ಶುಕ್ರವಾರ, ನವೆಂಬರ್ 27, 2020
24 °C

PV Web Exclusive: ಆಕರ್ಷಕವಾಗುತ್ತಿದೆ ಆಡುಮಲ್ಲೇಶ್ವರ ಕಿರುಮೃಗಾಲಯ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಹುಲಿ, ಕರಡಿ, ಮೊಸಳೆ, ಝೀಬ್ರಾದಂತಹ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಲು ಮೈಸೂರು, ಬೆಂಗಳೂರು ಮೃಗಾಲಯಕ್ಕೆ ಭೇಟಿ ನೀಡುತ್ತೀರಾ? ಹಾಗಾದರೆ ಇನ್ನು ಮುಂದೆ ಚಿತ್ರದುರ್ಗಕ್ಕೂ ಬನ್ನಿ. ಕೋಟೆನಾಡಿನ ಆಡುಮಲ್ಲೇಶ್ವರ ಕಿರುಮೃಗಾಲಯದಲ್ಲಿ ಇಂತಹ ವನ್ಯಜೀವಿಗಳು ಕಾಣಸಿಗುತ್ತವೆ.

ಜೋಗಿಮಟ್ಟಿ ತಪ್ಪಲಿನಲ್ಲಿ ಹರಡಿಕೊಂಡಿರುವ ಆಡುಮಲ್ಲೇಶ್ವರ ಕಿರುಮೃಗಾಲಯ ಪ್ರವಾಸಿಗರ ನೆಚ್ಚಿನ ತಾಣವಾಗಿ ಪರಿವರ್ತನೆ ಹೊಂದುತ್ತಿದೆ. ಐತಿಹಾಸಿಕ ಕಲ್ಲಿನಕೋಟೆಗೆ ಭೇಟಿ ನೀಡುವ ಪ್ರವಾಸಿಗರು ಕಿರುಮೃಗಾಲಯ ವೀಕ್ಷಣೆಗೆ ಆಸಕ್ತಿ ತೋರುತ್ತಿದ್ದಾರೆ. ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟ ಬಳಿಕ ಕಿರು ಮೃಗಾಲಯ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದೆ.

ಕೋಟೆನಗರಿಯಿಂದ ಕಿರುಮೃಗಾಲಯ ಐದು ಕಿ.ಮೀ. ದೂರದಲ್ಲಿದೆ. ಜೋಗಿಮಟ್ಟಿ ಮುಖ್ಯರಸ್ತೆಯಲ್ಲಿ ಸಾಗಿದರೆ ಪ್ರವೇಶದ್ವಾರವೊಂದು ಗೋಚರಿಸುತ್ತದೆ. ಅಲ್ಲಿಂದ ಬಲಕ್ಕೆ ತಿರುವು ಪಡೆದು ಒಂದೂವರೆ ಕಿ.ಮೀ ಅರಣ್ಯ ಪ್ರದೇಶದಲ್ಲಿ ತೆರಳುವುದು ಮಲೆನಾಡಿನಲ್ಲಿ ಸಂಚರಿಸಿದ ಅನುಭವ ನೀಡುತ್ತದೆ. ‘ಆಡುಮಲ್ಲೇಶ್ವರ ಗುಡಿ ಬಾಲವನ’ದ ದ್ವಾರ ದಾಟಿದರೆ ವನ್ಯಜೀವಿ ಪ್ರಪಂಚ ತೆರೆದುಕೊಳ್ಳುತ್ತದೆ.


ಆಡುಮಲ್ಲೇಶ್ವರ ಸ್ವಾಮಿ ದೇಗುಲ (ಸಂಗ್ರಹ ಚಿತ್ರ)

ರಾಜ್ಯದ ಆದಾಯ ತರಬಹುದಾದ ಮೃಗಾಲಯಗಳ ಪಟ್ಟಿಯಲ್ಲಿ ಆಡುಮಲ್ಲೇಶ್ವರಕ್ಕೆ ಐದನೇ ಸ್ಥಾನವಿದೆ. ಬನ್ನೇರುಘಟ್ಟ, ಮೈಸೂರು, ಶಿವಮೊಗ್ಗ, ಗದಗ ಮೃಗಾಲಯಗಳ ನಂತರದ ಸ್ಥಾನದಲ್ಲಿ ಆಡುಮಲ್ಲೇಶ್ವರವಿದೆ. ಪ್ರಾಣಿಗಳನ್ನು ಸಾಕಲು ಅತ್ಯುತ್ತಮವಾದ ವ್ಯವಸ್ಥೆಯನ್ನು ಇದು ಹೊಂದಿದೆ. ಪ್ರವಾಸಿಗರು ಸಾಗಲು ಪಥಗಳನ್ನು ನಿರ್ಮಿಸಲಾಗಿದೆ. ಕುಳಿತು ವಿಶ್ರಾಂತಿ ಪಡೆಯಲು ಕಲ್ಲುಹಾಸುಗಳ ವ್ಯವಸ್ಥೆ ಇದೆ. ಮಕ್ಕಳು ಆಟವಾಡಲು ಕ್ರೀಡಾ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಸುಂದರವಾದ ಪುಷ್ಕರಣಿ, ಆಡುಮಲ್ಲೇಶ್ವರ ದೇಗುಲವೂ ಇಲ್ಲಿದೆ.

ಮೃಗಾಲಯವನ್ನು ಇನ್ನಷ್ಟು ಆಕರ್ಷಣೀಯಗೊಳಿಸಲು ಪ್ರಾಧಿಕಾರ ಮುಂದಾಗಿದೆ. ಇಸ್ರೇಲ್‌ನಿಂದ ಝೀಬ್ರಾ ಹಾಗೂ ಮೈಸೂರಿನಿಂದ ಹುಲಿ ತರುವ ಯೋಜನೆ ರೂಪುಗೊಂಡಿದೆ. ಹುಲಿಗಳ ವೀಕ್ಷಣೆಗೆ ಎನ್‍ಕ್ಲೋಸರ್ ನಿರ್ಮಿಸಲು ₹ 75 ಲಕ್ಷ ವೆಚ್ಚದ ಕ್ರಿಯಾಯೋಜನೆ ಸಿದ್ಧವಾಗಿದೆ. ಕೋವಿಡ್‌ ಸಂಕಷ್ಟ ಎದುರಾಗದಿದ್ದರೆ ಈ ಹೊತ್ತಿಗೆ ಹುಲಿ ವೀಕ್ಷಣೆಗೆ ಅವಕಾಶ ಸಿಗುವ ಸಾಧ್ಯತೆ ಇತ್ತು. ಇಸ್ರೇಲ್‌ನಿಂದ ಒಂದು ಗಂಡು ಹಾಗೂ ಎರಡು ಹೆಣ್ಣು ಝೀಬ್ರಾಗಳು ಆಡುಮಲ್ಲೇಶ್ವರಕ್ಕೆ ಬರುತ್ತಿದ್ದವು.


ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿರುವ ಜಿಂಕೆ ಮರಿಗಳು

ಕಿರು ಮೃಗಾಲಯದಲ್ಲಿ 48 ಬಗೆಯ ಪಕ್ಷಿಗಳು ಹಾಗೂ 49 ಪ್ರಭೇದದ ಪ್ರಾಣಿಗಳು ಆಶ್ರಯ ಪಡೆದಿವೆ. ಮೂರು ಕರಡಿ, ಏಳು ಚಿರತೆ, ಕೃಷ್ಣಮೃಗ, ಜಿಂಕೆ, ಮೊಸಳೆ, ನೀಲ್‌ಗಾಯ್, ನರಿ, ಹೆಬ್ಬಾವು, ಕಾಡುಕೋಳಿ ಸೇರಿ ಹಲವು ವನ್ಯಜೀವಿಗಳೂ ಇಲ್ಲಿವೆ. ಒಮ್ಮೆ ಮೃಗಾಲಯ ಪ್ರವೇಶಿಸಿದರೆ ವನ್ಯಜೀವಿ ಜಗತ್ತಿನ ವಿಸ್ಮಯಗಳು ಅನಾವರಣಗೊಳ್ಳುತ್ತವೆ.

ಮೃಗಾಲಯ ಪ್ರವೇಶಿಸುತ್ತಿದ್ದಂತೆ ಮೊಸಳೆ ಸ್ವಾಗತಿಸುತ್ತದೆ. ಸಮೀಪದಲ್ಲೇ ಜಿಂಕೆಗಳು ಗಮನ ಸೆಳೆಯುತ್ತವೆ. ನವಿಲಿನ ನೃತ್ಯ, ಪಕ್ಷಿಗಳ ಕಲರವ, ಗಿಳಿಯ ಇಂಪಾದ ಕೂಗು ಎಲ್ಲವೂ ರೋಮಾಂಚನಗೊಳಿಸುತ್ತವೆ. ನಿಧನವಾಗಿ ಹರಿದಾಡುವ ಹೆಬ್ಬಾವು, ಆಗಾಗ ನಾಲಿಗೆ ಹೊರಚಾಚಿ ಮೈಯಲ್ಲ ಕಣ್ಣಾಗಿರುವ ಸರೀಸೃಪ, ಮೊಲದ ಓಟ ಮನಸ್ಸಿಗೆ ಮುದ ನೀಡುತ್ತವೆ. ವನ್ಯಜೀವಿಗಳನ್ನು ನೋಡುತ್ತ ಮನಸ್ಸನ್ನು ಹಗುರ ಮಾಡಿಕೊಳ್ಳಲು ನೆಚ್ಚಿನ ತಾಣವಾಗಿದೆ. ಕುಟುಂಬ ಸಹಿತ ಒಂದು ದಿನದ ಪಿಕ್‌ನಿಕ್‌ಗೆ ಇದು ಸೂಕ್ತ ಸ್ಥಳ.

ಗುಬ್ಬಿ, ಲೇಡಿ ಅಮರ್‌ಸೆಂಟ್‌, ಲವ್‌ ಬರ್ಡ್ಸ್‌ ಗೋಲ್ಡನ್‌ ಫಿಜಂಟ್‌, ಎಲ್ಲೊ ಗೋಲ್ಡನ್‌ ಫಿಜಂಟ್‌ ಹಾಗೂ ಕಾಕ್‌ಟೇಲ್‌ ಪಕ್ಷಿಗಳು ನೋಡುಗರ ಗಮನ ಸೆಳೆಯುತ್ತಿವೆ. ಪ್ರತಿ ಪ್ರಭೇದದ ಒಂದು ಗಂಡು ಹಾಗೂ ಎರಡು ಹೆಣ್ಣು ಪಕ್ಷಿಗಳು ಇಲ್ಲಿವೆ.

ಕೋವಿಡ್‌ ಬಳಿಕ ಮೃಗಾಲಯಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಕೋಟೆ ವೀಕ್ಷಣೆಗೆ ಬರುವ ಬಹುತೇಕರು ಆಡುಮಲ್ಲೇಶ್ವರಕ್ಕೆ ಭೇಟಿ ನೀಡುತ್ತಿದ್ದರಿಂದ ನಿತ್ಯ ನೂರಾರು ಪ್ರವಾಸಿಗರು ಮೃಗಾಲಯದಲ್ಲಿ ಕಾಣುತ್ತಿದ್ದರು. ಲಾಕ್‌ಡೌನ್‌ ಘೋಷಣೆಯಾದ ಬಳಿಕ ಪ್ರವಾಸಿ ಚಟುವಟಿಕೆ ಸ್ಥಗಿತಗೊಂಡು ಅಂದಾಜು ₹ 7 ಲಕ್ಷ ನಷ್ಟವುಂಟಾಗಿದೆ. ಕೋವಿಡ್‌ ಮುನ್ನೆಚ್ಚರಿಕೆಯೊಂದಿಗೆ ಪ್ರವಾಸಿಗರಿಗೆ ಮೃಗಾಲಯ ಮುಕ್ತವಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿಲ್ಲ.


ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿರುವ ಚಿರತೆ

ಮೃಗಾಲಯ ಸ್ವಾವಲಂಬಿಯಾಗಿ ರೂಪುಗೊಳ್ಳುವ ಉದ್ದೇಶದಿಂದ ಪ್ರಾಣಿ ದತ್ತು ಸ್ವೀಕಾರಕ್ಕೆ ಚಾಲನೆ ನೀಡಲಾಗಿದೆ. ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಕರಡಿಯನ್ನು ದತ್ತು ಪಡೆದಿದ್ದಾರೆ. ಕರಡಿ ಆಹಾರ, ನಿರ್ವಹಣೆ ಹಾಗೂ ವೈದ್ಯಕೀಯ ವೆಚ್ಚವನ್ನು ಗುರುಪೀಠ ಭರಿಸುತ್ತಿದೆ. ಇನ್ನಷ್ಟು ವನ್ಯಜೀವಿ ಪ್ರೇಮಿಗಳು ಪ್ರಾಣಿ ದತ್ತು ಸ್ವೀಕಾರಕ್ಕೆ ಒಲವು ತೋರಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು