ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಡಿಯೂರಪ್ಪ ಅವರ ರಬ್ಬರ್ ಸ್ಟಾಂಪ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ: ಸಿದ್ದರಾಮಯ್ಯ

ಕಾಂಗ್ರೆಸ್‌ನಿಂದ ಪದ್ಮನಾಭ ನಗರದಲ್ಲಿ ದಿನಸಿ ಕಿಟ್‌ಗಳ ವಿತರಣೆ ಕಾರ್ಯಕ್ರಮ
Last Updated 3 ಆಗಸ್ಟ್ 2021, 10:52 IST
ಅಕ್ಷರ ಗಾತ್ರ

ಬೆಂಗಳೂರು: ‘ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಿರುವುದೇ ಯಡಿಯೂರಪ್ಪ. ಹೀಗಾಗಿ, ಯಡಿಯೂರಪ್ಪ ಅವರರಬ್ಬರ್ ಸ್ಟಾಂಪ್ ರೀತಿ ಬೊಮ್ಮಾಯಿ ಕೆಲಸ ಮಾಡದೆ ಸ್ವತಂತ್ರವಾಗಿ ಕೆಲಸ ಮಾಡಲು ಆಗುತ್ತಾ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಕಾಂಗ್ರೆಸ್‌ ವತಿಯಿಂದ ಪದ್ಮನಾಭ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ದಿನಸಿ ಕಿಟ್‌ಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ಅವರಿಗೆ ಮುಂಬಾಗಿಲ ಮೂಲಕ ರಾಜಕಾರಣ ಮಾಡಿ ಗೊತ್ತಿಲ್ಲ. ಆಪರೇಷನ್ ಕಮಲ, ಕುದುರೆ ವ್ಯಾಪಾರದಂಥ ಹಿಂಬಾಗಿಲ ರಾಜಕಾರಣ ಮಾತ್ರ ಗೊತ್ತು’ ಎಂದು ಟೀಕಿಸಿದರು.

‘ಬಿಜೆಪಿ ಭ್ರಷ್ಟ ಪಕ್ಷ, ಬಂಡವಾಳಶಾಹಿಗಳ ಪಕ್ಷ. ಕಾಂಗ್ರೆಸ್ ಬಡವರ ಪರ ಪಕ್ಷ. ಬಿಜೆಪಿಯಿಂದ ಅಭಿವೃದ್ಧಿ ನಿರೀಕ್ಷೆ ಸಾಧ್ಯವಿಲ್ಲ. ಗರೀಭಿ ಹಠಾವೋ ಘೋಷಣೆ ಮಾಡಿದ್ದು ಇಂದಿರಾಗಾಂಧಿ. ಕಾರ್ಖಾನೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿದವರು ನೆಹರು. ದೂರಸಂಪರ್ಕ ಅಭಿವೃದ್ಧಿ ಮಾಡಿದವರು ರಾಜೀವ್ ಗಾಂಧಿ. ದೇಶಕ್ಕೆ ಬಿಜೆಪಿಯ ಕೊಡುಗೆ ಏನು? ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದು ಬಿಜೆಪಿಯವರು’ ಎಂದು ವಾಗ್ದಾಳಿ ನಡೆಸಿದರು.

ಬಡಜನರಿಗೆ ಆಹಾರದ ಕಿಟ್: ‘ಬೆಂಗಳೂರಿನ ಬಹುತೇಕ ಕೇಂದ್ರಗಳಲ್ಲಿ ಪಕ್ಷದ ಕಾರ್ಯಕರ್ತರು ಬಡಜನರಿಗೆ ನೆರವಾಗುತ್ತಿದ್ದಾರೆ. ಅದರಂತೆ, ಪಕ್ಷದ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಇಲ್ಲಿನ ಕಿಟ್ ವಿತರಣೆ ಮಾಡಲಾಗಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹರಿಪ್ರಸಾದ್‌, ಬಹುಕಾಲದಿಂದ ಬೆಂಗಳೂರಿನಲ್ಲಿ ರಾಜಕಾರಣ ಮಾಡಿದವರು. ಅವರಿಗೆ ನಗರದ ಒಂದೊಂದು ಇಂಚು ಗೊತ್ತಿದೆ, ಅಷ್ಟರ ಮಟ್ಟಿಗೆ ಅರಿತಿದ್ದಾರೆ’ ಎಂದರು.

‘ಕೋವಿಡ್‌ ಎರಡನೇ ಅಲೆಯಲ್ಲಿ ಸಾವಿರಾರು ಜನ ಸಾವಿಗೀಡಾಗಿದ್ದು, ಅಧಿಕಾರದಲ್ಲಿರುವ ಪಕ್ಷದ ನಾಯಕರ ಬೇಜವಾಬ್ದಾರಿ ಕಾರಣ. ಪದ್ಮನಾಭ ನಗರದಲ್ಲಿ ಕೊರೊನಾ ಸೋಂಕಿಗೆ ಯಾರಾದರೂ ಬಲಿಯಾಗಿದ್ದರೆ ಅದಕ್ಕೆ ಕ್ಷೇತ್ರದ ಶಾಸಕ ಆರ್. ಅಶೋಕ ಕಾರಣ. ಸರ್ಕಾರದ ಭಾಗವಾಗಿ ಸಚಿವರಾಗಿ ಅವರು ಕೆಲಸ ಮಾಡುತ್ತಿದ್ದರು. ಅನೇಕ ಬಾರಿ ಕ್ಷೇತ್ರದಿಂದ ಗೆದ್ದಿದ್ದಾರೆ, ಕೊರೊನಾ ಸೋಂಕಿತರಿಗೆ ಆಹಾರ, ಔಷಧಿ, ಆಸ್ಪತ್ರೆ ಒದಗಿಸಬೇಕಾಗಿದ್ದು ಅವರ ಕರ್ತವ್ಯವಲ್ಲವೆ’ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

‘ಇಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸಭೆ ಮಾಡಲು ಅಶೋಕ ಅವರ ಅನುಮತಿ ಪಡೆಯಬೇಕು ಎಂದು ಹೇಳುತ್ತಾರೆ. ಇದೇನು ಅಶೋಕ ಅವರ ಸ್ವಂತ ಸ್ವತ್ತೇ? ಇಂಥ ಅಸಂಬದ್ಧ ವಿಷಯಗಳಿಗೆ ಪೊಲೀಸ್ ಇಲಾಖೆ ಸೊಪ್ಪು ಹಾಕಬಾರದು. ಇನ್ನು ಒಂದೂವರೆ ವರ್ಷ ಕಳೆದರೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ಇದಕ್ಕೆಲ್ಲ ಉತ್ತರ ಕೊಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಬಡ ಜನರ ತೆರಿಗೆ ಹಣದಲ್ಲಿ ಬಡವರಿಗೆ ಉಚಿತ ಅಕ್ಕಿ ಕೊಡಲು ಸರ್ಕಾರಕ್ಕೇನು ಸಮಸ್ಯೆ. ಬಡವರ ಹಣ ಯಾರಪ್ಪನ ಮನೆಯ ಸ್ವತ್ತಲ್ಲ, ಆ ಹಣವನ್ನು ಬಡವರಿಗಾಗಿಯೇ ಖರ್ಚು ಮಾಡುವುದರಲ್ಲಿ ಏನು ತಪ್ಪಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಯಡಿ ಏಳು ಕಿಲೋ ಅಕ್ಕಿ ಕೊಡುತ್ತಿದ್ದೆವು. ಈ ಬಿಜೆಪಿ ಸರ್ಕಾರ ಅದಕ್ಕೆ ಕತ್ತರಿ ಹಾಕಿದೆ. ಇವರಿಗೆ ಬಡವರ ಅನ್ನ ಕಸಿಯುವ ಬುದ್ದಿ ಏಕೆ ಬಂದಿದೆ’ ಎಂದೂ ಪ್ರಶ್ನಿಸಿದರು.

‘ಕೇಂದ್ರದಲ್ಲಿ ನರೇಂದ್ರ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಬಂದರೆ ಸ್ವರ್ಗ ಸೃಷ್ಟಿಯಾಗುತ್ತೆ ಎಂದಿದ್ದರು. ಯಡಿಯೂರಪ್ಪ ಅವರ ಭ್ರಷ್ಟಾಚಾರ ಜಾಸ್ತಿಯಾದ ಕಾರಣ ಅಧಿಕಾರದಿಂದ ಕಿತ್ತು ಹಾಕಿದ್ದಾರೆ ಇದು ಸತ್ಯಸಂಗತಿ. ಆರ್‌ಟಿಜಿಎಸ್‌ ಮೂಲಕ ಲಂಚ ಪಡೆದ ಭ್ರಷ್ಟ ರಾಜಕಾರಣಿ ಯಾರಾದರೂ ಇದ್ದರೆ ಅದು ಯಡಿಯೂರಪ್ಪ ಮಾತ್ರ. ಈ ವಿಚಾರವನ್ನು ಹೇಳಲು ನಮ್ಮ ಕಾರ್ಯಕರ್ತರು ಹೆದರಬಾರದು’ ಎಂದರು.

‘ಕರ್ನಾಟಕದಲ್ಲಿ ಕೇವಲ 36 ಸಾವಿರ ಜನ ಕೊರೊನಾದಿಂದ ಸಾವಿಗೀಡಾಗಿದ್ದಾರೆ ಎಂದು ಸರ್ಕಾರ ಸುಳ್ಳು ಹೇಳುತ್ತಿದೆ, ವಾಸ್ತವದಲ್ಲಿ ಸುಮಾರು 4 ಲಕ್ಷ ಮಂದಿ ಸತ್ತಿದ್ದಾರೆ. ಇಡೀ ದೇಶದಲ್ಲಿ ಕನಿಷ್ಠ 50 ಲಕ್ಷ ಮಂದಿ ಸತ್ತಿದ್ದಾರೆ. ನರೇಂದ್ರ ಮೋದಿ ಅವರು ಕೊರೊನಾ ರೋಗಕ್ಕೆ ತ್ವರಿತವಾಗಿ ಲಸಿಕೆ ನೀಡುವ ಬದಲು ಜನರಿಗೆ ಚಪ್ಪಾಳೆ ತಟ್ಟಲು, ಜಾಗಟೆ ಬಾರಿಸಲು ಹೇಳಿದರು. ವಿಜ್ಞಾನದ ಯುಗದಲ್ಲಿ ಇಂಥಾ ಮೌಢ್ಯ ಬಿತ್ತುವುದು ಎಷ್ಟು ಸರಿ’ ಎಂದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆ ಆಗುತ್ತಿರಬೇಕು, ಅಪ್ಪ ಹಾಕಿದ ಆಲದ ಮರ ಎಂದು ನೇಣು ಹಾಕಿಕೊಳ್ಳೋಕೆ ಆಗುತ್ತಾ? ಹೀಗಾಗಿ ಮುಂದಿನ ಬಾರಿ ಜನರ ಹಿತ ಕಾಪಾಡಲು ವಿಫಲರಾಗಿರುವ ಅಶೋಕ ಅವರನ್ನು ಸೋಲಿಸಿ, ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ಕಳೆದ ಬಾರಿ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಹದಿನಾರು ಸ್ಥಾನ ಗೆದ್ದಿದ್ದೆವು. ಮುಂದಿನ ಬಾರಿ ಕನಿಷ್ಟ 25 ಕ್ಷೇತ್ರಗಳಲ್ಲಿ ಗೆಲ್ಲಬೇಕು. ಹೀಗಾಗಿ ಪದ್ಮನಾಭ ನಗರದಲ್ಲಿ ಜನ ಬದಲಾವಣೆ ಮಾಡಬೇಕು’ ಎಂದು ಕ್ಷೇತ್ರದ ಜನರಲ್ಲಿ ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT