‘ದೇವರ ಸ್ವಂತ ನಾಡು’ ಯುವತಿಯರಿಗಲ್ಲ

7
ಶಬರಿಮಲೆಗೆ ಮಹಿಳೆ ಪ್ರವೇಶಕ್ಕೆ ತಡೆ: ಗರಿಷ್ಠ ಸಾಕ್ಷರತೆಯು ಉತ್ತಮ ಶಿಕ್ಷಣವಾಗದ ಕತೆ

‘ದೇವರ ಸ್ವಂತ ನಾಡು’ ಯುವತಿಯರಿಗಲ್ಲ

Published:
Updated:

ಅಜ್ಜಿಯ ಬಗ್ಗೆ ನನ್ನ ನೆನಪಿನಲ್ಲಿರುವ ಚಿತ್ರ ಇದು ಮಾತ್ರ- ಸಾಂಪ್ರದಾಯಿಕ ಶೈಲಿಯಲ್ಲಿ ಉಟ್ಟ ಮಂದ ಕಂದು ಬಣ್ಣದ ಸೀರೆಯನ್ನು ಬೋಳು ತಲೆಯ ಮೇಲೆ ಹೊದ್ದ ವಿಧವೆ. ಕುಂಕುಮ ಇಲ್ಲದ ಬೋಳು ಹಣೆ, ಖಾಲಿ ಕತ್ತು, ಕಿವಿ, ಯಾವುದೇ ಶೃಂಗಾರ, ಆಭರಣ ಇಲ್ಲದ ಕೈ. ವಿವಾಹಿತ ಮಹಿಳೆಯರ ಸಂಕೇತವಾದ ಕಾಲ್ಕಡಗವಾಗಲೀ ಕಾಲ್ಬೆರಳಿಗೆ ಕಾಲುಂಗುರವಾಗಲೀ ಇಲ್ಲ.

ಅಜ್ಜಿಯ ಉಜ್ವಲವಾದ ಕತೆ ಮನಸ್ಸಿನಲ್ಲಿ ಅಚ್ಚೊತ್ತಿದೆ. ನಾನು ಕಲಿಯುತ್ತಿದ್ದ ಸ್ಥಳೀಯ, ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗೆ ಬೇಸಿಗೆ ರಜೆ ಸಿಕ್ಕಾಗ ಗೊರೂರಿನಿಂದ ಮೇಲುಕೋಟೆಗೆ ಹೋಗುತ್ತಿದ್ದೆ. ನನ್ನ ತಾಯಿಯ ಸಹೋದರರೊಬ್ಬರ ಮನೆಯಲ್ಲಿ ಅಜ್ಜಿ ಇದ್ದರು. ತಾಯಿಯ ತವರಿಗೆ ಹೋಗಿ ಅಜ್ಜಿಯ ಮುದ್ದಿನಲ್ಲಿ ದಿನ ಕಳೆಯುವುದೇ ಆ ದಿನಗಳಲ್ಲಿ ಬೇಸಿಗೆ ರಜೆ ಕಳೆಯುವ ಪ್ರಧಾನ ವಿಧಾನ.

ನನಗಾಗ ಎಂಟು ಅಥವಾ ಒಂಬತ್ತು ವರ್ಷ ಇರಬಹುದು. ಜತೆಗೆ ಅಕ್ಕ ಕೂಡ ಇದ್ದಳು. ಕಣ್ಣಲ್ಲಿ ನೀರು ತುಂಬಿಕೊಂಡು, ಬಹಳ ಹಿಂದಿನ ತನ್ನ ಕತೆಯನ್ನು ಅಜ್ಜಿ ಅಂದು ಹೇಳಿದ್ದಳು. 13 ವರ್ಷಕ್ಕೇ ಅಜ್ಜಿಗೆ ಮದುವೆ ಆಗಿತ್ತು. ವರನ ವಯಸ್ಸು 16. ಆತ ಸಂಸ್ಕೃತ ಪಂಡಿತ ಮತ್ತು ಪುರೋಹಿತನಾಗುವುದಕ್ಕಾಗಿ ಮೇಲುಕೋಟೆಯಲ್ಲಿ ತರಬೇತಿ ಪಡೆಯುತ್ತಿದ್ದ.

ಅಜ್ಜಿ ಮೂವತ್ತರ ವಯೋಮಾನದಲ್ಲಿದ್ದಾಗ ಅನಾರೋಗ್ಯಪೀಡಿತನಾದ ಗಂಡ ತೀರಿಕೊಂಡಿದ್ದ. ಆಗ ಅಜ್ಜಿಗೆ ಇಬ್ಬರು ಗಂಡು ಮತ್ತು ಒಬ್ಬ ಹೆಣ್ಣು ಮಗಳಿದ್ದಳು. ಆ ಹೆಣ್ಣು ಮಗಳು ನನ್ನ ತಾಯಿ. ಅಜ್ಜಿಗೆ ದುಃಖ ಮತ್ತು ಆಘಾತವಾಗಿತ್ತು. ನೆಂಟರು ಮತ್ತು ಊರಿನವರ ಉಪಸ್ಥಿತಿಯಲ್ಲಿ ವಿವಿಧ ವಿಧಿ ವಿಧಾನಗಳ ಮೂಲಕ ಆಕೆಯ ವೈಧವ್ಯವನ್ನು ಅಧಿಕೃತಗೊಳಿಸಿ ಘೋಷಿಸಿದ ದಿನವನ್ನು ಬಹಳ ನೋವಿನೊಂದಿಗೆ ಅಜ್ಜಿ ನೆನಪಿಟ್ಟುಕೊಂಡಿದ್ದಾಳೆ.

ಇಬ್ಬರು ಪುರೋಹಿತರ ಮಧ್ಯೆ ಅಜ್ಜಿಯನ್ನು ಕೂರಿಸಲಾಗಿತ್ತು. ಸುತ್ತಲೂ ಇದ್ದ ಸಂಬಂಧಿಕರು ಮಂತ್ರ ಪಠಿಸುತ್ತಿದ್ದರು. ಸಮಾಧಾನಿಸಲು ಸಾಧ್ಯವೇ ಇಲ್ಲದ ರೀತಿಯಲ್ಲಿ ಅಪಾರ ದುಃಖದಿಂದ ಅಜ್ಜಿ ರೋದಿಸುತ್ತಿರುವಾಗಲೇ ಮೊದಲಿಗೆ, ಅವರು ಅಜ್ಜಿಯ ಮಂಗಳಸೂತ್ರ ಸೇರಿ ಆಭರಣಗಳೆಲ್ಲವನ್ನೂ ಕಳಚಿದರು, ಬಳಿಕ ಕೈಯಲ್ಲಿದ್ದ ಗಾಜಿನ ಬಳೆಗಳನ್ನು ಒಡೆದರು, ಕಿವಿಯಲ್ಲಿದ್ದ ಓಲೆ, ಕಾಲು ಬೆರಳಲ್ಲಿ ಇದ್ದ ಉಂಗುರಗಳನ್ನು ತೆಗೆದರು, ಕಾಲ್ಕಡಗ ಕಳಚಿದರು, ಹಣೆಯಲ್ಲಿದ್ದ ಕುಂಕುಮವನ್ನು ಒರಟೊರಟಾಗಿ ಅಳಿಸಿದರು.

ಸಮೃದ‍್ಧ, ಸುಂದರವಾಗಿದ್ದ ಕೂದಲು ನೆಲಕ್ಕೆ ಬೀಳುತ್ತಿರುವ ದೃಶ್ಯವನ್ನು ಅಜ್ಜಿ ಈಗಲೂ ನೆನಪಿಸಿಕೊಳ್ಳುತ್ತಾರೆ. ಮಂತ್ರ ಪಠಣ ಮುಂದುವರಿದಿತ್ತು. ಅಜ್ಜಿಗೆ ತಲೆ ಸುತ್ತು ಬರುತ್ತಿತ್ತು, ಇಡೀ ದಿನದ ವಿಧಿ ವಿಧಾನಗಳಿಂದ ಆಕೆ ದಣಿದಿದ್ದಳು. ಬಳಿಕ ಆಕೆಯನ್ನು ಸ್ನಾನಕ್ಕೆ ಕರೆದೊಯ್ದ ನೆಂಟರು ತಲೆ ಮೇಲೆ ನೀರು ಸುರಿದರು. ಆಕೆಗೆ ಹೊಳಪಿಲ್ಲದ ಕಂದು ಬಣ್ಣದ ಹತ್ತಿ ಬಟ್ಟೆಯನ್ನು ಕೊಟ್ಟರು. ಈ ಜೈಲು ಉಡುಪು ಜೀವನಪರ್ಯಂತ ಅಜ್ಜಿಯ ಸಮವಸ್ತ್ರವಾಯಿತು.

ಸಂದೇಶ ಬಹಳ ಸ್ಪಷ್ಟವಾಗಿತ್ತು. ಈಗ ಅವರೊಬ್ಬ ವಿಧವೆ. ಉದ್ದೇಶಪೂರ್ವಕವಾಗಿ ಆಕೆಯ ಅಂದಗೆಡಿಸಲಾಗಿದೆ, ಎಲ್ಲ ಅಲಂಕಾರ, ಆಭರಣಗಳನ್ನು ಕಳಚಲಾಗಿದೆ. ಶಾಶ್ವತವಾಗಿ ಬೋಳಿಸಲಾದ ತಲೆಯೊಂದಿಗೆ ಮನೆಯ ಮೂಲೆಯೊಂದರಲ್ಲಿ ನೇಮನಿಷ್ಠೆಯ ಬದುಕಿಗೆ ಆಕೆಯನ್ನು ತಳ್ಳಲಾಗಿದೆ. ಆಕೆಯನ್ನು ನೆನೆದಾಗಲೆಲ್ಲ ಈ ಕತೆ ಮತ್ತು ಘೋರ ಚಿತ್ರ ಕಣ್ಣ ಮುಂದೆ ಬರುತ್ತದೆ.

ಅದೃಷ್ಟವಶಾತ್‍, ವೇದ ಯುಗದ ಇಂತಹ ಹೇಯ ಮತ್ತು ಅಮಾನವೀಯ ಪದ್ಧತಿಗಳು ಈಗ ವಿರಳವಾಗಿವೆ. ಸತಿ ಪದ್ಧತಿ, ಬಾಲ್ಯವಿವಾಹಗಳೆಲ್ಲ ಮರೆಯಾಗಿವೆ. ಇಂತಹ ಪದ್ಧತಿಗಳಿದ್ದ ದಿನಗಳು ಬಹಳ ಹಿಂದೇನೂ ಆಗಿರಲಿಲ್ಲ ಎಂಬುದನ್ನು ಯುವ ತಲೆಮಾರು ನಂಬುವುದೇ ಕಷ್ಟ.

ಲಿಂಗದ ಹೆಸರಿನಲ್ಲಿ ಮಹಿಳೆಯನ್ನು ತಾರತಮ್ಯದಿಂದ ನೋಡಬಾರದು. ಶಬರಿಮಲೆ ದೇವಾಲಯಕ್ಕೆ ಪ್ರವೇಶಕ್ಕೆ ಅವಕಾಶ ಕೊಡಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರೂ ಋತುಸ್ರಾವದ ವಯೋಮಾನದ ಮಹಿಳೆಯರು ದೇವಸ್ಥಾನ ಪ್ರವೇಶಿಸುವುದರ ವಿರುದ್ಧ ಹಲವು ಮತಾಂಧಮಂದಿ ಬೆಂಕಿ ಉಗುಳುವುದು ಆಘಾತ ಉಂಟು ಮಾಡುವಂತಿದೆ.

ಸಂವಿಧಾನದ ಸ್ಫೂರ್ತಿ ಮತ್ತು ಆಶಯಕ್ಕೆ ಅನುಗುಣವಾಗಿ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹಲವು ಮಹತ್ವದ ತೀರ್ಪುಗಳನ್ನು ನೀಡಿದೆ. ಒಂದೇ ಬಾರಿಗೆ ಮೂರುಬಾರಿ ತಲಾಖ್‍ ಹೇಳುವ ಪದ್ಧತಿಯ ನಿಷೇಧ, ಸಲಿಂಗ ಲೈಂಗಿಕತೆಯನ್ನು ಅಪರಾಧಮುಕ್ತಗೊಳಿಸುವುದು, ಲೈಂಗಿಕ ಅಲ್ಪಸಂಖ್ಯಾತರಿಗೆ ತಾರತಮ್ಯದಿಂದ ಮುಕ್ತಿ ಇಂತಹ ಕೆಲವು ತೀರ್ಪುಗಳು.

ಬಿಜೆಪಿಯನ್ನು ಕೋಮುವಾದಿ ಎಂದು ಜರೆದು ತಾನು ಪ್ರಗತಿಪರ, ಉದಾರವಾದಿ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ತ್ರಿವಳಿ ತಲಾಖ್‍ ನಿಷೇಧವನ್ನು ವಿರೋಧಿಸಲು ಯಾವ ನಾಚಿಕೆಯೂ ಇಲ್ಲ. ರಾಜೀವ್‍ ಗಾಂಧಿ ಪ್ರಧಾನಿಯಾಗಿದ್ದಾಗ ಚಾರಿತ್ರಿಕ ಶಾಬಾನು ಪ್ರಕರಣದ ವಿರುದ್ಧ ಕಾನೂನು ತಿದ್ದುಪಡಿ ಮಾಡಿದ್ದರು. ಇವೆಲ್ಲದರ ಉದ್ದೇಶ ಮುಸ್ಲಿಮರ ಮತ ಗಳಿಕೆ. ತ್ರಿವಳಿ ತಲಾಖ್‍ ನಿಷೇಧ ಕಾನೂನನ್ನು ಜಾರಿಗೆ ತರಲೇಬೇಕು ಎಂದು ಬಿಜೆಪಿ ಹಟ ಹಿಡಿದು ಕೂತಿದೆ. ತಾನು ಮುಸ್ಲಿಂ ವಿರೋಧಿ ಎಂದು ಬಿಂಬಿಸಿ ಹಿಂದೂ ಮತಗಳ ಕ್ರೋಡೀಕರಣ ಬಿಜೆಪಿಯ ಉದ್ದೇಶ.

ಶಬರಿಮಲೆ ವಿಚಾರದಲ್ಲಿ ಬಿಜೆಪಿ ಸಂಸದರು ವಿದೂಷಕರಂತೆ ಆಡುತ್ತಿದ್ದಾರೆ. ತಾವು ಕೇಂದ್ರದಲ್ಲಿ ಆಡಳಿತದಲ್ಲಿದ್ದೇವೆ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳದೆ, ಸಂವಿಧಾನವನ್ನು ಎತ್ತಿಹಿಡಿಯುತ್ತೇವೆ ಎಂಬ ನಟನೆಯನ್ನೂ ಮಾಡದೆ ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಅಗೌರವತೋರುವ ದಾರ್ಷ್ಟ್ಯ ಪ್ರದರ್ಶಿಸುತ್ತಿದ್ದಾರೆ. ಶಬರಿಮಲೆಗೆ ಮಹಿಳೆಯರ ಪ್ರವೇಶ ನಿಷೇಧವನ್ನು ಬೆಂಬಲಿಸಿ ಅದೇ ಉಸಿರಿನಲ್ಲಿ ತ್ರಿವಳಿ ತಲಾಖ್‍ ಕಾನೂನನ್ನು ಬೆಂಬಲಿಸಲು ವಕ್ರ ತರ್ಕವನ್ನು ಮುಂದಿಡುತ್ತಿದ್ದಾರೆ.

ಮುಸ್ಲಿಂ ಮಹಿಳೆಯರ ಬಗ್ಗೆ ಸುಧಾರಣಾವಾದಿ ತುಡಿತ ಪ್ರದರ್ಶಿಸುವ ಬಿಜೆಪಿ, ಹಿಂದೂ ಮಹಿಳೆಯರ ಹಕ್ಕುಗಳನ್ನು ತುಳಿಯುವಲ್ಲಿ ಯಾವುದೇ ಹಿಂಜರಿಕೆ ತೋರುವುದಿಲ್ಲ. ಜಾತಿ ಪಂಚಾಯಿತಿಗಳಿಗೆ ಬೆಂಬಲ, ಮಧ್ಯಯುಗದ ಉಡುಪು ಸಂಹಿತೆ ಜಾರಿ ಅಥವಾ ದೇವಾಲಯಗಳಿಗೆ ಮಹಿಳೆಯರ ಪ್ರವೇಶ ನಿಷೇಧಗಳೆಲ್ಲವೂ ಇಸ್ಲಾಮಿಕ್‍ ಸ್ಟೇಟ್‍ನ ರೀತಿಯಲ್ಲಿ ಊಳಿಗಮಾನ್ಯ ವ್ಯವಸ್ಥೆ ರೂಪಿಸುವ ಪ್ರಯತ್ನಗಳು.

ಕಾಂಗ್ರೆಸ್‍ ಪಕ್ಷದ ಕ್ರಮಗಳು ಕೂಡ ಇಷ್ಟೇ ಪ್ರತಿಗಾಮಿ. ಒಂದೆಡೆ, ತ್ರಿವಳಿ ತಲಾಖ್‍ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿ ಮುಸ್ಲಿಮರ ಒಲವು ಗಳಿಸಲು ಯತ್ನಿಸಿದರೆ ಇನ್ನೊಂದೆಡೆ, ಸಮಾಜಕ್ಕೆ ಕಪ್ಪುಚುಕ್ಕೆಯಂತಿರುವ ಅನಾಗರಿಕ ಪರಂಪರೆಯನ್ನು ಎತ್ತಿ ಹಿಡಿದು ಹಿಂದೂ ಮತಬ್ಯಾಂಕ್‍ ಅನ್ನು ಸಂಪ್ರೀತಗೊಳಿಸಲು ಯತ್ನಿಸುತ್ತಿದೆ.

ಯಾವುದೇ ರೀತಿಯ ನಿಷೇಧ ಇಲ್ಲದೆ ಇದ್ದಾಗಲೂ ಮಹಿಳೆಯರು ಋತುಸ್ರಾವದ ದಿನಗಳಲ್ಲಿ ಸಾಮಾನ್ಯವಾಗಿ ದೇವಾಲಯಗಳಿಗೆ ಹೋಗುವುದಿಲ್ಲ. ಮನೆಗಳಲ್ಲಿ ಕೂಡ ಅವರು ದೀಪ ಹಚ್ಚುವುದಿಲ್ಲ ಅಥವಾ ದೇವರ ಪೂಜೆ ಮಾಡುವುದಿಲ್ಲ. ವೈಯಕ್ತಿಕ ನಂಬಿಕೆಗಳ ಆಧಾರದಲ್ಲಿ ಹಾಕಿಕೊಂಡಿರುವ ಇಂತಹ ನಿರ್ಬಂಧಗಳು ಸ್ವಯಂಪ್ರೇರಿತ; ಇದರ ಮೇಲೆ ಯಾವುದೇ ಕಣ್ಗಾವಲು ಇಲ್ಲ. ಇದು ಘನತೆ ಮತ್ತು ವಿವೇಚನೆಯಿಂದ ಕೂಡಿದ್ದು. ಆದರೆ, ಸಾರ್ವಜನಿಕ ದೇವಾಲಯವೊಂದರ ಅರ್ಚಕರು ಋತುಸ್ರಾವದ ವಯೋಮಾನದ ಮಹಿಳೆಯರ ಮೇಲೆ ನಿಷೇಧ ಹೇರುವುದು ಮಧ್ಯಯುಗೀನ ಆಚರಣೆಯಾಗಿದ್ದು ಮಾನವ ಘನತೆಯನ್ನು ಅವಮಾನಿಸುವಂತಹುದಾಗಿದೆ.

ದಶಕಗಳ ಬಳಿಕ ನಾವು ಶಬರಿಮಲೆ ಘಟನೆಗಳತ್ತ ಹಿಂದಿರುಗಿ ನೋಡಿದಾಗ ಕಸದ ಬುಟ್ಟಿಗೆ ಸೇರಿದ ಈ ಆಚರಣೆ ನಮ್ಮ ಅವಮಾನಕಾರಿ ಭೂತಕಾಲದ ಭಾಗವಾಗಿಬಿಡಬಹುದು ಎಂದು ಆಶಿಸೋಣ. ನಾವು ಈಗ ಸತಿ ಅಥವಾ ವಿಧವೆಯರ ತಲೆ ಬೋಳಿಸುವ ಸಂಪ್ರದಾಯವನ್ನು ನೋಡುವಂತೆ ನಮ್ಮ ಮೊಮ್ಮಕ್ಕಳು ಈ ವಿಚಾರವನ್ನು ನೋಡಬಹುದು.


ಕ್ಯಾಪ್ಟನ್‍ ಗೋಪಿನಾಥ್‍

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !