ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೇಮರಹಳ್ಳಿ: ವೈಭವದ ಜಾತ್ರೆಗೆ ಖ್ಯಾತಿ 300 ವರ್ಷ ಹಳೆಯ ಮಹದೇಶ್ವರ ದೇವಾಲಯ

ಲಿಂಗ ಉದ್ಭವಿಸಿದ ಜಾಗದಲ್ಲಿ 300 ವರ್ಷ ಹಳೆಯ ಮಹದೇಶ್ವರ ದೇವಾಲಯ
Last Updated 24 ಜುಲೈ 2022, 7:24 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಇಲ್ಲಿನ ಮಲೆ ಮಹದೇಶ್ವರಸ್ವಾಮಿ ದೇವಾಲಯ ದಲ್ಲಿ ಪ್ರತಿ ವರ್ಷ ಭೀಮನ ಅಮಾವಾಸ್ಯೆ ದಿನ ಅದ್ದೂರಿ ಜಾತ್ರೆ ನಡೆಯುತ್ತಿದ್ದು, 300 ವರ್ಷಗಳ ಸುದೀರ್ಘ ಇತಿಹಾಸವಿದೆ.

‘ದೇವಸ್ಥಾನಕ್ಕೆ ಸೇರಿದ ಸ್ಥಳದಲ್ಲಿ ಮೊದಲು ಸಂತೆ ನಡೆಯುತ್ತಿತ್ತು. ನಿರ್ದಿಷ್ಟ ಜಾಗದಲ್ಲಿ ಸಂತೆಗೆ ಬರುತ್ತಿದ್ದ ಹಸುಗಳ ಕೆಚ್ಚಲಿನಿಂದ ಹಾಲು ಕೆಳಕ್ಕೆ ಬೀಳುತ್ತಿತ್ತು. ಸ್ಥಳ ಪರಿಶೀಲಿಸಿದಾಗ ಲಿಂಗವೊಂದು (ಶಿವಲಿಂಗ) ಅಲ್ಲಿ ಉದ್ಭವವಾಗುತ್ತಿರುವುದು ಕಂಡು ಬಂದಿತ್ತು. ಗ್ರಾಮದ ಅಡ್ಡಾಡುತ್ತಿದ್ದ ಸಂತರೊಬ್ಬರು ಚಿಕ್ಕ ಗುಡಿ ನಿರ್ಮಿಸಿದರು. ಅದುವೇ ಈ ದೇವಾಲಯ’ ಎಂದು ದೇವಾಲಯದ ಇತಿಹಾಸವನ್ನು ಹೇಳುತ್ತಾರೆ ಇಲ್ಲಿನ ಗ್ರಾಮಸ್ಥರು.

‘ದಿನಗಳು ಮುಂದುವರಿದಂತೆ ದೇವಾಲಯದಲ್ಲಿ ಮಹದೇಶ್ವರ ಸ್ವಾಮಿ ರೂಪದಲ್ಲಿ ಪೂಜೆ ಪುನಸ್ಕಾರಗಳು ಹೆಚ್ಚಾದವು. ನಂತರ ಗುಡಿ ಗೋಪುರದೊಂದಿಗೆ ದೊಡ್ಡ ದೇವಸ್ಥಾನವನ್ನೇ ನಿರ್ಮಿಸಲಾಯಿತು’ ಎಂದು ವಿವರಿಸುತ್ತಾರೆ ಇಲ್ಲಿನ ಜನರು.

17 ವರ್ಷಗಳ ಹಿಂದೆ ಸ್ಥಳೀಯರೆಲ್ಲ ಸೇರಿ ದೇವಸ್ಥಾನದ ಹೆಸರಿನಲ್ಲಿಟ್ರಸ್ಟ್ ರಚಿಸಿದ್ದಾರೆ. ದೇವಸ್ಥಾನವನ್ನು ವಿಸ್ತಾರಗೊಳಿಸುವುದರ ಜತೆಗೆ ಕಳಶಾರೋಹಣ ಮಾಡಿದರು. ತಮಿಳನಾಡಿನಿಂದ ಶಿಲ್ಪಿಗಳನ್ನು ಕರೆತಂದು ಸುಂದರ ಗೋಪುರ ಕೆತ್ತಿಸಿದ್ದಾರೆ.

ಗೋಪುರದಲ್ಲಿ ಶಿವಪಾರ್ವತಿ ಕಲ್ಯಾಣ, ತ್ರಿಮೂರ್ತಿ, ವೀರಭದ್ರ, ಋಷಿಮುನಿ, ಬೇಡರಕಣ್ಣಪ್ಪ, ಯಡಿಯೂರು ಸಿದ್ದಲಿಂಗೇಶ್ವರ, ಬಸವೇಶ್ವರ ಮೂರ್ತಿ ಕೆತ್ತಲಾಗಿದೆ. ಗರ್ಭಗುಡಿಯಲ್ಲಿ ಶಿವಲಿಂಗದ ಜೊತೆಗೆ ಮಹದೇಶ್ವರ ಸ್ವಾಮಿ ವಿಗ್ರಹ ಇಡಲಾಗಿದೆ. ಮಹದೇಶ್ವರ ಶಿಷ್ಯರಾದ ಕಾರಯ್ಯ, ಬಿಲ್ಲಯ್ಯ ಮೂರ್ತಿ ದೇವಸ್ಥಾನದ ಎಡ ಹಾಗೂ ಬಲ ಭಾಗದಲ್ಲಿ ನಿಲ್ಲಿಸಲಾಗಿದೆ. ದೇವಸ್ಥಾನದ ಮುಂಭಾಗ ಮಹದೇಶ್ವರ, ಶಿವ ಪಾರ್ವತಿ ಹಾಗೂ ವಿಘ್ನೇಶ್ವರ ಮೂರ್ತಿ ಕೆತ್ತಲಾಗಿದೆ. ಮುಖ್ಯದ್ವಾರದ ಮೇಲೆ ಬೃಹತ್ ಗಾತ್ರದ ಬಸವಮೂರ್ತಿ ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನದ ಮುಂದೆ 30 ಅಡಿ ಎತ್ತರದ ಗರುಡಗಂಭವೂ ಇದೆ. ದೇವಸ್ಥಾನಕ್ಕೆ ಪ್ರವೇಶಿಸುವ ಬಲ ಭಾಗದಲ್ಲಿ ನವಗ್ರಹ ಪ್ರತಿಷ್ಠಾಪಿಸಲಾಗಿದೆ.

ಅಮಾವಾಸ್ಯೆ ವಿಶೇಷ:ಪ್ರತಿ ತಿಂಗಳ ಅಮಾವಾಸ್ಯೆಯಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ. ಅಂದು ಸುತ್ತಲಿನ ಗ್ರಾಮ ಹಾಗೂ ತಾಲ್ಲೂಕುಗಳಿಂದ ಸಾವಿರಾರು ಭಕ್ತಾದಿಗಳು ಬರುತ್ತಾರೆ. ಎಲ್ಲರಿಗೂ ಪ್ರಸಾದ ವಿನಿಯೋಗ ನಡೆಯುತ್ತದೆ. ಸೋಮವಾರ ಹಾಗೂ ಶುಕ್ರವಾರದಂದೂ ಪೂಜಾ ಕಾರ್ಯಗಳು ನಡೆಯುತ್ತವೆ.

ಪ್ರತಿ ವರ್ಷ ಭೀಮನ ಅಮಾವಾಸ್ಯೆ ಇಲ್ಲಿ ಅದ್ದೂರಿಯಾಗಿ ಜಾತ್ರೆ ನಡೆಯುತ್ತದೆ.ಅಂದು ಮುಂಜಾನೆ ಮಹದೇಶ್ವರ ಸ್ವಾಮಿ ವಿಗ್ರಹಕ್ಕೆ ವಿವಿಧ ಅಭಿಷೇಕಗಳನ್ನು ನಡೆಸಲಾಗುತ್ತದೆ. ದೇವಸ್ಥಾನದ ಸುತ್ತ ಹುಲಿ ವಾಹನೋತ್ಸವ ನಡೆಸಿದ ನಂತರ ಭಕ್ತರು ದೇವರ ದರ್ಶನ ಪಡೆಯಲು ಅವಕಾಶ ಮಾಡಿಕೊಡಲಾಗುತ್ತದೆ. ವಿವಿಧ ಮಠಾದೀಶರು ಆಗಮಿಸಿ ದಾಸೋಹಕ್ಕೆ ಪೂಜೆ ಸಲ್ಲಿಸಿ ಅನ್ನ ಸಂತರ್ಪಣೆ ಕಾರ್ಯಕ್ಕೆ ಚಾಲನೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT