ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯುಟೇಷನ್‌ ಬದಲಾವಣೆಗೆ ₹ 11 ಲಕ್ಷ ಲಂಚ; ಆರ್‌ಐ, ಎಚ್‌ಸಿ ಬಂಧನ

ಇನ್‌ಸ್ಪೆಕ್ಟರ್‌ ಪರಾರಿ
Last Updated 8 ಜನವರಿ 2021, 19:52 IST
ಅಕ್ಷರ ಗಾತ್ರ

ಬೆಂಗಳೂರು: ಜಮೀನಿನ ಮ್ಯುಟೇಷನ್‌ ಬದಲಾವಣೆ ಹಾಗೂ ರಕ್ಷಣೆ ಒದಗಿಸಲು ₹ 11 ಲಕ್ಷ ಲಂಚ ಪಡೆಯುತ್ತಿದ್ದ ಬೆಂಗಳೂರು ಉತ್ತರ ತಾಲ್ಲೂಕಿನ ಜಾಲ ಹೋಬಳಿಯ ಕಂದಾಯ ನಿರೀಕ್ಷಕ ಎಚ್‌. ಪುಟ್ಟ ಹನುಮಯ್ಯ ಅಲಿಯಾಸ್‌ ಪ್ರವೀಣ್‌ ಮತ್ತು ಚಿಕ್ಕಜಾಲ ಪೊಲೀಸ್‌ ಠಾಣೆಯ ಹೆಡ್‌ ಕಾನ್‌ಸ್ಟೆಬಲ್‌ ರಾಜು ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಗುರುವಾರ ರಾತ್ರಿ ಬಂಧಿಸಿದೆ.

ಇದೇ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚಿಕ್ಕಜಾಲ ಠಾಣೆಯ ಇನ್‌ಸ್ಪೆಕ್ಟರ್‌ ಯಶವಂತ ಎಸಿಬಿ ಕಾರ್ಯಾಚರಣೆಯ ಸುದ್ದಿ ತಿಳಿದು ಪರಾರಿಯಾಗಿದ್ದಾರೆ. ನಾಪತ್ತೆಯಾಗಿರುವ ಇನ್‌ಸ್ಪೆಕ್ಟರ್‌ಗಾಗಿ ಎಸಿಬಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

₹ 60 ಲಕ್ಷಕ್ಕೆ ಬೇಡಿಕೆ: ಬೆಂಗಳೂರು ಉತ್ತರ ತಾಲ್ಲೂಕಿನ ಜಾಲ ಹೋಬಳಿಯಲ್ಲಿ ವ್ಯಕ್ತಿಯೊಬ್ಬರು 2018ರಲ್ಲಿ 5 ಎಕರೆ ಜಮೀನು ಖರೀದಿಸಿದ್ದರು. ಅದೇ ಜಮೀನನ್ನು ಪುನಃ ಬೇರೊಬ್ಬರಿಗೆ ಮಾರಾಟ ಮಾಡಲು ಮೂಲ ಮಾಲೀಕರು ಒಪ್ಪಂದ ಮಾಡಿಕೊಂಡಿದ್ದರು. ಈ ಕುರಿತು ದೂರುದಾರರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಜಮೀನು ಮರು ಮಾರಾಟಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.

ಪುಟ್ಟ ಹನುಮಯ್ಯ
ಪುಟ್ಟ ಹನುಮಯ್ಯ

ಜಮೀನಿನ ಮ್ಯುಟೇಷನ್‌ನಲ್ಲಿ ಹೆಸರು ಬದಲಾವಣೆ ಮಾಡುವಂತೆ ಖರೀದಿದಾರರು ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆ ಪೂರ್ಣಗೊಳಿಸಲು ₹ 50 ಲಕ್ಷ ಲಂಚ ನೀಡುವಂತೆ ಪುಟ್ಟ ಹನುಮಯ್ಯ ಬೇಡಿಕೆ ಇಟ್ಟಿದ್ದರು. ಜಮೀನಿನ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವ ಕುರಿತು ಸ್ಥಳದಲ್ಲಿ ಮಾಹಿತಿ ಫಲಕ ಅಳವಡಿಸಿ, ರಕ್ಷಣೆ ನೀಡುವಂತೆಯೂ ದೂರುದಾರರು ಚಿಕ್ಕಜಾಲ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದ್ದರು. ₹ 10 ಲಕ್ಷ ಲಂಚಕ್ಕೆ ಇನ್‌ಸ್ಪೆಕ್ಟರ್‌ ಬೇಡಿಕೆ ಇಟ್ಟಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಗುರುವಾರ ಸಂಜೆ 7.30ರ ಸುಮಾರಿಗೆ ಶೇಷಾದ್ರಿಪುರಂ ಬಳಿ ದೂರುದಾರರಿಂದ ₹ 5 ಲಕ್ಷ ಪಡೆಯುತ್ತಿದ್ದಾಗ ದಾಳಿ ನಡೆಸಿದ ಎಸಿಬಿ ಬೆಂಗಳೂರು ನಗರ ಘಟಕದ ಎಸ್‌ಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ನೇತೃತ್ವದ ತಂಡ, ಆರೋಪಿಯನ್ನು ಬಂಧಿಸಿತು. ರಾತ್ರಿ 9 ಗಂಟೆ ಸುಮಾರಿಗೆ ಚಿಕ್ಕಜಾಲ ಠಾಣೆಯಲ್ಲೇ ಇನ್‌ಸ್ಪೆಕ್ಟರ್‌ ಪರವಾಗಿ ₹ 6 ಲಕ್ಷ ಪಡೆದ ರಾಜು ಅವರನ್ನು ಬಂಧಿಸಲಾಯಿತು. ಈ ಸಂದರ್ಭದಲ್ಲಿ ಹೊರಹೋಗಿದ್ದ ಯಶವಂತ ವಾಪಸ್‌ ಬಾರದೇ ತಲೆಮರೆಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT