ಶುಕ್ರವಾರ, ನವೆಂಬರ್ 22, 2019
26 °C

ಸವಾಲು ಎದುರಿಸಲು ಸ್ವಾವಲಂಬಿಗಳಾಗಿ: ಕಿರಣ್ ಬೇಡಿ ಕಿವಿಮಾತು

Published:
Updated:
Prajavani

ಬೆಂಗಳೂರು: ‘ಹೆಣ್ಣು ಹುಟ್ಟಿನಿಂದಲೇ ನಾಯಕತ್ವ ಗುಣ ಹಾಗೂ ಜವಾಬ್ದಾರಿಗಳನ್ನು ನಿಭಾಯಿಸುವ ಶಕ್ತಿ ಹೊಂದಿರುತ್ತಾಳೆ. ಅದಾಗಿಯೂ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಮೆಟ್ಟಿನಿಲ್ಲಬೇಕಾದರೆ ಸ್ವಾವಲಂಬಿಗಳಾಗಬೇಕು’ ಎಂದು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಕಿವಿ ಮಾತು ಹೇಳಿದರು. 

ಬಯೋ ಜಿನೆಸಿಸ್ ಹೆಲ್ತ್ ಕ್ಲಸ್ಟರ್ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘5ನೇ ವಿಶ್ವ ಮಹಿಳಾ ಸಮಾವೇಶ’ ಉದ್ಘಾಟಿಸಿ ಮಾತನಾಡಿದರು. 

‘ಮಹಿಳೆಯರು ಇತರರ ಮೇಲೆ ಅವಲಂಬನೆಯಾಗುವ ಮನೋಭಾವದಿಂದ ಹೊರಬಂದು, ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಲೆ ರೂಢಿಸಿಕೊಳ್ಳಬೇಕು. ಜೀವನದ ಅನುಭವಗಳು ಹಲವು ಪಾಠಗಳನ್ನು ಕಲಿಸಲಿವೆ. ಸಾಧನೆಯ ಹಾದಿಯಲ್ಲಿ ಸಾಗುವಾಗ ತನ್ನನ್ನು ಗಂಡಿನೊಂದಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ಹೆಣ್ಣು ಬಿಡಬೇಕಾಗುತ್ತದೆ. ಯಶಸ್ಸಿಗೆ ಅಗತ್ಯವಾದ ಧೈರ್ಯ, ಛಲ, ಕೌಶಲಗಳನ್ನು  ಮೈಗೂಡಿಸಿಕೊಳ್ಳಬೇಕು’ ಎಂದರು. 

‘ಹೆಣ್ಣು ಮಕ್ಕಳು ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕಿದೆ. ಆರೋಗ್ಯವಂತ ಮನಸ್ಸು, ಮನೆ ಹಾಗೂ ಸಮಾಜ ನೆಮ್ಮದಿಯುತ ಜೀವನಕ್ಕೆ ಸಹಕಾರಿಯಾಗಿದೆ. ಲಿಂಗಭೇದವನ್ನು ಮರೆತು ಯಶಸ್ಸಿನ ಕಡೆ ಸಾಗಿರಿ’ ಎಂದು ತಿಳಿಸಿದರು. 

‘ನಾನು ಪ್ರತಿನಿತ್ಯ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ನನ್ನ ಬಗ್ಗೆ ತಿಳಿದಿದ್ದರೂ ಕೆಲವರು ನನ್ನನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸಿ, ವಿಫಲರಾಗುತ್ತಿದ್ದಾರೆ’ ಎಂದರು. 

ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ‘ಮಹಿಳೆಯರಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಕ್ಕಲ್ಲಿ ಸಾಧನೆ ಸಾಕಾರವಾಗಲಿದೆ. ಸಂಸ್ಕೃತಿಯನ್ನು ಉಳಿಸುವಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶಗಳು ಸಿಗುವಂತಾಗಬೇಕು. ಕುಟುಂಬದ ಸದಸ್ಯರ ಆರೋಗ್ಯದ ಕಡೆ ಸದಾ ಗಮನಹರಿಸುವ ಮಹಿಳೆ ತನ್ನ ಆರೋಗ್ಯವನ್ನು ಕಡೆಗಣಿಸದಿರಲಿ’ ಎಂದು ಕಿವಿಮಾತು ಹೇಳಿದರು.

ಪ್ರತಿಕ್ರಿಯಿಸಿ (+)