ಶನಿವಾರ, ಜುಲೈ 2, 2022
25 °C
ಕುಶನಿಂದ ಪ್ರಸಿದ್ಧಿಗೆ ಬಂದ ಗಂಗೆ: ಯಕ್ಷಗಾನ, ದೊಡ್ಡಾಟಕ್ಕೆ ಹೆಸರುವಾಸಿ

ಗುರುಕುಲ ಶಿಕ್ಷಣಕ್ಕೆ ಹೆಸರಾಗಿದ್ದ ಹಾನಗಲ್‌ ಕೂಸನೂರು

ಮಾಲತೇಶ ಆರ್. Updated:

ಅಕ್ಷರ ಗಾತ್ರ : | |

Prajavani

ತಿಳವಳ್ಳಿ: ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ತಿಳವಳ್ಳಿ ಸಮೀಪದ ವರದಾ ನದಿಯ ದಂಡೆಯ ಮೇಲಿರುವ ಸಣ್ಣ ಗ್ರಾಮವೇ ಕೂಸನೂರು.

ಈ ಊರಿಗೆ ಈ ಹೆಸರು ಬರಲು ಒಂದು ಇತಿಹಾಸವಿದೆ. ಹಿಂದೆ ಕುಶನೆಂಬ ಬ್ರಾಹ್ಮಣನು ಕಾಶಿ ಕ್ಷೇತ್ರಕ್ಕೆ ಯಾತ್ರೆ ಹೋಗಿ ಗಂಗೆಯಲ್ಲಿ ಸ್ನಾನ ಮಾಡಿ ಮಡಿಯಿಂದ ಶುದ್ಧ ಗಂಗಾಜಲವನ್ನು ಗೋಕರ್ಣ ಕ್ಷೇತ್ರಕ್ಕೆ ತಂದು ಅಲ್ಲಿಯ ಗೋಕರ್ಣೇಶ್ವರನಿಗೆ ಅಭಿಷೇಕ ಮಾಡುವ ಉದ್ದೇಶದಿಂದ ಒಂದು ಕಲಶದಲ್ಲಿ ತುಂಬಿಕೊಂಡು ಗೋಕರ್ಣದತ್ತ ಪ್ರಯಾಣಿಸತೊಡಗಿದನು.

ಪ್ರಯಾಣಿಸುತ್ತಾ ಈ ಗ್ರಾಮಕ್ಕೆ ಬಂದು ವಿಶ್ರಾಂತಿ ಪಡೆಯಲು ಊರ ಹತ್ತಿರದಲ್ಲಿರುವ ದಿಬ್ಬದ ಮೇಲೆ ಕಳಶವನ್ನು ಇಟ್ಟು ಮಲಗಿಕೊಂಡನು. ಆಗ ಬಾಯಾರಿಕೆಯಾದ ಕಾಗೆಯೊಂದು ಬಂದು ನೀರನ್ನು ಕುಡಿಯಲು ಹೋಗಿ ಕಲಶವನ್ನು ಉರುಳಿಸಿತು. ಆಗ ಬ್ರಾಹ್ಮಣನು ನಿದ್ರೆಯಿಂದೆದ್ದು, ನೋಡಲಾಗಿ ಸ್ವಲ್ಪವೂ ಗಂಗಾಜಲ ಇರಲಿಲ್ಲ. ದುಃಖಿತನಾಗಿ ಕುಶನು ರೋದಿಸತೊಡಗಿದ.

ಆಗ ಭಗವಂತನು ಪ್ರತ್ಯಕ್ಷನಾಗಿ ಬ್ರಾಹ್ಮಣನೇ ಈ ದಿಬ್ಬದ ಅಡಿಯಿಂದ ಗುಪ್ತವಾಗಿ ಗಂಗೆ ಹರಿದು ಹೋಗಿ ವರದಾ ನದಿಯನ್ನು ಸೇರುತ್ತಾಳೆ. ಅಲ್ಲಿಯೇ ಹೋಗಿ ಆ ಗಂಗೆಯ ನೀರನ್ನು ತುಂಬಿಕೊಂಡು ಹೋಗು ಎಂದು ಹೇಳಿ ಅದೃಶ್ಯನಾದನು.

ದಿಬ್ಬದಲ್ಲಿ ಚೆಲ್ಲಿದ ಕಲಶದ ಗಂಗೆಯ ನೀರು ವರದೆಗೆ ಸೇರಿದ ಜಾಗವನ್ನು ರಂಗಪ್ಪ ಹೊಳೆ ಎಂದು, ದಿಬ್ಬದಲ್ಲಿರುವ ಲಿಂಗರೂಪಿ ಶಿಲಾಮೂರ್ತಿಯನ್ನು ರಂಗನಾಥ ದೇವರೆಂದು ಹೇಳುತ್ತಾರೆ. ಕುಶನೆಂಬ ಬ್ರಾಹ್ಮಣನಿಂದ ಇಲ್ಲಿದ್ದ ಗುಪ್ತಗಾಮಿನಿ ಗಂಗೆ ಪ್ರಸಿದ್ಧಿಗೆ ಬಂದುದ್ದರಿಂದ ಕುಶನೂರು ಎಂದು ಕರೆಯಲಾಯಿತು. ನಂತರದ ಕಾಲ ಘಟ್ಟದಲ್ಲಿ ಕೂಸನೂರು ಆಯಿತು ಎಂದು ಗ್ರಾಮದ ಡಾ.ಸುನಿಲ್‌ ಹಿರೇಮಠ ಮತ್ತು ಗ್ರಾಮಸ್ಥರು ಹೇಳುತ್ತಾರೆ.

ಅಗ್ರಹಾರ:

‘ಕೂಸನೂರು ಒಂದು ಅಗ್ರಹಾರವಾಗಿತ್ತು. ಅಗ್ರಹಾರವೆಂದರೆ ವಿದ್ಯಾಕೇಂದ್ರ. ಕೂಸನೂರು ಅಗ್ರಹಾರಕ್ಕೆ ಒಳ್ಳೆಯ ಗುಣಾತ್ಮಕ ಶಿಕ್ಷಣಕ್ಕೆ ಹೆಸರುವಾಸಿಯಾಗಿತ್ತು. ಇಲ್ಲಿ ಅನೇಕ ವಿದ್ವಾಂಸರು ವಾಸವಾಗಿದ್ದರು. ಈ ಅಗ್ರಹಾರದಲ್ಲಿ ಕಟ್ಟಿ, ಅಡವಿ, ಉಪಾಧ್ಯಾಯ ಮನೆತನದವರು ವಿದ್ಯಾರ್ಜನೆಗೆ ಬಂದವರಿಗೆ ಗುರುಕುಲ ಮಾದರಿ ಶಿಕ್ಷಣ ನೀಡುತ್ತಿದ್ದರು’ ಎನ್ನುತ್ತಾರೆ ಸಾಹಿತಿ ಶಾಂತಾ ರಘೋತ್ತಮಾಚಾರ್‌. 

ಇಲ್ಲಿ ಭತ್ತ, ಗೋವಿನಜೋಳ, ಹತ್ತಿ ಪ್ರಮುಖ ಬೆಳೆಗಳು. ಬಾಳೆ, ಅಡಿಕೆ, ತೆಂಗು, ಮಾವು, ಚಿಕ್ಕು, ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಾ ಸಮೃದ್ಧ ಗ್ರಾಮವಾಗಿದೆ.

ಕಲಾ ಗ್ರಾಮ ‘ಕೂಸನೂರು’

ಕೂಸನೂರು ಗ್ರಾಮದವರಾದ ಜಯಾಚಾರ್ಯ ರಾಮಾಚಾರ್ಯ ಉಪಾಧ್ಯಾಯ ಅವರು ಬಸವೇಶ್ವರ ಭಾಗವತ ಕಥಾ ಮಂಡಳಿಯನ್ನು ಸ್ಥಾಪಿಸಿದರು. ಅವರು ಪ್ರದರ್ಶಿಸಿದ ಯಕ್ಷಗಾನ, ದೊಡ್ಡಾಟ, ಲವಕುಶರ ಕಾಳಗ, ಶಂಬರಾಸುರನ ಕಾಳಗ, ಕಾಲನೇಮಿ ಕಾಳಗ, ಕರ್ಣಾರ್ಜುನರ ಕಾಳಗ, ಕೃಷ್ಣಾರ್ಜುನರ ಕಾಳಗ ಹೀಗೆ 20ಕ್ಕೂ ಅಧಿಕ ದೊಡ್ಡಾಟಗಳು ವರ್ಷಕ್ಕೆ ಒಂದರಂತೆ ಪ್ರದರ್ಶನವಾಗುತ್ತಿದ್ದವು.

12-13ನೇ ಶತಮಾನಗಳಲ್ಲಿ ನಿರ್ಮಿಸಲಾದ ಈಶ್ವರ ಮತ್ತು ರಂಗವಿಠ್ಠಲ ದೇವಾಲಯ, ಬಸವೇಶ್ವರ ದೇವಾಲಯ, ದ್ಯಾಮವ್ವ ದೇವಿ ದೇವಾಲಯ, ವೀರಭದ್ರೇಶ್ವರ ದೇವಾಲಯಗಳು ಪ್ರಮುಖವಾಗಿವೆ. ತಾಲ್ಲೂಕು ಕೇಂದ್ರದಿಂದ 30 ಕಿ.ಮೀ ದೂರದಲ್ಲಿರುವ ಗ್ರಾಮ ಭೌಗೋಳಿಕವಾಗಿ 1158.25 ಹೇಕ್ಟರ್ ವಿಸ್ತೀರ್ಣ ಹೊಂದಿದ್ದು, ಕಪ್ಪು ಶಿಲೆಯನ್ನು ಹೊಂದಿದೆ. ಕಪ್ಪು ಮತ್ತು ಕೆಂಪು ಮಣ್ಣಿನ ಲಕ್ಷಣ ಹೊಂದಿದೆ. ಪಕ್ಕದಲ್ಲಿ ವರದಾ ನದಿ ಹರಿಯುತ್ತದೆ. ಮತ್ತಮ್ಮನಕಟ್ಟೆ, ಬೆಂಡಗೇರಿ ಕಟ್ಟಿ, ಹೊಲಗಟ್ಟಿ ಕೆರೆಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು