ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದಾಪುರ: ಮೊಣಕಾಲೂರಿ ಭಕ್ತರ ಅನುಗ್ರಹಿಸುವ ದೇವ!

ಪ್ರಕೃತಿ ಸೌಂದರ್ಯದ ನಡುವೆ ಇದೆ ಮಡಾಮಕ್ಕಿ ವೀರಭದ್ರ ಕ್ಷೇತ್ರ
Last Updated 24 ಜುಲೈ 2022, 7:12 IST
ಅಕ್ಷರ ಗಾತ್ರ

ಸಿದ್ದಾಪುರ: ಪಶ್ಚಿಮಘಟ್ಟಗಳ ರಮಣೀಯ ಪ್ರಕೃತಿ ಸೌಂದರ್ಯದ ನಡುವೆ ಇದೆ ಶ್ರೀಕ್ಷೇತ್ರ ಮಡಾಮಕ್ಕಿ. ಪಶ್ಚಿಮಘಟ್ಟಗಳ ತಪ್ಪಲಿನಿಂದ ಸುಮಾರು 5ಕಿ.ಮಿ ಅಂತರದಲ್ಲಿ ವೀರಭದ್ರನ ಕ್ಷೇತ್ರವಿದೆ. ಪ್ರಸ್ತುತ ಹೆಬ್ರಿ ತಾಲ್ಲೂಕಿಗೆ ಸೇರಿದೆ.

ಗರ್ಭಗುಡಿ ಬಯಸದೇ ಕಷ್ಟವೆಂದು ಬಂದಾಗ ಭಕ್ತಾದಿಗಳನ್ನು ನಿರಾಸೆಗೊಳಿಸದೆ ಇಷ್ಟಾರ್ಥ ಪೂರೈಸಿ, ಭಕ್ತರ ಹೃದಯಸಾಗರದಲ್ಲಿ ನೆಲೆನಿಂತ ದೇವ ವೀರಭದ್ರ. ಈ ಕ್ಷೇತ್ರ ಕಾರಣೀಕ, ಪವಿತ್ರ ಹಾಗೂ ಪುರಾತನವಾಗಿದೆ.

ದಕ್ಷಪ್ರಜಾಪತಿ ಯಾಗದ ಸಂದರ್ಭದಲ್ಲಿ ಯಾಗಶಾಲೆಯಲ್ಲಿ ಸತಿದೇವಿಗೆ ಗೌರವ ಸಿಗದೆ, ನಿರೀಶ್ವರ ಯಾಗ ಕೈಗೊಂಡ ತಂದೆಯ ಮೇಲೆ ಕುಪಿತಗೊಂಡು ಅಗ್ನಿಕುಂಡ ರಚಿಸಿ ಬೆಂಕಿಗಾಹುತಿಯಾಗುತ್ತಾಳೆ. ಇದರಿಂದ ಕುಪಿತನಾದ ಶಿವ ತಲೆಯ ಕೂದಲನ್ನು ನೆಲಕ್ಕೆ ಅಪ್ಪಳಿಸಿದಾಗ ಉದ್ಭವಿಸಿ, ದಕ್ಷನ ಸಂಹಾರ ಮಾಡಿದವನೇ ವೀರಭದ್ರ. ಯುಗಾಂತರದಲ್ಲಿ ಭಕ್ತರ ಭಕ್ತಿಗೆ ಮಣಿದು ಮೊಣಕಾಲೂರಿ ಭಕ್ತರನ್ನು ಉದ್ಧರಿಸಿದ ದೇವರು ಮಡಾಮಕ್ಕಿಯ ಶ್ರೀ ವೀರಭದ್ರಸ್ವಾಮಿ.

ಹಿನ್ನೆಲೆ: 2,000 ವರ್ಷಗಳ ಹಿಂದೆ ಈ ಪ್ರದೇಶವನ್ನು ಬಾರ್ಕೂರ ಸಂಸ್ಥಾನದವರು ಆಡಳಿತ ನಡೆಸುತ್ತಿದ್ದರು. ಮಡಾಮಕ್ಕಿ ಕ್ಷೇತ್ರವು ಋಷಿಗಳಿಂದ ಸ್ಥಾಪನೆಯಾದುದು ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿದೆ.

ವೀರಭದ್ರನು ರಕ್ಕಸರನ್ನು ಕೊಂದು ವಿಶ್ರಾಂತಿ ಪಡೆಯಲು ತನ್ನ ವಿಶಾಲವಾದ ಬಲತೋಳನ್ನು ಬಲಮಲೆಯಲ್ಲೂ, ಎಡತೋಳನ್ನು ಎಡಮಲೆಯಲ್ಲೂ ಇಡುತ್ತಾನೆ. ಅದುವೇ ಮುಂದೆ ಬೊಳ್ಮನೆ ಹಾಗೂ ಎಳ್ಮಲೆ ಎಂದು ಹೆಸರು ಪಡೆಯುತ್ತದೆ. ತಂತ್ರಿಗಳ ವಂಶದವರು ತುಂಬಾ ವರ್ಷಗಳಿಂದ ಪೂಜೆಯನ್ನು ಮಾಡುತ್ತಾ ಬಂದಿದ್ದು, ಈಗ ಮಂಜರ ವಂಶಸ್ಥರು ನಿರ್ವಹಿಸುತ್ತಿದ್ದಾರೆ.

ಮಡಾಮಕ್ಕಿಯ ವಿಶೇಷ: ಗುಡಿ ಇಲ್ಲದ ವೀರಭದ್ರಸ್ವಾಮಿ ಮೊಣಕಾಲೂರಿ (ಮಡವೂರಿದ ಸ್ಥಳವೇ ಮಡಾಮಕ್ಕಿ) ಭಕ್ತಸಮೂಹವನ್ನು ನೇರದೃಷ್ಠಿಯಿಂದ ನೋಡದೆ ದಿನನಿತ್ಯ ಅನುಗ್ರಹಿಸುತ್ತಾನೆ. ಇಲ್ಲಿ ದೇವರಿಗೆ ವೀರಭದ್ರನ ಮುಖವಾಡವಿದ್ದರೂ ಇಲ್ಲಿ ದೇವರ ನಿಜರೂಪ ಕಲ್ಲು. ಮೃತ್ಯುಕೆಯೇ(ಕಟ್ಟೆಯ ಮಣ್ಣು) ಇಲ್ಲಿನ ಗಂಧಪ್ರಸಾದ. ಒಳಗಡೆ ನಿಧಿ ಇರುವುದರಿಂದ ಶಾಸ್ತ್ರಕ್ಕೆ ಅನುಸಾರವಾಗಿ ಕಲೆಕೊಟ್ಟಿದ್ದಾರೆ.

ಬನಶಂಕರಿ, ಪಡಿಕಂತಾಯ ಪಂಚಮುಖನಂದಿ, ಚಿಕ್ಕು, ಯಕ್ಷಿ, ಹ್ಯಾಗುಳಿ, ಬೊಬ್ಬರ್ಯ, ಮಹಿಷಂತಾಯ, ನಾಗ, ಪಂಚಬೊಬ್ಬರ್ಯ, ಹುಲಿದೇವರು, ಕಲ್ಲುಕುಟಿಕ, ಖಡ್ಗರಾವಣ ಒಳ ಆವರಣದಲ್ಲಿ ರಾರಾಜಿಸುತ್ತಿದ್ದರೆ, ಕಲ್ಲುಕುಟಿಕ, ಪಡಿಘಂತಾಯ, ಪಂಜುರ್ಲಿ, ವರ್ತೆ, ಜುಮಾದಿ ದೈವಗಳು ಹೊರಾಂಗಣದಲ್ಲಿ ಭಕ್ತರ ರಕ್ಷಣೆ ಮಾಡುತ್ತಿದ್ದಾರೆ. ಮಕರಮಾಸ 25(ಫೆಬ್ರವರಿ 7 ಅಥವಾ 8) ರಂದು ಊರಿನ ಜಾತ್ರೆ ನಡೆಯುತ್ತದೆ.

ಗಂಡುಕತ್ರಿಯನ್ನು ಕುತ್ತಿಗೆಗೆ ಹಾಕಿಕೊಂಡು, ಕಬ್ಬಿಣದ ಮುಳ್ಳುಗಳಿರುವ ಪಾದುಕೆಯ ಪ್ರದಕ್ಷಿಣೆ ಸೇವೆ ಇಲ್ಲಿಯ ವಿಶೇಷತೆ. ಪರಿವಾರ ದೈವಗಳ ಕೋಲ, ನಾಗನಿಗೆ ಹಾಲಿಟ್ಟು ಸೇವೆ, ತುಲಾಭಾರ, ಕೆಂಡಸೇವೆ, ಅನ್ನದಾನ, ರಂಗಪೂಜೆ, ಡಮರುಸೇವೆ, ಹುಲಿದೇವರ ದರ್ಶನ ಸೇವೆಗಳು ಜಾತ್ರಾ ಸಂದರ್ಭದಲ್ಲಿ ನಡೆಯುತ್ತದೆ. ದೇವಳದಲ್ಲಿ ನಡೆಯುವ ದರ್ಶನ ಸೇವೆ ವಿಶಿಷ್ಟವಾದುದು. ವೀರಭದ್ರ ದರ್ಶನ ಪಾತ್ರಿ ಚೂಪಾದ ಕಬ್ಬಿಣದ ಪಾದುಕೆ ಧರಿಸಿ, ದೇವರ ಸುತ್ತು ಬರುವುದು ಆಕರ್ಷಣೆಯಾಗಿದೆ.

1989ರಲ್ಲಿ ಮಡಾಮಕ್ಕಿ ಮೇಳ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಿ. ಕೆ.ಬೋಜ ಶೆಟ್ಟಿ ಅವರ ಯಜಮಾನಿಕೆಯಲ್ಲಿ ಹೆಬ್ರಿ ಚಂದ್ರಶೇಖರ ಹೆಗ್ಡೆ ಮತ್ತು ಮಧುಕರ ಶೆಟ್ಟಿ ಇವರುಗಳ ಮಾರ್ಗದರ್ಶನಲ್ಲಿ ಯಕ್ಷಗಾನ ಮೇಳ ಆರಂಭವಾಗಿತ್ತು. ಸತತ 23 ವರ್ಷಗಳಿಂದ ಕ್ಷೇತ್ರದ ಭಜನಾಮಂಡಳಿಯು ಕೂಡ ಭಜನಾಸೇವೆ ಮಾಡುತ್ತಿರುವುದು ಇಲ್ಲಿನ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT