ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತುಗಳಿಗೆ ಪ್ರಸಿದ್ಧಿಯಾಗಿದ್ದ ಯತ್ತಿನಹಳ್ಳಿ

ಭಕ್ತರನ್ನು ಸೆಳೆಯುವ ಸಕ್ಕರಿ ಬಸವಣ್ಣನ ದೇಗುಲ: ಭಕ್ತರ ದೇಣಿಗೆಯಿಂದ ನಿರ್ಮಾಣವಾದ ದೇವಸ್ಥಾನಗಳು
Last Updated 4 ಜೂನ್ 2022, 19:30 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನ ಯತ್ತಿನಹಳ್ಳಿ ಗ್ರಾಮವು ಕೃಷಿ ಪ್ರಧಾನ ಗ್ರಾಮವಾಗಿದ್ದು, ಇಲ್ಲಿ ಹೆಚ್ಚು ಸೀಮೆ ಎತ್ತುಗಳು, ಕಿಲಾರಿ, ಗಿಡ್ಡ ತಳಿಯ ಎತ್ತುಗಳನ್ನು ಸಾಕುತ್ತಿದ್ದರು. ರಾಣೆಬೆನ್ನೂರಿನ ಜಾನುವಾರು ಮಾರುಕಟ್ಟೆಯಲ್ಲಿ ಯತ್ತಿನಹಳ್ಳಿ ಎತ್ತುಗಳಿಗೆ ಬೇಡಿಕೆ ಇತ್ತು. ಅದಕ್ಕಾಗಿ ಯತ್ತಿನಹಳ್ಳಿ ಎಂದು ಕರೆಯುತ್ತಿದ್ದಾರೆ ಎಂದು ಇಲ್ಲಿನ ಹಿರಿಯರು ಹೇಳುತ್ತಾರೆ.

ಇಲ್ಲಿ ಸಕ್ಕರಿ ಬಸವೇಶ್ವರ ದೇವಸ್ಥಾನ ಪ್ರಮುಖವಾಗಿದೆ. ಯತ್ತಿನಹಳ್ಳಿ ಎಂದರೆ ತಟ್ಟನೆ ನೆನಪಿಗೆ ಬರುವುದು ಸಕ್ಕರಿ ಬಸವೇಶ್ವರ ದೇವಸ್ಥಾನ. 1988ರಲ್ಲಿ ಸರ್ಕಾರದ ಯಾವುದೇ ಅನುದಾನ ಪಡೆಯದೇ ಗ್ರಾಮಸ್ಥರು ಮತ್ತು ಭಕ್ತರಿಂದ ದೇಣಿಗೆ ಸಂಗ್ರಹಿಸಿ ಕಲ್ಲಿನ ಶಿಲೆಯಿಂದ ದೇವಸ್ಥಾನ ನಿರ್ಮಿಸಿದ್ದಾರೆ.

ಶಿವರಾತ್ರಿಯಲ್ಲಿ ಹಿರೆಕುರುವತ್ತಿ ಬಸವಣ್ಣನ ಜಾತ್ರೆಗೆ ಹೋಗುವ ಭಕ್ತರು ಹಿಂದಿನ ದಿನವೇ ಬಂದು ಉಳಿದುಕೊಂಡು ಸಕ್ಕರಿ ಬಸವೇಶ್ವರ ಹಾಗೂ ಭರಮದೇವರಿಗೆ ಪೂಜೆ ಸಲ್ಲಿಸಿ ಹೋಗುತ್ತಾರೆ ಎನ್ನುತ್ತಾರೆ ದೇವಸ್ಥಾನದ ಅರ್ಚಕ ಸಿದ್ದಪ್ಪ ಮಹಾದೇವಪ್ಪ ಪೂಜಾರ.

ಪ್ರತಿವರ್ಷ ಬಸವಜಯಂತಿಯಲ್ಲಿ ಸಕ್ಕರೆ ಬಸವೇಶ್ವರ ಸ್ವಾಮಿ ದೇವರ ಮೂರ್ತಿಗೆ ಪೂಜೆ ಸಲ್ಲಿಸುತ್ತಾರೆ. ಸಕ್ಕರಿ ಬಸವೇಶ್ವರ ಮೂರ್ತಿಗೆ ಮೆದು ಸಕ್ಕರೆಯಿಂದ ವಿಶೇಷ ಪೂಜೆ ಸಲ್ಲಿಸುತ್ತಾರೆ. ನಂತರ ಪಾರ್ವತಿ ಪರಮೇಶ್ವರ ಮೂರ್ತಿಯನ್ನು ಬಂಡಿಯಲ್ಲಿ ಕುಳ್ಳಿರಿಸಿಕೊಂಡು ಹುಚ್ಚಯ್ಯನ ತೇರು ಎಳೆಯುತ್ತಾರೆ. ನಂತರ ಓಕುಳಿ, ರಾತ್ರಿ ಎತ್ತುಗಳ ಮೆವರಣಿಗೆ ನಡೆಯುತ್ತದೆ ಎನ್ನುತ್ತಾರೆ ಚನ್ನಬಸಪ್ಪ ಮಾಚೇನಹಳ್ಳಿ.

ಗ್ರಾಮದ ಭರಮದೇವರ ಗುಡಿ, ಅರಳೀಕಟ್ಟಿ, ಹನುಮಂತ ದೇವರ ಹಾಗೂ ಕರಿಯಮ್ಮದೇವಿ ದೇವಸ್ಥಾನವನ್ನು ಗ್ರಾಮಸ್ಥರೇ ಹಣ ಹಾಕಿ ದೇವಸ್ಥಾನ ನಿರ್ಮಿಸಿದ್ದಾರೆ. ಈಶ್ವರ ದೇವಸ್ಥಾನವನ್ನು ಸರ್ಕಾರದ ಅನುದಾನ ಮತ್ತು ಭಕ್ತರಿಂದ ದೇಣಿಗೆ ಸಂಗ್ರಹಿಸಿ ನಿರ್ಮಿಸಲಾಗಿದೆ.

‘ಮಾಯಮ್ಮ ದೇವಿ, ಚೌಡಮ್ಮದೇವಿಯ ದೇವಸ್ಥಾನಗಳ ಜೀರ್ಣೋದ್ಧಾರ, ಮಾಯಮ್ಮ ಗುಂಡಿ ಬಳಿ ಸೇತುವೆ ನಿರ್ಮಾಣ, ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಶಾಸಕರ ಗಮನಕ್ಕೆ ತರಲಾಗಿದ್ದು, ಕ್ರಿಯಾಯೋಜನೆಯಲ್ಲಿ ಸೇರಿಸಲಾಗುವುದು’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ರುದ್ರೇಶ ಮೂಲಿಮನಿ.

ನೀರಾವರಿಯಿಂದ ನೆಮ್ಮದಿ:

ಇಲ್ಲಿನ ಜನತೆ ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಮತ್ತು ಅಸುಂಡಿ ನಾಲಾ ಯೋಜನೆಯ ಕಾಲುವೆಯಿಂದ ನೀರಾವರಿ ಮಾಡುತ್ತಾರೆ. ನೀರಾವರಿ ಬಂದ ಮೇಲೆ ಆರ್ಥಿಕವಾಗಿ ಸ್ವಲ್ಪ ಚೇತರಿಸಿಕೊಂಡಿದೆ. ಗ್ರಾಮದ ಸಮೀಪ ದೊಡ್ಡ ಹಳ್ಳ ವರ್ಷ ವಿಡೀ ಹರಿಯುತ್ತದೆ. ಈ ಹಳ್ಳಕ್ಕೆ ಅಲ್ಲಲ್ಲಿ ಬಾಂದಾರ ನಿರ್ಮಿಸಿದರೆ ಈ ಭಾಗದ ರೈತರ ಜಮೀನುಗಳಿಗೆ ನೀರಾವರಿ ಹೆಚ್ಚಿಸಲು ಅನುಕೂಲವಾಗಲಿದೆ.

ದಿಂಡಲ ಹಳ್ಳದ ಸಮೀಪ 20 ಎಕರೆಗೂ ಹೆಚ್ಚು ವಿಸ್ತಾರವಾದ ಕೆರೆ ಇದೆ. ಈ ಹಿಂದೆ 1992ರಲ್ಲಿ ಮಹಾಪೂರ ಬಂದಾಗ ಕೆರೆ ಕೋಡಿ ಒಡೆದು ಹೋಗಿದೆ. ಅಲ್ಲಿಂದ ಈವರೆಗೂ ಕೆರೆ ಅಭಿವೃದ್ಧಿ ಕಂಡಿಲ್ಲ. ಈ ಕೆರೆಯನ್ನು ಅಭಿವೃದ್ಧಿಪಡಿಸಬೇಕು ಎನ್ನುತ್ತಾರೆ ರೈತ ಮುಖಂಡ ಭರಮಡ್ಡಿ ದೇವರಡ್ಡಿ ಹಾಗೂ ಚಂದ್ರಯ್ಯ ಹಿರೇಮಠ.

ಸಾಮರಸ್ಯದ ಪ್ರತೀಕ:

ಯತ್ತಿನಹಳ್ಳಿ ಗ್ರಾಮದಲ್ಲಿ ಒಂದು ಮಸೂತಿ ಮತ್ತು ಗೋರಿ ಇದೆ. ಮುಸ್ಲಿಂ ಮನೆತನದ ಎರಡು ಕುಟುಂಬಗಳು ಮಾತ್ರ ಇದ್ದು, ಹಿಂದೂಗಳೆಲ್ಲರೂ ಒಟ್ಟಾಗಿ ಮೊಹರಂ ಅನ್ನು ಸಾಮರಸ್ಯದಿಂದ ಆಚರಿಸಲಾಗುತ್ತದೆ ಎನ್ನುತ್ತಾರೆ ವಕೀಲ ಶಿವಪ್ಪ ಕುರುವತ್ತಿ ಹಾಗೂ ಮಂಜಪ್ಪ ಗುಜಲರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT