ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯುವ ಸಬಲೀಕರಣ: ವಾರದೊಳಗೆ ಪ್ರಸ್ತಾವನೆ ಸಲ್ಲಿಸಿ’

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ನಾರಾಯಣ ಗೌಡ ಸಲಹೆ
Last Updated 15 ಫೆಬ್ರುವರಿ 2021, 21:35 IST
ಅಕ್ಷರ ಗಾತ್ರ

ಬೆಂಗಳೂರು: ಯುವ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲು ಮುಂದಿನ ಬಜೆಟ್‌ನಲ್ಲಿ ಏನೇನು ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು, ಸರ್ಕಾರದಿಂದ ಏನೇನು ನೆರವು ಅಗತ್ಯವಿದೆ ಎಂಬ ಬಗ್ಗೆ ವಾರದೊಳಗೆ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆಯ ಅಧಿಕಾರಿಗಳಿಗೆಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಸೂಚಿಸಿದರು.

ಇಲಾಖೆಯ ರಾಜ್ಯಮಟ್ಟದ ಪ್ರಗತಿ ಪರಿಶೀಲನೆ ಸೋಮವಾರ ನಡೆಸಿದ ಸಚಿವರು, ‘ಯುವ ಜನತೆಯ ಪ್ರತಿನಿಧಿಯಾಗಿ, ಧ್ವನಿಯಾಗಿ ಕೆಲಸ ಮಾಡಬೇಕು. ಯುವ ಸಮೂಹದ ಒಟ್ಟಾರೆ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

‘ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆಯಲ್ಲಿ ಶೇ 50ರಷ್ಟು ಯುವಕರೇ ಇದ್ದಾರೆ ಎನ್ನುವುದು ಕಳವಳಕಾರಿ ಸಂಗತಿ. ಇದನ್ನು ತಡೆಯಲು, ಜಾತಿ, ಧರ್ಮ, ಪ್ರಾಂತಗಳ ಆಧಾರದಲ್ಲಿ ಗುಂಪುಗಳಾಗಿ ವಿಂಗಡಣೆ ಹೊಂದುತ್ತಿರುವ ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಿರುವವರ ಮನಸ್ಸು ಪರಿವರ್ತನೆಗೆ ಇಲಾಖೆಯಿಂದ ಕಾರ್ಯಕ್ರಮ ರೂಪಿಸಬೇಕು’ ಎಂದು ಸಲಹೆ ನೀಡಿದರು.

‘ಯುವ ಸ್ಪಂದನ, ಯುವಜನ ಸಂಘ ಸ್ಥಾಪಿಸಿ, ಸರ್ಕಾರದ ನೆರವು ಬಳಸಿ ಸ್ವಾವಲಂಬಿಗಳಾಗುವಂತೆ ಮಾಡಬೇಕು. ಪ್ರತಿ ಜಿಲ್ಲೆಯಲ್ಲಿ ಯುವಕರಿಗೆ ಉದ್ಯೋಗ ಮೇಳ ಆಯೋಜಿಸಬೇಕು. ಕೌಶಲ ಗುರುತಿಸಿ, ಯುವಜನ ಸಂಘಗಳ ಮೂಲಕ ಸರ್ಕಾರದ ನೆರವು ನೀಡಿ, ಸ್ಥಳೀಯವಾಗಿ ಉದ್ಯಮ ಆರಂಭಿಸುವಂತೆ ಪ್ರೋತ್ಸಾಹಿಸಬೇಕು’ ಎಂದರು.

ಕ್ರೀಡಾ ಇಲಾಖೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಕಡಿಮೆ ಪ್ರಗತಿ ಸಾಧಿಸಿರುವ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ‘ಕ್ರೀಡಾಂಗಣ, ಈಜುಕೊಳಗಳನ್ನು ಸರಿಯಾಗಿ ನಿರ್ವಹಿಸಬೇಕು. ಪ್ರತಿ ತಾಲ್ಲೂಕಿನಲ್ಲಿ ಕ್ರೀಡಾಂಗಣ ಇರಬೇಕು. ಕ್ರೀಡಾಂಗಣ ಇಲ್ಲದ ಕಡೆಗಳಲ್ಲಿ ಹೊಸತಾಗಿ ನಿರ್ಮಾಣಕ್ಕೆ ಸ್ಥಳ ಗುರುತಿಸಬೇಕು. ಪ್ರತಿ ಜಿಲ್ಲೆಯಿಂದ 100 ಕ್ರೀಡಾಪಟುಗಳನ್ನು ಸಿದ್ಧಪಡಿಸಬೇಕು. ಪ್ರವಾಸಿ ತಾಣಗಳಲ್ಲಿ ಸಾಹಸ ಕ್ರೀಡೆಯ ತರಬೇತಿ, ಸ್ಪರ್ಧೆ ಆಯೋಜಿಸಬೇಕು’ ಎಂದು ಸಚಿವರು ಸೂಚಿಸಿದರು.

‘ಸ್ಥಳೀಯರ ನೆರವು, ಸಿಎಸ್‍ಆರ್ ನಿಧಿ, ದಾನಿಗಳು, ಖಾಸಗಿ ಸಹಭಾಗಿತ್ವದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡೆಯ ಅಭಿವೃದ್ಧಿಗೆ ಶ್ರಮಿಸಬೇಕು. ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಿದರೆ ಮಾತ್ರವೇ ಇದೆಲ್ಲ ಸಾಧ್ಯ’ ಎಂದೂ ಸಚಿವರು ಕಿವಿಮಾತು ಹೇಳಿದರು.

ಸಭೆಗೂ ಮೊದಲು ಯುವ ಸ್ಪಂದನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾರಾಯಣಗೌಡ, ವಿವೇಕಾನಂದರ ಜಯಂತಿ ಅಂಗವಾಗಿ ನಿಮ್ಹಾನ್ಸ್ ಸಹಯೋಗದಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT