ಆದೇಶ ಮಾರ್ಪಾಡು ಕೋರಿದ್ದ ಅರ್ಜಿ ವಜಾ

ಶನಿವಾರ, ಮಾರ್ಚ್ 23, 2019
31 °C
ಕೆ.ಸಿ. ವ್ಯಾಲಿ ಯೋಜನೆಗೆ ‘ಸುಪ್ರೀಂ’ ತಡೆ

ಆದೇಶ ಮಾರ್ಪಾಡು ಕೋರಿದ್ದ ಅರ್ಜಿ ವಜಾ

Published:
Updated:
Prajavani

ನವದೆಹಲಿ: ಆದೇಶ ಮಾರ್ಪಾಡು ಮಾಡುವಂತೆ ಕೋರಿ ಸಲ್ಲಿಸಿರುವ ಮೇಲ್ಮನವಿಯೇ ಅತ್ಯಂತ ಜಾಳುಜಾಳಾಗಿದೆ ಎಂದು ರಾಜ್ಯ ಸರ್ಕಾರವನ್ನು ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್, ಕೆ.ಸಿ. ವ್ಯಾಲಿ (ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆ) ಯೋಜನೆಗೆ ನೀಡಲಾಗಿರುವ ತಡೆಯಾಜ್ಞೆಯ ತೆರವು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿತು.

‘ತಡೆಯಾಜ್ಞೆ ನೀಡಿದ ದಿನಾಂಕವನ್ನೂ ಮೇಲ್ಮನವಿಯಲ್ಲಿ ಸಮರ್ಪಕವಾಗಿ ನಮೂದಿಸಲಾಗಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ಕಿಡಿ ಕಾರಿತು.

‘ಅರ್ಜಿಯಲ್ಲಿ ದಿನಾಂಕ ಸೇರಿದಂತೆ ಯಾವುದೇ ವಿವರಣೆಗಳೂ ಸೂಕ್ತವಾಗಿಲ್ಲ. ಈ ನ್ಯಾಯಾಲಯವು ಯೋಜನೆಗೆ 2019ರ ಜನವರಿ 7ರಂದು ತಡೆ ನೀಡಿದೆ. ಆದರೆ, ದಿನಾಂಕವನ್ನು 2018ರ ಜನವರಿ 7 ಎಂದು ನಮೂದಿಸಿರುವ ನೀವು ನ್ಯಾಯಾಲಯದೊಂದಿಗೆ ಆಟ ಆಡುತ್ತಿದ್ದೀರಾ’ ಎಂದು ಅಡ್ವೋಕೇಟ್‌ ಜನರಲ್‌ ಉದಯ್‌ ಹೊಳ್ಳ ಅವರನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು.

‘ಯೋಜನೆ ಅಡಿ ಕೆರೆಗಳಿಗೆ ಹರಿಸುವ ನೀರನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬ ವಿವರಗಳಿಲ್ಲ. ಅದು ಕುಡಿಯುವುದಕ್ಕೋ ಅಥವಾ ಕೃಷಿಗೋ ಎಂಬುದೂ ಸ್ಪಷ್ಟವಾಗಿಲ್ಲ. ಕೊಳಚೆ ನೀರಿನ ಶುದ್ಧೀಕರಣ ಅರ್ಧವೋ, ಪೂರ್ಣವೋ ಎಂಬುದೂ ನಿಮಗೆ ತಿಳಿದಂತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ ಪೀಠ, ‘ಸೂಕ್ತ ವಿವರಗಳಿಲ್ಲದ ಈ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ’ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿತು.

ವಿಶೇಷ ಅರ್ಜಿಗೆ ಸಂಬಂಧಿಸಿದ ಹೇಳಿಕೆಗಳನ್ನು ವಿಚಾರಣೆ ವೇಳೆ ಪರಿಗಣಿಸುವಂತೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರಾದ ಶ್ಯಾಂ ದಿವಾನ್‌ ಹಾಗೂ ಮುಕುಲ್‌ ರೋಹಟ್ಗಿ ನ್ಯಾಯಪೀಠವನ್ನು ಕೋರಿದರು.

ಆದರೆ, ಈ ಹೇಳಿಕೆಗಳನ್ನು ಮುಖ್ಯ ಅರ್ಜಿಯೊಂದಿಗೇ ಪರಿಗಣಿಸಲಾಗುವುದು ಎಂದ ಪೀಠ, ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿತಲ್ಲದೆ, ವಿಚಾರಣೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿತು.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ 191 ಕೆರೆಗಳಿಗೆ ಶುದ್ಧೀಕರಿಸಿದ ಚರಂಡಿ ನೀರು ಹರಿಸುವ ಈ ಮಹತ್ವದ ಯೋಜನೆಗೆ ಅನುಮತಿ ನೀಡಿ ರಾಜ್ಯ ಹೈಕೋರ್ಟ್‌ 2018ರ ಸೆಪ್ಟೆಂಬರ್‌ 28ರಂದು ನೀಡಿದ್ದ ಮದ್ಯಂತರ ಆದೇಶಕ್ಕೆ ಕಳೆದ ಜನವರಿ 7ರಂದು ಸುಪ್ರೀಂ ಕೋರ್ಟ್‌ ತಡೆ ನೀಡಿದೆ.

ಹೈಕೋರ್ಟ್‌ ಆದೇಶಕ್ಕೆ ತಡೆ ಕೋರಿ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಅಧ್ಯಕ್ಷ ಆರ್‌.ಆಂಜನೇಯ ರೆಡ್ಡಿ ಅವರು ಮೇಲ್ಮನವಿ ಸಲ್ಲಿಸಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !