ನಿವೃತ್ತಿಯಿಲ್ಲದೇ ದುಡಿದ ಕೋಫಿ ಅನ್ನಾನ್‌

7

ನಿವೃತ್ತಿಯಿಲ್ಲದೇ ದುಡಿದ ಕೋಫಿ ಅನ್ನಾನ್‌

Published:
Updated:

‘ನೋವು ಎಲ್ಲಿಯೇ ಇದ್ದರೂ ಅದು ಜಗತ್ತಿನ ಎಲ್ಲರಿಗೆ ಸಂಬಂಧಿಸಿದ್ದು’ ಎಂದು ವಿಶ್ವಸಂಸ್ಥೆಯ ಮಾಜಿ ಮಹಾ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್‌ ಒಮ್ಮೆ ಹೇಳಿದ್ದರು. 80ನೇ ವಯಸ್ಸಿನಲ್ಲಿ ಶನಿವಾರ ನಿಧನರಾಗುವ ತನಕ ಈ ಮಾತೇ ತಮ್ಮ ದಾರಿದೀಪ ಎಂಬಂತೆ ಬದುಕಿದರು.

ಅಪೂರ್ವವಾದ ಕೆಲವು ವ್ಯಕ್ತಿಗಳು ತಮ್ಮ ಶ್ರಮ, ದೂರದರ್ಶಿತ್ವ ಮತ್ತು ಕಳಕಳಿಯಿಂದ ಸಂಸ್ಥೆಗಳನ್ನು ದೊಡ್ಡ ಎತ್ತರಕ್ಕೆ ಬೆಳೆಸುತ್ತಾರೆ. ತಾವು ಅದಕ್ಕಿಂತಲೂ ಉನ್ನತವಾಗಿ ಬೆಳೆಯುತ್ತಾರೆ. ಅಂಥವರ ಸಾಲಿಗೆ ಖಂಡಿತವಾಗಿಯೂ ಸೇರುವ ವ್ಯಕ್ತಿ ಕೋಫಿ ಅನ್ನಾನ್‌. 1997ರಿಂದ ಒಂದಿಡೀ ದಶಕ ವಿಶ್ವಸಂಸ್ಥೆಯ ಚುಕ್ಕಾಣಿ ಹಿಡಿದವರು ಅವರು. ಹಲವು ವಿಷಯಗಳಲ್ಲಿ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರಿದ ಮೊದಲ ಕಪ್ಪುವರ್ಣೀಯ, ವಿಶ್ವಸಂಸ್ಥೆಯ ಸಣ್ಣ ಹುದ್ದೆಯಿಂದ ಅದರ ಅತ್ಯುನ್ನತ ಹುದ್ದೆಗೇರಿದ ಮೊದಲಿಗ ಎಂಬುದು ಅವುಗಳಲ್ಲಿ ಕೆಲವು.

ಕೋಫಿ ಅನ್ನಾನ್‌ ವಿಶ್ವಸಂಸ್ಥೆಯ ಮುಖ್ಯಸ್ಥರಾಗಿದ್ದ ಇಡೀ ಅವಧಿಯಲ್ಲಿ ಜಗತ್ತು ಅತ್ಯಂತ ಸಂಘರ್ಷಾತ್ಮಕವಾಗಿತ್ತು; ಬಿಕ್ಕಟ್ಟಿನಿಂದ ಬಿಕ್ಕಟ್ಟಿನೆಡೆಗೆ ಕೊನೆಯಿಲ್ಲದಂತೆ ಸಾಗುತ್ತಿತ್ತು. ಇಂತಹ ಹೊತ್ತಿನಲ್ಲಿ, ತಾವು ಮತ್ತು ವಿಶ್ವಸಂಸ್ಥೆ ಈ ಜಗತ್ತಿನ ಆತ್ಮಸಾಕ್ಷಿಯ ಸಂರಕ್ಷಕ ಮತ್ತು ಯಾವುದೇ ಬಿಕ್ಕಟ್ಟಿನ ಸಂಧಾನ ಕೇಂದ್ರ ಎಂದು ಬಿಂಬಿಸಿಕೊಂಡರು. ಅದನ್ನು ಸಾಧಿಸುವುದ್ಕಾಗಿ ಬಿಡುವಿಲ್ಲದೆ ಕೆಲಸ ಮಾಡಿದರು.

ಎಚ್‌ಐವಿ ಮತ್ತು ಏಡ್ಸ್‌ ಸಾಂಕ್ರಾಮಿಕದಿಂದ ಜಗತ್ತನ್ನು ಕಾಪಾಡುವುದು, ಇರಾಕ್‌ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸುವುದು ಮತ್ತು ಹವಾಮಾನ ಬದಲಾವಣೆಯಿಂದ ವಿಶ್ವವನ್ನು ರಕ್ಷಿಸುವುದಕ್ಕಾಗಿ ನಿರಂತರ ಶ್ರಮಿಸಿದರು. ಈ ದಣಿವರಿಯದ ದುಡಿಮೆಗಾಗಿಯೇ ಅವರಿಗೆ ಮತ್ತು ವಿಶ್ವಸಂಸ್ಥೆಗೆ 2001ರಲ್ಲಿ ನೊಬೆಲ್‌ ಶಾಂತಿ ಪ್ರಶಸ್ತಿ ಕೊಟ್ಟು ಪುರಸ್ಕರಿಸಲಾಯಿತು.

ಕೋಫಿ ಅಟ್ಟಾ ಅನ್ನಾನ್‌ 1938ರ ಏಪ್ರಿಲ್‌ನಲ್ಲಿ ಗೋಲ್ಡ್‌ ಕೋಸ್ಟ್‌ನ (ಈಗಿನ ಘಾನಾ) ಕುಮಸಿ ನಗರದಲ್ಲಿ ಜನಿಸಿದರು. ಅವಳಿ ಸೋದರಿಯ ಹೆಸರು ಅಫುವಾ ಅಟ್ಟಾ. ಕೋಫಿ ಮತ್ತು ಅಫುವಾ ಎಂಬುದನ್ನು ಸೇರಿಸಿದರೆ ಅದರ ಅರ್ಥ ‘ಶುಕ್ರವಾರ ಹುಟ್ಟಿದವರು’ ಎಂದು. ಅಟ್ಟಾ ಎಂದರೆ ಅವಳಿ. ಕೋಫಿಯ ತಾಯಿಯ ತಂದೆ ಮತ್ತು ತಂದೆಯ ತಂದೆ ಇಬ್ಬರೂ ಬುಡಕಟ್ಟುಗಳ ನಾಯಕರಾಗಿದ್ದವರು.

ಅನ್ನಾನ್‌ ತಂದೆ ಬ್ರಿಟಿಷ್‌ ಆಳ್ವಿಕೆಯಲ್ಲಿದ್ದ ಗೋಲ್ಡ್‌ ಕೋಸ್ಟ್‌ನ ಪ್ರಾಂತ್ಯವೊಂದರ ಗವರ್ನರ್‌ ಆಗಿದ್ದರು. ಹೀಗಾಗಿ ನಾಯಕತ್ವ ಗುಣ ಹುಟ್ಟಿನಿಂದಲೇ ಅನ್ನಾನ್‌ ಅವರಿಗೆ ಬಂದಿತ್ತು. ಅನ್ನಾನ್‌ಗೆ 19 ವರ್ಷವಾದಾಗ ಗೋಲ್ಡ್‌ಕೋಸ್ಟ್‌ ಸ್ವಾತಂತ್ರ್ಯ ಪಡೆಯಿತು. ದೇಶದ ಹೆಸರು ಘಾನಾ ಎಂದು ಬದಲಾಯಿತು.

ಅಮೆರಿಕದ ಮಕ್‌ಲೆಸ್ಟರ್‌ ಕಾಲೇಜಿನಿಂದ ಪದವಿ ಪಡೆದ ಯುವಕ ಅನ್ನಾನ್‌ಗೆ ನೇರವಾಗಿ ವಿಶ್ವಸಂಸ್ಥೆಯಲ್ಲಿಯೇ ಕೆಲಸ ಸಿಕ್ಕಿತು. ವಿಶ್ವ ಆರೋಗ್ಯ ಸಂಸ್ಥೆಯ ಬಜೆಟ್‌ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದರು. ನಾಲ್ಕು ದಶಕಗಳ ಬಳಿಕ ಇಡೀ ಸಂಸ್ಥೆಯ ಮುಖ್ಯಸ್ಥರಾದರು. ಆದರೆ, ಈ ಅವಧಿಯಲ್ಲಿ ಕೆಲವು ಅಪವಾದಗಳೂ ಕೇಳಿ ಬಂದವು. 1993ರಲ್ಲಿ ಅನ್ನಾನ್‌ ಅವರು ವಿಶ್ವಸಂಸ್ಥೆಯ ಅಧೀನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರಿದ್ದರು. ಶಾಂತಿಪಾಲನೆಯ ಉಸ್ತುವಾರಿ ಅವರದ್ದಾಗಿತ್ತು.

ಮರು ವರ್ಷ, ರುವಾಂಡಾದಲ್ಲಿ ಟುಟ್ಸು ಮತ್ತು ಹುಟು ಜನಾಂಗದ ಎಂಟು ಲಕ್ಷ ಜನರ ಮಾರಣಹೋಮ ನಡೆಯಿತು. 1995ರಲ್ಲಿ ಸರ್ಬಿಯಾದ ಸೇನೆ ಎಂಟು ಸಾವಿರ ಮುಸ್ಲಿಮರ ಶಿರಚ್ಛೇದ ಮಾಡಿತು. ‘ಸುರಕ್ಷಿತ’ ಎಂದು ವಿಶ್ವಸಂಸ್ಥೆಯೇ ಗುರುತಿಸಿದ್ದ ಬೋಸ್ನಿಯಾದ ಸ್ಥಳದಲ್ಲಿ ಇದು ನಡೆಯಿತು.

ಈ ಎರಡೂ ಪ್ರಕರಣಗಳಲ್ಲಿ ಅನ್ನಾನ್‌ ಮತ್ತು ಅವರ ಇಲಾಖೆಯ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಯಿತು. ರುವಾಂಡಾದಲ್ಲಿ ನರಮೇಧದ ಯೋಜನೆ ಸಿದ್ಧಗೊಂಡಿದೆ ಎಂಬ ಮಾಹಿತಿ ನೀಡಲಾಗಿದ್ದರೂ ಅನ್ನಾನ್‌ ಅದನ್ನು ನಿರ್ಲಕ್ಷಿಸಿದರು ಎಂಬುದು ಅವರ ಮೇಲಿದ್ದ ಗುರುತರವಾದ ಆರೋಪವಾಗಿತ್ತು.

ಈ ಹತ್ಯಾಕಾಂಡದ ಹತ್ತನೇ ವಾರ್ಷಿಕ ದಿನದಂದು ಮಾತನಾಡಿದ್ದ ಅನ್ನಾನ್‌, ತಪ್ಪು ಒಪ್ಪಿಕೊಂಡರು. ‘ರುವಾಂಡಾದಲ್ಲಿನ ಹಿಂಸಾಚಾರ ತಡೆಗೆ ವಿವಿಧ ದೇಶಗಳನ್ನು ಕೋರಿದ್ದೆ. ನಾನು ಸರಿಯಾಗಿಯೇ ಕೆಲಸ ಮಾಡುತ್ತಿದ್ದೇನೆ ಎಂದು ಭಾವಿಸಿದ್ದೆ. ಆದರೆ ನಾನು ಮಾಡಿದ್ದು ಬಹಳ ಕಮ್ಮಿ ಎಂದು ಬಳಿಕ ನನಗೆ ಅನಿಸಿತು. ಈ ಅನುಭವ ನನ್ನ ಯೋಚನಾ ಕ್ರಮವನ್ನೇ ಬದಲಿಸಿತು. ಮಹಾಪ್ರಧಾನ ಕಾರ್ಯದರ್ಶಿಯಾಗಿ ಕೈಗೊಂಡ ಹಲವು ನಿರ್ಧಾರಗಳ ಹಿಂದೆ ಈ ಅನುಭವ ಕಲಿಸಿದ ಪಾಠ ಇದೆ’ ಎಂದು ಅನ್ನಾನ್‌ ಹೇಳಿದ್ದರು. 

ರುವಾಂಡಾ ಮತ್ತು ಬೋಸ್ನಿಯಾದ ಕಳಂಕ ಇದ್ದರೂ 1997ರಲ್ಲಿ ತಮ್ಮ 59ನೇ ವಯಸ್ಸಿನಲ್ಲಿ ಮಹಾಪ್ರಧಾನ ಕಾರ್ಯದರ್ಶಿ ಹುದ್ದೆಗೆ ಅನ್ನಾನ್‌ ಆಯ್ಕೆಯಾದರು. ವಿಶ್ವಸಂಸ್ಥೆ ಆಗ ಆರ್ಥಿಕವಾಗಿ ಮಾತ್ರವಲ್ಲ ಬೇರೆ ಅರ್ಥದಲ್ಲಿಯೂ ದಿವಾಳಿಯ ಅಂಚಿನಲ್ಲಿತ್ತು. ನ್ಯೂಯಾರ್ಕ್‌ನ ಕಚೇರಿಯಲ್ಲಿದ್ದ ಆರು ಸಾವಿರ ಸಿಬ್ಬಂದಿಯ ಪೈಕಿ ಸಾವಿರ ಸಿಬ್ಬಂದಿಯನ್ನು ಅನ್ನಾನ್‌ ಕಡಿತಗೊಳಿಸಿದರು.

ವಿಶ್ವಸಂಸ್ಥೆಗೆ ಅಮೆರಿಕ ಬಾಕಿ ಇರಿಸಿದ್ದ ಭಾರಿ ಮೊತ್ತವನ್ನು ಪಾವತಿಸುವಂತೆ ಒತ್ತಡ ಹೇರಿದರು. ವಿವಿಧ ಪ್ರದೇಶಗಳಲ್ಲಿ ನಡೆದಿದ್ದ ದುರಂತಗಳ ಹೊಣೆ ಹೊತ್ತುಕೊಳ್ಳುವಂತೆ ಸದಸ್ಯ ರಾಷ್ಟ್ರಗಳ ಮನವೊಲಿಸಿದರು.

ವಿಶ್ವಸಂಸ್ಥೆಯ ಸ್ಥಿತಿಯನ್ನು ಒಂದು ಮಟ್ಟಿಗೆ ಸರಿಪಡಿಸಿದ ಅನ್ನಾನ್‌, ಜಗತ್ತಿನ ಭವಿಷ್ಯದೆಡೆಗೂ ಗಮನ ಹರಿಸಿದರು. ಜಗತ್ತಿನ ಬಡತನವನ್ನು ಅರ್ಧಕ್ಕೆ ಇಳಿಸುವ, ಎಚ್‌ಐವಿ ಮತ್ತು ಏಡ್ಸ್‌ ಸೋಂಕು ತಡೆಯುವ ಸಹಸ್ರಮಾನದ ಅಭಿವೃದ್ಧಿ ಗುರಿಗಳನ್ನು ಹಾಕಿಕೊಟ್ಟರು. 2015ರೊಳಗೆ ಇದನ್ನು ಸಾಧಿಸಬೇಕು ಎಂದು ಸದಸ್ಯ ರಾಷ್ಟ್ರಗಳನ್ನು ಒತ್ತಾಯಿಸಿದರು.

ಯಾವ ಅಧಿಕಾರವೂ ಇಲ್ಲದ ಹುದ್ದೆಯಲ್ಲಿ ಕುಳಿತು ಇದನ್ನೆಲ್ಲ ಮಾಡುವುದು ಸುಲಭವಾಗಿರಲಿಲ್ಲ. 2001ರಲ್ಲಿ ನೊಬೆಲ್‌ ಪ್ರಶಸ್ತಿ ನೀಡಿ ಪುರಸ್ಕರಿಸಿದ ಸ್ವೀಡಿಷ್‌ ಅಕಾಡೆಮಿಯು ‘ಸಂಸ್ಥೆಗೆ ಹೊಸ ಜೀವ ಕೊಟ್ಟ ಸಾಧಕ’ ಎಂದು ತಾರೀಫು ಮಾಡಿತ್ತು. ಮರುವರ್ಷ, ಎರಡನೇ ಅವಧಿಗೆ ಅವರು ಅವಿರೋಧವಾಗಿ ಆಯ್ಕೆಯಾದರು.

ಅವರ ಎರಡನೇ ಅವಧಿಯೂ ವಿಷಮವಾಗಿಯೇ ಇತ್ತು. ಮೊದಲ ಬಾರಿ ಅವರು ಆಯ್ಕೆಯಾಗಲು ಟೊಂಕ ಕಟ್ಟಿ ಜತೆಗೆ ನಿಂತಿದ್ದ ಅಮೆರಿಕದ ವಿರುದ್ಧವೇ ಅನ್ನಾನ್‌ ನಿಲ್ಲಬೇಕಾಯಿತು. 2003ರಲ್ಲಿ ವಿಶ್ವಸಂಸ್ಥೆಯನ್ನು ನಿರ್ಲಕ್ಷಿಸಿದ ಅಮೆರಿಕವು ಇರಾಕ್‌ ವಿರುದ್ಧ ಯುದ್ಧ ಸಾರಿತು. ‘ಇದು ಕಾನೂನುಬಾಹಿರ’ ಎಂದೇ ಅನ್ನಾನ್‌ ಪ್ರತಿಪಾದಿಸಿದರು. ಅಮೆರಿಕದ ಜತೆಗೆ ಈ ಭಿನ್ನಾಭಿಪ್ರಾಯದ ಬೆನ್ನಿಗೇ ‘ಆಹಾರಕ್ಕಾಗಿ ತೈಲ ಹಗರಣ’ವೂ ಅವರನ್ನು ಸುತ್ತಿಕೊಂಡಿತು.

ಯುದ್ಧ ಮತ್ತು ನಿರ್ಬಂಧಗಳಿಂದ ಜರ್ಜರಿತವಾಗಿದ್ದ ಇರಾಕ್‌, ಆಹಾರ ಮತ್ತು ಇತರ ಅಗತ್ಯ ವಸ್ತುಗಳಿಗಾಗಿ ಸೀಮಿತ ಪ್ರಮಾಣದಲ್ಲಿ ತೈಲ ಮಾರಾಟ ಮಾಡಲು ‘ಆಹಾರಕ್ಕಾಗಿ ತೈಲ’ ಯೋಜನೆ ಅಡಿ ಅವಕಾಶಕೊಡಲಾಗಿತ್ತು. ಈ ಕಾರ್ಯಕ್ರಮದ ಉಸ್ತುವಾರಿಗೆ ನೇಮಕವಾಗಿದ್ದ ಕಂಪನಿಯಿಂದ ಅನ್ನಾನ್‌ ಮಗ ಕೋಜೋ ಹಣ ಪಡೆದುಕೊಂಡಿದ್ದರು.

ಮಗನ ಪರವಾಗಿ ಪ್ರಭಾವ ಬೀರಿದ್ದಾರೆ ಎಂಬ ಆರೋಪದಿಂದ ನಂತರದ ವರ್ಷ ಅನ್ನಾನ್‌ ಮುಕ್ತವಾದರು. ಆದರೆ, ಈ ಆರೋಪ ಕೇಳಿ ಬಂದಾಗ ಅದರ ಸಮಗ್ರ ತನಿಖೆಗೆ ಮುಂದಾಗಲಿಲ್ಲ ಎಂಬ ನೈತಿಕ ಆರೋಪ ಅವರ ವಿರುದ್ಧ ಉಳಿದುಕೊಂಡಿತು. 

2006ರ ಡಿಸೆಂಬರ್‌ನಲ್ಲಿ ತಮ್ಮ 70ನೇ ವಯಸ್ಸಿನಲ್ಲಿ ಮಹಾಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಅನ್ನಾನ್‌ ನಿವೃತ್ತರಾದರು. ಹೊರೆಗಳನ್ನು ಕಳಚಿಟ್ಟು, ವಿಶ್ರಾಂತ ಜೀವನಕ್ಕಾಗಿ ಎಲ್ಲರೂ ಬಯಸುವ ವಯಸ್ಸು ಅದು. 1984ರಲ್ಲಿ ಮದುವೆಯಾಗಿದ್ದ ಎರಡನೇ ಹೆಂಡತಿ ನಾನಿ ಮೇರಿ ಲೇಜರ್‌ಗ್ರೆನ್‌ ಜತೆಗೆ ಆರು ವಾರದ ಬಿಡುವಿಗಾಗಿ ಅನ್ನಾನ್‌ ಇಟಲಿಗೆ ಹೋದರು. ಇಟಲಿಯಿಂದ ಮರಳಿದವರೇ, ಜಾಗತಿಕ ಸುಸ್ಥಿರ ಅಭಿವೃದ್ಧಿ, ಸುರಕ್ಷತೆ ಮತ್ತು ಶಾಂತಿಗಾಗಿ ಕೆಲಸ ಮಾಡಲು ಕೋಫಿ ಅನ್ನಾನ್‌ ಪ್ರತಿಷ್ಠಾನ ಸ್ಥಾಪಿಸಿದರು.

2007ರಲ್ಲಿ ಅವರ ಜೀವನದ ಅತ್ಯಂತ ಯಶಸ್ವೀ ಸಂಧಾನದ ಅವಕಾಶ ಒದಗಿ ಬಂತು. ಕೆನ್ಯಾದ ವಿರೋಧ ಪಕ್ಷದ ನಾಯಕ ರೈಲಾ ಒಡಿಂಗಾ ಮತ್ತು ಮಾಜಿ ಅಧ್ಯಕ್ಷ ಮವಾಯಿ ಕಿಬಾಕಿ ನಡುವೆ ಹಿಂಸಾತ್ಮಕ ಸಂಘರ್ಷ ಆರಂಭವಾಗಿತ್ತು. ಸಾವಿರಕ್ಕೂ ಹೆಚ್ಚು ಜನ ಸತ್ತಿದ್ದರು ಮತ್ತು ಸಾವಿರಾರು ಜನರು ಓಡಿ ಹೋಗಿದ್ದರು. ಇಬ್ಬರು ಮುಖಂಡರ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದ ಸಾಧ್ಯವಾಗುವಂತೆ ನೋಡಿಕೊಂಡ ಅನ್ನಾನ್‌, ಭಾರಿ ಹಿಂಸಾಚಾರವನ್ನು ತಪ್ಪಿಸಿದರು.

2012ರಲ್ಲಿ ವಿಶ್ವಸಂಸ್ಥೆ– ಅರಬ್‌ ಒಕ್ಕೂಟದ ಪ್ರತಿನಿಧಿಯಾಗಿ ಸಿರಿಯಾಕ್ಕೆ ಹೋದರು. ನೆಲ್ಸನ್‌ ಮಂಡೇಲಾ ಸ್ಥಾಪಿಸಿದ್ದ ‘ಎಲ್ಡರ್ಸ್‌’ ಗುಂಪಿನ ಅಧ್ಯಕ್ಷರಾದರು. ಮ್ಯಾನ್ಮಾರ್‌ನಲ್ಲಿ ನಡೆದ ರೋಹಿಂಗ್ಯಾ ಬಿಕ್ಕಟ್ಟು ತನಿಖಾ ಸಮಿತಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದರು.

‘ನಿವೃತ್ತಿಯೆಂಬುದು ಅತ್ಯಂತ ಕಠಿಣ ದುಡಿಮೆ’ ಎಂದು ತಮ್ಮ 80ನೇ ಹುಟ್ಟು ಹಬ್ಬದಂದು ಅನ್ನಾನ್‌ ಹೇಳಿದ್ದರು. ಅದು ಅವರ ಜೀವನದಲ್ಲಿ ಅತ್ಯಂತ ನಿಜವಾಗಿತ್ತು. ಈಗ ಅವರು ಶಾಶ್ವತ ನಿವೃತ್ತಿಗೆ ಸರಿದಿದ್ದಾರೆ. ಆದರೆ, ಅವರು ಉಳಿಸಿ ಹೋದ ಕಳಕಳಿ, ಶಾಂತಿಯ ಸ್ಫೂರ್ತಿ ಎಂದಿಗೂ ನಿವೃತ್ತಿಯಾಗದು.

ಬರಹ ಇಷ್ಟವಾಯಿತೆ?

 • 16

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !