ಸೋಮವಾರ, ಡಿಸೆಂಬರ್ 16, 2019
17 °C
ಠಾಣೆಗೆ ದೂರು ನೀಡಿದ್ದ ತಂದೆ

₹ 2,500ಕ್ಕಾಗಿ ಅಪಹರಣ ನಾಟಕವಾಡಿದ್ದ ಮಗ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಹಣ ಕೊಡುವುದಿಲ್ಲ’ ಎಂದು ಹೇಳಿದ್ದ ತಂದೆಯಿಂದ ₹ 2,500 ಪಡೆದುಕೊಳ್ಳಲು ಅಪಹರಣ ನಾಟಕವಾಡಿದ್ದ ಮಗನ ಕೃತ್ಯ, ಜ್ಞಾನಭಾರತಿ ಪೊಲೀಸರ ತನಿಖೆಯಿಂದ ಬಯಲಾಗಿದೆ.

‘ಬಿ.ಕಾಂ ಓದುತ್ತಿರುವ ಮಗನನ್ನು ಯಾರೋ ಅಪಹರಣ ಮಾಡಿರುವುದಾಗಿ ನಾಗರಭಾವಿ ನಿವಾಸಿಯೊಬ್ಬರು ದೂರು ನೀಡಿದ್ದರು. ತನಿಖೆ ನಡೆಸಿದಾಗ, ಸ್ನೇಹಿತರ ಜೊತೆ ಸೇರಿ ಮಗನೇ ಅಪಹರಣದ ಕಥೆ ಹೆಣೆದಿದ್ದ ಎಂಬ ಸಂಗತಿ ಪತ್ತೆಯಾಯಿತು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಮಗನಿಂದ ಹೇಳಿಕೆ ಪಡೆಯಲಾಗಿದೆ. ದೂರು ವಾಪಸು ಪಡೆಯುವುದಾಗಿಯೂ ತಂದೆ ಹೇಳುತ್ತಿದ್ದಾರೆ’ ಎಂದು ತಿಳಿಸಿದರು.

ಆಗಿದ್ದೇನು: ‘ಕಾಲೇಜಿನ ಪುಸ್ತಕಗಳನ್ನು ಜೆರಾಕ್ಸ್ ಮಾಡಿಸಿಕೊಂಡು ಬರುವುದಾಗಿ ಹೇಳಿ ಆಗಸ್ಟ್ 28ರಂದು ಸಂಜೆ ಮನೆಯಿಂದ ಕಾರಿನಲ್ಲಿ ಹೊರಹೋಗಿದ್ದ ಮಗ ವಾಪಸ್‌ ಬಂದಿರಲಿಲ್ಲ’ ಎಂದು ತಂದೆ ದೂರು ನೀಡಿದ್ದಾಗಿ ಪೊಲೀಸರು ಹೇಳಿದರು.

‘ಮಗನ ಖಾತೆಗೆ ₹ 2,500 ಜಮೆ ಮಾಡುವಂತೆ ತಂದೆಗೆ ಸಂದೇಶ ಬಂದಿತ್ತು. ಗಾಬರಿಗೊಂಡ ತಂದೆ, ಹಣವನ್ನೂ ಜಮೆ ಮಾಡಿದ್ದರು. ಅದಾದ ಬಳಿಕ, ಎಟಿಎಂ ನಂಬರ್ ಹಾಗೂ ಪಿನ್ ಸಂಖ್ಯೆ ಕಳುಹಿಸುವಂತೆ ಮತ್ತೊಂದು ಸಂದೇಶ ಬಂದಿತ್ತು. ಅದಕ್ಕೆ ತಂದೆ ಪ್ರತಿಕ್ರಿಯಿಸಿರಲಿಲ್ಲ.’

ಮಗ ಕಾರಿನಲ್ಲಿರುವ ಫೋಟೊವನ್ನು ಆತನ ಸ್ನೇಹಿತೆಯೊಬ್ಬಳು, ತಂದೆಗೆ ಕಳುಹಿಸಿದ್ದಳು. ‘ಯಾರೋ ಈ ಫೋಟೊಗಳನ್ನು ನನಗೆ ಕಳುಹಿಸಿದ್ದಾರೆ. ನಿಮ್ಮ ಮಗ ಅಪಾಯದಲ್ಲಿದ್ದಾನೆ’ ಎಂದು ಸ್ನೇಹಿತೆ ಹೇಳಿದ್ದಳು. ಆತಂಕಗೊಂಡ ತಂದೆ, ಮಗನಿಗೆ ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಅವಾಗಲೇ ತಂದೆ, ಹಣಕ್ಕಾಗಿ ಸಹಪಾಠಿಗಳೇ ಮಗನನ್ನು ಅಪಹರಣ ಮಾಡಿರುವುದಾಗಿ ಆರೋಪಿಸಿ ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು. 

ಪ್ರತಿಕ್ರಿಯಿಸಿ (+)