ಕೇರಳದ ಮಳೆಗೆ ಗಡಿಭಾಗದಲ್ಲಿರುವ ಕೆರೆಗಳು ಭರ್ತಿ

7
ವರ್ಷಗಳ ಬಳಿಕ ನೀರು ಕಂಡ ತಾಲ್ಲೂಕಿನ ಎರಡು ದೊಡ್ಡ ಕೆರೆಗಳು

ಕೇರಳದ ಮಳೆಗೆ ಗಡಿಭಾಗದಲ್ಲಿರುವ ಕೆರೆಗಳು ಭರ್ತಿ

Published:
Updated:
Deccan Herald

ಗುಂಡ್ಲುಪೇಟೆ: ಕೇರಳ ರಾಜ್ಯದಾದ್ಯಂತ ಸುರಿಯುತ್ತಿರುವ ಮಹಾಮಳೆಗೆ ತಾಲ್ಲೂಕಿನ ಗಡಿಭಾಗದಲ್ಲಿರುವ ಎರಡು ದೊಡ್ಡ ಕೆರೆಗಳು ಭರ್ತಿಯಾಗಿ ಕೋಡಿ ಬೀಳುವ ಹಂತಕ್ಕೆ ಬಂದಿವೆ.

ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿರುವ ಹಿರಿಕೆರೆ (ಸೋನಾಪುರ ಬಸವೇಶ್ವರದ ದೇವಸ್ಥಾನದ ಕೆರೆ) ಮತ್ತು ತಾಲ್ಲೂಕಿನ ಬೇರಂಬಾಡಿ ಕೆಂಪುಸಾಗರ ಕೆರೆಗಳು ತುಂಬಿ ಕೋಡಿ ಬೀಳುತ್ತಿವೆ.

ಹಿರಿಕೆರೆ ಪೂರ್ಣ ಪ್ರಮಾಣದಲ್ಲಿ ತುಂಬಿ ಐದಾರು ವರ್ಷಗಳೇ ಕಳೆದಿತ್ತು. ಇದು ಭರ್ತಿಯಾದರೆ ಕಾಡು ಪ್ರಾಣಿಗಳಿಗೆ ಹೆಚ್ಚಿನ ಉಪಯೋಗವಾಗುತ್ತದೆ. ಈ ಭಾಗದಲ್ಲಿ ಅಂತರ್ಜಲ ಹೆಚ್ಚಿ ಕೊಳವೆಬಾವಿಗಳಲ್ಲಿ ಸಾಕಷ್ಟು ನೀರು ಲಭ್ಯವಾಗುತ್ತದೆ ಎಂದು ಇಲ್ಲಿನ ರೈತರು ಹೇಳುತ್ತಾರೆ.

ಬೇರಂಬಾಡಿ ಕೆರೆ ಎಂಟು ವರ್ಷಗಳ ಬಳಿಕ ತುಂಬಿದೆ. ಈ ಬಾರಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ ಕೆರೆ ಕಟ್ಟೆಗಳು ತುಂಬುವಷ್ಟು ಮಳೆ ಬಿದ್ದಿಲ್ಲ. ‌ಆದರೆ ಕೇರಳದಲ್ಲಿ ಕೆಲವು ವಾರಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕೆರೆಗಳಿಗೆ ನೀರು ಹರಿದು ಬರುತ್ತಿದೆ. 

ಗಡಿ ಭಾಗವಾದ ಮದ್ದೂರು ದಾಟಿದ ನಂತರದ ಭಾಗಗಳಲ್ಲಿ ಮಳೆ ಸುರಿಯುತ್ತಿದೆ. ರಾಜ್ಯದ ಗಡಿಭಾಗದಲ್ಲೂ ಹೆಚ್ಚಿನ ಮಳೆಯಾಗುತ್ತಿದೆ. ಈ ನೀರು ಕೆರೆಗಳನ್ನು ಸೇರುತ್ತಿದೆ. ಈ ಎರಡು ಕೆರೆಗಳು ಭರ್ತಿಯಾಗಿ ಹರಿಯುತ್ತಿರುವುದರಿಂದ ಉಳಿದ ಕೆರೆಗಳು ತುಂಬುವ ನಿರೀಕ್ಷೆ ಇದೆ.

ಕೇರಳದ ಮಳೆ ಪ್ರಭಾವದಿಂದ ಈ ಸಲ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಭರ್ಜರಿಯಾಗಿ ಮಳೆ ಬೀಳುತ್ತಿದೆ. ಮೂಲೆ ಹೊಳೆ, ಮದ್ದೂರು ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಕೆಂಪುಸಾಗರ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದೆ.

ಜನರಿಗೆ ಖುಷಿ: ವರ್ಷಗಳ ಬಳಿಕ ಈ ಎರಡು ಕೆರೆಗಳು ಭರ್ತಿಯಾಗಿರುವುದು ಈ ಭಾಗದ ಜನರ ಸಂತಸಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ನೀರಿಗೆ ಕೊರತೆಯಾಗದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಏರಿಯನ್ನು ದೃಢಪಡಿಸಲು ಒತ್ತಾಯ

ಈ ಮಧ್ಯೆ, ಹಿರಿಕೆರೆಯ ಏರಿಯನ್ನು ಭದ್ರಪಡಿಸುವಂತೆ ಹಂಗಳ ರೈತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

‘ಹೆಚ್ಚಿನ ನೀರು ಬರುವುದರಿಂದ ಏರಿ ಒಡೆಯುವ ಸಾಧ್ಯತೆ ಇದೆ. ಹಾಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !