ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿ: ಭಾವೈಕ್ಯದ ತೊಟ್ಟಿಲು

Last Updated 4 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ಕ್ರಿಸ್ತಪೂರ್ವ ಶಕದಿಂದಲೂ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡ ಕಲಬುರಗಿಯು ಇತಿಹಾಸದಲ್ಲಿ ಚಿರಸ್ಥಾಯಿಯಾದ ಸ್ಥಾನವನ್ನು ಪಡೆದುಕೊಂಡಿದೆ. ಬೌದ್ಧರು, ಜೈನರು, ಮಾಧ್ವರು, ಶೈವರು, ಸಂತರು, ಶರಣರು, ಸೂಫಿಗಳು, ತತ್ವಪದಕಾರರು ನಡೆದಾಡಿದ ಈ ಭೂಮಿಯು ಹಲವು ರಾಜಮನೆತನಗಳಿಗೆ ರಾಜಧಾನಿಯಾಗಿದ್ದ ಶ್ರೀಮಂತ ಪರಂಪರೆಯನ್ನೂ ತನ್ನೊಡಲಲ್ಲಿ ಕಾಪಿಟ್ಟುಕೊಂಡಿದೆ.

ಜಿಲ್ಲೆಯ ಸನ್ನತಿಯಲ್ಲಿ ಕ್ರಿಸ್ತಪೂರ್ವ 3ನೇ ಶತಮಾನದಿಂದ ಕ್ರಿಸ್ತ ಶಕ 3ನೇ ಶತಮಾನದವರೆಗೆ ಮೌರ್ಯರು, ಶಾತವಾಹನರು ಬೌದ್ಧ ಧರ್ಮದ ಪ್ರಚಾರಾರ್ಥವಾಗಿ ಇಲ್ಲಿ ಬೌದ್ಧ ಸ್ತೂಪಗಳನ್ನು ನಿರ್ಮಿಸಿದ್ದರು. ಅದಕ್ಕೂ ಮುನ್ನ ಶೈವರು, ಕಾಪಾಲಿಕರು ಇಲ್ಲಿ ನೆಲೆಸಿದ್ದರು ಎಂಬುದನ್ನು ಪುರಾತತ್ವ ತಜ್ಞರು ಗುರುತಿಸಿದ್ದಾರೆ.

ಮಡಿಕೆ, ಕುಡಿಕೆಗಳ ಕೈಗಾರಿಕೆ: ಜಗತ್ತಿನ ನೂರಾರು ನಾಗರಿಕತೆಗಳು ಬೆಳೆದಿದ್ದು ನದಿ ತೀರದಲ್ಲಿಯೇ ಎಂಬುದು ಸರ್ವವಿದಿತ. ಇಲ್ಲಿಯ ಜೀವನಾಡಿಯಾದ ಭೀಮೆಯ ತೀರದಲ್ಲೇ ಮೌರ್ಯರು, ಶಾತವಾಹನರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು ನೆಲೆಗೊಂಡಿದ್ದರು. ನಂತರ ಬಂದ ಬಹಮನಿ ಸುಲ್ತಾನರು ಸಹ ಭೀಮೆಗೆ ಸಮೀಪದಲ್ಲಿಯೇ ತಮ್ಮ ನೆಲೆಯನ್ನು ಕಂಡುಕೊಂಡಿದ್ದರು.

ಚಿತ್ತಾಪುರ ತಾಲ್ಲೂಕಿನ ಸನ್ನತಿ, ಕನಗನಹಳ್ಳಿ, ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಸೇರಿದಂತೆ ಹಲವು ಗ್ರಾಮಗಳು ಕ್ರಿಸ್ತಶಕ 3ನೇ ಶತಮಾನದಲ್ಲಿಯೇ ಗುಡಿ ಕೈಗಾರಿಕೆಯಿಂದಾಗಿ ಗುರುತಿಸಿಕೊಂಡಿದ್ದವು. ಇಲ್ಲಿ ತಯಾರಾಗುವ ಗಡಿಗೆ, ಮಡಿಕೆಗಳನ್ನು ಉತ್ತರ ಭಾರತಕ್ಕೆ ಪೂರೈಸಲಾಗುತ್ತಿತ್ತು ಎಂಬ ಬಗ್ಗೆ ಉಲ್ಲೇಖಗಳಿವೆ.

ಭೀಮಾ, ಕಾಗಿಣಾ, ಅಮರ್ಜಾ, ರೌದ್ರಾವತಿ, ಕಮಲಾವತಿ ನದಿಗಳ ದೆಸೆಯಿಂದಾಗಿ ಇಲ್ಲಿ ಆದಿಕಾಲದಿಂದಲೂ ಕೃಷಿ ಚಟುವಟಿಕೆ ಸಮೃದ್ಧವಾಗಿ ನಡೆದುಕೊಂಡು ಬಂದಿದೆ.

ತೊಗರಿ, ಹತ್ತಿ ಮುಂತಾದ ವಾಣಿಜ್ಯ ಬೆಳೆಗಳು ಶತಮಾನಗಳ ಹಿಂದೆಯೇ ಕಲಬುರಗಿ ಸೀಮೆಯೊಂದಿಗೆಮಿಳಿತಗೊಂಡಿವೆ.

ಇಲ್ಲಿನ ಕಲ್ಲುಗಳನ್ನು ಬಳಸಿ ಬೌದ್ಧ ಸ್ತೂಪಗಳು, ಬುದ್ಧನ ಪ್ರತಿಮೆಗಳು, ರಾಜ, ರಾಣಿಯರ ಶಿಲ್ಪಗಳನ್ನು ಕೆತ್ತಿದಂತೆಯೇ ರಾಷ್ಟ್ರಕೂಟರ ರಾಜಧಾನಿಯಾಗಿ ಕನ್ನಡಿಗರ ಹೆಮ್ಮೆಯ ಮಳಖೇಡ ಕೋಟೆಯನ್ನು ಸ್ಥಳೀಯವಾಗಿ ಲಭ್ಯವಾದ ಫರಸಿ ಕಲ್ಲುಗಳಿಂದಲೇ ನಿರ್ಮಿಸಲಾಗಿದೆ.

ಕ್ರಿಸ್ತ ಪೂರ್ವ ಕಾಲದಿಂದ ಬುದ್ಧನ ನೆಲೆಯಾಗಿರುವ ಕಲಬುರಗಿಯು ನಂತರ 10ನೇ ಶತಮಾನದಲ್ಲಿ ಜೈನರಿಗೆ ನೆಲೆಯೊದಗಿಸಿತ್ತು. ರಾಷ್ಟ್ರಕೂಟ ಅರಸ ಅಮೋಘವರ್ಷ ನೃಪತುಂಗನು ಜೈನ ಧರ್ಮಕ್ಕೆ ರಾಜಾಶ್ರಯ ನೀಡಿದ. ಹೀಗಾಗಿ, ಜಿಲ್ಲೆಯ ಸೇಡಂ, ಕಾಳಗಿ, ಚಿತ್ತಾಪುರ ಭಾಗದಲ್ಲಿ ಜಿನಾಲಯಗಳು, ಬಸದಿಗಳು ನಿರ್ಮಾಣಗೊಂಡಿವೆ. ಮಳಖೇಡ (ಮಾನ್ಯಖೇಟ)ದಲ್ಲಿಯೇ ಜೈನ ಬಸದಿ ಇಂದಿಗೂ ಸುಸ್ಥಿತಿಯಲ್ಲಿದೆ. ನೃಪತುಂಗನ ದಂಡನಾಯಕರಾದ ಬಂಕೇಶ, ಲೋಕಾದಿತ್ಯರು ಹಲವು ಕಡೆಗಳಲ್ಲಿ ಜೈನ ಬಸದಿಗಳನ್ನು ನಿರ್ಮಿಸಿದರು.

12ನೇ ಶತಮಾನದಲ್ಲಿ ಕಲ್ಯಾಣದ ಕಲಚೂರಿ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನವರ ನೇತೃತ್ವದಲ್ಲಿ ನಡೆದ ವಚನ ಚಳವಳಿಯಿಂದಾಗಿ ದೇಶದ ವಿವಿಧ ಭಾಗಗಳಿಂದ ಶರಣರು ಕಲ್ಯಾಣಕ್ಕೆ ಬರಲಾರಂಭಿಸಿದರು. ಅಲ್ಲಮಪ್ರಭು ನೇತೃತ್ವದಲ್ಲಿ ನಡೆಯುತ್ತಿದ್ದ ಅನುಭವ ಮಂಟಪದ ಚರ್ಚೆಗಳಲ್ಲಿ ಭಾಗವಹಿಸಲು ಸಾವಿರಾರು ಶರಣರು ಕಲಬುರಗಿ ಮಾರ್ಗದಲ್ಲಿಯೇ ಕಲ್ಯಾಣಕ್ಕೆ ಪ್ರಯಾಣ ಬೆಳೆಸಿದರು. ಮಧುವರಸ–ಹರಳಯ್ಯನ ಮಕ್ಕಳಿಗೆ ಬಸವಣ್ಣನವರು ಅಂತರ್ಜಾತಿ ವಿವಾಹ ಮಾಡಿದ ಬಳಿಕ ಕಲ್ಯಾಣದಲ್ಲಿ ಭಾರಿ ವಿಪ್ಲವ ಸಂಭವಿಸಿತು. ಆ ಸಂದರ್ಭದಲ್ಲಿ ಶರಣರ ಕಗ್ಗೊಲೆ ನಡೆಯಿತಲ್ಲದೇ, ಅಪಾರ ಪ್ರಮಾಣದ ವಚನಗಳನ್ನು ಸುಟ್ಟು ಹಾಕುವ ಯತ್ನವೂ ನಡೆಯಿತು. ಈ ಸಂದರ್ಭದಲ್ಲಿ ವಚನಗಳ ಕಟ್ಟನ್ನು ಹೊತ್ತು ಬಸವಣ್ಣನವರ ಅಳಿಯ ಚನ್ನಬಸವಣ್ಣನವರ ನೇತೃತ್ವದಲ್ಲಿ ಹಲವಾರು ಶರಣರು ಕಲಬುರಗಿಯ ಹಲವು ಗ್ರಾಮಗಳಲ್ಲಿ ತಂಗಿದ್ದರು ಎಂಬ ಪ್ರತೀತಿ ಇದೆ.

ಕಲ್ಯಾಣದ ಹಲವು ಘಟನೆಗಳೊಂದಿಗೆ ಸಂಬಂಧ ಹೊಂದಿದ ಹಲವು ಗ್ರಾಮಗಳು ಕಲಬುರಗಿಯಲ್ಲಿವೆ. ವಚನಕಾರ ಜೇಡರ ದಾಸಿಮಯ್ಯ ಜಿಲ್ಲೆಯ ಮುದೇನೂರ ಗ್ರಾಮದವರು. ಹರಳಯ್ಯ–ಕಲ್ಯಾಣಮ್ಮ ದಂಪತಿ ಶರಣು ಎಂದಾಗ ಪ್ರತಿಯಾಗಿ ಬಸವಣ್ಣನವರು ಶಿರಬಾಗಿ ಶರಣು ಶರಣಾರ್ಥಿ ಎಂದರು. ಇದರಿಂದ ರೋಮಾಂಚನಗೊಂಡ ದಂಪತಿ ತಮ್ಮ ತೊಡೆಯ ಚರ್ಮದಿಂದ ಕತ್ತರಿಸಿ ತಯಾರಿಸಿದ ಚಮ್ಮಾವುಗೆಗಳನ್ನು ಬಸವಣ್ಣನವರಿಗೆ ಕೊಡಲು ಮುಂದಾಗುತ್ತಾರೆ. ಆ ಚಮ್ಮಾವುಗೆಗಳು ಇಂದಿಗೂ ಸೇಡಂ ತಾಲ್ಲೂಕಿನ ಬಿಜನಳ್ಳಿ ಗ್ರಾಮದಲ್ಲಿ ಸುರಕ್ಷಿತವಾಗಿವೆ. ಬಸವಣ್ಣನವರಿಂದ ಸ್ಥಾಪಿತವಾದ ಲಿಂಗಾಯತ ಧರ್ಮವೂ 12ನೇ ಶತಮಾನದಿಂದಲೇ ನೆಲೆಯೂರಿದೆ.

ಬಹಮನಿ ಸುಲ್ತಾನರ ಆಳ್ವಿಕೆಯ ಸಂದರ್ಭದಲ್ಲಿ ಇಲ್ಲಿ ಸೂಫಿ ಪರಂಪರೆ ಬೆಳೆದು ಬಂತು. ಪ್ರತಿ ವರ್ಷ ನಡೆಯುವ ಖಾಜಾ ಬಂದಾನವಾಜರ ಉರುಸ್ ಸಂದರ್ಭದಲ್ಲಿ ಮಧ್ಯ ಪ್ರಾಚ್ಯ ದೇಶಗಳಿಂದ ಸಾವಿರಾರು ಅನುಯಾಯಿಗಳು ಬಂದಾನವಾಜ್ ದರ್ಗಾದತ್ತ ಮುಖ ಮಾಡುತ್ತಾರೆ. ಮುಸ್ಲಿಮರಷ್ಟೇ ಅಲ್ಲದೇ ಹಿಂದುಗಳೂ ಈ ದರ್ಗಾಕ್ಕೆ ನಡೆದುಕೊಳ್ಳುತ್ತಾರೆ. ಹೀಗಾಗಿ, ಇಲ್ಲಿನ ದರ್ಗಾ ಮತ್ತು ಶರಣಬಸವೇಶ್ವರ ದೇವಸ್ಥಾನಗಳು ಸೌಹಾರ್ದ ಹಾಗೂ ದಾಸೋಹ ಪರಂಪರೆಯ ಪ್ರತೀಕವಾಗಿವೆ.

ಕಲಬುರಗಿಯ ಐತಿಹಾಸಿಕ ಖಾಜಾ ಬಂದಾನವಾಜ್ ದರ್ಗಾ
ಕಲಬುರಗಿಯ ಐತಿಹಾಸಿಕ ಖಾಜಾ ಬಂದಾನವಾಜ್ ದರ್ಗಾ

ಸೂಫಿಗಳಂತೆ ಇಲ್ಲಿ ನೆಲೆಗೊಂಡು ತಮ್ಮ ಅನುಭಾವವನ್ನು ಭಕ್ತರಿಗೆ ಮುಟ್ಟಿಸಿದವರು ತತ್ವಪದಕಾರರು. ಕಡಕೋಳ ಮಡಿವಾಳಪ್ಪ, ಚನ್ನೂರ ಜಲಾಲಸಾಬ್, ಮೈಲಾರ ಬಸವಲಿಂಗ ಶರಣರು, ಕೂಡಲೂರು ಬಸವಲಿಂಗ ಶರಣರು, ಖೈನೂರ ಕೃಷ್ಣಪ್ಪ, ರಾಮಪುರ ಬಕ್ಕಪ್ಪ, ಮೋಟ್ನಳ್ಳಿ ಹಸನಸಾಬ್‌, ಜಂಬಗಿ ಶರಣರು, ಖಾದರಿ ಪೀರಾ ಜನರಾಡುವ ಭಾಷೆಯಲ್ಲಿ ಜೀವನಾನುಭವವನ್ನು ತಿಳಿಸಿದವರು.

ಮಾಧ್ವ ಸಂಪ್ರದಾಯವೂ ಜಿಲ್ಲೆಯಲ್ಲಿ ನೆಲೆಯೂರಿದ್ದು, ಕಾಗಿಣಾ ನದಿಯ ತಟದಲ್ಲಿರುವ ಮಳಖೇಡದ ಉತ್ತರಾದಿಮಠವು ಜಿಲ್ಲೆಯ ಪ್ರಮುಖ ಮಾಧ್ವಕೇಂದ್ರವಾಗಿದೆ.

ಬದಲಾದ ಕಾಲಘಟ್ಟದಲ್ಲಿ ಕಲಬುರಗಿಯು ಹೇಗೆ ಹಲವು ಮತ–ಪಂಥಗಳನ್ನು ಪೋಷಿಸಿತ್ತೋ ಅದೇ ರೀತಿ ಭಾಷೆಗಳನ್ನೂ ಪೋಷಿಸಿದೆ. ಕನ್ನಡ ಭಾಷೆಯ ಜೊತೆಗೆ ಇಲ್ಲಿ ಉರ್ದು, ಪರ್ಷಿಯನ್‌, ತೆಲುಗು, ಮರಾಠಿ ಪ್ರಭಾವವೂ ಇದೆ. ಆಳಂದ ಭಾಗವು ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿದ್ದರಿಂದ ಕನ್ನಡದೊಂದಿಗೆ ಮರಾಠಿ, ಚಿಂಚೋಳಿ, ಸೇಡಂ ತೆಲಂಗಾಣದೊಂದಿಗೆ ಗಡಿ ಹೊಂದಿರುವುದರಿಂದ ಕನ್ನಡದ ಜೊತೆಗೆ ತೆಲುಗು ಮಾತನಾಡುವವರೂ ಇದ್ದಾರೆ. ಒಟ್ಟಾರೆ ಇಲ್ಲಿನ ಬಹುತೇಕ ಜನರು ಎರಡು–ಮೂರು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ!

ಎಷ್ಟೇ ಆಗಲಿ ಕಲಬುರಗಿಯು ‘ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’ ಎಂದು ದಾಖಲಿಸಲಾದ ಕವಿರಾಜ ಮಾರ್ಗದ ಕೃತಿಕಾರ ಅಮೋಘವರ್ಷ ನೃಪತುಂಗನ ನಾಡಲ್ಲವೇ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT