ಆ್ಯಸಿಡ್‌ನಲ್ಲಿ ಕರಗಿದ ಖಶೋಗ್ಗಿ ದೇಹ

7
ಸೌದಿ ಕಾನ್ಸುಲೇಟ್‌ನ ತೋಟದಲ್ಲಿ ದೊರೆತ ಜೈವಿಕ ಸಾಕ್ಷ್ಯ

ಆ್ಯಸಿಡ್‌ನಲ್ಲಿ ಕರಗಿದ ಖಶೋಗ್ಗಿ ದೇಹ

Published:
Updated:
Deccan Herald

ಅಂಕಾರ: ‘ರಿಯಾದ್‌ನ ಪತ್ರಕರ್ತ ಜಮಾಲ್‌ ಖಶೋಗ್ಗಿ ಅವರನ್ನು ತಿಂಗಳ ಹಿಂದೆಯೇ ಕೊಂದು, ಮೃತದೇಹದ ಅಂಗಚ್ಛೇದ ಮಾಡಿ, ಆ್ಯಸಿಡ್‌ನಲ್ಲಿ ಕರಗಿಸಿ ವಿಸರ್ಜಿಸಲಾಗಿದೆ’ ಎಂದು ಟರ್ಕಿ ಅಧ್ಯಕ್ಷ ರಿಸೆಪ್‌ ತಯ್ಯಿಪ್‌ ಎರ್ಡೊಗನ್‌ ಅವರ ಸಲಹೆಗಾರ ಯಾಸಿನ್ ಆಕ್ಟೆ ಶುಕ್ರವಾರ ತಿಳಿಸಿದ್ದಾರೆ.

‘ಮುಗ್ಧ ವ್ಯಕ್ತಿಯನ್ನು ಕೊಲ್ಲುವುದು ಅಪರಾಧ. ಅದರಲ್ಲೂ ಸೌದಿ ಕಾನ್ಸುಲೇಟ್‌ ಕಚೇರಿ ಅವರ ಮೃತದೇಹದ ಮೇಲೂ ಕ್ರೌರ್ಯದ ಅತಿರೇಕ ತೋರಿರುವುದು ಮತ್ತೊಂದು ದೊಡ್ಡ ಅಪರಾಧ ಹಾಗೂ ಅಗೌರವ’ ಎಂದು ಅವರು ಹೇಳಿದ್ದಾರೆ.

‘ಕಾನ್ಸುಲೇಟ್‌ನ ತೋಟದಲ್ಲಿ ಜೈವಿಕ ಸಾಕ್ಷ್ಯ ದೊರೆತಿದೆ. ಕಶೋಗ್ಗಿ ಅವರನ್ನು ಕೊಂದ ಸ್ಥಳಕ್ಕೆ ಸಮೀಪದಲ್ಲೇ ಅವರ ದೇಹವನ್ನು ವಿಲೇವಾರಿ ಮಾಡಿರುವ ಸಾಧ್ಯತೆಯನ್ನು ಇದು ತಿಳಿಸುತ್ತದೆ’ ಎಂದು ಅವರು ‘ವಾಷಿಂಗ್ಟನ್‌ ಪೋಸ್ಟ್‌’ಗೆ ಹೇಳಿಕೆ ನೀಡಿದ್ದಾರೆ.

ತೋಟದಲ್ಲಿನ ಬಾವಿಯನ್ನು ಶೋಧಿಸಲು ಸೌದಿ ಅಧಿಕಾರಿಗಳು ಟರ್ಕಿ ಪೊಲೀಸರಿಗೆ ಅನುಮತಿ ನೀಡಿಲ್ಲ. ಆದರೆ, ಅದರಲ್ಲಿನ ನೀರನ್ನು ವಿಶ್ಲೇಷಣೆಗಾಗಿ ಕೊಂಡೊಯ್ಯಲು ಅವಕಾಶ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಕಶೋಗ್ಗಿ ಅವರು ಇಸ್ತಾಂಬುಲ್‌ನಲ್ಲಿನ ಸೌದಿ ಕಾನ್ಸುಲೇಟ್‌ ಪ್ರವೇಶಿಸಿದ ಕೂಡಲೇ, ನಿಗದಿತ ಯೋಜನೆಯಂತೆ ಅವರನ್ನು ಕೊಂದು ಹಾಕಲಾಗಿತ್ತು ಎಂದು ಟರ್ಕಿಯ ಮುಖ್ಯ ಪ್ರಾಸಿಕ್ಯೂಟರ್‌ ಬುಧವಾರವೇ ಮೊದಲ ಬಾರಿಗೆ ದೃಢಪಡಿಸಿದ್ದರು.

ಸೌದಿ ಅರೇಬಿಯಾ ಸರ್ಕಾರದ ಕಟು ಟೀಕಾಕಾರರಾಗಿದ್ದ ಖಶೋಗ್ಗಿ ಅವರ ಹತ್ಯೆಗೆ ಅಂತರ ರಾಷ್ಟ್ರೀಯವಾಗಿ ತೀವ್ರ ಖಂಡನೆ ವ್ಯಕ್ತವಾಗಿದೆ. ಈ ಹತ್ಯೆಯು ಅಮೆರಿಕ ಮತ್ತು ಸೌದಿಯ ದಶಕಗಳ ಕಾಲದ ಮೈತ್ರಿಗೆ ಕಳಂಕ ತಂದೊಡ್ಡಿದೆ. ಮಾತ್ರವಲ್ಲ, ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅವರ ವರ್ಚಸ್ಸಿಗೂ ಧಕ್ಕೆ ತಂದಿದೆ.

ಯೆಮನ್‌ ನಾಗರಿಕರ ಮೇಲೆ ಸೌದಿ ನಡೆಸುತ್ತಿರುವ ಯುದ್ಧ ಸೇರಿದಂತೆ, ಸೌದಿ ರಾಜಕುಮಾರನ ನಡೆಯನ್ನು ಖಶೋಗ್ಗಿ ‘ವಾಷಿಂಗ್ಟನ್‌ ಪೋಸ್ಟ್‌’ನ ತಮ್ಮ ಅಂಕಣದಲ್ಲಿ ತೀವ್ರವಾಗಿ ಟೀಕಿಸಿ ಬರೆಯುತ್ತಿದ್ದರು. ಟರ್ಕಿ ಯುವತಿಯೊಬ್ಬರನ್ನು ವಿವಾಹವಾಗುವ ಸಂಬಂಧದ ದಾಖಲೆ ಪಡೆಯುವ ಸಲುವಾಗಿ ಅವರು ಕಾನ್ಸುಲೇಟ್‌ಗೆ ತೆರಳಿದ್ದರು.

‘ಪತ್ರಕರ್ತರ ಹತ್ಯೆ ಅತಿರೇಕದ್ದು’

ವಿಶ್ವಸಂಸ್ಥೆ : ವಿಶ್ವದಾದ್ಯಂತ ಕರ್ತವ್ಯನಿರತ ಪತ್ರಕರ್ತರನ್ನು ಹತ್ಯೆ ಮಾಡುವ ಕೃತ್ಯ ಅತಿರೇಕದ್ದು ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಹೇಳಿದ್ದಾರೆ. ಜೊತೆಗೆ, ಇದೊಂದು ಸಾಮಾನ್ಯ ಪ್ರಕ್ರಿಯೆ ಎಂಬಂತೆ ಆಗಿಬಿಡಬಾರದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸುದ್ದಿಗಳನ್ನು ವರದಿ ಮಾಡಿದ್ದಕ್ಕಾಗಿ ಕೇವಲ ಒಂದು ದಶಕದಲ್ಲಿ 1,010 ಪತ್ರಕರ್ತರ ಹತ್ಯೆ ನಡೆದಿದೆ. 10ರ ಪೈಕಿ 9 ಪ್ರಕರಣಗಳಲ್ಲಿ ಈ ಕೃತ್ಯಗಳ ಹಿಂದಿರುವವರಿಗೆ ಶಿಕ್ಷೆಯಾಗಿಯೇ ಇಲ್ಲ. ವಿಶ್ವಸಂಸ್ಥೆಯ ವರದಿ ಪ್ರಕಾರ, 2018ರಲ್ಲಿ ಕನಿಷ್ಠ 88 ಪತ್ರಕರ್ತರನ್ನು ಸಾಯಿಸಲಾಗಿದೆ.

‘ಶಂಕಿತ ಆರೋಪಗಳ ಮೇಲೆ ಸಾವಿರಕ್ಕೂ ಹೆಚ್ಚು ಪತ್ರಕರ್ತರ ಮೇಲೆ ದಾಳಿ ನಡೆದಿದೆ. ಕಿರುಕುಳ ನೀಡಲಾಗಿದೆ, ವಶದಲ್ಲಿ ಇಟ್ಟುಕೊಳ್ಳಲಾಗಿದೆ’ ಎಂದು ಪತ್ರಕರ್ತರ ವಿರುದ್ಧ ಅಪರಾಧ ಅಂತ್ಯದ ದಿನಾಚರಣೆ ಅಂಗವಾಗಿ ಬಿಡುಗಡೆ ಮಾಡಿರುವ ವಿಡಿಯೊ ಸಂದೇಶದಲ್ಲಿ ಗುಟೆರಸ್ ಹೇಳಿದ್ದಾರೆ. ಪ್ರತಿ ವರ್ಷ ನವೆಂಬರ್‌ 2ರಂದು ಈ ದಿನಾಚರಣೆ ನಡೆಯುತ್ತದೆ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 3

  Sad
 • 0

  Frustrated
 • 2

  Angry

Comments:

0 comments

Write the first review for this !