ಎಲ್ಲ ಭಾಷೆಗಳ ಕಲಿಕೆ ಅಗತ್ಯ

ಮಂಗಳವಾರ, ಜೂನ್ 18, 2019
26 °C
ಮಂಡಿಕಲ್ಲು ನೂತನ ಕರ್ನಾಟಕ ಪಬ್ಲಿಕ್ ಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಶಾಸಕ ಡಾ.ಕೆ.ಸುಧಾಕರ್ ಅಭಿಮತ

ಎಲ್ಲ ಭಾಷೆಗಳ ಕಲಿಕೆ ಅಗತ್ಯ

Published:
Updated:
Prajavani

ಚಿಕ್ಕಬಳ್ಳಾಪುರ: ‘ಕನ್ನಡ ನಮ್ಮೆಲ್ಲರ ಮಾತೃಭಾಷೆ. ನಮಗೆ ಅದಕ್ಕಿಂತ ಮಿಗಿಲಾದ ಬೇರೆ ಭಾಷೆ ಇಲ್ಲ. ಹಾಗೆಂದು ಈ 21ನೇ ಶತಮಾನದಲ್ಲಿ ಕನ್ನಡದಲ್ಲಿಯೇ ಎಲ್ಲ ಕಲಿತರೆ ನಮ್ಮ ಮಕ್ಕಳ ಭವಿಷ್ಯ ಮಂಕಾಗುತ್ತದೆ. ಈ ಸ್ಪರ್ಧಾಯುಗದಲ್ಲಿ ನಾವು ಎಲ್ಲ ಭಾಷೆಗಳನ್ನು ಕಲಿಯುವ ಅಗತ್ಯವಿದೆ’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ಮಂಡಿಕಲ್ಲು ಗ್ರಾಮದಲ್ಲಿ ಶುಕ್ರವಾರ ನೂತನ ಕರ್ನಾಟಕ ಪಬ್ಲಿಕ್ ಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಇವತ್ತು ಆಂಗ್ಲ ಮಾಧ್ಯಮ ಶಿಕ್ಷಣದ ಬಗ್ಗೆ ಪರ–ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಅವುಗಳನ್ನು ಬದಿಗಿಟ್ಟು ನೋಡಿದರೆ, ಮನಸಿನ ಭಾಷೆ ಬೇರೆ. ಹೊಟ್ಟೆಪಾಡು ಬೇರೆ. ನಾವು ವಾತ್ಸಲ್ಯದಿಂದ ನಮ್ಮ ನಾಡು, ನುಡಿಯನ್ನು ಪ್ರೀತಿಸಬೇಕು. ಆದರೆ ಅಭಿವೃದ್ಧಿ ಹೊಂದಬೇಕಾದರೆ ಆಂಗ್ಲ ಮಾಧ್ಯಮ ಶಿಕ್ಷಣ ಬೇಕು’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ₹26 ಸಾವಿರ ಕೋಟಿ ಅನುದಾನ ಕೊಟ್ಟರೂ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ಖಾಸಗಿ ಶಾಲೆಗೆ ಸೇರಿಸುವುದು ಪೋಷಕರಿಗೆ ಪ್ರತಿಷ್ಠೆ ವಿಚಾರವಾಗುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ ಮೇಲೆ ನಂಬಿಕೆ ಹುಟ್ಟಿಸಬೇಕಾದರೆ ಸರ್ಕಾರದ ಮೇಲೆ ಇರುವಷ್ಟೇ ಜವಾಬ್ದಾರಿ ಅಧ್ಯಾಪಕರ ಮೇಲಿದೆ’ ಎಂದರು.

‘ಇವತ್ತು ನಮ್ಮಲ್ಲಿ ಇಂಗ್ಲಿಷ್ ಕಲಿಸುವ ಶಿಕ್ಷಕರು ಕಡಿಮೆ ಇದ್ದಾರೆ. ನೆಪ ಮಾತ್ರಕ್ಕೆ ಇಂತಹ ಶಾಲೆ ತೆರೆದರೆ ಆಗದು. ಆ ಶಾಲೆಗಳಿಗೆ ಗೌರವ ಬರಬೇಕಾದರೆ, ಇಂಗ್ಲಿಷ್‌ ಮಾಧ್ಯಮದಲ್ಲಿ ಅಧ್ಯಯನ ಮಾಡಿದವರು, ವಿಶೇಷ ತರಬೇತಿ ಪಡೆದವರನ್ನು ಬೋಧನೆಗೆ ನಿಯೋಜಿಸಬೇಕು. ಆಗ ಮಾತ್ರ ನಮ್ಮ ನಿರೀಕ್ಷೆ ಈಡೇರುತ್ತದೆ. ಈ ವಿಚಾರದಲ್ಲಿ ಸರ್ಕಾರ ಪ್ರಾಯೋಗಿಕವಾಗಿ ನೆಲೆಗಟ್ಟಿನಲ್ಲಿ ವಿಚಾರ ಮಾಡಬೇಕಾಗಿದೆ’ ಎಂದು ಹೇಳಿದರು.

‘ಕೇವಲ ಹೇಳಿಕೆಗೆ, ಯಾರನ್ನೋ ಮೆಚ್ಚಿಸಲು ನಾವು ಕೆಲಸ ಮಾಡಲು ಆಗುವುದಿಲ್ಲ. ಯಾವುದಾರೂ ನಿರ್ದಿಷ್ಠ ಕಾರ್ಯಕ್ರಮ ಹಾಕಿಕೊಂಡರೆ ಅದು ದೀರ್ಘಾವಧಿಯ ಚಿಂತನೆ ಹೊಂದಿರಬೇಕು. ರೈತರು, ಬಡವರ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುವ ಬಗ್ಗೆ ಕೀಳರಿಮೆ ಇಟ್ಟುಕೊಳ್ಳಬಾರದು. ಈ ಹಿಂದೆ ಲಕ್ಷಾಂತರ ಮಹನೀಯರು ಬಡತನದಲ್ಲಿಯೇ ಬೆಳೆದು ದೊಡ್ಡ ಸಾಧನೆ ಮಾಡಿದ್ದಾರೆ. ಸಾಧನೆಗೆ ಛಲ ಮುಖ್ಯ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಮಾತನಾಡಿ, ‘ಈ ಗ್ರಾಮವು ನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿದೆ. ಇಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ತೆರೆದಿರುವುದು ಸೂಕ್ತವಾಗಿದೆ. ಬಡ ವಿದ್ಯಾರ್ಥಿಗಳ ಆಂಗ್ಲ ಮಾಧ್ಯಮ ಕಲಿಕೆಯ ಕನಸನ್ನು ಈ ಶಾಲೆ ನನಸಾಗಿಸಲಿ. ಸರ್ಕಾರ ಈ ಸವಲತ್ತುಗಳನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

₹32.5 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಎರಡು ನೂತನ ಕೊಠಡಿಗಳನ್ನು ಇದೇ ವೇಳೆ ಉದ್ಘಾಟಿಸಲಾಯಿತು. ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಲಾ, ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲೆ ಗೀತಾ, ಉಪಪ್ರಾಂಶುಪಾಲ ಎ.ಎಸ್.ಕೃಷ್ಣಮೂರ್ತಿ, ಮುಖಂಡರಾದ ಗೋವಿಂದಸ್ವಾಮಿ, ಪೆರೇಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆನ್ನಕೃಷ್ಣಾರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಎಂ.ರಾಮಕೃಷ್ಣ, ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಮೋಹನರೆಡ್ಡಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ ಉಪಸ್ಥಿತರಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !