ಇಂಗ್ಲಿಷ್ ಮಾಧ್ಯಮ: ಪ್ರಚಾರಕ್ಕೆ ಮೈಕ್ ಹಿಡಿದ ಶಿಕ್ಷಕರು!

ಮಂಗಳವಾರ, ಮೇ 21, 2019
24 °C
ಯಳಂದೂರು: ಸರ್ಕಾರಿ ಎಲ್‌ಕೆಜಿ, ಯುಕೆಜಿ ಮತ್ತು 1ನೇ ತರಗತಿ, 125 ಅರ್ಜಿ ವಿತರಣೆ

ಇಂಗ್ಲಿಷ್ ಮಾಧ್ಯಮ: ಪ್ರಚಾರಕ್ಕೆ ಮೈಕ್ ಹಿಡಿದ ಶಿಕ್ಷಕರು!

Published:
Updated:
Prajavani

ಯಳಂದೂರು: ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವ ಸಲುವಾಗಿ ರಾಜ್ಯ ಸರ್ಕಾರ ಈ ವರ್ಷದಿಂದಲೇ ಎಲ್‌ಕೆಜಿಯಿಂದ 1ರ ತನಕ ತರಗತಿಗಳನ್ನು ಹೊಂದಿರುವ ಇಂಗ್ಲಿಷ್ ಮಾಧ್ಯಮದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುತ್ತಿದೆ. 

ಜಿಲ್ಲೆಯಲ್ಲಿ ಆಯ್ಕೆಯಾಗಿರುವ ನಾಲ್ಕು ಶಾಲೆಗಳ ಪೈಕಿ ಯಳಂದೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಒಂದು (ಸರ್ಕಾರಿ ಪ್ರೌಢಶಾಲೆ, ಪದವಿಪೂರ್ವ ಕಾಲೇಜು ಸೇರಿಸಿ ಪಬ್ಲಿಕ್‌ ಶಾಲೆ ಮಾಡಲಾಗುತ್ತಿದೆ). ಪಬ್ಲಿಕ್‌ ಶಾಲೆಯ ಬಗ್ಗೆ ಜನರಿಗೆ ಪೋಷಕ‌ರಿಗೆ ಮಾಹಿತಿ ನೀಡಲು ಸ್ವತಃ ಶಾಲೆಯ ಶಿಕ್ಷಕರೇ ರಸ್ತೆಗೆ ಇಳಿದಿದ್ದಾರೆ.  

ಶಿಕ್ಷಕರೇ ಪೋಷಕರ ಮನೆ, ಮನೆಗೆ ತೆರಳಿ ಹೊಸ ಶಾಲೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಯತ್ನಿಸುತ್ತಿದ್ದಾರೆ. ಇದನ್ನು ಮನಗಂಡ ಪೋಷಕರು ಅರ್ಜಿಗಾಗಿ ಶಾಲೆಗೆ ತೆರಳುವ ಮೂಲಕ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ.

ಕರ್ನಾಟಕ ಪಬ್ಲಿಕ್‌ ಶಾಲೆಯಾಗಿ ಮೇಲ್ದರ್ಜೆಗೇರಲಿರುವ ಯಳಂದೂರಿನ ಶಾಲೆಯಲ್ಲಿ ಈಗಾಗಲೇ ದಾಖಲಾತಿ ಆರಂಭಗೊಂಡಿದೆ.  ಖಾಸಗಿ ಶಾಲೆಗಳಲ್ಲೂ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ಪೋಷಕರು ಅಲ್ಲಿ ತಮ್ಮ ಮಕ್ಕಳನ್ನು ಸೇರಿಸುವ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ, ಸರ್ಕಾರಿ ಶಾಲಾ ಶಿಕ್ಷಕರು ಕಾರ್ಯೋನ್ಮುಖರಾಗಿ ಹೊಸ ಶಾಲೆಯಲ್ಲಿನ ಸವಲತ್ತುಗಳ ಕುರಿತು ಮಾಹಿತಿ ನೀಡುತ್ತಿದ್ದಾರೆ.

ಬೀದಿ ಬೀದಿ ಪ್ರಚಾರ: ಶಾಲೆಯ ಶಿಕ್ಷಕರು ಸ್ವತಃ ತಾವೇ ಪೋಷಕರ ಬಳಿ ತೆರಳಿ ಹೊಸತಾಗಿ ಆರಂಭವಾಗುವ ಶಾಲೆ ಮತ್ತು ಅಲ್ಲಿ ಲಭಿಸುವ ಸವಲತ್ತುಗಳ ಬಗ್ಗೆ ಕರಪತ್ರಗಳನ್ನು ಹಂಚುತ್ತಿದ್ದಾರೆ. ಕಾನ್ವೆಂಟ್ ಮಾದರಿ ಕಲಿಕೆ, ಉಚಿತ ಪಠ್ಯ ಪುಸ್ತಕ ಮತ್ತು ಸಮವಸ್ತ್ರ, ಬಿಸಿಯೂಟ, ವಿದ್ಯಾರ್ಥಿ ವೇತನ, ಶೂ, ಟೈ, ಬೆಲ್ಟ್ ಸಹಿತ ಖಾಸಗಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳ ಮಾಹಿತಿಗಳನ್ನು ಕರಪತ್ರದಲ್ಲಿ ಮುದ್ರಿಸಲಾಗಿದೆ.

‘ಇದಲ್ಲದೆ ಆಟೋ ಪ್ರಚಾರದ ಮೂಲಕ ಜನರ ಗಮನ ಸೆಳೆಯಲಾಗುತ್ತಿದೆ. ಶಿಕ್ಷಕರು ಮೈಕ್‌ ಮೂಲಕ ಇಂಗ್ಲಿಷ್ ಶಾಲೆ ಮತ್ತು ಅಲ್ಲಿನ ಸೌಲಭ್ಯದ ಕುರಿತು ಸಾರಿ ಹೇಳುತ್ತಿದ್ದಾರೆ’ ಎಂದು ಶಾಲೆಯ ಉಪ ಪ್ರಾಂಶುಪಾಲ ಶಿವಶಂಕರ್ ಮಾಹಿತಿ ನೀಡಿದರು.

ಅರ್ಜಿಗೆ ಬೇಡಿಕೆ: ‘ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಪೋಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಕಷ್ಟು ಪೋಷಕರು ಶಾಲೆಗೆ ಬಂದು ಅರ್ಜಿ ಪಡೆಯುತ್ತಿದ್ದಾರೆ. ದೂರವಾಣಿ ಮೂಲಕ ಸೌಕರ್ಯಗಳ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ನೋಂದಣಿಗೆ ಈಗಾಗಲೇ ಸಿದ್ಧತೆ ನಡೆಸಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ. ತಿರುಮಲಾಚಾರಿ.

ಮೂಲ ಸೌಕರ್ಯ: ‘ಈಗ ಇರುವ ಪಟ್ಟಣದ ಸರ್ಕಾರಿ ಶಾಲೆಯನ್ನು ಸುಸಜ್ಜಿತ ಗೊಳಿಸುವ ಕೆಲಸ ಪ್ರಗತಿಯಲ್ಲಿ ಇದೆ. ಬಣ್ಣ ಬಳಿಯುವ ಮತ್ತು ಲ್ಯಾಬ್ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇಂಗ್ಲಿಷ್ ಬೋಧಿಸುವ ಶಿಕ್ಷಕರನ್ನು ನಿಯೋಜಿಸಲಾಗಿದೆ. ಮುಂದೆ ಸರ್ಕಾರ ಹಂತಹಂತವಾಗಿ ಮೂಲ ಸೌಕರ್ಯ ಕಲ್ಪಿಸಲಿದೆ. 1ರಿಂದ 12ನೇ ತರಗತಿವರೆಗೆ ಒಂದೇ ಸೂರಿನಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ಬಿಇಒ ತಿಳಿಸಿದರು. 

‘ಶಾಲೆಗಳ ಆರಂಭ ಕುರಿತು ವ್ಯಾಪಕ ಪ್ರಚಾರ ಮಾಡುವಂತೆ ಸಂಬಂಧಿಸಿದ ಶಾಲೆಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಇಂತಹ ಶಾಲೆಗಳ ಆರಂಭದಿಂದ ಖಾಸಗಿ ಶಾಲೆಗಳ ಪ್ರಭಾವ ತಗ್ಗಿ ಸರ್ಕಾರಿ ಶಾಲೆಗಳತ್ತ ಪೋಷಕರು ಮುಖ ಮಾಡಲಿದ್ದಾರೆ’ ಎಂದು ಪ್ರಾಂಶುಪಾಲ ಶಶಿಧರ್ ತಿಳಿಸಿದರು.

ಅರ್ಜಿ ದೊರೆಯುವ ಸ್ಥಳ

‘ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಉಚಿತವಾಗಿ ಅರ್ಜಿ ಪಡೆಯಬಹುದು. ಉಚಿತ ಪ್ರವೇಶ. ಕಂಪ್ಯೂಟರ್, ಸ್ಪೋಕನ್ ಇಂಗ್ಲಿಷ್, ಶೈಕ್ಷಣಿಕ ಪ್ರವಾಸ, ವಿದ್ಯಾರ್ಥಿನಿಯರಿಗೆ ಭದ್ರತೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸುವ ಮಕ್ಕಳಿಗೆ ತರಬೇತಿ ಮತ್ತು ಸ್ಪರ್ಧೆಗೆ ಅವಕಾಶ ಇದೆ’ ಎಂದು ಉಪಪ್ರಾಂಶುಪಾಲ ಶಿವಶಂಕರ್ ತಿಳಿಸಿದರು.

‘ಈ ವರ್ಷ ಅರ್ಜಿ ಪಡೆಯಲು ಜನರು ಅವಸರ ಮಾಡುತ್ತಿಲ್ಲ. ಕಳೆದ ವರ್ಷ ಮೇ ಮೊದಲ ವಾರದಲ್ಲಿ 50 ಅರ್ಜಿಗಳು ಮಾರಾಟವಾಗಿದ್ದವು. ಈ ಬಾರಿ 10 ಮಂದಿ ಪೋಷಕರು ಮಾತ್ರ ಕಾನ್ವೆಂಟ್‌ನಲ್ಲಿ ಮಾಹಿತಿ ಪಡೆದು ಹೋಗಿದ್ದಾರೆ’ ಎಂದು ಖಾಸಗಿ ಶಾಲೆಯ ಮುಖ್ಯ ಶಿಕ್ಷಕಿಯೊಬ್ಬರು ತಿಳಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !