ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಹಸಿರು ಹೊದ್ದು ಮಲಗಿದ ಹಾದಿಯಲಿ...

ಕಾಡಿನ ದಾರಿಯ ಪಯಣದ ಅನುಭವ, ಖುಷಿ, ಭಯದ ನಡುವೆ ಮನಸ್ಸು ನಿರುಮ್ಮಳ
Last Updated 16 ಡಿಸೆಂಬರ್ 2020, 9:56 IST
ಅಕ್ಷರ ಗಾತ್ರ
ADVERTISEMENT
""
""
""
""

ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಪ್ರವಾಸಿ ತಾಣಗಳಿಗೆ ಬರವಿಲ್ಲ. ಬಂಡೀಪುರ, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಭರಚುಕ್ಕಿ ಜಲಪಾತ,ಹೊಗೆನಕಲ್‌​ ಜಲಪಾತ ಹೀಗೆ ಹಲವು ಪ್ರವಾಸಿ ತಾಣಗಳನ್ನು ಒಡಲಲ್ಲಿ ತುಂಬಿರುವ ಜಿಲ್ಲೆಯ ಒಟ್ಟಾರೆ ಭೂ ಪ್ರದೇಶದಲ್ಲಿ ಶೇ 49ರಷ್ಟು ಅರಣ್ಯವಿದೆ. ಇಲ್ಲಿನ ಅರಣ್ಯವೇ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬಹುತೇಕ ಪ್ರವಾಸಿತಾಣಗಳಿಗೆ ಕಾಡಿನ ದಾರಿಯಲ್ಲೇ ಸಾಗಬೇಕು. ಹೊಗೆನಕಲ್ ಜಲಪಾತಕ್ಕೆ ಹೋಗುವಾಗಿನಅರಣ್ಯದ ಹಾದಿಯ ಪ್ರಯಾಣದ ಅನುಭವವನ್ನು ಇಲ್ಲಿ ಕಟ್ಟಿಕೊಡಲಾಗಿದೆ

***

ಅಂದು ದೀಪಾವಳಿ ರಜೆ. ಗಡಿ ಜಿಲ್ಲೆಯ ಕೇಂದ್ರ ಚಾಮರಾಜನಗರದಿಂದ ಕಾರು ಚಾಲೂ ಮಾಡಿ ಸೀದ ಹೊರಟಿದ್ದು 150 ಕಿ.ಮೀ ದೂರದಲ್ಲಿರುವ ಹೊಗೆನಕಲ್‌ ಜಲಪಾತ ವೀಕ್ಷಣೆಗೆ. ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದ ಅಂಫಾನ್‌ ಚಂಡಮಾರುತದ ಪ್ರಭಾವದಿಂದಾಗಿ ಕಂಡು ಬಂದಿದ್ದ ಮೋಡ ಕವಿದ ವಾತಾವರಣ ಪ್ರವಾಸದ ಹುಮ್ಮಸ್ಸನ್ನು ದ್ವಿಗುಣಗೊಳಿಸಿತ್ತು.

ಕೊಳ್ಳೇಗಾಲ–ಹನೂರು–ಮಹದೇಶ್ವರ ಬೆಟ್ಟ– ಪಾಲಾರ್‌–ಗೋಪಿನಾಥಂ ಮಾರ್ಗದ ಸಂಚಾರ ಖುಷಿ ಕೊಡುವಂತದ್ದು. ಇದಕ್ಕೆ ಕಾರಣ ಇಲ್ಲಿನ ಅರಣ್ಯ. ಹೊಗೆನಕಲ್‌ ಮಾರ್ಗದಲ್ಲಿ 80 ಕಿ.ಮೀಗೂ ಹೆಚ್ಚು ಉದ್ದದ ರಸ್ತೆ ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಧಾಮಗಳಲ್ಲಿ ಹಾದುಹೋಗುತ್ತದೆ. ಅರಣ್ಯ ಸೀಳಿ ಸಾಗುವ ರಸ್ತೆಯಲ್ಲಿ ಸಂಚರಿಸುವುದೇ ಅವರ್ಣನೀಯ ಅನುಭವ. ಹೊಗೆನಕಲ್‌ನಲ್ಲಿ ಕೊರಕಲು ಕಲ್ಲುಗಳ ನಡುವೆ ಧುಮ್ಮಿಕ್ಕಿ ಹರಿಯುವ ಕಾವೇರಿ ನದಿಯನ್ನು ನೋಡುವ ನೆಪದಲ್ಲಿ ಕಾಡಿನ ರಸ್ತೆಯಲ್ಲಿ ಸಂಚರಿಸುವುದು ನನ್ನ ಉದ್ದೇಶವಾಗಿತ್ತು.ಅದಕ್ಕೂ ಮೊದಲು, ಮೂರು ಬಾರಿ ಈ ರಸ್ತೆಯಲ್ಲಿ ಉದ್ಯೋಗದ ನಿಮಿತ್ತ ಸಂಚರಿಸಿದ್ದೆ. ಪ್ರವಾಸದ ಉದ್ದೇಶದಿಂದ ಹೋಗುತ್ತಿರುವುದು ಇದೇ ಮೊದಲು.

ದಾರಿಯುದ್ದಕ್ಕೂ ಇಂತಹ ದೃಶ್ಯಾವಳಿ ಕಾಣಸಿಗುತ್ತದೆ

ಕಾಡುಗಳ್ಳ ವೀರಪ್ಪನ್‌ನ ಕಾರ್ಯಕ್ಷೇತ್ರವಾಗಿದ್ದ ಪ್ರದೇಶ ಇದು. ಅವನ ಕ್ರೌರ್ಯದ ಕುರುಹುಗಳು ದಾರಿ ಮಧ್ಯೆ ಅಲ್ಲಲ್ಲಿ ಕಾಣಸಿಗುತ್ತವೆ (ಅವನು ಅಂತ್ಯ ಕಂಡ ಜಾಗವೂ ಅದೇ ದಾರಿಯಲ್ಲಿದೆ). ಈ ಮಾರ್ಗದಲ್ಲಿ ಸಂಚರಿಸುವಾಗ ಬೇಡ ಬೇಡ ಎಂದರೂ ನಮ್ಮ ಮನಸ್ಸಿನಲ್ಲಿ ದಂತಚೋರ ಹಾದು ಹೋಗುತ್ತಾನೆ. ಅವನ ದುಷ್ಕೃತ್ಯಗಳು ನೆನಪಿನ ಪಟಲದಲ್ಲಿ ಬಡಿಯುತ್ತಾ ಇರುತ್ತದೆ.

ಆದರೆ, ಪ್ರಕೃತಿಗೆ ಎಲ್ಲವನ್ನೂ ಮರೆಸುವ ಶಕ್ತಿ ಇದೆ ಎಂಬ ಮಾತು ಸುಳ್ಳಲ್ಲ. ಹಸಿರು ಪರಿಸರ, ಪಾಲಾರ್‌ ಹಳ್ಳ, ಕಾವೇರಿ ನದಿಯ ಸೌಂದರ್ಯ ಕಣ್ತುಂಬಿಕೊಳ್ಳುತ್ತಿದ್ದಂತೆಯೇ ವೀರಪ್ಪನ್‌ ಮಾತ್ರ ಅಲ್ಲ; ನಮ್ಮನ್ನು ನಾವೇ ಮರೆತು ಬಿಡುತ್ತೇವೆ!

ಇರಲಿ, ಹನೂರು ದಾಟಿ ಎಲ್ಲೆಮಾಳ ಕಳೆದು ಕೌದಳ್ಳಿ ದಾಟುತ್ತಿದ್ದಂತೆಯೇ ಕಾಡು ಸ್ವಾಗತಿಸುತ್ತದೆ. ನಂತರ ಕಾರಿನ ವೇಗ ನಿಧಾನವಾಗುತ್ತದೆ. ಹಸಿರ ಸಿರಿ ವೇಗವಾಗಿ ಸಾಗಲು ಬಿಡುವುದಿಲ್ಲ (ಅರಣ್ಯ ಮಾರ್ಗದಲ್ಲಿ ವೇಗಮಿತಿ ಇರುವುದರಿಂದ ನಿಧಾನವಾಗಿ ಚಲಿಸುವುದು ಕಡ್ಡಾಯ). ಒಂದೇ ಪಥದ ಹಾವಿನಂತೆ ಸಾಗುವ, ಏರಿಳಿತದಿಂದ ಕೂಡಿದ ಟಾರು ರಸ್ತೆಯಲ್ಲಿ ಸಾಗುತ್ತಿದ್ದರೆ, ಆಹಾ... ಅದರ ಮಜವೇ ಬೇರೆ.

ಪಾಲಾರ್‌–ಮಹದೇಶ್ವರ ಬೆಟ್ಟದ ನಡುವಿನ ಸುಂದರ ಹಾದಿ

ತಾಳಬೆಟ್ಟದಿಂದ ನಂತರ ಮಹದೇಶ್ವರ ಬೆಟ್ಟದವರೆಗೆ ತಿರುವು ಮುರುವಿನಿಂದ ಕೂಡಿದ ಏರು ರಸ್ತೆ, ಅಲ್ಲಿಂದ ಪಾಲಾರ್‌ ಕಡೆಗೆ ತಿರುವುಗಳಿಂದ ಕೂಡಿದ ಇಳಿ ರಸ್ತೆ, ಪಾಲಾರ್‌ನಿಂದ ಗೋಪಿನಾಥಂ, ಅಲ್ಲಿಂದ ಹೊಗೆನಕಲ್‌ವರೆಗೆ ಕಡಿದಾದ ರಸ್ತೆಯಲ್ಲಿನ ಪ್ರಯಾಣ ಅನುಭವಿಸಿಯೇ ತೀರಬೇಕು. .

ನಾವು ಹೊರಟ ದಿನ ಚಂಡಮಾರುತದ ಪ್ರಭಾವದಿಂದ ಮೋಡ ಕವಿದ ವಾತಾವರಣ ಇತ್ತು ಎಂದೆನಲ್ಲ? ಹನೂರು ಸಮೀಪಿಸುತ್ತಿದ್ದಂತೆಯೇ ಮಳೆ ಸುರಿಯುವುದಕ್ಕೆ ಆರಂಭಿಸಿತು. ತುಂತುರು ಮಳೆ, ಶೀತದಿಂದ ಕೂಡಿದ ಮಂಜು ಕವಿದ ವಾತಾವರಣ, ಮಹದೇಶ್ವರ ಬೆಟ್ಟದವರೆಗೆ ಕಾನನದ ಪ್ರಯಾಣ ಸುಖವನ್ನು ಇಮ್ಮಡಿಗೊಳಿಸಿತು.

ತಾಳಬೆಟ್ಟವು ಮಹದೇಶ್ವರ ಬೆಟ್ಟದ ತಪ್ಪಲು. ಭಕ್ತರಿಗೆ ಸ್ವಾಗತ ಕೋರುವ ಮಹಾದ್ವಾರ ಇಲ್ಲಿದೆ. ಬೆಟ್ಟದತ್ತ ಏರು ಹಾದಿ ಇಲ್ಲಿಂದಲೇ ಆರಂಭ. ಇಲ್ಲಿಂದ ಬೆಟ್ಟಕ್ಕೆ 19 ಕಿ.ಮೀ ದೂರವಿದ್ದು, 25 ತಿರುವುಗಳಿವೆ. ಕಡಿದಾದ ತಿರುವುಗಳಾಗಿರುವುದರಿಂದ ವಾಹನ ಚಾಲನೆ ವೇಳೆ ಎಚ್ಚರಿಕೆ ಬೇಕು. ತಿರುವುಗಳಲ್ಲಿ ನಿಧಾನವಾಗಿ ವಾಹನ ಸಾಗುವಾಗ ಎಡ ಅಥವಾ ಬಲಕ್ಕೆ ದೃಷ್ಟಿ ಹಾಯಿಸಿದರೆ ವಿಶಾಲವಾದ ಅರಣ್ಯ, ಹಸಿರು ಬೆಟ್ಟಗಳ ಮನಸೂರೆಗೊಳ್ಳುತ್ತವೆ. ಮಾರ್ಗ ಮಧ್ಯೆ, ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ಹೋಗುವ ಭಕ್ತರು ಅಲ್ಲಲ್ಲಿ ಕಾಣಸಿಗುತ್ತಾರೆ.

ವಾಹನಗಳ ಓಡಾಟ ಕಡಿಮೆ ಇರುವ ಪಾಲಾರ್‌–ಗೋಪಿನಾಥಂ ನಡುವಿನ ಮಾರ್ಗ

ಮಹದೇಶ್ವರ ಬೆಟ್ಟ, ಮಲೆ ಮಹದೇಶ್ವರ ವನ್ಯಧಾಮದ ವ್ಯಾಪ್ತಿಯಲ್ಲಿದ್ದರೂ, ಅಲ್ಲಿನ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಾಯ ಜಮೀನು ಸಾಕಷ್ಟಿದೆ. ಪ್ರಸಿದ್ಧ ಯಾತ್ರಾ ಸ್ಥಳ ಆಗಿರುವುದರಿಂದ ಜನವಸತಿಗಳಿವೆ. ಇಲ್ಲಿ ಹಾದು ಹೋಗುವಾಗ ಪೇಟೆ ವಾತಾವರಣ ಕಂಡು ಬರುತ್ತದೆ. ಆದರೂ, ಹಸಿರಿಗೇನೂ ಕೊರತೆ ಇಲ್ಲ.

ಬೆಟ್ಟದಿಂದ ಹೊಗೆನಕಲ್‌ಗೆ ಮತ್ತೆ 53 ಕಿ.ಮೀ ಸಾಗಬೇಕು. ಇದು ಕೂಡ ಕಾಡಿನ ಹಾದಿಯೇ, ಬೆಟ್ಟದಿಂದ 17 ಕಿ.ಮೀ ದೂರದಲ್ಲಿ ಪಾಲಾರ್‌ ಇದೆ. ಕರ್ನಾಟಕ ಮತ್ತು ತಮಿಳುನಾಡು ಗಡಿ. ಇಲ್ಲಿ ಪಾಲಾರ್‌ ಹಳ್ಳ ಎರಡೂ ರಾಜ್ಯಗಳನ್ನು ಬೇರ್ಡಡಿಸುತ್ತದೆ (1993ರ ಏಪ್ರಿಲ್‌ 9ರಂದು ಈ ಪ್ರದೇಶದಲ್ಲಿ ವೀರಪ್ಪನ್‌ ನೆಲಬಾಂಬ್‌ ಅನ್ನು ಸ್ಫೋಟಿಸಿ 22 ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದ. ಈ ಪ್ರಕರಣ ಪಾಲಾರ್‌ ಬಾಂಬ್‌ ಸ್ಫೋಟ ಎಂದೇ ಕುಖ್ಯಾತಿ ಪಡೆದಿದೆ).

ಮರೆತಿದ್ದೆ. ಬೆಟ್ಟದಿಂದ ಪಾಲಾರ್‌ ವರೆಗಿನ ಪ್ರಯಾಣವೂ ಸ್ಮರಣೀಯವೇ. ತಿರುವು ಮುರುವಿನ ಅಗಲ ರಸ್ತೆಯಲ್ಲಿ ನಿಧಾನವಾಗಿ ಚಲಿಸಿದರೆ ಹಸಿರು ಬೆಟ್ಟಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಈ ದಾರಿಯಲ್ಲಿ 20 ತಿರುವುಗಳಿವೆ.

ನಾವು ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೂ ಮಂಜು ಕವಿದ ವಾತಾವರಣ ಇತ್ತು. ಮೋಡಗಳು ಬೆಟ್ಟಗಳಿಗೆ ಮುತ್ತಿಕ್ಕುತ್ತಿದ್ದವು. ಮಹದೇಶ್ವರ ಬೆಟ್ಟ ಕಳೆದಂತೆ ವಾತಾವರಣವೇ ಬದಲಾಯಿತು. ಬೆಟ್ಟದಿಂದ ಪಾಲಾರ್‌ ಕಡೆಗೆ ಇಳಿಯುವಾಗ ಬಿಸಿ ವಾತಾವರಣದ ಅನುಭವವಾಯಿತು. ಮೋಡದ ಎಡೆಯಿಂದ ತೂರಿ ಬಂದ ಬಿಸಿಲು ಹಸಿರ ಚಾವಣಿಯನ್ನು ಸ್ಪರ್ಶಿಸುತ್ತಿತ್ತು. ಪಾಲಾರ್‌ ಗಡಿಯವರೆಗೂ ತೆರಳಿ ಹಳ್ಳದ ಸೇತುವೆಯ ಮಧ್ಯದಲ್ಲಿ ನಿಂತು ತಮಿಳುನಾಡಿನ ಭಾಗದ ಅರಣ್ಯವನ್ನು ಕಣ್ತುಂಬಿಕೊಂಡು ಗೋಪಿನಾಥಂನತ್ತ ಸಾಗಿದೆವು.

ಹೊಗೆನಕಲ್‌ನಲ್ಲಿ ಹರಿಯುವ ಕಾವೇರಿ ನದಿ

ಪಾಲಾರ್‌ನಿಂದ ಎಡಭಾಗಕ್ಕೆ 23 ಕಿ.ಮೀ ಸಾಗಿದರೆ ಗೋಪಿನಾಥಂ ಸಿಗುತ್ತದೆ. ಇಲ್ಲಿ ವಾಹನಗಳ ಸಂಚಾರ ಕಡಿಮೆ. ಪ್ರವಾಸಿಗರು, ಗೋಪಿನಾಥಂ ಭಾಗದವರು ಮಾತ್ರ ಸಂಚರಿಸುತ್ತಾರೆ. ರಸ್ತೆ ಹೆಚ್ಚು ಅಗಲವಿಲ್ಲ. ಡಾಂಬರು ರಸ್ತೆಯಾದರೂ ಗುಣಮಟ್ಟ ಹೇಳಿಕೊಳ್ಳುವಂತಹದ್ದಲ್ಲ. ಪಾಲಾರ್‌ನಿಂದ ಮೂರು ಕಿ.ಮೀ ಸಾಗುತ್ತಲೇ ಕಾವೇರಿ ವನ್ಯಧಾಮದ ಗೇಟು ಸಿಗುತ್ತದೆ. ಅಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ವಾಹನ ಹಾಗೂ ಪ್ರಯಾಣಿಕರ ವಿವರಗಳನ್ನು ದಾಖಲಿಸಿಕೊಂಡು ಬಿಡುತ್ತಾರೆ.

ಈ ಮಾರ್ಗದಲ್ಲಿ ಗೋಪಿನಾಥಂವರೆಗೂ ಎಲ್ಲೂ ಜನವಸತಿ ಇಲ್ಲ. ವಾಹನಗಳ ಸಂಚಾರ ಕಡಿಮೆ ಇರುವುದರಿಂದ (ಅಪರೂಪಕ್ಕೆ ಎಂಬಂತೆ ಸ್ಥಳೀಯದ ದ್ವಿಚಕ್ರವಾಹನಗಳು ಸಿಗತ್ತವೆ) ಇಲ್ಲಿ ಕಾಡೊಳಗಿನ ಪ್ರಯಾಣ ಸ್ವಲ್ಪ ಭಯ ತರಿಸುತ್ತದೆ. ಇದು ಆನೆಗಳು ಹೆಚ್ಚು ಓಡಾಡುವ ಪ್ರದೇಶ. ವಾಹನದಲ್ಲಿ ಹೆಚ್ಚು ಜನರಿದ್ದರೆ ಭಯವಾಗದು. ಆದರೆ, ಚಿಕ್ಕ ಮಗಳು ಸೇರಿ ನಾವು ಮೂವರು ಮಾತ್ರ ಇದ್ದುದರಿಂದ ಅಂಜಿಕೊಂಡೆ ಚಾಲನೆ ಮಾಡಿದೆ. ಗೋ‍ಪಿನಾಥಂ ಸಮೀಪಿಸುತ್ತಿದ್ದಂತೆ ಆರ್‌ಎಫ್‌ಒ ಕಚೇರಿ ಸಿಗುತ್ತದೆ. ಅಲ್ಲಿ ಎಡಕ್ಕೆ ಒಂದು ಕಿ.ಮೀ ಸಾಗಿದರೆ ಸುಂದರವಾದ ಗೋಪಿನಾಥಂ ಅಣೆಕಟ್ಟು ಇದೆ. ಬೆಟ್ಟದ ಸಾಲುಗಳ ನಡುವಿನ ಜಲರಾಶಿ ಮನಸ್ಸಿಗೆ ಮುದ ನೀಡುತ್ತದೆ (ಅಲ್ಲೇ ಬಳಿಯಲ್ಲಿ ಅರಣ್ಯ ಇಲಾಖೆಯ ಮಿಸ್ಟ್ರಿ ಟ್ರೇಲ್‌ ಕ್ಯಾಂಪ್‌ ಇದೆ. ಮೊದಲೇ ಆನ್‌ಲೈನ್‌ನಲ್ಲಿ ಬುಕ್‌ ಮಾಡಿದರೆ ರಾತ್ರಿ ತಂಗುವುದಕ್ಕೆ ಅವಕಾಶ ಇದೆ).

ಗೋಪಿನಾಥಂನಿಂದ ಹೊಗೆನಕಲ್‌ ಜಲಪಾತದ ಪ್ರದೇಶಕ್ಕೆ 13 ಕಿ.ಮೀ ದೂರ. ಗೋಪಿನಾಥಂ ಇದೆಯಲ್ಲ, ಇದು ವೀರಪ್ಪನ್‌ ಹುಟ್ಟೂರು. (ಆತನಿಂದ ಹತರಾದ ಐಎಫ್‌ಎಸ್‌ ಅಧಿಕಾರಿ ಶ್ರೀನಿವಾಸ್‌ ಅವರನ್ನು ಇಲ್ಲಿನ ಜನರು ಈಗಲೂ ನೆನೆಯುತ್ತಾರೆ. ಊರಿನಲ್ಲಿ ಅವರು ನಿರ್ಮಿಸಿರುವ ಮಾರಮ್ಮ ದೇವಾಲಯದಲ್ಲಿ ಶ್ರೀನಿವಾಸ್‌ ಅವರ ಫೋಟೊಗೂ ಆರತಿ ಬೆಳಗಲಾಗುತ್ತದೆ). ಹೊಗೆನಕಲ್‌ ದಾರಿಯಲ್ಲಿ 10 ಕಿ.ಮೀ ಮಾರ್ಗ ದಟ್ಟ ಕಾನನ. ಈ ರಸ್ತೆಯಲ್ಲಿ ವಾಹನ ಸಂಚಾರ ಇನ್ನಷ್ಟು ವಿರಳ. ಈ ಭಾಗದಲ್ಲಿ ಸುಜ್ಜಲು ಮರ ಹೇರಳವಾಗಿದೆ.

ಸಮತಟ್ಟಾದ ಕಾಡಿನ ನಡುವೆ ಕಡಿದಾದ ರಸ್ತೆಯಲ್ಲಿನ ಸಂಚಾರ ಮತ್ತೆ ನನ್ನಲ್ಲಿ ಭಯ ಮೂಡಿಸಿತು. ಪ್ರವಾಸಿಗರ ವಾಹನಗಳ ಮೇಲೆ ಆನೆ ದಾಳಿ ಮಾಡುವ ಸುದ್ದಿಗಳನ್ನು ಓದಿದ ನೆನಪುಗಳು, ನಾನೇ ಬರೆದ ವನ್ಯಜೀವಿ ದಾಳಿ ಸುದ್ದಿಗಳು, ಸುಜ್ಜಲು ಮರಗಳು ಆನೆಗಳಿಗೆ ಹೆಚ್ಚು ಪ್ರಿಯ ಎಂದು ಹಿಂದೊಮ್ಮೆ ಇದೇ ಪ್ರದೇಶದಲ್ಲಿ ವನ್ಯಜೀವಿ ತಜ್ಞ ಸಂಜಯ್‌ ಗುಬ್ಬಿ ಅವರು ಹೇಳಿದ್ದೆಲ್ಲ ನೆನಪಿಸಿಕೊಂಡು ಮುಖ ಬೆವರುವುದಕ್ಕೆ ಆರಂಭವಾಯಿತು. ಸ್ಥಳೀಯರು ದ್ವಿಚಕ್ರವಾಹನಗಳಲ್ಲಿ ಸಾಗುವುದನ್ನು ಕಂಡು ಧೈರ್ಯತಂದುಕೊಂಡೆ. ಇಷ್ಟೆಲ್ಲ ಅಂದುಕೊಳ್ಳುತ್ತಾ ಸಾಗುವಾಗ ಹೊಗೆನಕಲ್‌ ಹತ್ತಿರವಾಯಿತು. ದೂರ ದೂರದಲ್ಲಿ ಒಂದೊಂದು ಮನೆಗಳು ಕಾಣಿಸಿಕೊಂಡಾಗ ಸಮಾಧಾನವಾಯಿತು. ಹೊಗೆನಕಲ್‌ನಲ್ಲಿ ಕಾವೇರಿ ನದಿಯಲ್ಲಿ ತೆಪ್ಪದಲ್ಲಿ ಸಾಗಿ ಜಲಧಾರೆಗಳನ್ನು ಕಂಡಾಗ ಭಯವೆಲ್ಲ ದೂರವಾಗಿ ಮನಸ್ಸು ಅರಳಿತು.

ಅಲ್ಲಿಂದ ವಾಪಸ್‌ ಆದಾಗ ಮೊದಲಿನಷ್ಟು ಹೆದರಿಕೆ ಇಲ್ಲದಿದ್ದರೂ, ಆನೆಗಳು ಎಲ್ಲಿ ಎದುರಾಗುತ್ತವೆಯೇ ಎಂಬ ಭಯ ಮಿಶ್ರಿತ ನಿರೀಕ್ಷೆ ಇದ್ದೇ ಇತ್ತು. ‍ಪಾಲಾರ್‌ ತಲುಪುತ್ತಿದ್ದಂತೆಯೇ ಭೀತಿ ಎಲ್ಲವೂ ದೂರವಾಗಿ ನಿರುಮ್ಮಳನಾದೆ. ಅಲ್ಲಿಂದ ಮತ್ತೆ ಹಸಿರು, ತಂಪಾದ ಹವೆಯನ್ನು ಆಸ್ವಾದಿಸುತ್ತಾ ಹಸಿರ ಹೊದ್ದು ಮಲಗಿದ ಹಾದಿಯಲ್ಲಿ ಚಾಮರಾಜನಗರದತ್ತ ಹೊರಟೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT