ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಳಗಾವಿ-ಧಾರವಾಡ, ಶಿವಮೊಗ್ಗ-ರಾಣೆಬೆನ್ನೂರ ರೈಲು ಮಾರ್ಗ; ಬಜೆಟ್‌ನಲ್ಲಿ ಸೇರ್ಪಡೆ’

ರೈಲ್ವೆ ರಾಜ್ಯ ಸಚಿವ ಸುರೇಶ್ ಅಂಗಡಿ ಭರವಸೆ
Last Updated 8 ಆಗಸ್ಟ್ 2020, 11:54 IST
ಅಕ್ಷರ ಗಾತ್ರ

ಬೆಳಗಾವಿ: ‘ಬೆಳಗಾವಿ-ಧಾರವಾಡ ಮತ್ತು ಶಿವಮೊಗ್ಗ-ರಾಣೆಬೆನ್ನೂರ ರೈಲು ಮಾರ್ಗ ನಿರ್ಮಾಣ ಯೋಜನೆಗಳನ್ನು ಮುಂದಿನ ರೈಲ್ವೆ ಬಜೆಟ್‌ನಲ್ಲಿ ಅಳವಡಿಸಿಕೊಳ್ಳಲಾಗುವುದು’ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.

ಶಿವಮೊಗ್ಗ ಮುಖ್ಯ ರೈಲು ನಿಲ್ದಾಣದಲ್ಲಿ ಲಿಫ್ಟ್, ಅರಸಾಳು ನಿಲ್ದಾಣದಲ್ಲಿ ಮೂಲಸೌಕರ್ಯಗಳು, ಸ್ಟೇಷನ್ ಬಿಲ್ಡಿಂಗ್ (ಮ್ಯೂಸಿಯಂ ಬಿಲ್ಡಿಂಗ್) ಹಾಗೂ ವಿಸ್ತರಣೆಗೊಂಡ ರೈಲ್ವೆ ಫ್ಲಾಟ್ ಫಾರ್ಮ್ ಇವುಗಳನ್ನು ಶನಿವಾರ ವರ್ಚುವಲ್ ವೇದಿಕೆಯ ಮೂಲಕ ತಮ್ಮ ಬೆಳಗಾವಿ ಕಚೇರಿಯಿಂದಲೇ ಉದ್ಘಾಟಿಸಿ ಅವರು ಮಾತನಾಡಿದರು.

‘ಬಜೆಟ್‌ನಲ್ಲಿ ಇವೆರಡೂ ಯೋಜನೆಗಳನ್ನು ಸೇರಿಸಿಕೊಂಡ ನಂತರ ಶೀಘ್ರವಾಗಿ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು’ ಎಂದು ಭರವಸೆ ನೀಡಿದರು.

‘₹ 994 ಕೋಟಿ ವೆಚ್ಚದಲ್ಲಿ ಶಿವಮೊಗ್ಗ- ರಾಣೆಬೆನ್ನೂರ ಹೊಸ ರೈಲು ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿಗಳು ಉಚಿತವಾಗಿ ಭೂಮಿ ಒದಗಿಸುವುದರ ಜತೆಗೆ ರಾಜ್ಯ ಸರ್ಕಾರದ ವತಿಯಿಂದ ಶೇ 50 ರಷ್ಟು ಯೋಜನಾ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ. ಅದೇ ರೀತಿ ದಾವಣಗೆರೆ- ಬೆಂಗಳೂರು ನಡುವೆ ಡಬಲ್ ಲೈನ್ ನಿರ್ಮಾಣಕ್ಕೂ ಜಮೀನು ಒದಗಿಸುವುದಾಗಿ ತಿಳಿಸಿದ್ದಾರೆ. ರೈಲ್ವೆ ಇಲಾಖೆಗೆ ಭೂಮಿ ಹಸ್ತಾಂತರಿಸಿದ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು’ ಎಂದು ಹೇಳಿದರು.

‘ಪ್ರತಿ ನಗರಗಳನ್ನು ರೈಲು ಮಾರ್ಗದ ಮೂಲಕ ಜೋಡಿಸಲು ರೈಲ್ವೆ ಇಲಾಖೆ ಉತ್ಸುಕವಾಗಿದೆ. ಇದಕ್ಕೆ ರಾಜ್ಯ ಸರ್ಕಾರದ ಸಹಕಾರ ಬೇಕಾಗಿದೆ. ಶಿವಮೊಗ್ಗ ಸಂಸದರಾದ ಬಿ.ವೈ.ರಾಘವೇಂದ್ರ ಅವರ ಮನವಿಯ ಮೇರೆಗೆ ಶಿವಮೊಗ್ಗದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ತಿಳಿಸಿದರು.

‘ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಗೊಬ್ಬರ ಮತ್ತು ಔಷಧಿಯನ್ನು ಸಮರ್ಪಕವಾಗಿ ಸಾಗಾಣಿಕೆ ಮಾಡುವ ಮೂಲಕ ರೈಲ್ವೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರೊನಾ ಯೋಧರಂತೆ ಕಾರ್ಯನಿರ್ವಹಿಸಿದ್ದಾರೆ’ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಅವರು, ‘ಶಿವಮೊಗ್ಗ ಜಿಲ್ಲೆಯ ರೈಲ್ವೆ ಜಾಲ ವಿಸ್ತರಣೆ, ರೈಲುಗಳ ಸಂಖ್ಯೆ ಹೆಚ್ಚಳ ಹಾಗೂ ನಿಲ್ದಾಣಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಬೇಕು’ ಎಂದು ಕೋರಿದರು.

ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ವರ್ಚುವಲ್ ವೇದಿಕೆಯ ಮೂಲಕ ಸಮಾರಂಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT