ಶುಕ್ರವಾರ, ಡಿಸೆಂಬರ್ 13, 2019
20 °C
ಬಿಡಿಎಗೆ ಸೇರಿದ ಮೈದಾನದಲ್ಲಿ ನಡೆಯುತ್ತಿದೆ ‘ಕೆಂಗೇರಿ ಫುಡ್‌ ಆ್ಯಂಡ್‌ ಶಾಪಿಂಗ್‌ ಫೆಸ್ಟಿವಲ್‌’

ಆಡುವ ಮೈದಾನದಲ್ಲಿ ಬೀಡು ಬಿಟ್ಟ ಮಳಿಗೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕೆಂಗೇರಿ ಉಪನಗರದ ಬಿಡಿಎ ಮೈದಾನದಲ್ಲಿ ವಾಣಿಜ್ಯ ಮಳಿಗೆಗಳು ತಲೆ ಎತ್ತಿವೆ. ಶುಕ್ರವಾರದಿಂದ ಇಲ್ಲಿ ಕೆಂಗೇರಿ ಫುಡ್‌ ಆ್ಯಂಡ್‌ ಶಾಪಿಂಗ್‌ ಫೆಸ್ಟಿವಲ್‌ ನಡೆಯುತ್ತಿದ್ದು, ಈ ಸಲುವಾಗಿ ಇಲ್ಲಿ 40ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. 

ಯುವಜನರು ಹಾಗೂ ಮಕ್ಕಳು ಆಟವಾಡಲು ಬಳಸುತ್ತಿದ್ದ ಈ ಮೈದಾನವನ್ನು ವಾರಾಂತ್ಯದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಬಿಟ್ಟುಕೊಟ್ಟಿದ್ದಕ್ಕೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ನಗರದಲ್ಲಿ ಮಕ್ಕಳಿಗೆ ಆಟವಾಡುವುದಕ್ಕೆ ಮೈದಾನಗಳ ಕೊರತೆ ಇದೆ. ಇರುವ ಮೈದಾನಗಳನ್ನು ವಾಣಿಜ್ಯ ಚಟುವಟಿಕೆಗೆ ಬಿಟ್ಟುಕೊಟ್ಟರೆ ಮಕ್ಕಳು ಆಡುವುದಾದರೂ ಎಲ್ಲಿ’ ಎಂದು ಪ್ರಶ್ನಿಸುತ್ತಾರೆ ಸ್ಥಳೀಯ ನಿವಾಸಿ ಬಿ.ಎಂ.ಶಿವಕುಮಾರ್‌.

ಈ ಮೈದಾನ ಬಿಡಿಎಗೆ ಸೇರಿದ್ದು. ಈ ಜಾಗವನ್ನು ಬಿಡಿಎ 1985ರಲ್ಲಿ ಬಸವೇಶ್ವರ ಸಮಾಜ ಸುಧಾರಣಾ ಸಮಿತಿಗೆ 30 ವರ್ಷದ ಅವಧಿಗೆ ಗುತ್ತಿಗೆಗೆ ನೀಡಿತ್ತು. ನೀಡಿದ್ದ ಉದ್ದೇಶಕ್ಕೆ ಜಾಗಬಳಸದ ಕಾರಣ 2008ರಲ್ಲಿ ಗುತ್ತಿಗೆ ರದ್ದುಪಡಿಸಲಾಗಿತ್ತು. ಅದೇ ಸಮಿ
ತಿಗೆ ಮತ್ತೆ ಜಾಗವನ್ನು ನೀಡುವ ಪ್ರಯತ್ನ ನಡೆದಾಗ ಸ್ಥಳೀಯರು, ‘ಆಟದ ಮೈದಾನ ಉಳಿಸಿ ಸಮಿತಿ’ ರಚಿಸಿಕೊಂಡು ಹೋರಾಟ ನಡೆಸಿದ್ದರು. ಅದರ ಪರಿಣಾಮ ಮೈದಾನ ಉಳಿದುಕೊಂಡಿತ್ತು ಎಂದರು ಸ್ಥಳೀಯರು. 

‘ಮೈದಾನದಲ್ಲಿ ಒಮ್ಮೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಿದರೆ, ಬಳಿಕ ಇನ್ನಷ್ಟು ಮಂದಿ ಇಂತಹ ಚಟುವಟಿಕೆ ನಡೆಸಲು ಮುಂದೆ ಬರುತ್ತಾರೆ. ಮುಂದೆ ಇದೇ ಒಂದು ಚಾಳಿಯಾಗುತ್ತದೆ. ಸ್ಥಳೀಯರಿಗೆ ಆಟವಾಡುವುದಕ್ಕೆ ಜಾಗವೇ ಇಲ್ಲದ ಸ್ಥಿತಿ ನಿರ್ಮಾಣವಾ
ಗುತ್ತದೆ. ಬಿಡಿಎನವರು ಇನ್ನು ಮುಂದೆ ಯಾವುದೇ ಕಾರಣಕ್ಕೂ ಇಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸಬಾರದು’ ಎಂದು ಶಿವಕುಮಾರ್‌ ಒತ್ತಾಯಿಸಿದರು.

‘ಬಿಬಿಎಂಪಿಗೆ ಹಸ್ತಾಂತರಿಸಿದರೆ ಮೈದಾನ ಅಭಿವೃದ್ಧಿ’

‘ಈ ಮೈದಾನದ ಜಾಗ ಬಿಡಿಎಯಿಂದ ಬಿಬಿಎಂಪಿಗೆ ಇನ್ನೂ ಹಸ್ತಾಂತರವಾಗಿಲ್ಲ. ಇದನ್ನು ಪಾಲಿಕೆಗೆ ವಹಿಸಿದರೆ ಇನ್ನಷ್ಟು ಅಭಿವೃದ್ಧಿ ಮಾಡಬಹುದು. ನಾವು ಈ ಬಗ್ಗೆ ಬಿಡಿಎಗೆ ಪತ್ರ ಬರೆದಿದ್ದೇವೆ’ ಎಂದು ಕೆಂಗೇರಿ ವಾರ್ಡ್‌ನ ಪಾಲಿಕೆ ಸದಸ್ಯ ವಿ.ವಿ ಸತ್ಯನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ತ್ರೀಶಕ್ತಿ ಸಂಘದ ಕಾರ್ಯಕ್ರಮಕ್ಕೆ ಮೈದಾನವನ್ನು ಬಾಡಿಗೆಗೆ ನೀಡಿದ್ದೇವೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈ ಮೈದಾನದಲ್ಲಿ ಇನ್ನು ಮುಂದೆ ವಾಣಿಜ್ಯ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಬಾರದು ಎಂದು ಹೇಳಿದ್ದೇನೆ’ ಎಂದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು