ಮೌಲ್ಯ ಅರಿಯಿರಿ...

ಸೋಮವಾರ, ಮಾರ್ಚ್ 25, 2019
28 °C

ಮೌಲ್ಯ ಅರಿಯಿರಿ...

Published:
Updated:
Prajavani

ಮನೆಯನ್ನು ಸ್ವರ್ಗ ಎನ್ನುತ್ತಾರೆ. ಆದರೆ ನನಗೆ ನರಕ ಅನ್ನಿಸುತ್ತದೆ. ನಾನು ದುಡಿಯುತ್ತಿದ್ದಾಗ ನನ್ನ ಸಂಬಳವನ್ನು ಅಮ್ಮನಿಗೆ ಕೊಡುತ್ತಿದ್ದೆ. ಅಕ್ಕನ ಮದುವೆಗೂ ಸಹ 1ಲಕ್ಷ ದುಡ್ಡು ಕೊಟ್ಟಿದ್ದೆ. ಆದರೆ ಈಗ ಕೆಲಸವಿಲ್ಲ ಎನ್ನುವ ಕಾರಣಕ್ಕೆ ಬಹಳ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನನ್ನ ಹತ್ತಿರ ಹಣವಿಲ್ಲ, ನನಗೆ ಸ್ವಲ್ಪ ಹಣ ಕೊಡಿ ಎಂದರೆ ನಿನ್ನ ಹಣ ಎಸೆಯುತ್ತೇವೆ ಎನ್ನುತ್ತಾರೆ. ನನ್ನ ಕುಟುಂಬವೇಕೆ ಹೀಗೆ ಎಂದು ತುಂಬಾ ನೋವು ಪಡ್ತೀನಿ. ಮದುವೆ ಅನ್ನೋ ಆಸೆ, ಕುಟುಂಬ ಎನ್ನುವ ಮಮಕಾರ ಬಿಟ್ಟು ಒಬ್ಬಳೇ ಎಲ್ಲಾದ್ರೂ ಹೋಗಿ ನನ್ನ ಗುರಿ ಸಾಧನೆ ಮಾಡಬೇಕು ಅನ್ನಿಸುತ್ತಿದೆ. ಸಾಧಕರು ಹೇಳುವ ಹಾಗೆ ಅವರ ಪ್ರತಿ ಹೆಜ್ಜೆಯಲ್ಲೂ ಕುಟುಂಬದ ನೆರವಿರುತ್ತದೆ. ಆದರೆ ನನ್ನ ಕುಟುಂಬ ಮಾತ್ರ ಹೀಗಿದೆ. ಅವರ ಮುಂದೆ ನಾನು ಸೋಲೊಪ್ಪಿಕೊಳ್ಳಲು ಸಿದ್ಧಳಿಲ್ಲ. ನನಗೆ ಅಪ್ರತಿಮ ಸಾಧನೆ ಮಾಡಬೇಕು ಎನ್ನುವ ಹಂಬಲವಿದೆ. ನಾನೇನು ಮಾಡಲಿ?
–ಹೆಸರು, ಊರು ಬೇಡ

ಉತ್ತರ: ನೀವು ಇಲ್ಲಿ ನಿಮ್ಮ ವಿದ್ಯಾಭ್ಯಾಸ ಹಾಗೂ ಕೆಲಸದ ಬಗ್ಗೆ ಮಾಹಿತಿ ತಿಳಿಸಿಲ್ಲ. ನಿಮ್ಮಿಂದ ಸ್ವತಂತ್ರರಾಗಿರಲು ಸಾಧ್ಯವಾದರೆ ನೀವೇಕೆ ಸ್ವತಂತ್ರರಾಗಿರಲು ಪ್ರಯತ್ನ ಮಾಡಬಾರದು. ನಿಮ್ಮ ನಿರ್ಧಾರ ನಿಮ್ಮದು. ಬೇರೆ ಊರಿನಲ್ಲಿ ಕೆಲಸಕ್ಕೆ ಸೇರಿ. ಇದರಿಂದ ಕೆಲ ಕಾಲ ನಿಮ್ಮ ಕುಟುಂಬ ಹಾಗೂ ಮನೆಯಿಂದ ದೂರವಿರಬಹುದು. ಬಹುಶಃ ಆಗ ನೀವು ಹಾಗೂ ನಿಮ್ಮ ಮನೆಯವರು ಇಬ್ಬರೂ ಇಬ್ಬರ ಮೌಲ್ಯವನ್ನು ಚೆನ್ನಾಗಿ ಅರಿತುಕೊಳ್ಳಬಹುದು. ಜೊತೆಗೆ ನಿಮ್ಮ ನಡುವಿನ ಬಾಂಧವ್ಯ ವೃದ್ಧಿಯಾಗಬಹುದು. ನಿಮ್ಮ ಊರಿನಿಂದ ದೂರದ ಊರಿಗೆ ಕೆಲಸಕ್ಕೆ ಅರ್ಜಿ ಹಾಕಿ. ಇದರಿಂದ ವಿಷಯ ಸುಲಭವಾಗುತ್ತದೆ ಹಾಗೂ ನಿಮ್ಮ ಗುರಿಯನ್ನು ಮುಟ್ಟಲು ಸಹಾಯವಾಗುತ್ತದೆ. ಮನೆಯವರ ಸಹಕಾರ ತುಂಬಾನೇ ಮುಖ್ಯ. ಆದರೆ ಅವರು ನಿಮ್ಮನ್ನು ತಮ್ಮ ಸಹಾಯಕ್ಕೆ ಮಾತ್ರ ಬಳಸಿಕೊಂಡರೆ ಆಗ ಸ್ವತಂತ್ರರಾಗಿರಲು ಹಾಗೂ ಗುರಿ ಸಾಧಿಸಲು ನಿಮ್ಮಲ್ಲಿ ಆತ್ಮವಿಶ್ವಾಸವಿರಬೇಕು.

***
ನಮ್ಮದು 6 ಜನರಿರುವ ಬಡ ಕುಟುಂಬ. ನನ್ನ ತಂಗಿ ಬುದ್ಧಿಮಾಂದ್ಯೆ. ಅವಳಿಗೀಗ 21 ವರ್ಷ. ಎಲ್ಲರೊಂದಿಗೂ ಚೆನ್ನಾಗಿ ಮಾತನಾಡುತ್ತಾಳೆ. ಆದರೆ ಒಮ್ಮೊಮ್ಮೆ ಅತಿಯಾಗಿ ಸಿಟ್ಟಾಗುತ್ತಾಳೆ. ನನ್ನ ಅಣ್ಣನ ಹೆಂಡತಿಯನ್ನು ಕಂಡರೆ ಅತಿಯಾಗಿ ಕೋಪಿಸಿಕೊಂಡು ಅವರಿಗೆ ಹೊಡೆಯಲು ಹೋಗುತ್ತಾಳೆ. ಇದೇ ಕಾರಣದಿಂದ ನಮ್ಮ ಅತ್ತಿಗೆ ತವರು ಮನೆಗೆ ಹೋಗಿದ್ದರು. ಆ ಸಮಯದಲ್ಲಿ ನಾವು ನಮ್ಮ ತಂಗಿಯನ್ನು ನರರೋಗ ತಜ್ಞರಿಗೆ ತೋರಿಸಿ ಅವರು ಹೇಳಿದ ಔಷಧಗಳನ್ನು ನೀಡಿದ್ದೆವು. ನಮ್ಮ ಅತ್ತಿಗೆ ನಮ್ಮ ಮನೆಗೆ ಮರಳಿದ್ದಾರೆ. ಆದರೆ ಇವಳು ಮತ್ತೆ ಸಿಟ್ಟಾಗುವುದು, ಅವರಿಗೆ ಮನಸ್ಸಿಗೆ ನೋವಾಗುವಂತೆ ಬೈಯುವುದು ಮಾಡುತ್ತಾಳೆ. ಆಕೆಗೆ ಹೊಡೆದರೆ ಅಳುತ್ತಾಳೆ, ಇನ್ನೊಮ್ಮೆ ಹಾಗೆ ಮಾಡುವುದಿಲ್ಲ ಎನ್ನುತ್ತಾಳೆ, ಮತ್ತೆ ಅದನ್ನೇ ಮಾಡುತ್ತಾಳೆ. ಈ ಇಬ್ಬರ ನಡುವೆ ನನ್ನ ತಾಯಿ ಹಿಂಸೆ ಅನುಭವಿಸುತ್ತಿದ್ದಾರೆ. ಆಕೆಯನ್ನು ಎಲ್ಲಿಗೆ ತೋರಿಸಬೇಕು. ಏನು ಮಾಡಬೇಕು?
–ರಮೇಶ್, ಊರು ಬೇಡ

ಉತ್ತರ: ನೀವು ಎಂತಹ ಕಠಿಣ ಹಾಗೂ ಸೂಕ್ಷ್ಮ ಪರಿಸ್ಥಿತಿಯನ್ನು ಎದುರಿಸುತ್ತಿದ್ದೀರಿ ಎಂಬುದು ನನಗೆ ಅರ್ಥವಾಗುತ್ತದೆ. ನಿಮ್ಮ ತಂಗಿಯಂತಹ ವ್ಯಕ್ತಿತ್ವ ಹೊಂದಿರುವವರು ಸಾಮಾನ್ಯವಾಗಿ ತುಂಬಾ ಪೊಸೆಸಿವ್ ಆಗಿರುತ್ತಾರೆ. ಅವರು ತಮ್ಮ ಕುಟುಂಬದಲ್ಲಿ ಬೇರೆ ವ್ಯಕ್ತಿ ಪ್ರವೇಶವಾಗುವುದನ್ನು ಸಹಿಸುವುದಿಲ್ಲ. ಜೊತೆಗೆ ನಿಮ್ಮ ಇಡೀ ಕುಟುಂಬದವರು ಅವರನ್ನು ಬಾಲ್ಯದಿಂದ ಅರಿತವರಾಗಿದ್ದಾರೆ. ಮನೆಯವರು ತಮ್ಮ ಸಂಪೂರ್ಣ ಗಮನವನ್ನು ಅವರಿಗೆ ನೀಡುತ್ತಾರೆ, ಜೊತೆಗೆ ಅವರಿಗೆ ಕಾಳಜಿ ಮಾಡುತ್ತಾರೆ. ಅವರು ನಿಮ್ಮ ಹಿಡಿತಕ್ಕೆ ಸಿಗದಿದ್ದರೂ ಅವರಿಗೆ ನೀವು ಹೊಂದಿಕೊಳ್ಳಲು ಪ್ರಯತ್ನಿಸುತ್ತೀರಿ. ಆದರೆ ನಿಮ್ಮ ಅಣ್ಣನ ಮದುವೆಯ ನಂತರ ಹೊಸ ವ್ಯಕ್ತಿಯೊಬ್ಬರು ನಿಮ್ಮ ಮನೆಗೆ ಬಂದಿದ್ದಾರೆ. ಅವರಿಗೆ ನಿಮ್ಮ ತಂಗಿಯನ್ನು ಹೇಗೆ ಕಾಳಜಿ ಮಾಡಬೇಕು ಮತ್ತು ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಅರಿವಿರುವುದಿಲ್ಲ ಮತ್ತು ನಿಮ್ಮ ಅತ್ತಿಗೆಗೆ ಇದು ಸುಲಭವೂ ಅಲ್ಲ. ನಿಮ್ಮ ತಂಗಿಗೆ ತಮ್ಮ ಮೇಲಿನ ಕಾಳಜಿ, ಪ್ರೀತಿ ಭಾಗವಾಗಿದೆ ಎಂಬುದು ಅವರ ಭಾವನೆ.

ಇದಕ್ಕಿರುವ ಒಂದೇ ಪರಿಹಾರವೆಂದರೆ ನಿಮ್ಮ ಅತ್ತಿಗೆ ನಿಧಾನವಾಗಿ ಅವಳಲ್ಲಿ ನಂಬಿಕೆ ಬೆಳೆಸಿಕೊಳ್ಳುವಂತೆ ಮಾಡಬೇಕು, ಜೊತೆಗೆ ಅವರಿಬ್ಬರ ನಡುವೆ ಬಾಂಧವ್ಯ ಬೆಳೆಯಬೇಕು. ಅವಳೊಂದಿಗೆ ಸ್ನೇಹಿತೆಯಂತೆ ಇರಬೇಕು. ನಿಮ್ಮ ಮನೆಯವರೆಲ್ಲರೂ ಸೇರಿಕೊಂಡು ನಿಮ್ಮ ಮೇಲೆ ತೋರುವ ಕಾಳಜಿ ಪ್ರೀತಿ ಕಡಿಮೆಯಾಗುವುದಿಲ್ಲ ಎಂದು ಅವಳಿಗೆ ಭರವಸೆ ನೀಡಬೇಕು. ಅವಳು ಪ್ರೀತಿ ಕಾಳಜಿಯಿಂದ ವಂಚಿತಳಾಗುವುದಿಲ್ಲ ಎಂಬುದನ್ನು ಅವಳಿಗೆ ಮನವರಿಕೆ ಮಾಡಬೇಕು. ಸಮಯ ಕಳೆದಂತೆ ಅತ್ತಿಗೆಯೂ ನಮ್ಮ ಕುಟುಂಬದ ಸದಸ್ಯೆ ಎಂಬುದನ್ನು ಅವಳು ಅರ್ಥ ಮಾಡಿಕೊಳ್ಳುತ್ತಾಳೆ. ನಂತರ ನಿಧಾನಕ್ಕೆ ಅವರ ಮೇಲೆ ಕೋಪ ಮಾಡಿಕೊಳ್ಳುವುದನ್ನು ಕಡಿಮೆ ಮಾಡುತ್ತಾಳೆ. ಮನೆಯಲ್ಲಿನ ಪ್ರತಿಯೊಬ್ಬರೂ ಅವಳನ್ನು ತುಂಬಾ ತಾಳ್ಮೆ ಹಾಗೂ ಪ್ರೀತಿಯಿಂದ ನೋಡಿಕೊಳ್ಳಬೇಕು. ಅವಳು ಉಳಿದ ಆರೋಗ್ಯ ಸಮಸ್ಯೆಯಿಂದ ಆರೋಗ್ಯದಿಂದ ಇದ್ದರೆ ಡಾಕ್ಟರ್ ಬಳಿ ತೋರಿಸುವ ಅಗತ್ಯವಿಲ್ಲ. ಆದರೆ ಪರಿಸ್ಥಿತಿ ಸುಧಾರಿಸದಿದ್ದರೆ ಮನಶಾಸ್ತ್ರಜ್ಞರನ್ನು ನೋಡುವುದು ಉತ್ತಮ. 

ಏನಾದ್ರೂ ಕೇಳ್ಬೋದು... 
ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ. 
ಇಮೇಲ್: bhoomika@prajavani.co.in 
ವಾಟ್ಸ್ಯಾಪ್: 9482006746

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !