ಭೂಮಿ ಕೊಡಲು ಒಪ್ಪದಿರಿ: ಕೋಡಿಹಳ್ಳಿ

ಶುಕ್ರವಾರ, ಮಾರ್ಚ್ 22, 2019
24 °C

ಭೂಮಿ ಕೊಡಲು ಒಪ್ಪದಿರಿ: ಕೋಡಿಹಳ್ಳಿ

Published:
Updated:
Prajavani

ದಾಬಸ್‌ಪೇಟೆ: ‘ಕೈಗಾರಿಕೆ ಹೆಸರಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ರೈತರಿಂದ ಕಸಿದುಕೊಂಡು ಉದ್ಯಮಿಗಳಿಗೆ ಮಾರುವ ಮಧ್ಯವರ್ತಿ ಕೆಲಸವನ್ನು ಸರ್ಕಾರ ಮಾಡುತ್ತಿದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಆರೋಪಿಸಿದರು.

ಸೋಂಪುರ ಕೈಗಾರಿಕಾ ಪ್ರದೇಶದ 5ನೇ ಹಂತಕ್ಕೆ ಭೂಸ್ವಾಧೀನ ವಿರೋಧಿಸಿ ಹೋರಾಟದ ರೂಪುರೇಷೆಗಳನ್ನು ಚರ್ಚಿಸುವ ಸಂಬಂಧ ಹೊನ್ನಮ್ಮ ಗವಿಮಠದಲ್ಲಿ ಕರೆದ ರೈತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಸೋಂಪುರ ಕೈಗಾರಿಕಾ ಪ್ರದೇಶದ 5ನೇ ಹಂತದ ಕೈಗಾರಿಕಾ ಪ್ರದೇಶಕ್ಕೆ ಸರ್ಕಾರ ಕೆಐಎಡಿಬಿ ಮೂಲಕ ವಶಪಡಿಸಿಕೊಂಡಿರುವ ಸುಮಾರು 839 ಎಕರೆ ಭೂಮಿಗೆ ಜಿಲ್ಲಾಧಿಕಾರಿ ರೈತರ ಸಭೆ ಕರೆದು ₹ 1 ಕೋಟಿ ದರ ನಿಗದಿಗೊಳಿಸಿದ್ದಾರೆ. ಹಳ್ಳಿಗಳು ಹಾಗೂ ಸರ್ವೇ ನಂಬರ್‌ಗಳಿಗೆ ಅನುಸಾರ ಬೇರೆ ಬೇರೆ ರೀತಿಯ ದರ ನಿಗದಿಗೊಳಿಸಿ ತಾರತಮ್ಯ ಮಾಡಿದೆ. ಇದರ ವಿರುದ್ಧ ಹೋರಾಟ ಮಾಡಬೇಕು’ ಎಂದು ಅವರು ಕರೆ ನೀಡಿದರು.  

'ಜಿಲ್ಲಾಧಿಕಾರಿಗಳು ರೈತರ ಸಮ್ಮುಖದಲ್ಲಿ ಒಂದು ಕೋಟಿ ರೂ‍ಪಾಯಿ ದರ ನಿಗದಿ ಮಾಡಿದ್ದಾಗಲೂ ಭೂದರ ಸಲಹಾ ಸಮಿತಿಯು, ಅಷ್ಟೊಂದು ಹಣ ಕೊಡುವುದಕ್ಕೆ ಆಗುವುದಿಲ್ಲ ಎಂದು ಚೌಕಾಶಿ ವ್ಯವಹಾರ ಮಾಡಿ ಕೆಟ್ಟ ಪರಿಸ್ಥಿತಿ ನಿರ್ಮಾಣ ಮಾಡಿದೆ. ರೈತರ ಒಪ್ಪಿಗೆಯಿಲ್ಲದೆ ಸರ್ಕಾರ ರೈತರ ಭೂಮಿ ಕಿತ್ತುಕೊಳ್ಳುವಂತಿಲ್ಲ. ನೀವೆಲ್ಲಾ ಒಮ್ಮತದಿಂದ ನಾವು ಭೂಮಿ ಕೊಡುವುದಿಲ್ಲ ಎಂದು ಹೋರಾಟ ಮಾಡಿ. ನಾವು ನಿಮ್ಮ ಹೋರಾಟಕ್ಕೆ ಬೆಂಬಲ ನೀಡುತ್ತೇವೆ’ ಎಂದರು.

ತಾಲ್ಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಬೆಟ್ಟಸ್ವಾಮಿಗೌಡ ಮಾತನಾಡಿ, 'ರೈತರು ಜಮೀನು ಕಳೆದುಕೊಂಡ ಮೇಲೆ ಮತ್ತೆ ಅದನ್ನು ಸಂಪಾದಿಸುವುದಕ್ಕೆ ಆಗುವುದಿಲ್ಲ. ಸರ್ಕಾರ ರೈತರ ಜಮೀನು ಕಬಳಿಸುವುದಕ್ಕಿಂತ ಮುಖ್ಯವಾಗಿ, ಅವರಿಗೂ ಪ್ರಾರಂಭವಾಗುವ ಉದ್ದಿಮೆಯಲ್ಲಿ ಪಾಲುದಾರಿಕೆ ಕೊಡಿಸುವ, ಉದ್ಯೋಗ ಕೊಡಿಸುವ ಅಥವಾ ಒಳ್ಳೆಯ ಪರಿಹಾರ ಕೊಡಿಸುವ ಕೆಲಸವನ್ನು ಮಾಡುವುದು ಬಿಟ್ಟು ಉದ್ದಿಮೆಗಳ ಪರವಾಗಿ ನಿಂತಿರುವುದು ರೈತ ವಿರೋಧಿ ಧೋರಣೆ’ ಎಂದರು.
ಮೇಲಣಗವಿ ಮಠದ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಹೊನ್ನಮ್ಮಗವಿ ಮಠದ ರುದ್ರಮುನಿ ಸ್ವಾಮೀಜಿ, ವನಕಲ್ಲು ಬಸವರಮಾನಂದ ಸ್ವಾಮೀಜಿ ಭಾಗವಹಿಸಿದ್ದರು.

 

’ಕೈಗಾರಿಕರಣದ ಹೆಸರಲ್ಲಿ ಫಲವತ್ತಾದ ಕೃಷಿ ಯೋಗ್ಯ ಭೂಮಿಯನ್ನು ರೈತರಿಂದ ಕಸಿದುಕೊಂಡು ದೊಡ್ಡ ದೊಡ್ಡ ಉದ್ಯಮಿಗಳಿಗೆ, ಹಣವಂತರಿಗೆ ಮಾರಾಡ ಮಾಡುವ ಮಧ್ಯವರ್ತಿ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಇಲ್ಲಿ ರೈತರ ಹಿತಾಸಕ್ತಿಯನ್ನು ಬದಿಗಿಟ್ಟು, ಉಳ್ಳವರ ಹಿತ ಕಾಪಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು- ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !