ಶನಿವಾರ, ಆಗಸ್ಟ್ 13, 2022
25 °C

ಪ್ರಿಯಕರನೊಂದಿಗೆ ಗಾಂಜಾ ಮಾರಾಟ:ಯುವತಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪ್ರಿಯಕರನ ಜೊತೆ ಸೇರಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪದಡಿ ಆಂಧ್ರಪ್ರದೇಶದ ಯುವತಿ ಸೇರಿದಂತೆ ಇಬ್ಬರನ್ನು ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. 

ಆಂಧ್ರಪ್ರದೇಶದ ರೇಣುಕಾ (25) ಹಾಗೂ ಬಿಹಾರದ ಸುಧಾಂಶು (21) ಬಂಧಿತರು.

ತಲೆಮರೆಸಿಕೊಂಡಿರುವ ಪ್ರಿಯಕರ ಕಡಪದ ಸಿದ್ದಾರ್ಥ್ ಹಾಗೂ ಗಾಂಜಾ ಪೂರೈಸುತ್ತಿದ್ದ ಗೋಪಾಲ್‌ಗಾಗಿ ಶೋಧ ಮುಂದುವರಿಸಿದ್ದಾರೆ.

ಕೆಲಸ ತೊರೆದು ಗಾಂಜಾ ದಂಧೆಗೆ: ‘ಚೆನ್ನೈನ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡು ತ್ತಿದ್ದ ವೇಳೆ ರೇಣುಕಾ ಹಾಗೂ ಸಿದ್ಧಾರ್ಥ್ ಪ್ರೀತಿಸಿದ್ದರು. ಪದವಿ ಪೂರ್ಣಗೊಂಡ ನಂತರ ಚೆನ್ನೈನಲ್ಲೇ ರೇಣುಕಾ ಕೆಲಸ ಮಾಡುತ್ತಿದ್ದಳು’.

‘ಮೋಜಿನ ಜೀವನ ನಡೆಸಲು ಗಾಂಜಾ ಮಾರಾಟದ ದಂಧೆಗೆ ಇಳಿದಿದ್ದ ಪ್ರಿಯಕರ ಸಿದ್ದಾರ್ಥ್‌, ‘ಹೊಸ ಉದ್ಯಮ ಆರಂಭಿಸಿದ್ದೇನೆ. ನೀನೂ ಜೊತೆಯಾದರೆ, ಹೆಚ್ಚು ಹಣ ಸಂಪಾದಿಸಬಹುದು’ ಎಂದು ರೇಣುಕಾಳನ್ನು ಬೆಂಗಳೂರಿಗೆ ಕರೆಸಿ ಕೊಂಡಿದ್ದ. ಗಾಂಜಾ ವ್ಯವಹಾರ
ದಲ್ಲಿ ತೊಡಗಿದ್ದ ಸುಧಾಂಶುನನ್ನು ಆಕೆಗೆ ಪರಿಚಯಿಸಿದ್ದ. ಮಾರತ್ತಹಳ್ಳಿಯಲ್ಲಿ ರೂಂನಲ್ಲಿ ಯುವತಿಯನ್ನು ಇರಿಸಿದ್ದ’ ಎಂದು ಮೂಲಗಳು ತಿಳಿಸಿವೆ.

‘ಒಡಿಶಾ ಹಾಗೂ ವಿಶಾಖಪಟ್ಟಣಗಳಿಂದ ಗೋಪಾಲ್‌ ಎಂಬುವನಿಂದ ಖರೀದಿಸಿದ ಗಾಂಜಾವನ್ನು ಸಿದ್ದಾರ್ಥ್‌, ಯುವತಿಯ ಕೋಣೆಯಲ್ಲಿರಿಸುತ್ತಿದ್ದ. ಗಾಂಜಾವನ್ನು 50 ಗ್ರಾಂ ಸೇರಿದಂತೆ ವಿವಿಧ ಪ್ರಮಾಣಗಳಲ್ಲಿ ಬೇರ್ಪಡಿಸಿ, ಸದಾಶಿವನಗರ ಸೇರಿದಂತೆ ವಿವಿಧ ಉದ್ಯಾನಗಳು ಹಾಗೂ ರಸ್ತೆಗಳಲ್ಲಿ ನಿಂತು ಸಾವಿರಾರು ರೂಪಾಯಿಗೆ ಗಾಂಜಾ ಮಾರುತ್ತಿದ್ದರು’.

‘ಈ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಯುವತಿ ಹಾಗೂ ಸುಧಾಂಶು ಸಿಕ್ಕಿಬಿದ್ದರು. ಅವರ ಬಳಿ ಇದ್ದ 2.5 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು