ಕೆಂಪೇಗೌಡ ಬಡಾವಣೆ: 15 ದಿನದಲ್ಲಿ ಅಂತಿಮ ಪಟ್ಟಿ

7

ಕೆಂಪೇಗೌಡ ಬಡಾವಣೆ: 15 ದಿನದಲ್ಲಿ ಅಂತಿಮ ಪಟ್ಟಿ

Published:
Updated:

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದ ನಿವೇಶನ ಹಂಚಿಕೆಯ ಅಂತಿಮ ಪಟ್ಟಿಯನ್ನು ಪ್ರಕಟಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿದ್ಧತೆ ನಡೆಸಿದೆ.

‘ನಿವೇಶನ ಹಂಚಿಕೆಯ ತಾತ್ಕಾಲಿಕ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಜುಲೈ 10ರವರೆಗೆ ಕಾಲಾವಕಾಶ ನೀಡಿದ್ದೆವು. ಒಟ್ಟು 394 ಆಕ್ಷೇಪಣೆಗಳು ಸಲ್ಲಿಕೆ ಆಗಿದ್ದವು. ಇವುಗಳ ಪರಿಶೀಲನೆ ಪೂರ್ಣಗೊಂಡಿದೆ. ಇನ್ನು 15 ದಿನಗಳ ಒಳಗೆ ಅಂತಿಮ ಪಟ್ಟಿಯನ್ನು ಪ್ರಕಟಿಸಲಿದ್ದೇವೆ’ ಎಂದು ಹೆಸರು ಹೇಳಲು ಬಯಸದ ಬಿಡಿಎ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಹಂತದಲ್ಲಿ 5000 ನಿವೇಶನ ಹಂಚಿಕೆ ಮಾಡುವಾಗ ಪಾರದರ್ಶಕತೆ ಕಾಪಾಡಲು ಕಂಪ್ಯೂಟರ್‌ ರ‍್ಯಾಂಡಮೈಸೇಷನ್‌ ವಿಧಾನ ಅನುಸರಿಸಿದ್ದೆವು. ಈ ಬಾರಿಯೂ ಇದೇ ವಿಧಾನವನ್ನು ಅನುಸರಿಸಲಾಗುತ್ತದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೇ ಈ ಪ್ರಕ್ರಿಯೆ ನಡೆಸಿಕೊಡಲಿದ್ದಾರೆ. ಅವರ ಸಮಯ ಲಭ್ಯತೆ ನೋಡಿಕೊಂಡು ಇದಕ್ಕೆ ದಿನ ನಿಗದಿಪಡಿಸಲಾಗುತ್ತದೆ ಎಂದರು.

‘ಈಗಾಗಲೇ ಪ್ರಕಟಿಸಿರುವ ತಾತ್ಕಾಲಿಕ ಪಟ್ಟಿಯಲ್ಲಿರುವ 20x30 ಅಡಿ ಹಾಗೂ 30x40 ಅಡಿ ವಿಸ್ತೀರ್ಣದ ನಿವೇಶನಗಳ ಹಂಚಿಕೆಯಲ್ಲಿ ಕೆಲವೊಂದು ಮಾರ್ಪಾಡುಗಳು ಆಗಲಿವೆ. ಉಳಿದಂತೆ, ಈಗಿನ ಪಟ್ಟಿಯಲ್ಲಿ ಹೆಸರು ಇರುವ ಬಹುತೇಕರಿಗೆ ನಿವೇಶನ ಸಿಗಲಿದೆ’ ಎಂದು ಅವರು ತಿಳಿಸಿದರು.

‘ಫಲಾನುಭವಿಗಳು ನಿವೇಶನ ಹಂಚಿಕೆಯಾದ 60 ದಿನಗಳ ಒಳಗೆ ಪೂರ್ಣ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಅಷ್ಟರೊಳಗೆ ಹಣ ಕಟ್ಟಲು ಸಾಧ್ಯವಾಗದಿದ್ದರೆ 30 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡುತ್ತೇವೆ. ಆದರೆ, ಈ ಅವಧಿಯಲ್ಲಿ ಶೇ 18ರಷ್ಟು ಬಡ್ಡಿ ನೀಡಬೇಕಾಗುತ್ತದೆ. ಆ ಬಳಿಕವೂ ಪಾವತಿ ಸಾಧ್ಯವಾಗದಿದ್ದರೆ ಶೇ 21ರಷ್ಟು ಬಡ್ಡಿಯೊಂದಿಗೆ ಹಣ ಪಾವತಿಸಲು ಮತ್ತೆ 90 ದಿನ ಕಾಲಾವಕಾಶ ನೀಡುತ್ತೇವೆ. ನಂತರ ಹಂಚಿಕೆ ರದ್ದುಪಡಿಸುತ್ತೇವೆ’ ಎಂದು ಅವರು ವಿವರಿಸಿದರು.

ಹಂಚಿಕೆ ಪ್ರಕ್ರಿಯೆ ಮುಗಿದ ವಾರದೊಳಗೆ ನಿವೇಶನ ಸಿಗದ ಅರ್ಜಿದಾರರ ಖಾತೆಗೆ ಆರಂಭಿಕ ಠೇವಣಿಯ ಮೊತ್ತವನ್ನು ಜಮೆ ಮಾಡುತ್ತೇವೆ. ಮೊದಲ ಹಂತದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವಾಗ ಕೆಲವು ಅರ್ಜಿದಾರರು ಬ್ಯಾಂಕ್‌ ಖಾತೆ ಹಾಗೂ ಐಎಫ್‌ಎಸ್‌ಸಿ ಕೋಡ್‌ಗಳನ್ನು ನೀಡಿರಲಿಲ್ಲ. ಹಾಗಾಗಿ ಸಮಸ್ಯೆ ಆಗಿತ್ತು. ಈ ಬಾರಿ ಅರ್ಜಿ ಸಲ್ಲಿಸಿದ ಎಲ್ಲರೂ ಈ ದಾಖಲೆಗಳನ್ನು ಸರಿಯಾಗಿ ನೀಡಿದ್ದಾರೆ. ಹಾಗಾಗಿ ಈ ಗೊಂದಲಗಳಿಗೆ ಅವಕಾಶ ಇಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ಹಂಚಿಕೆ ಮಾಡಬೇಕಾದ ನಿವೇಶನಗಳಿಗೆ ರಸ್ತೆ ಹಾಗೂ ಚರಂಡಿ ನಿರ್ಮಿಸುವ ಕಾರ್ಯ ಶೇ 98ರಷ್ಟು ಪೂರ್ಣಗೊಂಡಿದೆ. ನಿವೇಶನ ಸಂಖ್ಯೆಗಳನ್ನು ಅಳವಡಿಸುವ ಕಾರ್ಯವೂ ಮುಗಿದಿದೆ’ ಎಂದು ಪ್ರಾಧಿಕಾರದ ಎಂಜಿನಿಯರಿಂಗ್‌ ಸದಸ್ಯ ಬಿ.ಎಸ್‌.ಶಿವಕುಮಾರ್‌ ತಿಳಿಸಿದರು.

ಈ ಬಡಾವಣೆಯಲ್ಲಿ ಮೊದಲ ಹಂತದಲ್ಲಿ ನಿವೇಶನ ಹಂಚಿಕೆಗೆ 2015ರ ನವೆಂಬರ್‌ನಲ್ಲಿ ಅಧಿಸೂಚನೆ ಪ್ರಕಟಿಸಲಾಗಿತ್ತು. ಒಟ್ಟು 31,369 ಮಂದಿ ಅರ್ಜಿ ಸಲ್ಲಿಸಿದ್ದರು. 5,000 ಮಂದಿಗೆ 2016ರಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು.

15,171

ನಿವೇಶನ ಕೋರಿ ಬಂದ ಅರ್ಜಿಗಳು

₹274.69 ಕೋಟಿ

ಆರಂಭಿಕ ಠೇವಣಿ ಮೂಲಕ ಸಂಗ್ರಹವಾದ ಮೊತ್ತ

10,199

ಅರ್ಜಿದಾರರಿಗೆ ಬಿಡಿಎ ಆರಂಭಿಕ ಠೇವಣಿ ಹಿಂತಿರುಗಿಸಬೇಕಿದೆ

145 ಕೋಟಿ

ನಿವೇಶನ ಸಿಗದವರಿಗೆ ಆರಂಭಿಕ ಠೇವಣಿ ಹಿಂತಿರುಗಿಸಲು ಬಿಡಿಎ ಕಾಯ್ದಿರಿಸಿದ ಮೊತ್ತ 

ನಿವೇಶನಗಳ ವಿವರ
ಗಾತ್ರ; ಲಭ್ಯ ನಿವೇಶನ; ಬಂದ ಅರ್ಜಿಗಳು; ಸಂಗ್ರಹವಾದ ಆರಂಭಿಕ ಠೇವಣಿ (₹ ಕೋಟಿ)

20x30; 1500; 8660; 48.59 

30x40; 2500; 4791; 117.85

40x60; 700; 1448; 79.59

50x80; 300; 272; 28.65

 

 

 

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !