ಮಂಗಳವಾರ, ಮಾರ್ಚ್ 2, 2021
23 °C

ರೈತರಿಗೆ ಬೇಡದ 'ಗಿಫ್ಟ್' ಕೊಡುತ್ತಿರುವ ಮೋದಿ: ಯೋಗೇಂದ್ರ ಯಾದವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ರೈತರಿಗೆ ಬಹುದೊಡ್ಡ ಚಾರಿತ್ರಿಕ ಉಡುಗೊರೆ ನೀಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದಾರೆ. ಯಾವ ರೈತರೂ ಇಂತಹ ಉಡುಗೊರೆ ಕೇಳಿಲ್ಲ' ಎಂದು ಎಐಕೆಎಸ್ ಸಿಸಿ ಸಂಚಾಲಕ ಯೋಗೇಂದ್ರ ಯಾದವ್ ಹೇಳಿದರು.

ನಗರದಲ್ಲಿ 'ಐಕ್ಯ ಹೋರಾಟ' ಸಂಘಟನೆಯ  ವತಿಯಿಂದ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ರೈತರೇ ಈ ಉಡುಗೊರೆ ಬೇಡ ಎಂದು ಹೇಳುತ್ತಿದ್ದಾರೆ. ಒತ್ತಾಯಪೂರ್ವಕವಾಗಿ ಗಿಫ್ಟ್ ಅನ್ನು ಯಾರಾದರೂ ಕೊಡುತ್ತಾರೆಯೇ' ಎಂದು ಅವರು ಪ್ರಶ್ನಿಸಿದರು.

'ಉಡುಗೊರೆ ಬೇಡ ಎಂದಾಗ ಅದನ್ನು ವಾಪಸ್ ತೆಗೆದುಕೊಳ್ಳಬೇಕು. ಆದರೆ, ಉಡುಗೊರೆ ಹೆಸರಲ್ಲಿ ರೈತರಿಗೆ ಕೇಂದ್ರ ಸರ್ಕಾರ ಶಿಕ್ಷೆಯನ್ನೇ ನೀಡುತ್ತಿದೆ' ಎಂದು ದೂರಿದರು.

'ನಿಜಕ್ಕೂ ನೀವು ದೇಶದ ರೈತರಿಗೆ ಉಡುಗೊರೆಯನ್ನು ನೀಡಲೇಬೇಕು ಎಂದರೆ ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವುದನ್ನು ಕಾನೂನು ಬದ್ಧಗೊಳಿಸಿ' ಎಂದರು.

ಕ್ವಿಂಟಲ್ ತೊಗರಿಬೇಳೆಗೆ ₹6000 ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ಆದರೆ, ರೈತರಿಗೆ ಕನಿಷ್ಠ ₹4,000 ಕೂಡ ಸಿಗುತ್ತಿಲ್ಲ' ಎಂದರು.

'ರೈತರೊಂದಿಗೆ ಚರ್ಚಿಸಿದ ನಂತರವೇ ಕಾಯ್ದೆ ರೂಪಿಸಲಾಗಿದೆ ಎನ್ನುತ್ತಾರೆ. ಯಾವ ಸಂಘಟನೆ ಜೊತೆಗೆ ಚರ್ಚಿಸಲಾಗಿದೆ ಎಂಬುದನ್ನು, ಆ ಸಂಘಟನೆಯ ಹೆಸರನ್ನು ನರೇಂದ್ರ ಮೋದಿ ಸಾರ್ವಜನಿಕವಾಗಿ ಹೇಳಬೇಕು' ಎಂದು ಒತ್ತಾಯಿಸಿದರು.

ರಾಜ್ಯದ ರೈತಶಕ್ತಿ ಪ್ರದರ್ಶಿಸಿ: ಯೋಗೇಂದ್ರ ಯಾದವ್ ಮನವಿ​

‘ಉತ್ತರ ಭಾರತದ ರೈತರು ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಜ.26ರಂದು ನಡೆಯುವ ಪ್ರತಿಭಟನೆಯಲ್ಲಿ ರಾಜ್ಯದ ರೈತರೂ ಪಾಲ್ಗೊಳ್ಳಬೇಕು. ನಾಡಿನ ರೈತ ಶಕ್ತಿಯನ್ನು ನವದೆಹಲಿಯಲ್ಲಿ ಪ್ರದರ್ಶಿಸಬೇಕು’ ಎಂದು ಯೋಗೇಂದ್ರ ಯಾದವ್ ಮನವಿ ಮಾಡಿದರು.

‘ಶಾಂತವೇರಿ ಗೋಪಾಲಗೌಡರು, ನಂಜುಂಡಸ್ವಾಮಿ, ಪುಟ್ಟಣ್ಣಯ್ಯರಂಥವರು ರಾಜ್ಯದ ರೈತ ಚಳವಳಿಗೆ ನೀಡಿದ ಕೊಡುಗೆ ಬಗ್ಗೆ ತಿಳಿದಿದೆ. ದೇಶದ ರೈತರು ಒಗ್ಗೂಡಿ ಹೋರಾಡಬೇಕು ಎಂಬುದು ಈ ನಾಯಕರ ಆಸೆಯಾಗಿತ್ತು. ಅವರ ಆಶಯವನ್ನು ಈಡೇರಿಸುವ ಕಾಲ ಕೂಡಿ ಬಂದಿದೆ’ ಎಂದೂ ಅವರು ಹೇಳಿದರು.

‘ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ರೈತರಿಂದಲೂ ಪಥಸಂಚಲನ ನಡೆಯಲಿದೆ. ಗಣರಾಜ್ಯೋತ್ಸವಕ್ಕೆ ನಾವು ಯಾವುದೇ ಅಡ್ಡಿ ಮಾಡುವುದಿಲ್ಲ. ಯೋಧರ ಪರೇಡ್ ಮುಗಿದ ನಂತರ, ಅದೇ ಜಾಗದಲ್ಲಿ ರೈತರ ಪರೇಡ್ ನಡೆಯಲಿದೆ. ದೆಹಲಿಯ ಸುತ್ತ–ಮುತ್ತಲಿನ ರಾಜ್ಯಗಳ ರೈತರು ಟ್ರ್ಯಾಕ್ಟರ್‌ಗಳಲ್ಲಿ ಬರಲಿದ್ದಾರೆ. ಅಲ್ಲಿ ಕರ್ನಾಟಕದ ರೈತರು ಎಲ್ಲಿ ಎಂದು ಕೇಳುವಂತಾಗಬಾರದು. ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ’ ಎಂದು ಮನವಿ ಮಾಡಿದರು.

‘ದೆಹಲಿಗೆ ಬರಲು ಸಾಧ್ಯವಾಗದವರು ಬೆಂಗಳೂರಿನಲ್ಲಿಯೇ ಪ್ರತಿಭಟನೆ ನಡೆಸಿ. ಟ್ರ್ಯಾಕ್ಟರ್‌ಗಳಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಂದು ರಾಜಧಾನಿಯಲ್ಲಿಯೂ ಪರೇಡ್ ನಡೆಸಿ’ ಎಂದು ಕೋರಿದರು.

ರೈತ ಮುಖಂಡರಾದ ಟಿ.ಎನ್. ಪ್ರಕಾಶ್ ಕಮ್ಮರಡಿ, ಚಾಮರಸ ಮಾಲಿಪಾಟೀಲ, ಕುರಬೂರು ಶಾಂತಕುಮಾರ್, ದಲಿತ ಮುಖಂಡರಾದ ಗುರುಪ್ರಸಾದ್ ಕೆರೆಗೋಡು, ಮಾವಳ್ಳಿ ಶಂಕರ್, ಲೇಖಕಿ ಬಿ.ಟಿ. ಲಲಿತಾ ನಾಯಕ್‌ ಮತ್ತಿತರರು ಭಾಗವಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು