ದ್ವಿಪಕ್ಷೀಯ ಮಾತುಕತೆಗೆ ಪಾಕ್‌ ಉತ್ಸುಕ

ಮಂಗಳವಾರ, ಏಪ್ರಿಲ್ 23, 2019
31 °C
2013ರಿಂದ ಭಾರತದ ಜತೆ ಸಮಾಲೋಚನೆ ಸ್ಥಗಿತ: ಬಿಕ್ಕಟ್ಟು ಇತ್ಯರ್ಥಕ್ಕೆ ಸಲಹೆ

ದ್ವಿಪಕ್ಷೀಯ ಮಾತುಕತೆಗೆ ಪಾಕ್‌ ಉತ್ಸುಕ

Published:
Updated:
Prajavani

ನವದೆಹಲಿ: ಭಾರತದ ಜತೆ ಸ್ಥಗಿತವಾಗಿರುವ ಮಾತುಕತೆಯನ್ನು ಪುನರ್‌ ಆರಂಭಿಸಲು ಪಾಕಿಸ್ತಾನ ಉತ್ಸಾಹ ತೋರಿದೆ.

ಪಾಕಿಸ್ತಾನದ ರಾಷ್ಟ್ರೀಯ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಕಳುಹಿಸಿರುವ ಶುಭ ಸಂದೇಶವನ್ನೇ ನೆಪವಾಗಿಟ್ಟುಕೊಂಡು ಈ ಕ್ರಮಕ್ಕೆ ಮುಂದಾಗಿದೆ.

2013ರಿಂದ ಸ್ಥಗಿತವಾಗಿರುವ ಉಭಯ ದೇಶಗಳ ಮಾತುಕತೆಯನ್ನು ಮತ್ತೆ ಆರಂಭಿಸುವ ಪಾಕಿಸ್ತಾನದ ಪ್ರಸ್ತಾವನೆಗೆ ಭಾರತ ಇದುವರೆಗೆ ಅಧಿಕೃತವಾಗಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಆದರೆ, ದ್ವಿಪಕ್ಷೀಯ ಸಂಬಂಧಗಳನ್ನು ಮತ್ತೆ ಆರಂಭಿಸುವ ನಿಟ್ಟಿನಲ್ಲಿ ಭಾರತ ಮುಕ್ತ ಮನಸ್ಸು ಹೊಂದಿದೆ ಎಂದು ಶನಿವಾರ ಮೂಲಗಳು ತಿಳಿಸಿವೆ.

ಭಾರತದ ಕ್ರಮದಿಂದ ಲೋಕಸಭೆ ಚುನಾವಣೆ ಬಳಿಕ ಅಸ್ತಿತ್ವಕ್ಕೆ ಬರುವ ಸರ್ಕಾರ ಬಯಸಿದರೆ ಪಾಕಿಸ್ತಾನದ ಜತೆ ಸಂಬಂಧ ಬೆಳೆಸಲು ಉತ್ತಮ ವಾತಾವರಣ ಸೃಷ್ಟಿಯಾಗಬಹುದು ಎಂದು ತಿಳಿಸಿವೆ.

ಪಾಕಿಸ್ತಾನ ರಾಷ್ಟ್ರೀಯ ದಿನದ ಅಂಗವಾಗಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತದಲ್ಲಿನ ಪಾಕಿಸ್ತಾನ ರಾಯಭಾರಿ ಸೊಹೈಲ್‌ ಮಹಮೂದ್‌ ಸಹ ಮತ್ತೆ ಉಭಯ ದೇಶಗಳು ಮಾತುಕತೆಗೆ ಮುಂದಾಗಬೇಕು ಎನ್ನುವ ಆಶಯ ವ್ಯಕ್ತಪಡಿಸಿದ್ದಾರೆ.

‘ಭಾರತದ ಜತೆ ಶಾಂತಿ ಮತ್ತು ಉತ್ತಮ ಸಂಬಂಧ ಇರಬೇಕು ಎನ್ನುವುದು ಪಾಕಿಸ್ತಾನದ ಬಯಕೆಯಾಗಿದೆ’ ಎಂದು ಅವರು ಹೇಳಿದರು.

‘ಇತ್ತೀಚಿನ ಬೆಳವಣಿಗೆಗಳಿಂದ ದ್ವಿಪಕ್ಷೀಯ ಸಂಬಂಧಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪಾಕಿಸ್ತಾನ ಕೈಗೊಂಡ ಕ್ರಮಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗಿವೆ’ ಎಂದು ಹೇಳಿದರು.

ಇದನ್ನೂ ಓದಿ: ಪಾಕಿಸ್ತಾನ ರಾಷ್ಟ್ರೀಯ ದಿನಕ್ಕೆ ಮೋದಿ ಶುಭಾಶಯ: ಇಮ್ರಾನ್‌ ಖಾನ್‌ ಟ್ವೀಟ್‌

1940ರ ಮಾರ್ಚ್‌ 23ರಂದು ಆಲ್‌–ಇಂಡಿಯಾ ಮುಸ್ಲಿಂ ಲೀಗ್‌ ಮುಸ್ಲಿಮರಿಗಾಗಿ ಪ್ರತ್ಯೇಕ ದೇಶದ ಬೇಡಿಕೆ ಮಂಡಿಸಿ ನಿರ್ಣಯ ಕೈಗೊಂಡಿದ್ದರಿಂದ ಈ ದಿನವನ್ನು ಪಾಕಿಸ್ತಾನದ ರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ.

‘ಶಾಂತಿ ಸ್ಥಾಪನೆ ದೌರ್ಬಲ್ಯವಲ್ಲ’

‘ಪಾಕಿಸ್ತಾನ ಶಾಂತಿ ಬಯಸುವುದನ್ನು ದೌರ್ಬಲ್ಯ ಎಂದು ಭಾರತ ಭಾವಿಸಿಕೊಳ್ಳಬಾರದು. ಯಾವುದೇ ಪರಿಸ್ಥಿತಿ ಎದುರಿಸಲು ಸಿದ್ಧ’ ಎಂದು ಪಾಕಿಸ್ತಾನದ ಅಧ್ಯಕ್ಷ ಅರೀಫ್‌ ಅಲ್ವಿ ಹೇಳಿದ್ದಾರೆ.

ಪಾಕಿಸ್ತಾನದ ರಾಷ್ಟ್ರೀಯ ದಿನದ ಅಂಗವಾಗಿ ಶನಿವಾರ ನಡೆದ ಸೇನಾ ಪರೇಡ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತದ ಅತಿಕ್ರಮಣಕ್ಕೆ ಪ್ರತಿಕ್ರಿಯೆ ನೀಡುವುದು ಪಾಕಿಸ್ತಾನದ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ನಾವು ಈಗಾಗಲೇ ಉತ್ತಮ ಕಾರ್ಯತಂತ್ರದಿಂದಲೇ ಪ್ರತಿಕ್ರಿಯಿಸಿದ್ದೇವೆ’ ಎಂದು ಪ್ರತಿಪಾದಿಸಿದರು.

'ಪಾಕಿಸ್ತಾನವನ್ನು ವಿಭಜನೆಗೆ ಮುನ್ನವಿದ್ದ ದೃಷ್ಟಿಕೋನದಿಂದ ಭಾರತ ನೋಡಬಾರದು. ಅದೇ ರೀತಿ ಭಾವಿಸಿಕೊಂಡಿದ್ದರೆ ಏಷ್ಯಾ ಉಪಖಂಡದ ಸ್ಥಿರತೆಗೆ ಧಕ್ಕೆಯಾಗಲಿದೆ’ ಎಂದರು.

 ‘ಎಲ್ಲ ಬಿಕ್ಕಟ್ಟುಗಳನ್ನು ಮಾತುಕತೆ ಮೂಲಕ ಇತ್ಯರ್ಥಗೊಳಿಸಿಕೊಳ್ಳಬಹುದು ಎನ್ನುವ ನಿರ್ಧಾರಕ್ಕೆ ಭಾರತ ಬರಬೇಕಾಗಿದೆ’ ಎಂದು ಅವರು ಹೇಳಿದರು.

ಪರೇಡ್‌ನಲ್ಲಿ ಸೇನೆ, ವಾಯು ಪಡೆ ಮತ್ತು ನೌಕಾಪಡೆ ತಮ್ಮ ಸಾಮರ್ಥ್ಯ ವನ್ನು ಪ್ರದರ್ಶಿಸಿದವು. ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌, ಮಲೇಷ್ಯಾದ ಪ್ರಧಾನಿ ಮಹಾಥೀರ್‌ ಮೊಹಮ್ಮದ್‌ ಇದ್ದರು.

***

ಎಲ್ಲ ಬಿಕ್ಕಟ್ಟುಗಳನ್ನು ಶಾಂತಿಯುತ ಮಾತುಕತೆ ಮೂಲಕವೇ ಉಭಯ ದೇಶಗಳು ಇತ್ಯರ್ಥಗೊಳಿಸಿಕೊಳ್ಳಬೇಕಾದ ಅಗತ್ಯವಿದೆ.

–ಸೊಹೈಲ್‌ ಮಹಮೂದ್‌, ಭಾರತದಲ್ಲಿನ ಪಾಕಿಸ್ತಾನ ರಾಯಭಾರಿ

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !