ಕಸ್ತೂರು: ವಿಜೃಂಭಣೆಯ ಚಿಕ್ಕ ಜಾತ್ರೆ

7
ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿ, ನೂರಾರು ಜನರಿಂದ ದೇವಿ ದರ್ಶನ

ಕಸ್ತೂರು: ವಿಜೃಂಭಣೆಯ ಚಿಕ್ಕ ಜಾತ್ರೆ

Published:
Updated:
Prajavani

ಸಂತೇಮರಹಳ್ಳಿ: ಕಸ್ತೂರು ಗ್ರಾಮದ ಹೊರ ವಲಯದಲ್ಲಿರುವ ದೊಡ್ಡಮ್ಮ ತಾಯಿ ದೇವಸ್ಥಾನದ ಚಿಕ್ಕ ಜಾತ್ರೆ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ಬಂಡಿ ಜಾತ್ರೆಯ ವಾರದ ನಂತರ ನಡೆದ ಈ ಜಾತ್ರೆ ಮರಿ ಜಾತ್ರೆ ಎಂದೇ ಖ್ಯಾತಿ. ಇದರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಾರೆ. ಒಂದರ್ಥದಲ್ಲಿ ಇದು ಮಹಿಳೆಯರಿಗಾಗಿಯೇ ಇರುವ ಜಾತ್ರೆ.

ಈ ವಿಶೇಷ ಜಾತ್ರೆಯಲ್ಲಿ ಬಂಡಿ ಉತ್ಸವ ಆಚರಿಸಿದ 16 ಗ್ರಾಮಗಳ 23 ಹಳ್ಳಿಗಳ ಮಹಿಳೆಯರು ದೇವಸ್ಥಾನದಲ್ಲಿ ಒಂದೆಡೆ ಸೇರಿ  ದೇವಿಗೆ ತಮ್ಮ ಭಕ್ತಿ ಭಾವ ಸಮರ್ಪಿಸಿದರು.

ಬಂಡಿ ಉತ್ಸವದ ಸಂದರ್ಭದಲ್ಲಿ ಬಹುತೇಕ ಮನೆಗಳಲ್ಲಿ ಮಹಿಳೆಯರು ಅತಿಥಿಗಳ ಸತ್ಕಾರದಲ್ಲಿ ತೊಡಗುವುದರಿಂದ ಜಾತ್ರೆಗೆ ಬರುವುದಿಲ್ಲ. ಹಾಗಾಗಿ, ಅವರೆಲ್ಲ ಚಿಕ್ಕ ಜಾತ್ರೆಯಂದು ದೇವಸ್ಥಾನಕ್ಕೆ ಬಂದು ದೊಡ್ಡಮ್ಮ ತಾಯಿಯ ದರ್ಶನ ಪಡೆದು ನಂಬಿದ ಹರಕೆಗಳನ್ನು ತೀರಿಸುತ್ತಾರೆ. 

ಕಸ್ತೂರು, ಭೋಗಾಪುರ, ಮರಿಯಾಲ, ಮರಿಯಾಲ ಹುಂಡಿ, ಕಿರಗಸೂರು, ಸಪ್ಪಯ್ಯನಪುರ, ಕೆಲ್ಲಂಬಳ್ಳಿ, ಮೂಕಹಳ್ಳಿ, ಆನಹಳ್ಳಿ, ತೊರವಳ್ಳಿ, ಪುಟ್ಟಯ್ಯನಹುಂಡಿ, ಹೊನ್ನೇಗೌಡನ ಹುಂಡಿ, ದಾಸನೂರು, ಚಿಕ್ಕಹೊಮ್ಮ, ದೊಡ್ಡಹೊಮ್ಮ ಹಾಗೂ ಹೆಗ್ಗವಾಡಿ ಸೇರಿದಂತೆ 23 ಹಳ್ಳಿಗಳ ಮಹಿಳೆಯರು ಜಾತ್ರೆಯಲ್ಲಿ ಪಾಲ್ಗೊಂಡರು.

ದೀವಟಿಗೆ ಸೇವೆ: ದೇವಾಲಯದ ಸುತ್ತಮುತ್ತ ಎಲ್ಲಿ ನೋಡಿದರೂ ಮಹಿಳೆಯರು ಹಾಗೂ ಹೆಣ್ಣುಮಕ್ಕಳೇ ಹೆಚ್ಚಾಗಿ ಕಂಡು ಬಂದರು. ನೆಂಟರಿಷ್ಟರ ಜೊತೆಗೆ ಪಂಜು ಹಿಡಿದು (ದೀವಟಿಗೆ ಸೇವೆ) ದೇವಸ್ಥಾನದ ಸುತ್ತಲೂ ಪ್ರದಕ್ಷಿಣೆ ಹಾಕಿ ತಮ್ಮ ಇಷ್ಟಾರ್ಥ ಈಡೇರಿಸುವಂತೆ ತಾಯಿಯಲ್ಲಿ ಬೇಡಿಕೊಂಡರು. ಸುಡುವ ಬಿಸಿಲನ್ನೂ ಲೆಕ್ಕಿಸದೆ, ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಕೃತಾರ್ಥರಾದರು.

ನೂಕುನುಗ್ಗಲು: ಹರಕೆ ಸಲ್ಲಿಸಲು ದೇವಾಲಯದ ಎದುರುಗಡೆ ಭಕ್ತರ ನೂಕು ನುಗ್ಗಲು ಇತ್ತು. ಕಾಯಿ ಹಣ್ಣು ಧವನಗಳು ದೇವಾಸ್ಥಾನದ ಮುಂಭಾದ ದೇವಿಯ ಮೂರ್ತಿಗೆ ಭಕ್ತರು ಸಮರ್ಪಿಸಿದರು.

ಮಹದೇಶ್ವರನಿಗೂ ವಿಶೇಷ ಪೂಜೆ: ದೊಡ್ಡಮ್ಮ ತಾಯಿ ದೇವಾಲಯದ ಪ‍ಕ್ಕದಲ್ಲಿರುವ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲೂ ಮಹಿಳೆಯರು ಹಾಗೂ ಇತರ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. 

ನೀಲಗಾರರು ಧ್ವನಿವರ್ಧಕದ ಮೂಲಕ ಪವಾಡ ಪುರುಷರಾದ ಮಂಟೇಸ್ವಾಮಿ, ಸಿದ್ದಪಾಜಿ ಹಾಗೂ ಮಲೆ ಮಹದೇಶ್ವರ ಜನಪದ ಗೀತೆಗಳನ್ನು ಹಾಡುತ್ತಿದ್ದರು.

ದೇವಸ್ಥಾನದ ಮಧ್ಯದಲ್ಲಿರುವ ಕೆರೆಯಲ್ಲಿ ನೀರಿಲ್ಲದ ಕಾರಣ ಮಹಿಳೆಯರು ಹಾಗೂ ಮಕ್ಕಳು ತಾವು ತಂದಿದ್ದ ಉಟ ತಿಂಡಿಗಳನ್ನು ಕೆರೆಯ ಅಂಗಳದಲ್ಲಿ ಸೇವಿಸುತ್ತಿದುದು ಕಂಡು ಬಂತು.

ಸಂತೆಯಲ್ಲಿ ಖರೀದಿ ಭರಾಟೆ ಜೋರು
ದೇವಾಲಯದ ಆವರಣದಲ್ಲಿ ಕಂಡು ಬಂದ ಭಕ್ತರ ದಟ್ಟಣೆ ಹೊರಗಡೆ ಸಂತೆ ನಡೆಯುತ್ತಿದ್ದ ಪ್ರದೇಶದಲ್ಲೂ ಕಂಡು ಬಂತು. ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅವರಿಗೆ ಬೇಕಾದ ವಸ್ತುಗಳನ್ನೇ ಮಾರಾಟ ಮಾಡುವ ಅಂಗಡಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದವು. 

ಬಳೆ, ಕಿವಿಯೋಲೆ, ತಲೆಪಿನ್ನು ಹಾಗೂ ಅಲಂಕಾರಿಕ ವಸ್ತುಗಳನ್ನು ಮಹಿಳೆಯರು ಖರೀದಿಸಲು ಮುಗಿಬಿದ್ದರು. ಜತೆಗೆ ಕಡ್ಲೆಪುರಿ, ಖಾರ, ನಿಪ್ಪಟ್ಟು, ವಡೆ ಹಾಗೂ ಸಿಹಿ ತಿನಿಸುಗಳಿಗೂ ಬೇಡಿಕೆ ಇತ್ತು. ಐಸ್‌ ಕ್ರೀಂ ಗಾಡಿಗಳು ಹೆಜ್ಜೆಗೊಂತರಂದೆ ಇದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !