥಾನ ಪಡೆದವರು ಪಕ್ಷದ ಶಿಸ್ತನ್ನು ಮೀರಬಾರದು ಎಂದು ಅವರು ಕಿವಿಮಾತು ಹೇಳಿದರು.

ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಅವರೂ ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ನೀಡುತ್ತಾರೆ. ಯಾರೇ ಇರಲಿ, ಪಕ್ಷದ ಹೆಸರಿಗೆ ಧಕ್ಕೆ ತಂದಲ್ಲಿ ಶಿಸ್ತು ಕ್ರಮ ಎದುರಿಸುವುದು ಅನಿವಾರ್ಯ ಎಂದು ಅವರು ಎಚ್ಚರಿಸಿದರು.

ಯಡಿಯೂರಪ್ಪ ಅವರು ಜನಪ್ರಿಯ ನಾಯಕ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಅವರ ಪಾತ್ರ ಮುಖ್ಯವಾದುದಾಗಿದೆ. ಅಂಥವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ಮುನ್ನ ಆಲೋಚಿಸಬೇಕು ಎಂದು ಅವರು ಹೇಳಿದರು.

ಗೋಕಾಕ ಶಾಸಕ ರಮೇಶ ಜಾರಕಿಹೋಳಿ ಬಂಧನಕ್ಕೆ ಕಾಂಗ್ರೆಸ್ ಆಗ್ರಹಿಸುತ್ತಿದೆ. ಆದರೆ, ಸಿ.ಡಿ ಪ್ರಕರಣದ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪಾತ್ರವೂ ಇದೆ ಎನ್ನಲಾಗುತ್ತಿದೆ. ಇದರ ಪರಿಣಾಮವಾಗಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲಿದೆ ಎಂದು ಅವರು ಹೇಳಿದರು.

ಎಚ್ಚರಿಕೆ ನೀಡಲು ಹೈಕಮಾಂಡ್‌ ಸೂಚನೆ
ರಾಜ್ಯ ಸರ್ಕಾರದ ಆಡಳಿತ ವೈಖರಿ ಹಾಗೂ ಮೂಖಂಡರ ಕುರಿತು ಬಹಿರಂಗ ಆರೋಪ ಮಾಡುವವರಿಗೆ ಎಚ್ಚರಿಕೆ ನೀಡುವಂತೆ ಬಿಜೆಪಿ ಹೈಕಮಾಂಡ್,‌ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರಿಗೆ ಸೂಚಿಸಿದೆ.

ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಮುಖ್ಯಮಂತ್ರಿ ಕಾರ್ಯವೈಖರಿ ವಿರುದ್ಧ ರಾಜ್ಯಪಾಲರಿಗೆ ಮತ್ತು ವರಿಷ್ಠರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT