49 ವಿಮಾನಗಳ ಹಾರಾಟ ವ್ಯತ್ಯಯ

7
ಕೆಐಎ ಸುತ್ತಮುತ್ತ ದಟ್ಟ ಮಂಜು * ನಾಲ್ಕು ವಿಮಾನಗಳ ಮಾರ್ಗ ಬದಲು

49 ವಿಮಾನಗಳ ಹಾರಾಟ ವ್ಯತ್ಯಯ

Published:
Updated:
Prajavani

ಬೆಂಗಳೂರು: ನಗರದಲ್ಲಿ ಹಲವು ದಿನಗಳಿಂದ ನಸುಕಿನಲ್ಲಿ ದಟ್ಟ ಮಂಜು ಆವರಿಸುತ್ತಿದ್ದು, ಭಾನುವಾರವೂ ಮಂಜು ಕವಿದ ವಾತಾವರಣವಿತ್ತು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) 49 ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಯಿತು.

ನಸುಕಿನ 2 ಗಂಟೆಯಿಂದಲೇ ನಿಲ್ದಾಣ ಹಾಗೂ ಸುತ್ತಮುತ್ತ ದಟ್ಟ ಮಂಜು ಕಾಣಿಸಿಕೊಂಡಿತ್ತು. ವಿಮಾನ ಸಂಚಾರ ನಿಯಂತ್ರಣ (ಏರ್‌ ಟ್ರಾಫಿಕ್‌ ಕಂಟ್ರೋಲ್‌) ಸಿಬ್ಬಂದಿ, ನಿಲ್ದಾಣದಿಂದ ಹೊರಡಬೇಕಿದ್ದ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಪೈಲಟ್‌ಗಳಿಗೆ ಹೇಳಿದರು. ಬೇರೆ ನಿಲ್ದಾಣಗಳಿಂದ ಬರುತ್ತಿದ್ದ ವಿಮಾನಗಳ ಹಾರಾಟದ ವೇಗವನ್ನು ಕಡಿಮೆಗೊಳಿಸಲು ಪೈಲಟ್‌ಗಳಿಗೆ ಸೂಚಿಸಿದರು.

ನಿಲ್ದಾಣದಿಂದ ಹೊರಡಬೇಕಿದ್ದ 38 ವಿಮಾನಗಳು, ನಿಗದಿತ ಸಮಯಕ್ಕೆ ಹಾರಾಟ ನಡೆಸಲಿಲ್ಲ. ನಿಗದಿತ ಸಮಯಕ್ಕೆ ನಿಲ್ದಾಣಕ್ಕೆ ಬಂದಿಳಿಯಬೇಕಿದ್ದ 11 ವಿಮಾನಗಳು ತಡವಾಗಿ ನಿಲ್ದಾಣಕ್ಕೆ ಬಂದವು. ಬೆಳಿಗ್ಗೆ 8 ಗಂಟೆ ನಂತರವೇ ವಿಮಾನ ಹಾರಾಟ ಯಥಾಸ್ಥಿತಿಗೆ ಮರಳಿತು. 

ನಾಲ್ಕು ವಿಮಾನಗಳ ಮಾರ್ಗ ಬದಲು: ಕೆಐಎಗೆ ಬರಬೇಕಿದ್ದ ನಾಲ್ಕು ವಿಮಾನಗಳ ಮಾರ್ಗ ಬದಲಾವಣೆ ಮಾಡಿ ಚೆನ್ನೈ, ಹೈದರಾಬಾದ್‌ ನಿಲ್ದಾಣಗಳಿಗೆ ಕಳುಹಿಸಲಾಯಿತು. ಮಂಜು ಕಡಿಮೆಯಾದ ಬಳಿಕವೇ ವಿಮಾನಗಳು, ಕೆಐಎಗೆ ಬಂದವು.

‘ದಟ್ಟ ಮಂಜು ಇದ್ದರೆ ನಿಲ್ದಾಣದಲ್ಲಿ ವಿಮಾನಗಳನ್ನು ಇಳಿಸುವುದು ಅಪಾಯಕಾರಿ. ಅದಕ್ಕೆ ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಯಿತು’ ಎಂದು ಕೆಐಎ ಮೂಲಗಳು ಹೇಳಿವೆ.

‘ಅಹಮದಾಬಾದ್‌ನಿಂದ ಬರುತ್ತಿದ್ದ ವಿಮಾನವನ್ನು (ಏರ್‌ ಇಂಡಿಯಾ) ಚೆನ್ನೈ ನಿಲ್ದಾಣಕ್ಕೆ ಕಳುಹಿಸಲಾಗಿತ್ತು. ವೈಜಾಕ್‌ನಿಂದ ಬರುತ್ತಿದ್ದ ವಿಮಾನವನ್ನು (ಏರ್‌ ಇಂಡಿಯಾ) ಹೈದರಾಬಾದ್‌ಗೆ, ದೆಹಲಿಯಿಂದ ಬರುತ್ತಿದ್ದ ವಿಮಾನವನ್ನು (ಇಂಡಿಗೊ) ಹೈದರಾಬಾದ್‌ಗೆ ಹಾಗೂ ದುಬೈನಿಂದ ಗೋವಾದ ಮೂಲಕ ಬರುತ್ತಿದ್ದ ವಿಮಾನವನ್ನು (ಏರ್‌ ಇಂಡಿಯಾ) ಚೆನ್ನೈ ನಿಲ್ದಾಣಕ್ಕೆ ಕಳುಹಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.

ಪ್ರಯಾಣಿಕರ ಆಕ್ರೋಶ
ವಿಮಾನಗಳ ಹಾರಾಟ ತಡವಾಗಿದ್ದಕ್ಕೆ ಪ್ರಯಾಣಿಕರು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಅನಗನಾ ದೇಬ್ ಎಂಬುವರು, ‘ಕೊಲ್ಕತ್ತಾದಿಂದ ಬೆಂಗಳೂರಿಗೆ ಹೋಗಲು ಇಂಡಿಗೊದ 6E6965 ವಿಮಾನ ಟಿಕೆಟ್ ಕಾಯ್ದಿರಿಸಿದ್ದೆ. ನಸುಕಿನ 3.20ಕ್ಕೆ ವಿಮಾನ ಹೊರಡಬೇಕಿತ್ತು. ಆದರೆ, ದಟ್ಟ ಮಂಜಿನ ಕಾರಣ ನೀಡಿ ವಿಮಾನದ ಹಾರಾಟವನ್ನೇ ದಿಢೀರ್ ರದ್ದುಪಡಿಸಲಾಗಿದೆ. ಅದೇ ಬೆಂಗಳೂರಿಗೆ 3.10ಕ್ಕೆ ವಿಮಾನ ಹೋಗಿದೆ. ಇಂಡಿಗೊದ ಈ ನಡೆ ನಾಚಿಕೆಗೇಡು’ ಎಂದು ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಾಳೆಯಿಂದ ಬೆಂಗಳೂರಿನ ಕಂಪನಿಯೊಂದರಲ್ಲಿ ನನ್ನದು ಇಂಟರ್ನ್‌ಶಿಪ್‌ ಪ್ರಾರಂಭವಾಗಲಿದೆ. ವಿಮಾನ ತಪ್ಪಿದ್ದರಿಂದ ನಿಲ್ದಾಣದಲ್ಲೇ ಗಂಟೆಗಟ್ಟಲೇ ಕಾಯುವಂತಾಗಿದೆ’ ಎಂದಿದ್ದಾರೆ.

ಇಂಡಿಗೊ ಕಂಪನಿ ಪ್ರತಿನಿಧಿ, ‘ಅಡಚಣೆಗೆ ಕ್ಷಮಿಸಿ. ಬೇರೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡುತ್ತೇವೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಯಾಣಿಕ ಶೈಲೇಂದ್ರ ದೀಕ್ಷಿತ್ ಎಂಬುವರು, ‘ವಿಮಾನಗಳ ಹಾರಾಟ ತಡವಾಗಿದೆ ಎಂದು ಪ್ರಯಾಣಿಕರು ಹೇಳಿದಾಗ, ಸ್ವಯಂ ಪ್ರಶಂಸೆ ಮಾಡಿಕೊಳ್ಳುವುದನ್ನು ನಿಲ್ಲಿಸಿ. ಪ್ರಯಾಣಿಕರಿಗೆ ತ್ವರಿತವಾಗಿ ಸ್ಪಂದಿಸಲು ಕಲಿತುಕೊಳ್ಳಿ’ ಎಂದು ಇಂಡಿಗೊ ಕಂಪನಿಯವರಿಗೆ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !